ಭಾಗ – 559
ಭರತೇಶ ಶೆಟ್ಟಿ ,ಎಕ್ಕಾರು

ಬಬ್ರುವಾಹನನು ನಿಂತಲ್ಲೇ ನಿಂತು ಒದಗಿರುವ ಧರ್ಮ ಸಂಕಟಕ್ಕೆ ಪರಿಹಾರ ಮಾರ್ಗವನ್ನು ವಿವೇಚಿಸತೊಡಗಿದನು. ಬಹಳ ತರ್ಕ ಬದ್ದವಾದ ಆತನ ಮನದಾಳದ ವಾದವೂ ಅರ್ಥಪೂರ್ಣವೇ ಆಗಿದೆ. ಯಾಕೆಂದರೆ ಆತನಿಗೆ ಒದಗಿರುವ ಸ್ಥಿತಿ ಅಂತಹುದು. ಸುದೀರ್ಘ ಯೋಚನೆಯಲ್ಲಿ ತೊಡಗಿದ್ದಾನೆ.
ಮಗ ಬಬ್ರುವಾಹನ ತಟಸ್ಥನಾಗಿ ನಿಂತಿರುವುದನ್ನು ಕಂಡು ಚಿತ್ರಾಂಗದೆ “ಮಾಡಬಾರದ್ದನ್ನು ಮಾಡಿ, ಈಗ ಯಾಕೆ ಸುಮ್ಮನೆ ನಿಂತಿರುವೆ? ಎಲ್ಲಿ ನೀನು ಸುಮ್ಮನಿರಬೇಕಿತ್ತೋ ಅಲ್ಲಿ ದುಡುಕಿದೆ. ಈಗ ನಮಗೆ ಅವಸರವಿದೆ, ನೀನೇಕೆ ತಡಮಾಡುತ್ತಿರುವೆ? ಹೇ ಮಗನೇ ಎಲ್ಲಿ ಅಡಗಿದೆ ನಿನ್ನ ದುಡುಕು ಬುದ್ದಿ? ಹೇ ಪಿತೃ ಹತ್ಯೆ ಮಾಡಿದವನೇ ನಿನಗೆ ಮಾತೃ ಹತ್ಯೆಯೂ ಕಷ್ಟವಾಗದು” ಎಂದು ಅತ್ಯುಗ್ರಳಾಗಿ ನುಡಿದಳು.
ಮಾತೆಯ ಕ್ರೋಧಾವೇಶದ ನುಡಿಗಳು ಯೋಚನೆಯ ಬೆನ್ನೇರಿ ಹೊರಟಿದ್ದ ಬಬ್ರುವಾಹನನ್ನು ಎಳೆದು ವಾಸ್ತವಕ್ಕೆ ತಂದಿತು. ಆ ಕೂಡಲೆ ಎಚ್ಚೆತ್ತವನಂತೆ “ಮಾತೆ, ನನ್ನ ಮಾತನ್ನು ನೀನು ತುಸು ಹೊತ್ತು ಕೆಳಬೇಕು. ನಮಗೊದಗಿರುವ ಈ ಸಂಕಷ್ಟಕ್ಕೆ ಪರಿಹಾರ ಮಾರ್ಗವನ್ನು ನಾನು ಯೋಚಿಸಿದ್ದೇನೆ. ಅದನ್ನು ನಿನಗೆ ತಿಳಿಸಿ ಹೇಳುವವರೆಗೆ ಅವಕಾಶ ನೀಡಬೇಕು” ಎಂದು ಬೇಡಿಕೊಂಡನು.
