29.1 C
Udupi
Saturday, May 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 530

ಭರತೇಶ ಶೆಟ್ಟಿ ,ಎಕ್ಕಾರು

“ಎಲೈ ಪಾರ್ಥಾ! ನನ್ನನ್ನು ಹುಂಬ ಹುಡುಗನೆಂದು ಜರೆದೆಯಲ್ಲ ನೀನು? ಹೌದು ನಾನು ನಾನಾಗಿ ಹುಂಬ ಹುಡುಗನೇ! ನೀನಾಡಿದ್ದು ತಪ್ಪಲ್ಲ ಆದರೆ ಶ್ರೀಹರಿಯ ಭಕ್ತಿಯಿಂದ ಸಂಚಿತವಾಗಿರುವ ಅವ್ಯಕ್ತ ಶಕ್ತಿಗೆ ಹುಂಬತನವಿಲ್ಲ ಎಂದು ಅರಿತೆಯಾ? ಶ್ರೀಕೃಷ್ಣನನ್ನು ಕರೆದು ನಿನ್ನ ಸಾರಥಿಯಾಗಿಸು ಎಂದು ಪದೆ ಪದೆ ಎಚ್ಚರಿಸಿದಾಗ ಏನಂದೆ? ‘ಹಾಡಿದ್ದನ್ನೇ ಹಾಡುವ ಕಿಸುಬಾಯಿಯ ದಾಸ’ ಎಂದು ಮೂದಲಿಸಿದೆಯಾ? ಹೌದು ನಾನು ದಾಸನು ಹೌದು ನೀನು ಸರಿಯಾಗಿ ಹೇಳಿರುವೆ, ಆದರೆ ಬರೇ ಕಿಸುಬಾಯಿ ದಾಸನಲ್ಲ ಶ್ರೀಹರಿಯ ಮಹಾತ್ಮೆ ಅರಿತು ಅನುಕ್ಷಣ ಸ್ಮರಿಸಿ ಹಾಡುವ ಹರಿದಾಸ ಎಂಬುವುದನ್ನು ಅರ್ಥೈಸಿಕೊಳ್ಳಬೇಕು. ಆತನ ಜತೆಯಲ್ಲಿ ಶಾರೀರಿಕವಾಗಿ ಇರುವ ಭಾಗ್ಯ ನಿನ್ನದ್ದಾಗಿದ್ದರೂ ಆತನೇನೆಂದು ತಿಳಿಯದ ನಿನ್ನಂತಹ ಮೂಢ ನಾನಲ್ಲ. ಮನಸ್ಸಿನಲ್ಲಿ ಆತನನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುತ್ತಾ ಆತನ ಸೇವೆ ಮಾಡುವ ಚರಣ ಕಿಂಕರ ದಾಸನಾಗಿದ್ದೇನೆ. ಇನ್ನೂ ಏನೋ ಹೇಳಿದೆಯಲ್ಲಾ! ನಿನ್ನಂತಹ ಬಹಳ ವೀರರನ್ನು ನೋಡಿದ್ದೇನೆ, ನನಗೆ ನಗಣ್ಯ ಎಂದೆಯಾ ಅರ್ಜುನಾ? ಹೌದು ಕಿರೀಟಿಯೇ ನೀನು ಈ ತನಕ ನನ್ನಂತಹವರನ್ನು ಮಾತ್ರವಲ್ಲ ನನಗಿಂತಲೂ ಮಿಗಿಲಾದ ಶಕ್ತಿವಂತರನ್ನು ಎದುರಿಸಿ ಧರೆಗುರುಳಿಸಿದ ಮಹಾನ್ ವಿಕ್ರಮಿ ಹೌದು. ಖಂಡಿತವಾಗಿಯೂ ನಿನ್ನ ಪೌರುಷ ಪರಾಕ್ರಮವನ್ನು ಒಪ್ಪುತ್ತೇನೆ. ಆದರೆ ನಾನು ಶಕ್ತಿಯನ್ನಷ್ಟೆ ಅಲ್ಲ ನನ್ನ ದೇವರಾದ ಶ್ರೀಕೃಷ್ಣನ ಮೇಲಿನ ಅಧಮ್ಯ ಭಕ್ತಿಯನ್ನು ನಂಬಿ, ಆ ನನ್ನ ಭಗವಂತ ನನಗೆ ರಕ್ಷಾ ಕವಚ ಎಂದು ಪ್ರತಿಶತ ವಿಶ್ವಾಸದಿಂದ ನಿನಗೆದುರಾಗಿದ್ದೇನೆ. ಅಂತಹ ಅಭೇದ್ಯವಾದ ಭಕ್ತಿಯ ಕವಚವನ್ನು ಛೇದಿಸುವ ಅಸ್ತ್ರಗಳು ನಿನ್ನಲ್ಲಿ ಇಲ್ಲದೆ ನೀನು ಸೋತು ಹೋಗಿರುವೆ ಹೊರತು ನನ್ನ ಮಹಾಬಲದಿಂದಲ್ಲ. ನಿನ್ನಲ್ಲಿ ಶಕ್ತಿಯ ಕೊರತೆಯಾಗಿಲ್ಲ, ಬದಲಾಗಿ ಅರಿವಿನ ಅಳಿವಾಗಿ ಹೋಯಿತು. ನೀನು ಯೋಧನ್ಯಾಯದಂತೆ ಎಚ್ಚರಿಸುತ್ತಾ ಬ್ರಹ್ಮಾಸ್ತ್ರ, ಅಕ್ಷಯಾಸ್ತ್ರ, ಅಷ್ಟ ದಿಕ್ಪಾಲಕರ ಮಂತ್ರಾಸ್ತ್ರಗಳ ಸಹಿತ ಬಹುವಿಧ ದಿವ್ಯಾಸ್ತ್ರಗಳನ್ನೆಲ್ಲಾ ಪ್ರಯೋಗಿಸಿದೆಯಲ್ಲ? ಯಾಕೆ ಆ ಮಹಾಸ್ತ್ರಗಳು ನನಗೇನೂ ಮಾಡದೆ ಹೋದವು ಬಲ್ಲೆಯಾ? ಅವುಗಳು ಬಲಹೀನವಾಗಿದುದಲ್ಲ. ನನ್ನಲ್ಲಿ ಇದ್ದುದು ಒಂದೇ ಶಕ್ತಿ ಅದು ನನ್ನ ಪರಮಾತ್ಮ ಶ್ರೀಕೃಷ್ಣನ ಮೇಲಿನ ಅಚಲ ಭಕ್ತಿ. ಭಕ್ತನ ಭಕ್ತಿಗೆ ಧಾತುವಾದ ಆ ಪರಮಾತ್ಮನಲ್ಲಿ ಅವು ಲೀನವಾದವು ವಿನಃ ನನ್ನಿಂದ ಖಂಡಿಸಿ ವಿನಾಶಗೊಳಿಸಲ್ಪಡಲಿಲ್ಲ. ಈಗಲಾದರೂ ಅರಿವಾಯಿತೆ? ಭಕ್ತಿಗೂ ಶಕ್ತಿಗೂ ಸಂಘರ್ಷವಾದರೆ ಗೆಲುವಾಗುವುದು ಭಕ್ತಿಗೆ ಎಂದು. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತು ರೂಢಿಯಲ್ಲಿದೆ. ಹಾಗಾಯಿತು ನಿನ್ನ ಸ್ಥಿತಿ. ಸಾರಿ ಸಾರಿ ಹೇಳಿದರೂ ಕೇಳದೆ ನಿನ್ನ ಸ್ವ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಪುರುಷ ಪ್ರಯತ್ನ ಮಾಡಿದೆ. ಅದೂ ತಪ್ಪೆಂದು ನಾನು ತಿಳಿಯಲಾರೆ. ಒಂದೋ ಪ್ರಯತ್ನ ಮಾಡುವ ಮೊದಲು ದೇವರೇ ನಾನು ಮಾಡುವ ಕಾರ್ಯಕ್ಕೆ ನಿನ್ನ ಅನುಗ್ರಹವಿರಲಿ ಎಂದು ಬೇಡಿ ಜೊತೆಗೆ ದೇವರನ್ನು ಕರೆತರಬೇಕು. ಸರ್ವ ರಕ್ಷಕನಾದ ದೇವರು ಸದ್ಬುದ್ಧಿಯಿತ್ತು ಪೊರೆಯುತ್ತಾನೆ. ಹಾಗೆ ಮಾಡದೆ ಸರ್ವ ಪ್ರಯತ್ನಗಳನ್ನೂ ಮಾಡಿದ ಬಳಿಕ ಒಂದು ವೇಳೆ ಸೋತರೆ ಆಗ ದೇವರು ನೆನಪಾದರೆ ‘ಸಂಕಟ ಬಂದಾಗ ವೆಂಕಟ ರಮಣ’ ಎಂಬಂತೆ ತಡವಾಗಿ ಸತ್ಯದರ್ಶನವಾಗುತ್ತದೆ. ಅಂದರೆ ಅತಿಮಾನುಷವಾದ ದೇವ ಶಕ್ತಿಯಿಂದ ಸಮತೋಲನ ಸಾಧ್ಯ ಎಂಬ ನಿಜ ವಿಚಾರ ತಿಳಿಯುವುದು. ಈಗ ನಿನ್ನ ಮನದಲ್ಲಿದ್ದ “ನಾನು” ಎಂಬ ಭಾವ ನಾಶವಾಗಿದೆ. ಭಗವಂತ ನೀನೇ ಬೇಕು ಎಂಬ ನೀತಿ ನಿಜವಾಗಿದೆ. ಯಾವಾಗ ಓರ್ವ ಶೂನ್ಯನಾಗಿ ಭಗವಂತನನ್ನು ಕರೆಯುತ್ತಾನೋ ಆಗ ಸಾಕ್ಷಾತ್ಕಾರ ಸಾಧ್ಯ. ಹಾಗೆಂದು ಪ್ರಯತ್ನವನ್ನು ಮಾಡದೆ ಸೋಮಾರಿಯಾಗಿ ನೀನು ಬಂದು ಪರಿಹರಿಸು ದೇವರೇ ಎಂದು ಕರೆದು ಕುಳಿತರೆ ಆತನೂ ಮಹಾ ಮಾರಿಯಾದಾನು. ಕರ್ಮವನ್ನು ಮಾಡುತ್ತಾ ನನಗೆ ಸತ್ಫಲ ನೀಡು ಎಂದು ಸದಾ ಸ್ಮರಿಸುತ್ತಾ ತೊಡಗಿದಾಗ ತದ್ರೂಪದ ಪ್ರತಿಫಲ ಪ್ರಾಪ್ತವಾಗುತ್ತದೆ ಈಗ ನಮ್ಮ ನಡುವೆ ಆಗಿ ಹೋಗಿರುವುದೂ ಹಾಗೆಯೆ. ಇಲ್ಲಿ ಭಾವ ಯುದ್ದವಾಯಿತು ಹೊರತು ಬಲ ಯುದ್ಧವಲ್ಲ. ಭಕ್ತಿಗೆ ಅಧಿದೇವನಾದ ಶ್ರೀಹರಿ ಗೆದ್ದಿದ್ದಾನೆ, ಹೊರತು ಗೆದ್ದಿರುವುದು ‘ನಾನು’ ಸುಧನ್ವನಲ್ಲ. ಸೋತಿರುವುದು ಅರ್ಜುನನಲ್ಲ, ಅರ್ಜುನನ ‘ನಾನು’ ಎಂಬ ಭಾವ ಸೋತಿದೆ. ಇರಲಿ ಈಗಲಾದರು ನಿನಗೆ ಗೋವಿಂದನ ಸ್ಮರಣೆಯಾಯಿತಲ್ಲ. ಇನ್ನು ನಿನ್ನ ಶಕ್ತಿಯ ಜೊತೆ ಭಕ್ತಿಯೂ ಸೇರಿ ಅತಿ ಬಲಾಢ್ಯ ಪ್ರಬಲನಾಗುವೆ. ಅರ್ಜುನನೆಂಬ ಕರುವಿನ ಅಂಬಾ ದನಿಗೆ ಓಡಿ ಬರುವ ಗೋಪಾಲನೆಂಬ ಗೋಮಾತೆಯ ಅಮೃತ ಸದೃಶ ಕ್ಷೀರಪಾನದಂತಿರುವ ದರುಶನಕ್ಕೆ ಕಾತರನಾಗಿದ್ದೇನೆ. “ಮಮ ಪ್ರಾಣಾಹಿಃ ಪಾಂಡವಃ” ಎಂದಿರುವ ಪಂಚಪ್ರಾಣಧರ ದೇವರು ನಿನ್ನ ಕೂಗಿಗೆ ಬರದಿರಲಾರ. ಕಣ್ಣುಗಳನ್ನು ಎವೆಯಿಕ್ಕದೆ ನನಗೆ ಬೇಕಾದುದನ್ನು ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಯಂತಾಗುತ್ತೇನೆ.

