ಭಾಗ – 542
ಭರತೇಶ್ ಶೆಟ್ಟಿ ಎಕ್ಕಾರು

ಅರ್ಜುನನ ನುಡಿ ಕೇಳಿ ಮತ್ತೆ ಮಾದಕ ನೋಟ ಬೀರುತ್ತಾ, ನನ್ನ ತಾಯಿ ಶಶಿಪ್ರಭೆ ಹೇಳಿರುವುದು ಕಾಳಿಕಾದೇವಿಯ ಅಭಯ ವಾಕ್ಯವನ್ನು. ಕಾಳಿಕಾಮಾತೆಯ ಮಾತು ನನ್ನ ಮಾತೆಯ ಮೂಲಕ ನನಗೆ ತಿಳಿದಿರುವಾಗ ಅದು ಸತ್ಯವೆಂದು ಪೂರ್ಣ ವಿಶ್ವಾಸದಿಂದ ನಂಬಿದವಳಾಗಿದ್ದೇನೆ. “ಆಹಾ ಎಂತಹ ಸುರಸುಂದರಾಂಗ ಅರ್ಜುನ. ಈತನ ಪತ್ನಿ ನಾನಾದರೆ ನನ್ನಷ್ಟು ಭಾಗ್ಯವಂತೆ ಈ ಜಗದಲ್ಲಿ ಯಾರಾದರು ಇರಲು ಸಾಧ್ಯವೆ? ಈಗಲೆ ಬಿಗಿದಪ್ಪಿ ಮುದ್ದಿಸೋಣ ಎಂದು ಮನಸ್ಸು ಹುಚ್ಚುಗುದುರೆಯಾಗಿ ಹಂಬಲಿಸುತ್ತಿದೆ. ಆದರೆ ಈ ಅರ್ಜುನನಿಗ್ಯಾಕೆ ಅರಿವಾಗುತ್ತಿಲ್ಲ. ಸಿಡುಕನಂತೆ ಬುಸುಗುಡುತ್ತಾ ತಿರಸ್ಕರಿಸುತ್ತಾ ಇದ್ದಾನಲ್ಲ? ಹೇಗೆ ಇವನನ್ನು ಓಲೈಸಲಿ? ಹೇ ಕಾಳಿಕಾಮಾತೆ! ನೀನೇ ಒಲಿದು ಉಲಿದ ವಚನವನ್ನು ನಂಬಿ ಕಣ್ಣಾರೆ ಕಂಡಿರದ ಅರ್ಜುನನ್ನು ಕಾಯುತ್ತಾ ಈ ಕಾಯವನ್ನು ಕಾಯಿಸುತ್ತಾ ಈ ತನಕ ಕಾತರವನ್ನು ಕಾಪಿಟ್ಟುಕೊಂಡಿದ್ದೆನು. ಈಗ ಕಣ್ಣಾರೆ ಕಾಣುವಾಗ ಕಾಮಿಸದೆ ಕಂಡ ಕನಸುಗಳು ಕರಗದ ಕಡಲಿನಷ್ಟಾಗಿದೆ. ಹೇ ಕಾಳಿಕಾ ಮಾತೆ, ನೀನು ಕರುಣೆದೋರಿ ನನ್ನ ಪ್ರಿಯತಮನನ್ನು ನನಗೊದಗಿಸಿ ಕಾಪಾಡಬೇಕು” ಎಂದು ಕಣ್ಮುಚ್ಚಿ ಕೈಮುಗಿದು ನಿಂತಳು. ದೇವಿಗೆ ನಮಿಸುವಷ್ಟೂ ಧೃಡತೆ ಇಲ್ಲದ ಚಾಂಚಲ್ಯ ಪ್ರಮೀಳೆಯ ಒಳಹೊಕ್ಕಿದೆ. ಧ್ಯಾನ ಮಾಡಲು ಬಯಸಿದ್ದು