ಭಾಗ – 534
ಭರತೇಶ ಶೆಟ್ಟಿ,ಎಕ್ಕಾರು

ಕೃಷ್ಣಾರ್ಜುನರ ಸಂಭಾಷಣೆ, ಗೋವರ್ಧನ ಗಿರಿ ಉದ್ಧರಣದ ಪುಣ್ಯ ಫಲ ಪಾರ್ಥನ ಶರದಲ್ಲಿ ಸನ್ನಿಹಿತವಾದುದನ್ನು ಕಂಡ ಸುಧನ್ವ “ಹೇ ದೇವಾ! ನಿನ್ನ ಲೀಲೆ, ಮಹಿಮೆಯ ಆ ಪುಣ್ಯ ಘಟನೆಯ ಕಥೆ ನಾನು ಕೇಳಿ ತಿಳಿದಿದ್ದೇನೆ. ಇಂದು ಆ ಪುಣ್ಯ ಕಾರ್ಯದಿಂದ ಸಂಚಿತವಾಗಿರುವ ಅಪಾರ ಪುಣ್ಯದ ಸತ್ಫಲವನ್ನು ಹೊತ್ತು ಬರುವ ಅರ್ಜುನನ ಬಾಣವನ್ನು ಮಾರ್ಗವಾಗಿಸಿ ನಿನ್ನ ಭಕ್ತನಾದ ನನ್ನೆಡೆಗೆ ರವಾನಿಸುತ್ತಿರುವೆಯಾ? ಅರ್ಜುನಾ, ಅಂತಹ ವಿಶೇಷ ಶಕ್ತಿ ಸಂಪನ್ನವಾದ ಮಹಾಶರವು ನನಗೆ ಮಹಾಪ್ರಸಾದವಾಗಿದೆ. ಆದರೂ ಕ್ಷತ್ರಿಯೋಚಿತವಾಗಿ ಅದನ್ನು ಪಥ ಮಧ್ಯದಲ್ಲಿ ಕತ್ತರಿಸಿ ಹಾಕದಿದ್ದರೆ ಶ್ರೀಕೃಷ್ಣನ ಚರಣ ಕಿಂಕರನಾದ ಶರಣ ನಾನಲ್ಲವೆಂದು ತಿಳಿ” ಎಂದು ಹೇಳಿ ತೀಕ್ಷ್ಣ ಶರವೊಂದನ್ನು ಬತ್ತಳಿಕೆಯಿಂದ ಸೆಳೆದು ಪ್ರಯೋಗಿಸಿದನು.
ಪಾರ್ಥನೆಸೆದ ಮೊದಲ ಶರ ಸುಧನ್ವನ ತನಕ ತಲುಪದೆ ಪಥ ಮಧ್ಯದಲ್ಲಿ ಕತ್ತರಿಸಲ್ಪಟ್ಟಿತು. ಶ್ರೀಕೃಷ್ಣ ಧಾರೆಯೆರೆದ ಪುಣ್ಯದ ಬಲ ಸಾಕಾಗಲಿಲ್ಲ.
“ಅರೆರೆ ಈ ಸುಧನ್ವ ಶ್ರೀಕೃಷ್ಣನಿತ್ತ ಬಲವನ್ನೂ ಮೀರುವಷ್ಟೂ ಪ್ರಬಲನಾದನೆ? ಹೋದರೆ ಹೋಗಲಿ ಒಂದು ಬಾಣ. ಇನ್ನೆರಡು ಇದೆಯಲ್ಲ. ಮತ್ಸ್ಯಯಂತ್ರ ಲಾಂಛನ ಭೇದಿಸಿದ ನಿಖರ ಗುರಿ ಸಾಧಕನು ನಾನು. ನನ್ನ ಗುರಿ ಸುಧನ್ವಾ ನಿನ್ನ ಶಿರ. ಹೇ ಸುಧನ್ವಾ, ಸಾಧ್ಯವಾದರೆ ನನ್ನ ಈ ಅಂಬನ್ನು ಛೇದಿಸಿ ತೀರಿಸು. ನಿನ್ನ ಸಾವು ಈಗ ಆಗುವುದು ಶತಸಿದ್ದ. ಮರಣಕ್ಕೆ ಸಿದ್ಧನಾಗು” ಎಂದು ಹೇಳಿ ಗಾಂಡೀವದ ಶಿಂಜಿನಿಗೆ ಜೋಡಿಸಿ ಅಕರ್ಣಾಂತ ಸೆಳೆದು ಪ್ರಯೋಗಿಸಲು ಸಿದ್ಧನಾದನು ಕಲಿ ಪಾರ್ಥ.
