
ಬೆಂಗಳೂರು: ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತಗಳ ಮರು ಎಣಿಕೆಯ ಬಳಿಕ ಗೆಲುವು ಸಾಧಿಸಿದ ಬಿಜೆಪಿ ನಾಯಕ ಜೀವರಾಜ್ ಅವರಿಗೆ ಪ್ರಮಾಣವಚನ ಮಾಡಿಸಲು ಸ್ಪೀಕರ್ ಯು.ಟಿ. ಖಾದರ್ ವಿಳಂಬ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.
ರಾಜ್ಯಪಾಲ ಥಾವರ್ ಛಂದ್ ಗೆಹ್ಲೋಟ್ ಅವರನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಡಿ.ಎನ್. ಜೀವರಾಜ್ ಮತ್ತು ಮಾಜಿ ಸಚಿವ ಆರ್. ಜ್ಞಾನೇಂದ್ರ ಭೇಟಿ ಮಾಡಿ, ಸ್ಪೀಕರ್ ನಡೆಗೆ ವಿರೋಧ ವ್ಯಕ್ತಪಡಿಸಿದರು. ಪ್ರಮಾಣವಚನ ತಡೆಯಲು ಕಾರಣವಿಲ್ಲ. ಜೀವರಾಜ್ ಅವರಿಗೆ ಚುನಾವಣಾ ಆಯೋಗದಿಂದ ಪ್ರಮಾಣಪತ್ರ ಲಭಿಸಿದ್ದು, ಗ್ಯಾಜೆಟ್ ಪ್ರಕಟವಾಗಿದೆಯಾದರೂ ಸ್ಪೀಕರ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಸಂಪರ್ಕಿಸಲು ಪ್ರಯತ್ನಿಸಿದರೂ ಸ್ಪೀಕರ್ ಪ್ರತಿಕ್ರಿಯಿಸಿಲ್ಲ. ಭೇಟಿಯ ವೇಳೆ ಕಾನೂನು ಕಾರಣಗಳನ್ನು ಉಲ್ಲೇಖಿಸಿ, ಮೇಲ್ಮನವಿಯ ಸಾಧ್ಯತೆ ಇದೆ ಎಂದು ವಿಳಂಬ ಮಾಡಲಾಗುತ್ತಿದೆ. 45 ದಿನಗಳ ಅವಧಿ ಇದ್ದರೂ ಪ್ರಮಾಣವಚನಕ್ಕೆ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ.
ಸಂವಿಧಾನದ ವಿಧಿ 188 ಪ್ರಕಾರ ರಾಜ್ಯಪಾಲರು ಪ್ರಮಾಣವಚನ ಮಾಡಿಸಬಹುದು. ಅಗತ್ಯವಿದ್ದರೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇವೆ. ಇದಕ್ಕೂ ಸ್ಪಂದನೆ ಸಿಗದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.





