ಹೇ ಪಾರ್ಥ ನೀನು ಸೋತಿರುವ ಈ ಒಂದು ದಿನದ ಕಾದಾಟದ ಪರಿಣಾಮ ನನಗೆ ಗೆಲುವಲ್ಲ. ನನ್ನ ಜೀವನ ಪರ್ಯಂತ ಸಾಗಿದ ಹೋರಾಟಕ್ಕೆ ನಿಜ ವಿಜಯ ಇಲ್ಲಿ ಶ್ರೀಹರಿದರ್ಶನವಾದ ಬಳಿಕ ನನಗೆ ಸಿಗಲಿದೆ. “ಹೇ ದೇವಾ, ವಾಸುದೇವಾ, ಭಕ್ತ ಜನ ಸಂಜೀವಾ, ಮಹಾನುಭಾವ ದಯೆತೋರು ದಯಾನಿಧಿ. ಅರ್ಜುನ ಆತನಿಗಾಗಿ ನಿನ್ನನ್ನು ಕರೆಯುತ್ತಿರುವನಾದರೂ, ಅದರ ಫಲಾನುಭವಿ ನಾನಾಗಲಿರುವೆ ಎಂಬ ಸ್ವಾರ್ಥದಿಂದ ನಿನಗಾಗಿ ಕಾದಿರುವೆ ಗೋವಿಂದಾ” ಎಂದು ಸುಧನ್ವನೂ ಮನಸಾರೆ ಭಗವಂತನನ್ನು ಆರಾಧಿಸಿ ಸ್ತುತಿಸಿ ಆವಾಹಿಸತೊಡಗಿದನು.

ಹಸ್ತಿನಾವತಿಯಲ್ಲಿದ್ದ ಶ್ರೀಕೃಷ್ಣ ಭಕ್ತಿಯ ಕರೆಯ ಸೆಳೆತಕ್ಕೊಳಗಾಗಿದ್ದಾನೆ. ಯಾರಿದು ಎಂದು ವಿವೇಚಿಸಿದರೆ ಒಂದಲ್ಲ ಎರಡೆರಡು ಭಾವದಲೆಗಳು ಬಂದಪ್ಪಳಿಸುತ್ತಿವೆ. ಯಾರಿರಬಹುದು ಎಂದು ನೋಡಿದಾಗ ಒಂದೆಡೆ ಅರ್ಜುನನ ಆರ್ತನಾದ, ಮತ್ತೊಂದೆಡೆ ಭಕ್ತ ಭಾಗವತನ ಭಕ್ತಿ ಪಾರಮ್ಯ. ಎಲ್ಲಿಂದ ಈ ಭಾವ ತರಂಗಗಳ ಕಾಂತೀಯತೆ ಎಂದರೆ, ಅದು ಆರ್ಯಾವರ್ತದ ಮಧ್ಯ ಭಾಗ ಚಂಪಕಾವತಿಯಿಂದ ಒಂದೆಡೆ ಭಾವನ ಕರೆ – ಮತ್ತೊಂದೆಡೆ ಭಾವದ ಕರೆ. ಧರ್ಮರಾಯನ ಅಶ್ವಮೇಧ ಸಾಂಗವಾಗಿ ನೆರವೇರಬೇಕು. ಕುದುರೆಯ ಬೆಂಗಾವಲಿಗನಾಗಿ ಹೋದ ಪಾರ್ಥ ಸೇನಾ ಸಹಿತ ಸೋತು ನನಗೆ ಮೊರೆ ಹೋಗಿದ್ದಾನೆ. ಅತ್ತ ನನ್ನ ಭಕ್ತನ ಆತ್ಮದಿಂದ ಉತ್ಪನ್ನವಾದ ಭಕ್ತಿ ಭಾವದ ಅಲೆಗಳೂ ನನ್ನೆಡೆಗೆ ಬರುತ್ತಿವೆ. ಶೀಘ್ರವಾಗಿ ಅತ್ತ ಸಾಗಬೇಕು. ಆಗಬೇಕಾದುದನ್ನು ಮಾಡಬೇಕಾಗಿದೆ ಎಂದು ತಿಳಿದು, ಧರ್ಮರಾಯನನ್ನು ಕರೆದು, ಆತನಿಗೆ ವಾಸ್ತವ ವಿಚಾರ ತಿಳಿಸಿದನು. ಧೈರ್ಯ ತುಂಬಿ ಹೋಗಿ ಬರುತ್ತೇನೆ ಎಂದು ಗರುಡಾರೂಢನಾಗಿ ಚಂಪಕಾವತಿಯತ್ತ ತೆರಳಿದನು.

