
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಅವರ ವಿಚ್ಛೇದನದ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ಪತಿ ಸುಮಂತ್ ಬಿಲ್ಲವ ಅವರಿಂದ ವಿಚ್ಛೇದನ ಕೋರಿ ಅವರು ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಈ ಬೆಳವಣಿಗೆಯ ನಡುವೆ ಶುಭಾ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ವೈಯಕ್ತಿಕ ಜೀವನದ ಕುರಿತು ಸೂಕ್ತ ಸಮಯದಲ್ಲಿ ತಾವೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ತಮಗೂ ಹಾಗೂ ಸುಮಂತ್ ಅವರಿಗೂ ಸಮಯಾವಕಾಶ ನೀಡುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಶುಭಾ ಮತ್ತು ಸುಮಂತ್ ಅವರನ್ನು ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಅವರ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಇಬ್ಬರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
2022ರ ಜನವರಿ 5ರಂದು ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ವಿವಾಹವಾಗಿದ್ದ ಶುಭಾ ಪೂಂಜಾ, ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಒಬ್ಬರಾಗಿದ್ದರು. ಕೊರೊನಾ ಅವಧಿಯಲ್ಲಿ ಮಂಗಳೂರಿನಲ್ಲಿ ಸರಳವಾಗಿ ಅವರ ವಿವಾಹ ನೆರವೇರಿತ್ತು.
ಮಾಡೆಲಿಂಗ್ ಕ್ಷೇತ್ರದಿಂದ ಸಿನಿರಂಗಕ್ಕೆ ಬಂದ ಶುಭಾ ಪೂಂಜಾ, ‘ಜಾಕ್‌ಪಾಟ್’, ‘ಮೊಗ್ಗಿನ ಮನಸು’, ‘ಚಂಡ’, ‘ಸ್ಲಮ್ ಬಾಲ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. 2003ರಲ್ಲಿ ಮಿಸ್ ಚೆನ್ನೈ ಟಾಪ್ ಮಾಡೆಲ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.

