“ಅಯ್ಯಾ ಮಹಾಶಯನೇ! ನೀನೇನೇ ಹೇಳಿದರೂ ನನ್ನ ಪತಿ ನನಗೆ ಸಿಗಲು ಸಾಧ್ಯವೇ? ಸಮಾಧಾನ ಹೇಳ ಹೊರಟಿರುವೆಯಾದರೆ, ಯಾವ ಕಾರಣಕ್ಕೂ, ಯಾವ ತರಹದ ಮಾತಿನಿಂದಲೂ ಅದು ಸಾಧ್ಯವಿಲ್ಲ. ಆದರೂ ನೀನೇನೋ ಹೇಳ ಹೊರಟಿರುವೆಯಲ್ಲಾ, ಸಾಯುವ ಮೊದಲು ಅದನ್ನು ಕೇಳಿ ಸಾಯುತ್ತೇನೆ, ಹೇಳು” ಎಂದಳು ಮಾತೆ ಚಿತ್ರಾಂಗದೆ.
“ಅಮ್ಮಾ! ನನ್ನ ಜನನ ನನ್ನ ಇಚ್ಚೆಯಿಂದಾದುದಲ್ಲ. ಅದು ಹೇಗೆ, ಯಾರಿಂದಾಗಿ ಆಗಿದೆ ಎಂಬುವುದೂ ನನಗೆ ತಿಳಿಯದೇ ಇದ್ದ ಸತ್ಯ. ನಾನು ಅಶ್ವಮೇಧದ ಕುದುರೆ ಕಟ್ಟುವಲ್ಲಿವರೆಗೆ ಸರ್ವಸ್ವವೂ ಆಗಿ ಪಾಲಿಸಿ, ಪೋಷಿಸಿ ನನ್ನನ್ನು ಪೊಋಎದವಳು ನೀನಲ್ಲವೆ. ಯಾವಾಗ ಕುದುರೆಯ ಬೆಂಗಾವಲಿಗನಾಗಿ ಬಂದವ ಅರ್ಜುನ ಎಂಬ ವಿಚಾರ ತಿಳಿಯಿತೋ ಆಗ ನೀನು ಮಹತ್ತರವಾದ ಹರ್ಷವನ್ನೇ ವ್ಯಕ್ತಪಡಿಸಿದೆ. ನನ್ನನ್ನು ಕರೆದು ಬಂದಂತಹ ಅರ್ಜುನ ನನ್ನ ತಂದೆ ಎಂದು ಹೇಳಿದೆ.ನೀನು ಹೇಳಿದಂತೆಯೇ ತುರಗವನ್ನು ನನ್ನ ತಂದೆಗೊಪ್ಪಿಸಿ, ಕಪ್ಪ ಕಾಣಿಕೆ ಸಹಿತನಾಗಿ ಆತನ ಪಾದ ಮೂಲಕ್ಕೆರಗಿ ಅರಿಯದೆ ಅಪರಾಧವಾಯಿತು ಅಪ್ಪಾ ಎಂದು ಶರಣಾದೆ. ನನ್ನನ್ನು ಷಂಡ ಎಂದು ಜರೆದಾಗಲೂ ಕೋಪ ತಾಳಲಿಲ್ಲ. ಯಾವಾಗ ಆ ಅರ್ಜುನ ನಿನ್ನನ್ನು ಹೀನಾಯ ಶಬ್ದಗಳಿಂದ ನಿಂದಿಸಿ ನಿನ್ನ ಚಾರಿತ್ರ್ಯವನ್ನೇ ಅವಮಾನಿಸಿದನೋ ಆವಾಗ ನನ್ನಿಂದ ತಡೆದುಕೊಳ್ಳಲಾಗದೆ ಹೋಯಿತಮ್ಮ. ಆತನ ನಿಂದಾ ವಾಕ್ಯಗಳನ್ನು ಸವಾಲಾಗಿ ಸ್ವೀಕರಿಸುವಂತೆ ಪರಿಸ್ಥಿತಿ ನನ್ನನ್ನು