ದೇವಿಯದ್ದಾದರೂ ಅರ್ಜುನನು ಮನದಲ್ಲಿ ತುಂಬಿರುವಾಗ ಹಾಗೆ ಮಾಡಲು ಆಕೆಗೆ ಸಾಧ್ಯವಾದೀತೆ? ಕಣ್ತೆರೆದು ಅರ್ಜುನನನ್ನು ಒಮ್ಮೆ ನೋಡೋಣವೆಂದು ಕಣ್ಣಾಡಿಸಿದರೆ… ಇಲ್ಲ ಅರ್ಜುನನಿಲ್ಲ! ಎಲ್ಲಿ ಎಲ್ಲಿ ನನ್ನ ನಲ್ಲ ಎಂದು ದೃಷ್ಟಿ ಹಾಯಿಸಿದರೆ ದಿವ್ಯರಥವೇರಿ ಗಾಂಡೀವಧಾರಿಯಾಗಿ ಗಜಗಾಂಭೀರ್ಯದಿಂದ ನಿಂತಿದ್ದಾನೆ ಧನುರ್ಧರ ಧನಂಜಯ. ಗರ್ಭಗುಡಿಯೊಳಗಿನ ದೇವರಂತೆ ಅಪ್ಯಾಯಮಾನವಾಗಿ ಶೋಭಿಸುತ್ತಾ ವಿರಾಜಮಾನನಾಗಿ ಕಾಣಿಸುತ್ತಿದ್ದಾನೆ. ಅಲ್ಲಿಯೆ ಮೈಮರೆತು ಆ ದಿವ್ಯ ರೂಪವನ್ನು ನೋಡುತ್ತಾ ಪ್ರಮೀಳೆ ತನ್ಮಯಳಾಗಿ ನಿಂತಳು.
ಅರ್ಜುನ ಅಬ್ಬರಿಸುವ ಧನಿಯಲ್ಲಿ “ಎಲವೋ ರಣಹೇಡಿ ಹೆಣ್ಣೇ! ಚೆಲ್ಲಾಟವಾಡುತ್ತಾ ಮರುಳು ಮಾಡಲು ಹೊರಟಿರುವೆಯಾ? ನಿನ್ನಷ್ಟು ಮರುಳೆ ಮತ್ಯಾರೂ ಇರಲಿಕ್ಕಿಲ್ಲ. ಯುದ್ಧವೆಂದರೆ ಭಯವೇ ನಿನಗೆ? ಗಾಯದ ನೋವು ಸಹಿಸುವ ಹೆದರಿಕೆಯೇ? ಅಂತಹ ಅಂಜುಬುರುಕಿಯಾ ನೀನು? ಹೌದಾದರೆ ಯಾಗಾಶ್ವವನ್ನು ಕಟ್ಟುವ ದುಸ್ಸಾಹಸ ಯಾಕಾಗಿ ಮಾಡಿದೆ? ಆಗಿದ್ದು ಆಯಿತು, ತಪ್ಪಾಯಿತೆಂದು ಕಾಲಿಗೆರಗಿ ಶರಣಾಗು. ಕಪ್ಪಕಾಣಿಕೆಯ ಜೊತೆ ಕುದುರೆಯನ್ನು ಗೌರವಪೂರ್ವಕವಾಗಿ ಬಿಟ್ಟು ಕೊಡು. ವಿಟಗಾತಿಯಾಗಿ ನೀನು ತೋರುತ್ತಿರುವ ಹುಚ್ಚಾಟವನ್ನು ನಿಲ್ಲಿಸು. ಕಾಲಹರಣ ಮಾಡುತ್ತಾ ಮೋಜು ನೋಡುವಷ್ಟು ವ್ಯವಧಾನ ನನಗಿಲ್ಲ” ಎಂದು ಕಟುವಾಗಿ ಎಚ್ಚರಿಸಿದನು.
