ಭಾಗ – 604
ಭರತೇಶ ಶೆಟ್ಟಿ,ಎಕ್ಕಾರು

ಇಂದ್ರನು ಕುಪಿತನಾಗಿ ದಂಡಧರನಾದುದನ್ನು ಕಂಡು ರಾಜ ಮರುತ್ತ ಮತ್ತು ಆತನ ಪರಿವಾರ, ಪ್ರಜೆಗಳು ಮತ್ತು ವಿಪ್ರರು ಹೆದರಿದರು. ರಾಜ ಮರುತ್ತನು ಬಹು ವಿಧವಾಗಿ ಇಂದ್ರನನ್ನು ಸ್ತುತಿಸುತ್ತಾ ಪ್ರಸನ್ನೀಕರಿಸಲು ತೊಡಗಿದನು. ಸಂವರ್ತನು ಮಾತ್ರ ವಿಚಲಿತನಾಗದೆ ತನ್ನ ಕಮಂಡಲವನ್ನು ಎಡಗೈಯಲ್ಲಿ ಎತ್ತಿ, ಬಲಗೈಗೆ ಒಂದಿಷ್ಟು ಜಲವನ್ನು ಸುರಿದು ಅಭಿಮಂತ್ರಿಸಿ ಇಂದ್ರ ಮತ್ತು ಆತನ ಬಲ ಪರಿವಾರದ ಮೇಲೆ ಪ್ರೋಕ್ಷಿಸಿ ಬಿಟ್ಟನು. ಆ ಕೂಡಲೆ ದೇವೇಂದ್ರ ಮತ್ತು ದೇವಸೇನೆ ಮೂರ್ತಿಯಾಗಿ ಬಿಟ್ಟರು. ದೇವತೆಗಳೊಂದಿಗೆ ಇಂದ್ರನು ನಿಶ್ಚೇಷ್ಟಿತರಾದುದನನ್ನು ಕಂಡು ರಾಜ ಮರುತ್ತನು ವಿಸ್ಮಯಕ್ಕೊಳಗಾದನು. ಆಗ ಸಂವರ್ತನು “ರಾಜಾ! ಗೊಂದಲಕ್ಕೊಳಗಾಗದಿರು. ಬಲವಿದೆಯೆಂದು ಅಹಂ ಪ್ರದರ್ಶಿಸಿದರೆ ಯಾರೇ ಆಗಿರಲಿ ಅಂತಹ ಬಲ ಫಲ ನೀಡದು. ಈಗ ಇಂದ್ರ ದುಡುಕಿ ಅಂತಹ ಅಪರಾಧ ಮಾಡಿ ಶಿಕ್ಷೆಗೆ ಒಳಗಾಗುವಂತಾಯಿತು. ಅಪರಾಧ ಮಾಡದವರಿಗೆ ದಂಡನೆ ನೀಡಲು ಮುಂದಾದರೆ ಅವರ ವಿರುದ್ಧವಾಗಿ ಧರ್ಮ ಕಾರ್ಯವೆಸಗುತ್ತದೆ ಎಂಬುವುದಕ್ಕೆ ಇದೂ ಒಂದು ನಿದರ್ಶನ” ಎಂದನು.
ಮರುತ್ತರಾಜನಿಗೆ ತನ್ನ ಯಾಜಕನಾಗಿ ಬಂದಿರುವ ಸಂವರ್ತ ಸಮರ್ಥನೆಂಬ ಗರ್ವ ಮೂಡಲಿಲ್ಲ. ವಿವೇಕಿಯಾಗಿ ವಿವೇಚನೆ ಮಾಡಿಕೊಂಡು ಸಂವರ್ತನನ್ನು ಕೈ ಮುಗಿದು ಪ್ರಾರ್ಥಿಸತೊಡಗಿದನು. “ಸ್ವಾಮಿ, ನನ್ನ ಬಿನ್ನಹವನ್ನು ಶಾಂತಚಿತ್ತರಾಗಿ ಲಾಲಿಸಬೇಕು. ನಾವು ಯಾರನ್ನು ನಾನಾ ವಿಧದಿಂದ ಪೂಜಿಸಿ ಹವಿಸ್ಸನ್ನರ್ಪಿಸಿ ಈ ಯಾಗ ಮುಖೇನ ಮೆಚ್ಚಿಸಬೇಕಿತ್ತೊ, ಅಂತಹ ದೇವರಾಜ ಸಹಿತ ದೇವತೆಗಳನ್ನು ದಿಗ್ಬಂಧನಕ್ಕೊಳಪಡಿಸಿದರೆ ನಮ್ಮ ಯಾಗದ ಹವಿರ್ಭಾಗ ಅವರು ಸ್ವೀಕರಿಸುವುದಾದರು ಹೇಗೆ? ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾರಂಭದಲ್ಲಿಯೆ ಅಸಮರ್ಥನಾದವನು ನಾನು. ಯಾಕೆಂದರೆ ಕುಪಿತರಾಗಿ ದೇವರಾಜ ಇಂದ್ರ ಮತ್ತು ದೇವತೆಗಳು ಯಾಗಶಾಲೆಗೆ ಬಂದಿದ್ದಾರೆ. ಅವರನ್ನು ಕುರಿತು ನಿಮ್ಮ ಕೋಪಕ್ಕೆ ಕಾರಣವೇನೆಂದು ಪ್ರಶ್ನಿಸುವ ಅಧಿಕಾರ ನನಗಿರಲಿಲ್ಲ. ಆ ಗೊಂದಲದಲ್ಲಿ ವಿಚಾರಿಸಿ ಇತ್ಯರ್ಥ ಮಾಡುವಲ್ಲಿ ನಿಧಾನಿಸಿ ನಾನೀಗ ಈ ವಿಕೋಪಕ್ಕೆ ಕಾರಣನಾಗಿದ್ದೇನೆ. ನೀವು ಅತಿ ಮಹಿಮಾನ್ವಿತರು ಎಂಬುವುದಕ್ಕೆ ಸ್ವಯಂ ದೇವರಾಜನಾದ ಇಂದ್ರ ನಿಮ್ಮ ಶಕ್ತಿಯೆದುರು ಸ್ಥಂಭೀಭೂತನಾಗಿರುವುದು ಪ್ರತ್ಯಕ್ಷ ಸಾಕ್ಷಿ. ನಿಮ್ಮ ಪಾದಮೂಲದಲ್ಲಿ ನನ್ನ ಪ್ರಾರ್ಥನೆ ಇಷ್ಟೆ, ಪವಿತ್ರವಾದ ಯಾಗಶಾಲೆಗೆ ದೃಶ್ಯರೂಪದಲ್ಲಿ ಇಂದ್ರಾದಿ ದೇವತೆಗಳು ದಯಮಾಡಿಸಿರುವುದು ನಮ್ಮ ಭಾಗ್ಯ. ನೀವು ಉದಾರ ಚಿತ್ತರಾಗಿ ತಮ್ಮ ಶಕ್ತಿಯಿಂದ ನಮ್ಮ ದೇವರುಗಳಾದ ಇವರೆಲ್ಲರನ್ನು ಸಚೇತನಗೊಳಿಸಿ ಮೊದಲಿನಂತೆಯೆ ಲೋಕದ ಪಾಲನೆಯ ವ್ಯವಸ್ಥೆಗೆ ಪೂರಕರಾಗಲು ಮುಕ್ತಗೊಳಿಸಬೇಕು. ಕಾಲಚಕ್ರದ ಚಲನೆಯ ನಿಯಮಕ್ಕೆ ನಮ್ಮ ಕಾರಣವಾಗಿ ತೊಡಕಾಗದಂತೆ ಕೃಪೆದೋರಬೇಕು” ಎಂದು ಬೇಡಿಕೊಂಡನು.
ಆಗ ರಾಜಾ ಮರುತ್ತನ ಧರ್ಮ ಬುದ್ಧಿಗೆ ಮೆಚ್ಚಿದ ಸಂವರ್ತನು ಜಲವನ್ನು ಪರಿಮಾರ್ಜನಾ ಅಭಿಮಂತ್ರದಿಂದ ಸಂಪ್ರೋಕ್ಷಿಸಿದನು. ದೇವತೆಗಳೆಲ್ಲರೂ ಚೈತನ್ಯಭರಿತರಾಗಿ ನಿಂತರು. ರಾಜ ಮರುತ್ತನು ಅವರೆಲ್ಲರಿಗೂ ಶರಣಾಗತನಾಗಿ ಮುನಿಸು ತೋರದೆ ಮನ್ನಿಸಿ ಅನುಗ್ರಹಿಸಬೇಕೆಂದು ಕರ ಜೋಡಿಸಿ ನಿಂತನು.