ಪ್ರೇರೇಪಿಸಿತು. ಯಾವ ಬಾಯಲ್ಲಿ ತುಂಬಿದ ಜನಸ್ತೋಮದ ಮಧ್ಯೆ ನೀನು ನನ್ನ ಮಗನೇ ಅಲ್ಲ ಎಂದು ತಿರಸ್ಕರಿಸಿದನೋ ಅದೇ ಅರ್ಜುನನ ಬಾಯಿಯಿಂದ ನೀನು ನನ್ನ ಮಗನೇ ಹೌದು ಎಂದು ಹೇಳಿಸದೆ ಬಿಡಲಾರೆ. ಯಾವ ಬಾಯಿಯಿಂದ ನಿನ್ನನ್ನು ಜಾರೆ ಎಂದು ಜರೆದನೋ ಅದೇ ಬಾಯಲ್ಲಿ ಎನ್ನ ಅವ್ವೆಯನ್ನು ಪತ್ನಿ ಎಂದು ಒಪ್ಪಿಕೊಳ್ಳದೆ ಬಿಡಲಾರೆ ಎಂದು ಪ್ರತಿಜ್ಞೆ ಮಾಡಿದೆ. ಆಡಿದ ಪ್ರತಿಜ್ಞಾ ವಾಕ್ಯದ ಪೂರಣೆಗಾಗಿ ಹೋರಾಡಿದೆ. ನನ್ನಪ್ಪನಾದ ಅರ್ಜುನನ್ನು ಕೊಲ್ಲುವ, ನಿನ್ನನ್ನು ವಿಧವೆಯಾಗಿಸುವ ಯಾವ ಉದ್ದೇಶವೂ ನನ್ನದಾಗಿರಲಿಲ್ಲ. ಸಹಿಸಬಹುದಾದಷ್ಟನ್ನು ಸಹಿಸಿದರೂ ಆತನಾಡಿದ ಶಬ್ದಗಳಿಂದ ನಾನು ಕೆರಳಿ ಹೋದೆ. ಸಾಗಿದ ಘನಘೋರ ಯುದ್ಧದ ತೀವ್ರತೆಯಲ್ಲಿ ನನ್ನ ಕೈಯಲ್ಲಿ ಹತನಾಗಿ ಹೋದ. ಇಲ್ಲಿ ನನ್ನ ತಪ್ಪೇನೆಂದೇ ನನಗರಿಯದಾಗಿದೆ. ಆದರೂ ಲೋಕ ನನ್ನನ್ನು ಪಿತೃ ಹತ್ಯಾ ದೋಷಿಯೆಂದೇ ಪರಿಗಣಿಸುತ್ತದೆ. ಲೆಕ್ಕ ತಪ್ಪಿ ಆಗಿ ಹೋದ ಘಟನೆಯ ಬಗ್ಗೆ ಏನೇ ಹೇಳಿದರೂ ಫಲವಿದೆಯೇ? ತಂದೆಯನ್ನು ಕೊಂದ ಪಾಪಿಯೇ ನಾನೆಂದು ಲೋಕ ಆಡಿಕೊಳ್ಳದಿರದು. ಧ್ಯಾನ, ಜಪ, ತೀರ್ಥಯಾತ್ರೆ, ಹೋಮ, ಹವನ, ದಾನ, ಧರ್ಮಗಳಿಂದ ಪ್ರಾಯಶ್ಚಿತ್ತ ಮಾಡಲಾದೀತೇ? ಸರ್ವ ಪಾಪನಾಶಕನಾದ ಹರಿ ಶ್ರೀಕೃಷ್ಣನನ್ನು ಬೇಡೋಣವೇ? ಕೃಷ್ಣ ಸಖನಾದ ಅರ್ಜುನನ್ನು ಕೊಂದ ಪಾಪ ವಿಮೋಚನೆಗೆ ಶ್ರೀಕೃಷ್ಣನನ್ನು ಯಾವ ಮುಖದಿಂದ ಧ್ಯಾನಿಸಲಿ? ಹಾಗಿರುವಾಗ ಪರಿಹಾರ ಮಾರ್ಗವೇ ಇಲ್ಲದ ಈ ದೋಷ ನಿವಾರಣೆಯಾಗಬೇಕಾದರೆ ಪಾಪಿಯಾದ ನಾನೇ ಶಿಕ್ಷೆಗೊಳಗಾಗಬೇಕು. ಅದೂ ಅಂತಿಂತಹ ಶಿಕ್ಷೆಯಿಂದ ಅಸಾಧ್ಯವಾದುದು. ಅಗ್ನಿ ಪ್ರವೇಶ ಮಾಡಿ ನಾನು ಪ್ರಾಣ ತ್ಯಾಗ ಮಾಡಲೇ ಬೇಕು. ಹೆತ್ತು ಸಾಕಿ ಸಲಹಿ ಲೋಕದ ಬೆಳಕು ತೋರಿದ ನೀನು ನನ್ನಮ್ಮ. ಕಣ್ತೆರೆದಲ್ಲಿಂದ ಕಾಣುತ್ತಾ ಬಂದ ನಿನ್ನ ಬಗ್ಗೆ ನನ್ನ ಪ್ರಾಣಕ್ಕಿಂತ ಮಿಗಿಲಾದ ಒಲವಿದೆ. ನಿನ್ನನ್ನು ಕೊಲ್ಲುವ ಕಲ್ಪನೆಯನ್ನು ಮಾಡುವ ಧೈರ್ಯವೂ ನನಗಿಲ್ಲ. ನೀನಿಲ್ಲದ ಬದುಕು ಊಹಿಸುವ ಶಕ್ತಿಯೂ ಇಲ್ಲ. ಹಾಗಿರುವಾಗ ನನಗಿನ್ನು ಬದುಕುವ ನೈತಿಕ ಹಕ್ಕೂ ಇಲ್ಲ. ನನ್ನ ಈ ಶರೀರ ತ್ಯಜಿಸಲೇ ತಕ್ಕುದಾದುದು ಹೊರತು ಬದುಕುವುದಕ್ಕಲ್ಲ. ಹಾಗಾಗಿ ಇದೋ ಅಗ್ನಿ ಪ್ರವೇಶ ಮಾಡಿ ನನ್ನೀ ಪಾಪಿ ಶರೀರವನ್ನು ಭಸ್ಮಗೊಳಿಸುವೆ.” ಎಂದು ಹೇಳಿ, ಅಗರು, ಚಂದನದ ಕಟ್ಟಿಗಳನ್ನು ತರಿಸಿ ರಾಶಿ ಹಾಕಿಸಿದನು.
ಪತಿಗೆ ಪತ್ನಿಯಾದರೂ, ಮಗನಿಗೂ ತಾಯಿಯಲ್ಲವೇ ಚಿತ್ರಾಂಗದೆ? ಮಗನ ಮರುಕ ಕಂಡು ಮರುಗಿದಳು ಮಾತೆ. ಅರೆಕ್ಷಣ ನಾನಿನ್ನು ತಡ ಮಾಡಿದರೂ ಮಗನನ್ನೂ ಕಳಕೊಳ್ಳುವೆ ಎಂಬ ಭಯ ಆಕೆಯನ್ನಾವರಿಸಿತು. ಪರಮ ಪ್ರೀತನಾದ ಗಂಡ ಹೆಣವಾಗಿ ಮಲಗಿದ್ದಾನೆ. ಈಗ ನನ್ನದ್ದಾದ ಕೋಪ ಹಠದ ಪರಿಣಾಮವಾಗಿ ಮಗನೂ ಇನ್ನಿಲ್ಲವಾಗುತ್ತಾನೆ. ಸಾವೇ ಎಲ್ಲದಕ್ಕೂ ಪರಿಹಾರವೇ? ಗಂಡ ಹೇಗೂ ಸತ್ತಾಗಿದೆ. ಬದುಕಿ ಬಾಳಬೇಕಾದ ನಮ್ಮ ಕರುಳ ಕುಡಿಯೂ ಅಳಿದರೆ ಗಂಡ ಮತ್ತು ಮಗ ಇಬ್ಬರನ್ನೂ ಕಳಕೊಂಡ ನನ್ನಷ್ಟು ನತದೃಷ್ಟೆ ಈ ಲೋಕದಲ್ಲಿರಲು ಸಾಧ್ಯವೇ? ಪತಿ ಪುತ್ರರಿಬ್ಬರೂ ಮೃತರಾದರೆ ಅವರೀರ್ವರನ್ನೂ ಕಳಕೊಂಡು ನನಗೆ ಬದುಕುವ ಆಸೆಯಾದರೂ ಏನಿರಲಿದೆ? ಹೀಗೆ ತರ್ಕಿಸಿ “ಹೇ ಮಗನೇ! ಸೈರಿಸು ಸೈರಿಸು.. ಈಗಾಗಲೇ ನೀನು ದುಡುಕಿದ ಪರಿಣಾಮ ಅನಾಹುತವೊಂದು ಆಗಿ ಹೋಗಿದೆ. ಈಗ ಇನ್ನೊಂದು ಗಂಡಾಂತರಕ್ಕೆ ಕಾರಣನಾಗಬೇಡ. ಮಹಾತ್ಮನಾದ ಅರ್ಜುನ ಬಂದಿರುವುದು ಕುದುರೆಯ ಬೆಂಗಾವಿಲ್ಲವೇ? ಕುದುರೆ ಪರ್ಯಟನೆಗೆ ಕಾರಣ ಯಾಗ ಸಮಾಪ್ತಿಯಲ್ಲವೇ? ಈ ಯಾಗದ ಪ್ರೇರಕ ಶ್ರೀಕೃಷ್ಣನೇ ಆಗಿರಬಹುದಲ್ಲವೇ? ಅರ್ಜುನನೇ ಅಳಿದರೆ ಯಾಗ ಸಮಾಪ್ತಿಯೇ ಆಗದು. ಧರ್ಮ ಸಂರಕ್ಷನಾದ ಶ್ರೀಕೃಷ್ಣನಿಗೆ ಯಾಗ ಸಂಪನ್ನತೆಯನ್ನು ಮಾಡಿಸುವ ಹೋಣೆಗಾರಿಕೆ ಖಂಡಿತಾ ಇರಬಹುದು. ಹಾಗಾಗಿ ಅರ್ಜುನ ಮೃತನಾದ ವಿಚಾರ ತಿಳಿದು ಶ್ರೀಕೃಷ್ಣ ಧಾವಿಸಿ ಬರದಿರಲಾರ. ಅನುಪಮ ಕೃಪಾಳುವಾದ ದೇವ ಬರದೆ ನಾವು ಏನನ್ನೂ ಯೋಚಿಸಿ ತೀರ್ಮಾನಿಸಲಾಗದು. ಆ ದೇವನೇ ನಮಗೆ ಮಾರ್ಗದರ್ಶನ ಮಾಡುವಲ್ಲಿ ಶ್ರೀಕೃಷ್ಣನೊಬ್ಬನೆರ ಸಮರ್ಥ. ಹಾಗಾಗಿ ದುಡುಕದೆ ಭಗವಂತ ಕರುಣೆದೋರುವವರೆಗೆ ಸೈರಿಸು. ಅರ್ಜುನನ ಜೀವಕ್ಕೂ ಯಾಗ ಸಮಾಪ್ತಿಗೂ ಹೊಣೆಗಾರನಾದ ಚಿನ್ಮಯ ಸ್ವರೂಪನ ಆಗಮನವಾಗಲಿ. ಆ ವರೆಗೆ ನೀನು ಪ್ರಾಣತ್ಯಾಗ ಮಾಡುವ ಅಗತ್ಯವಿಚಾರವನ್ನು ಕೈ ಬಿಡಬೇಕು” ಎಂದು ಚಿತ್ರಾಂಗದೆ ವಿನಂತಿಸಿದಳು.


