ಪ್ರಮೀಳೆಗೆ ಅರ್ಜುನನ ಚುಚ್ಚು ನುಡಿ ಕೆರಳಿ ಕೆಂಪಾಗುವಷ್ಟು ಕೋಪಾವೇಶವನ್ನು ಉತ್ಪತ್ತಿ ಮಾಡಿತು. ಈ ತನಕ ಭಿಕ್ಷುಕಳಂತೆ ಬೇಡುತ್ತಿದ್ದ ಪ್ರಮೀಳೆ ಸರಸರನೆ ದಾಪುಗಾಲು ಹೆಜ್ಜೆಗಳನ್ನಿಡುತ್ತಾ ಹಿಂದಿರುಗಿ ರಥವೇರಿದಳು. “ಹೇ ಪಾರ್ಥ ಮಹಾಶಯಾ! ಏನೆಂದು ತಿಳಿದಿರುವೆ ನನ್ನನ್ನು? ಎಲುಬಿಲ್ಲದ ನಾಲಗೆಯನ್ನು ಮನಬಂದಂತೆ ತಿರುಚಿ ನಿನ್ನ ಯೋಗ್ಯತೆಗೆ ಕಳಂಕ ತಂದು ಕೊಳ್ಳಬೇಡ. ಸತ್ಯ ನಿಷ್ಠರೂ ಧರ್ಮಾತ್ಮರೂ ಆಗಿ ಲೋಕ ಪ್ರಸಿದ್ಧಿ ಪಡೆದಿರುವ ನಿನ್ನಂತಹವರ ಬಾಯಿಯಲ್ಲಿ, ಮನದಲ್ಲಿ ಮೂಡಬಹುದಾದ ಯೋಚನೆಯೂ ಶ್ರೇಷ್ಟತರವಾದುದು ಆಗಿರಬೇಕಾಗಿತ್ತು. ಏನೆಂದೆ? ನಾನು ವಿಟಗಾತಿಯೇ? ಮರುಳೆಯೇ? ಹುಚ್ಚಿಯೇ? ಹೌದು ಹಾಗೆಂದು ಅಂದು ಕೊಂಡರೆ… ಅದೆಲ್ಲವೂ ಕೇವಲ ನಿನಗೊಬ್ಬನಿಗೆ ಮಾತ್ರ. ಅಕಾರಣವಾಗಿ ನಿನ್ನನ್ನು ಬಯಸಿರುವ ವಿಕೃತೆ ನಾನಲ್ಲ. ಋಷಿಗಳು ಇಷ್ಟ ದೇವರನ್ನು ನಿರಂತರ ಸ್ಮರಣೆ ಮಾಡುತ್ತಿದ್ದರೆ ಅದು ತಪಸ್ಸು ಎಂದಾಗುತ್ತದೆ. ಅಂತಹ ತಪೋನಿಧಿಗಳ ಸಾಧನೆಗೆ ಕಿಂಚಿತ್ತೂ ಕೊರತೆಯಾಗದ ರೀತಿ ನಿನ್ನ ಧ್ಯಾನ ಮಾಡುತ್ತಾ ಬಹು ಸಂವತ್ಸರ ಕಳೆದವಳು ನಾನು. ಕೇವಲ ಈಗಷ್ಟೆ ನಿನ್ನನ್ನು ನೋಡಿ ಕ್ಷಣಿಕವಾದ ಭಾವ ಪಲ್ಲಟದಿಂದ ಮರುಳಾದ ಮರುಳೆ ನಾನಲ್ಲ. ಸತ್ಯ ಯಾವ ಸಂಕಷ್ಟಕ್ಕೊಳಗಾದರೂ ಅದು ಸಾಯುವ ಸಾಧ್ಯತೆ ಇಲ್ಲ. ಅಂತಹ ನಿತ್ಯ ನೂತನ ಸತ್ಯವನ್ನು ನಿತ್ಯ ನಂಬಿದವಳು ನಾನು. ನಮ್ಮೊಳಗೆ ಬಾಹುಬಲದ ಪ್ರದರ್ಶನ ಬೇಡ, ವ್ಯರ್ಥ ಯುದ್ಧ, ಸಾವು ನೋವುಗಳೇಕೆ, ಅನಾವಶ್ಯಕ ಶ್ರಮವೇಕೆ ಎಂದು ನೇರ ಪ್ರಯತ್ನಕ್ಕೆ ಮುಂದಾದರೆ ನೀನು ನನ್ನನ್ನು ತುಚ್ಛೀಕರಿಸಿ ತೇಜೋವಧೆ ಮಾಡಲು ಮುಂದಾದೆಯಾ? ಬಿಸಿಯಾಗದೆ ಬೆಣ್ಣೆ ಕರಗದು ಎಂಬುವುದು ಅನುಭವ ವೇದ್ಯ ವಿಚಾರ. ಈ ಪ್ರಮೀಳೆ ರಣ ಹೇಡಿಯೂ ಅಲ್ಲ, ಯುದ್ದದಲ್ಲಾಗುವ ಗಾಯಕ್ಕೆ ಅಂಜುವ ಶಕ್ತಿಹೀನ ಕಾಯವನ್ನೂ ಹೊಂದಿಲ್ಲ. ಪ್ರೀತಿಗೆ ಬಗ್ಗಿದ್ದೇನೆ ಹೊರತು, ನೀತಿಗೆಟ್ಟು ಒಂದು ಉಸಿರನ್ನೂ ಸೆಳೆಯಲಾರೆ. ನನ್ನ ಶೀಲವನ್ನು ಪ್ರಶ್ನಿಸಿದೆಯಾ ಅರ್ಜುನಾ? ನನ್ನೊಳಗಿರುವ ನೈತಿಕ ಶಕ್ತಿಯ ಬಲವೆಷ್ಟು ಎಂಬುವುದನ್ನು ಕದನದಲ್ಲಿ ನೀನು ಅನುಭವಿಸಿ ನೋಡು. ಇದೋ ನನ್ನ ಮನಸ್ಸನ್ನು ಹಿಡಿತಕ್ಕೆ ತಂದಿದ್ದೇನೆ, ಬಿಲ್ಲನ್ನು ಬಗ್ಗಿಸಿ ಶಿಂಜಿನಿಯನ್ನು ಜೋಡಿಸಿ ಬಿಗಿದು ಕಟ್ಟಿದ್ದೇನೆ. ಪರೀಕ್ಷಾ ರೂಪವೋ, ಯುದ್ಧಾಹ್ವಾನವೋ ಎಂಬಂತೆ ಧನುಷ್ಟೇಂಕಾರವನ್ನು ಹೊಮ್ಮಿಸುತ್ತಿದ್ದೇನೆ. ನಿನಗೆ ಮನಸೋತು ಬಂದ ನನ್ನನ್ನು ಧಿಕ್ಕರಿಸಿದೆಯಲ್ಲಾ? ನೀನು ನಿಜ ವೀರನು ಹೌದಾದರೆ ಸಮರದಲ್ಲಿ ಗೆದ್ದು ನಿನ್ನ ಯಾಗಾಶ್ವವನ್ನು ಬಿಡಿಸಿ ಕೊಂಡು ಹೋಗು. ಈಗಲೂ ನಿನ್ನನ್ನು ಪುನರಪಿ ಎಚ್ಚರಿಸುತ್ತಿದ್ದೇನೆ, ಯುದ್ಧಕ್ಕೆ ತೊಡಗುವ ಮುನ್ನ ಮತ್ತೆ ವಿವೇಕಿಯಾಗಿ ವಿವೇಚಿಸು. ಮತ್ತೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲ ಸಿಗದು. ನೀನು ಒಪ್ಪಿ ನನ್ನನ್ನು ವರಿಸುವೆಯಾದರೆ ಈಗಲೂ ಯಾಗಾಶ್ವವನ್ನೂ, ಕಪ್ಪ ಕಾಣಿಕೆಗಳನ್ನೂ ಸಮರ್ಪಿಸಲು ಸಿದ್ಧಳಿದ್ದೇನೆ. ಆಯ್ಕೆ ನಿನಗೆ ಬಿಟ್ಟದ್ದು. ಎಂದು ಘಂಟಾಘೋಷವಾಗಿ ವೀರ ವನಿತೆಯಾಗಿ ಉದ್ಘೋಷಿಸಿದಳು.
