
ಬೆಂಗಳೂರು: ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ, ಮಹಿಳಾ ಸುರಕ್ಷತೆ, ಡ್ರಗ್ಸ್ ಜಾಲ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆರಂಭಿಸಿದ್ದ ಕಾರ್ಯಕ್ರಮಗಳನ್ನು ಮುಂದುವರಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
“ಕಾನೂನು ಎಲ್ಲರಿಗೂ ಒಂದೇ. ಯಾರೇ ಆಗಿದ್ದರೂ ಕಾನೂನು ಮೀರಿದರೆ ಕ್ರಮ ಅನಿವಾರ್ಯ” ಎಂದು ಖರ್ಗೆ ಎಚ್ಚರಿಕೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವ ಅಥವಾ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ರೌಡಿ ಪಡೆ ರಚನೆ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಸೂಚನೆ ಬಗ್ಗೆ ಮಾತನಾಡಿದ ಅವರು, ಯೋಜನೆಯ ರೂಪುರೇಷೆ ಸಿದ್ಧವಾದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ವಿವಿಐಪಿ ಸಂಚಾರದಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಕಡಿಮೆ ಮಾಡುವ ಕುರಿತು ಸಹ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

































