
ಬೆಂಗಳೂರು: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ ಭಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ಇನ್ನು ಮುಂದೆ ಅವರು ಯಾವುದೇ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಹೈಕೋರ್ಟ್‌ಗೆ ಭರವಸೆ ನೀಡಿದರು. ಈ ಹೇಳಿಕೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ದಾಖಲಿಸಲಾಯಿತು.
ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ನೀಡಿದ ದೂರಿನ ಆಧಾರದಲ್ಲಿ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ತಡೆಯಾಜ್ಞೆ ನೀಡಿತ್ತು.
ವಿಚಾರಣೆ ವೇಳೆ ದೂರುದಾರರ ಪರ ಹಿರಿಯ ವಕೀಲ ಎಸ್. ಬಾಲನ್, ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಸಲ್ಲಿಸಿ, ಪ್ರಭಾಕರ ಭಟ್ ನಿರಂತರವಾಗಿ ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಮತ್ತು ವಿಷಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ವಾದಿಸಿದರು. ನ್ಯಾಯಾಲಯದಿಂದ ದೊರೆತಿರುವ ತಡೆಯಾಜ್ಞೆಯನ್ನು ಆಧಾರವಾಗಿಟ್ಟುಕೊಂಡು ಅವರು ಮತ್ತೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಭಟ್ ವಿರುದ್ಧ ದಾಖಲಾಗಿರುವ 12 ಎಫ್‌ಐಆರ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಪ್ರಭಾಕರ ಭಟ್ ಅವರಿಗೆ 83 ವರ್ಷ ವಯಸ್ಸಾಗಿದ್ದು, ತಡೆಯಾಜ್ಞೆಯನ್ನು ತೆರವುಗೊಳಿಸಬಾರದು ಎಂದು ವಾದಿಸಿದರು. ಈ ವೇಳೆ ಭಾಷಣದ ಕೆಲವು ಭಾಗಗಳನ್ನು ಓದಲು ಎಸ್. ಬಾಲನ್ ಮುಂದಾದಾಗ, ಅದನ್ನು ಮೈಕ್ ಆಫ್ ಮಾಡಿ ಓದಲು ನ್ಯಾಯಮೂರ್ತಿಗಳು ಸೂಚಿಸಿದರು. ಬಳಿಕ ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡದಂತೆ ಆದೇಶ ನೀಡುವಂತೆ ದೂರುದಾರರ ಪರ ಮನವಿ ಸಲ್ಲಿಸಲಾಯಿತು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಈ ಅರ್ಜಿಯೊಂದಿಗೆ ಜೋಡಿಸಲು ಸೂಚಿಸಿತು. ಇದೇ ವೇಳೆ ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಭಟ್ ಪರ ವಕೀಲರು ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ನಿಗದಿಪಡಿಸಿತು.




