ಅರ್ಜುನನು ತನ್ನ ಗಾಂಡೀವವನ್ನೆತ್ತಿ ಝೇವಡೆದನು “ಹೇ ಹೆಣ್ಣೇ! ಅತಿಯಾದರೆ ಅಮೃತವೂ ವಿಷವಾಗುತ್ತದೆಯಂತೆ. ನೀನು ತಂತ್ರಗಾರಿಕೆಯಲ್ಲಿ ಚತುರಳು ಎಂಬುವುದನ್ನು ಇಲ್ಲಿ ನೋಡುತ್ತಾ ಅರಿತು ಕೊಂಡಿದ್ದೇನೆ. ಮೊದಲು ವೈಯ್ಯಾರ, ಬಿನ್ನಾಣದಿಂದ ಮರುಳು ಮಾಡುವ ಪ್ರಯತ್ನ ಮಾಡಿದೆ. ಅದು ಸಾಗಲಿಲ್ಲ ಎಂದ ಕೂಡಲೆ ಹೊಸ ತಂತ್ರ ಪ್ರಯೋಗಿಸುತ್ತಿರುವೆಯಾ? ಕೃಷಿಕನೋರ್ವ ತನ್ನ ಕೃಷಿಗೆ ಕಾಡ ಮೃಗಗಳ ಹಾವಳಿಯಾದಾಗ ಅವುಗಳನ್ನು ಬೇಟೆಯಾಡಲು ಆಗದಿದ್ದರೆ, ಏನೇನನ್ನೋ ಬಡಿದು, ಸ್ಪೋಟಿಸಿ ಕರ್ಣಕರ್ಕಶ ಶಬ್ದಗಳನ್ನು ಉಂಟು ಮಾಡುತ್ತಾ ಓಡಿಸುವ ಯತ್ನ ಮಾಡುವುದು ಸಾಮಾನ್ಯ ವಿಚಾರ. ನೀನೂ ಅಂತೆಯೆ ಬಾಯಿ ಬಡಬಡಾಯಿಸುತ್ತಾ ಗೊಡ್ಡು ಬೆದರಿಕೆ ಹಾಕಿದರೆ ಅಂಜುವವನಲ್ಲ ಈ ಅರ್ಜುನ? ಒಂದೋ ಯುದ್ದಕ್ಕೆ ಸಿದ್ಧಳಾಗಿ ಹೋರಾಡು, ಅದಾಗದಿದ್ದರೆ ಶರಣಾಗಿ ಕಪ್ಪ ನೀಡಿ ಕುದುರೆ ಬಿಟ್ಟು ಕೊಡು. ಸುಮ್ಮನೆ ಹುಚ್ಚಾಟವಾಡಿದರೆ ದಂಡನೆ ಏನು ಮತ್ತು ಹೇಗೆ ನೀಡಬೇಕೆಂದು ತಿಳಿದಿದ್ದೇನೆ.” ಎಂದು ತೀಕ್ಷ್ಣ ಮಾತಿನಿಂದ ತಿವಿದನು.
ಪ್ರಮೀಳೆ ಆತ್ಮವಿಶ್ವಾಸದ ನಗೆ ಬೀರುತ್ತಾ “ಹೇ ನರೋತ್ತಮನೇ! ಇನ್ನೂ ನನ್ನನ್ನು ಉಪೇಕ್ಷಿಸುತ್ತಾ ಧಿಕ್ಕರಿಸುವುದನ್ನು ಬಿಡುತ್ತಿಲ್ಲ. ದೈವೇಚ್ಚೆ ಏನಿದೆಯೋ ಅದು ಆಗಲಿಕ್ಕಿದೆ. ಇದೋ ನನ್ನ ಪರಾಕ್ರಮದ ಶಕ್ತಿಯಿಂದಲೆ ಸಾಕ್ಷಾತ್ಕಾರ ಆಗಬೇಕಿದ್ದರೆ ಹಾಗೆಯೇ ಆಗಲಿ. ಇದೋ ಶರ ಸಂಧಾನ ಮಾಡಿದ್ದೇನೆ” ಅತ್ತ ಅರ್ಜುನನೂ ಸಮರ ಸನ್ನದ್ಧನಾಗಿ ಗಾಂಡೀವಕ್ಕೆ ಅಂಬನ್ನು ತೊಟ್ಟು ಸೆಳೆದನು.
ಮುಂದುವರಿಯುವುದು..






