“ನಿಲ್ಲು ನಿಲ್ಲು ಅರ್ಜುನಾ! ನಿನ್ನ ಈ ಸರಳು ಸುಧನ್ವನಿಗೆ ಕ್ಷುಲ್ಲಕವಾದೀತು. ಸುಖಾ ಸುಮ್ಮನೆ ಎರಡನೆ ಶರವನ್ನು ನಷ್ಟಗೊಳಿಸಬೇಡ. ಇದೋ ಕೃಷ್ಣಾವತಾರ ಎತ್ತಿ ಬಂದಿರುವ ನಾನು ಅನೇಕ ದುಷ್ಟರನ್ನು, ರಾಕ್ಷಸರನ್ನು ವಧಿಸಿ ಶಿಷ್ಟರ ರಕ್ಷಣೆ ಮಾಡಿದ್ದೇನೆ. ಆ ಸತ್ಕರ್ಮದಿಂದ ಸಂಚಿತವಾದ ನನ್ನ ಈ ಅವತಾರದ ಪೂರ್ಣ ಪುಣ್ಯ ಬಲವನ್ನು ಈ ಶರದಲ್ಲಿ ನಿಕ್ಷೇಪಿಸಿ ದಿವ್ಯ ಬಲವನ್ನಿತ್ತಿದ್ದೇನೆ. ಈಗ ಪ್ರಯೋಗಿಸಿ ನಿನ್ನ ವಚನ ಪಾಲನೆಗೆ ಪ್ರಯತ್ನಿಸು” ಎಂದು ಪರಮಾತ್ಮ ಶ್ರೀಕೃಷ್ಣ ಅನುಗ್ರಹಿಸಿದನು.
“ಹೇ ದೇವಾ! ನೀನು ‘ಧರ್ಮ ಸಂಸ್ಥಾಪನಾಚಾರ್ಯ’ ಎಂದು ಖ್ಯಾತನಾದವನು. ಇಳೆಯ ಭಾರವನ್ನಿಳುಹಿ ಧರ್ಮ ರಕ್ಷಣೆ ಮಾಡಿರುವ ಸದ್ಬಲವನ್ನು ಪಾರ್ಥನ ಸರಳಿಗೆ ಬಲವಾಗಿ ಪೂರಣೆ ಮಾಡಿರುವೆಯಾ? ಇದೋ ನನ್ನ ಮಾತು ಕೇಳು.. ಒಂದು ವೇಳೆ ನಾನು ಪಾರ್ಥನಿಂದ ಪ್ರಯೋಗಿಸಲ್ಪಡುವ ಈ ಪುಣ್ಯಶರವನ್ನು ಮಧ್ಯದಲ್ಲಿ ಛೇದಿಸದೆ ಹೋದರೆ ನನಗೆ ಮಹಾ ಪಾತಕ ಅಂಟಿಕೊಳ್ಳಲಿ. ಅದೂ ಅಂತಿಂತಹ ಪಾಪವಲ್ಲ, ಮಹಾಪತಿವೃತೆ ಅರುಂಧತಿಯನ್ನು ಉದ್ಧರಿಸಿದ ಪತಿ ವಸಿಷ್ಟರನ್ನು ಕೊಂದರೆ ಯಾವ ಪಾಪ ಬರಬಹುದೊ ಅಂತಹ ನಿಕೃಷ್ಟ ಪಾತಕ ನನಗೊದಗಲಿ. ಇದೋ ನನ್ನ ಬಾಣ ಪ್ರಯೋಗಕ್ಕೆ ಸಿದ್ಧವಾಗಿದೆ” ಎಂದನು.
ಏನು ನೋಡುವುದು? ಪಾರ್ಥನ ಎರಡನೆ ಶರವೂ ಛೇದನಗೊಂಡಿದೆ. ಶ್ರೀಕೃಷ್ಣಾವತಾರದ ಪುಣ್ಯಬಲ ಸುಧನ್ವನನ್ನು ವಧಿಸಲು ಸಾಕಾಗದೆ ಹೋಗಿದೆ. ಸದ್ಭಕ್ತಿಯ ಶಕ್ತಿ ಲೋಕಮುಖಕ್ಕೆ ಪ್ರಕಟಗೊಂಡಿದೆ.
