
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಹುದ್ದೆ ಕುರಿತ ಗೊಂದಲಕ್ಕೂ ತೆರೆಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಡಾ. ಜಿ. ಪರಮೇಶ್ವರ್ ಅವರನ್ನು ರಾಜ್ಯದ ಏಕೈಕ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.
ಆರಂಭದಲ್ಲಿ ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ ತಡರಾತ್ರಿವರೆಗಿನ ಸಮಾಲೋಚನೆಗಳ ಬಳಿಕ ಒಬ್ಬರೇ ಉಪಮುಖ್ಯಮಂತ್ರಿ ಸಾಕು ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಡಿಕೆ ಶಿವಕುಮಾರ್ ಸಂಪುಟದಲ್ಲಿ ಏಕೈಕ ಡಿಸಿಎಂ ಆಗಲಿದ್ದಾರೆ.
ಪರಮೇಶ್ವರ್ ಅವರನ್ನು ಆಯ್ಕೆ ಮಾಡುವ ಮೂಲಕ ಸರ್ಕಾರದಲ್ಲಿ ಅನುಭವಕ್ಕೆ ಆದ್ಯತೆ ನೀಡುವುದರ ಜೊತೆಗೆ ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯವನ್ನು ಬಲಪಡಿಸುವ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕತ್ವ ಹೊಂದಿದೆ ಎನ್ನಲಾಗಿದೆ. ಈ ಆಯ್ಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವೂ ಇದ್ದುದಾಗಿ ಮೂಲಗಳು ತಿಳಿಸಿವೆ.
ವಿಶೇಷವೆಂದರೆ, ಡಿಸಿಎಂ ಹುದ್ದೆಗಾಗಿ ಪರಮೇಶ್ವರ್ ಯಾವುದೇ ರೀತಿಯ ಲಾಬಿ ನಡೆಸಿರಲಿಲ್ಲ ಎನ್ನಲಾಗಿದ್ದು, ಹೈಕಮಾಂಡ್ ತೀರ್ಮಾನವನ್ನು ಅವರು ಕಾಯುತ್ತಿದ್ದರು. ಇತ್ತ ಡಿಕೆ ಶಿವಕುಮಾರ್ ನಿವಾಸದ ಬಳಿ ಕಾರ್ಯಕರ್ತರ ಸಂಭ್ರಮ ಕಂಡುಬಂದರೆ, ಪರಮೇಶ್ವರ್ ನಿವಾಸದ ಬಳಿ ಯಾವುದೇ ವಿಶೇಷ ಆಚರಣೆ ಕಂಡುಬಂದಿಲ್ಲ.





