ಸೋತು ಕೂತಿದ್ದಾನೆ ಅರ್ಜುನ. ಬಂಧಿಸದೆ ಭಜಕನಾಗಿ ಕಾಯುತ್ತಿದ್ದಾನೆ ಸುಧನ್ವ. ಕಂಡು ಮಾತನಾಡಿಸಬೇಕೆಂದು ಪಾರ್ಥನ ಬಳಿ ಸಾಗಿ “ಏನಾಯಿತು ಅರ್ಜುನಾ” ಎಂದು ಕೇಳುತ್ತಿದ್ದಾನೆ ಲೋಕಪಾಲಕ.

“ಪರಮಾಪ್ತ ಪರಮಾತ್ಮ ಬಂದೆಯಾ? ನನ್ನ ಅವಸ್ಥೆ ನೋಡು ಕೃಷ್ಣಾ! ರಥದ ಸಾರಥಿ ಸತ್ತಿದ್ದಾನೆ, ಗಾಯಾಳಾಗಿ ಕುದುರೆಗಳು ಬಸವಳಿದಿವೆ. ರಥವೂ ಕತ್ತರಿಸಲ್ಪಟ್ಟಿದೆ. ನಾನು ಕೈ ಸೋತು ಹೋಗಿದ್ದೇನೆ. ಆ ತರಳ ಸುಧನ್ವನ ಶರಹತಿಯ ಮುಂದೆ ಗಾಂಡೀವ ಧನುರ್ಧರನಾದ ನನ್ನಾಟ ಸಾಗದೆ ಹೋಗಿದೆ. ದೇವಾ! ನಾನೇನು ಮೂಢನಲ್ಲ. ಜೊತೆಗಿದ್ದು ನಿನ್ನನ್ನು ಚೆನ್ನಾಗಿ ಬಲ್ಲವನಲ್ಲವೆ? ಇಂದೇಕೊ ತುಸು ಹಿಂದುಳಿದು ಹೋದೆನೋ, ಮಂಕು ಆವರಿಸಿತೋ! ಎಂಬ ಸಂದೇಹ ಮೂಡಿ ಸ್ಪಷ್ಟವಾಗುತ್ತಿದೆ. ಇದೆಲ್ಲಾ ಲೀಲಾಮಾನುಷನಾದ ನಿನ್ನ ಲೀಲೆ ಹೊರತು ಆ ಸುಧನ್ವನ ಸಾಧನೆಯಲ್ಲ. ಭಗವಂತಾ ಹೀಗಾದರೆ ಅಣ್ಣ ಧರ್ಮಜನ ಅಶ್ವಮೇಧ ಯಾಗ ಸಂಪನ್ನಗೊಳ್ಳುವ ಬಗೆ ಹೇಗೆ? ಈಗ ಬಂದೊದಗಿರುವ ಸಂಕಷ್ಟದಿಂದ ಪಾರು ಮಾಡಬೇಕು ಕೃಷ್ಣಾ, ಕೃಪೆದೋರು ಕೃಪಾಕರಾ” ಎಂದು ಬೇಡಿಕೊಂಡನು.

ತಪಸ್ವಿಯೋರ್ವ ಸಹಸ್ರಾರು ವರ್ಷ ತಪ ವಿರಚಿಸಿ ದೇವರು ಒಲಿದಾಗ ಹೇಗಾದೀತೊ ಹಾಗಾಗಿದೆ ಸುಧನ್ವನ ಸ್ಥಿತಿ. ಶ್ರೀಕೃಷ್ಣನನ್ನು ಕಂಡ ಆತನ ಸಂಭ್ರಮದ ಹರ್ಷೋತ್ಕರ್ಷೆ ವರ್ಣಾನಾತೀತವಾಗಿದೆ.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page