“ಸುಧನ್ವಾ! ನಿನ್ನ ವಿಕ್ರಮವನ್ನು ಮೆಚ್ಚಲೇ ಬೇಕು. ಶ್ರೀಕೃಷ್ಣ ಪರಮಾತ್ಮ ಧರ್ಮ ಸಂಸ್ಥಾಪಕನಾಗಿದ್ದಾನೆ. ದೇವನಾದ ಆತನ ಈ ಅವತಾರದ ಪುಣ್ಯ ಫಲದ ಬಲವನ್ನೂ ಮೀರಿ ನಿಂತಿರುವೆ ಎಂದಾದರೆ ಅದು ಸಾಧಾರಣ ಸಾಮರ್ಥ್ಯವಲ್ಲ. ಭೇಶ್ ಸುಧನ್ವಾ! ನಾನು ನಿನಗಿತ್ತ ಎರಡನೆಯ ಸವಾಲನ್ನೂ ನೀನು ಗೆದ್ದಿರುವೆ. ಇರಲಿ ಯುದ್ದವೆಂದ ಮೇಲೆ ಇದೆಲ್ಲಾ ಸಂಭವನೀಯ. ಆದರೆ ನನ್ನ ಬಳಿ ಇನ್ನೂ ಒಂದು ಅವಕಾಶ ಉಳಿದಿದೆ. ಈ ಬಾರಿ ನಿನ್ನನ್ನು ಬಿಡಲಾರೆ. ಮೂರನೆಯ ಶರ ಸಂಧಾನವಾಗಿದೆ. ನೀನು ವೀರನು ಹೌದಾದರೆ ಇದನ್ನು ಖಂಡಿಸಿ ತೋರಿಸು” ಎಂದು ಅರ್ಜುನ ಸವಾಲೆಸೆದು ಮೂರನೆ ಸರಳನ್ನು ಸಂಧಾನ ಮಾಡಿದನು.
ಆಗ ಮತ್ತೆ ಶ್ರೀಕೃಷ್ಣ ಅರ್ಜುನನ್ನು ತಡೆದನು. “ಹೇ ಪಾರ್ಥಾ! ದುಡುಕಿ ಕಾರ್ಯ ಸಾಧನೆಯಾಗದು. ಸುಧನ್ವ ನೀನಂದುಕೊಂಡಷ್ಟು ಸುಲಭದ ಸ್ವತ್ತಲ್ಲ. ಆತನ ವಧೆಗೆ ಮಹಾ ಶಕ್ತಿಯ ಆರೋಹಣವಾಗಬೇಕು. ಅರ್ಜುನ ನಿನ್ನ ಬಾಣಕ್ಕೆ ಮಹತ್ತರವಾದ ಶಕ್ತಿಯನ್ನು ತುಂಬುತ್ತಿದ್ದೇನೆ. ಶ್ರೀರಾಮನ ಜೀವನ ನಿಷ್ಕಳಂಕವಾದುದು. ಚತುರ್ದಶ ಲೋಕಗಳ ಮೇಲೆ ಪಾರುಪತ್ಯ ಸಾಧಿಸಿದ ಆ ರಾವಣನ್ನು ಕೊಂದು ಲೋಕಕಲ್ಯಾಣ ಮಾಡಿದ ರಾಮಾವತಾರದ ಮಹಾಪುಣ್ಯವನ್ನು ಧಾರೆ ಎರೆದಿದ್ದೇನೆ. ಅಷ್ಟು ಮಾತ್ರ ಸಾಕಾಗದು. ಈ ಶರದ ಆದಿಯಲ್ಲಿ ಬ್ರಹ್ಮನ ಶಕ್ತಿಯನ್ನು, ಮಧ್ಯಭಾಗದಲ್ಲಿ ವಿಷ್ಣು ಶಕ್ತಿಯನ್ನು, ಅಂತ್ಯದಲ್ಲಿ ಮಹಾದೇವ ಶಿವ ಶಕ್ತಿಯನ್ನು ಸ್ಥಿತಗೊಳಿಸಿದ್ದೇನೆ. ಅತಿಭಾರವಾದ ಈ ಶರವನ್ನೆತ್ತಲು ನಿನ್ನಿಂದಾಗದು. ಅದಕ್ಕಾಗಿ ನಿನಗೆ ವಿಶೇಷ ಚೇತನವನ್ನು ಕರುಣಿಸಿದ್ದೇನೆ. ತ್ರಿಮೂರ್ತಿಗಳ ಸಾನಿಧ್ಯವಿರುವ ಈ ಶರವನ್ನು ಪ್ರಯೋಗಿಸಿ ನಿನ್ನ ಪ್ರತಿಜ್ಞೆಯನ್ನು ಪೂರೈಸಿಕೋ” ಎಂದು ಅಪ್ಪಣೆ ನೀಡಿದನು.
ಮುಂದುವರಿಯುವುದು…




