ಆಗ ಇಂದ್ರನು “ಅಯ್ಯಾ ಮಹಾರಾಜಾ ಮರುತ್ತನೇ! ಮರುಗದಿರು. ನಿನ್ನ ಧರ್ಮ ಬುದ್ಧಿ ಹಾಗು ಸಂವರ್ತನ ಶಕ್ತಿ ಲೋಕಮುಖಕ್ಕೆ ಪ್ರಕಟವಾಗಲಿ ಎಂಬ ಕಾರಣದಿಂದ ಹೀಗೆಲ್ಲಾ ನಡೆಯಿತೋ ಏನೋ! ಮಹಾತ್ಮನಾದ ಸಂವರ್ತನ ಬಗ್ಗೆ ನಮಗೂ ಅಪಾರ ಗೌರವವಿದೆ. ನಿನ್ನ ಬಗ್ಗೆಯೂ ಅಮಿತವಾದ ಒಲವಿದೆ. ಸದುದ್ದೇಶದಿಂದ ಕೈಗೊಂಡಿರುವ ಧರ್ಮಕಾರ್ಯ ಯಾಗವನ್ನು ನೀನು ಮುಂದುವರಿಸು. ಒಳ್ಳೆಯ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡಲು ಹೊರಟವನಿಗೆ ತೊಂದರೆ ನೀಡಲು ಹೋದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಈ ಪ್ರಕರಣ ಉತ್ತಮ ನಿದರ್ಶನವಾಗಲಿದೆ. ಹಾಗೆಯೆ ಸತ್ಕಾರ್ಯ ನಿರತನಾದವನಿಗೆ ಎಂತಹ ವಿಘ್ನ ಎದುರಾದರೂ ಅಗೋಚರವಾಗಿ ಧರ್ಮವೇ ಬಲಪಡೆದು ಬಂದು ರಕ್ಷಣೆ ಮಾಡುತ್ತದೆ ಎಂಬ ಸತ್ಯವೂ ಮತ್ತೊಮ್ಮೆ ಇಲ್ಲೂ ಅನಾವರಣಗೊಂಡು ಲೋಕಕ್ಕೆ ಪಾಠವಾದಂತಾಯಿತು. ನೀನು ಶ್ರದ್ಧಾ ಭಕ್ತಿಯಿಂದ ಯಾಗವನ್ನು ಪೂರೈಸು, ನಾವು ಪ್ರತ್ಯಕ್ಷ ರೂಪದಲ್ಲಿ ಬಂದು ಹವಿಸ್ಸನ್ನು ಸ್ವೀಕರಿಸುತ್ತೇವೆ. ನಿನಗೆ ಮನೋವಾಂಛಿತ ಶ್ರೇಯಸ್ಸೂ, ಸಂವರ್ತನಿಗೆ ಸತ್ಕೀರ್ತಿಯೂ ಈ ಮೂಲಕ ಪ್ರಾಪ್ತವಾಗಲಿ” ಎಂದು ನುಡಿದು ಅದೃಶ್ಯರಾದರು.
ಯಾವುದೇ ವಿಘ್ನ ವಿಡ್ಡೂರಗಳಿಲ್ಲದೆ ಸಾಗಿದ ಯಾಗ ವಿದ್ಯುಕ್ತವಾಗಿ ನೆರವೇರಿತು. ದೇವತೆಗಳೂ ಸುಪ್ರೀತರಾಗಿ ಅನುಗ್ರಹಿಸಿದರು. ದಾನ ಧರ್ಮ ದಕ್ಷಿಣೆಗಳಿಂದ ಎಲ್ಲರನ್ನು ಸಂತೃಪ್ತಿಗೊಳಿಸಲಾಯಿತು. ದಾನ ಯಾವ ರೀತಿ ಆಯಿತೆಂದರೆ ಭೂಸುರರಾದ ಬ್ರಾಹ್ಮಣರಿಗೆ ಶಿವಾನುಗ್ರಹದಿಂದ ಪಡೆದ ಧನದಾನ್ಯಗಳನ್ನು ಹೊತ್ತು ಕೊಂಡೊಯ್ಯಲಾಗದಷ್ಟು ನೀಡಿ, ಹೆಚ್ಚಾದುದನ್ನು ಅಲ್ಲಿಯೆ ಬಿಟ್ಟು ಹೋಗುವಂತಾಯಿತು. ಅಧಿಕವೂ ಅಕ್ಷಯವೂ ಆಗಿ ಹಾಗೆ ಉಳಿದ ಧನಕನಕಗಳೆಲ್ಲವೂ ರಾಶಿಯಾಗಿ ಬಿದ್ದಿದ್ದು ಕಾಲಕ್ರಮೇಣ ಭೂಗತವಾಗಿ ನಿಕ್ಷೇಪಗೊಂಡಿತು.
ವ್ಯಾಸರು ಧರ್ಮರಾಯನನ್ನು ಕರೆದು “ಹೇ ಮಹಾರಾಜಾ! ಈ ಸಮಯ ನಿನಗೆ ಅಶ್ವಮೇಧ ಯಾಗ ಪೂರೈಸಲು ಧನಕನಕದ ವ್ಯವಸ್ಥೆಗಾಗಿ ವ್ಯಥೆ ಪಡಬೇಕಾಗಿಲ್ಲ. ಅಂದು ನಿಕ್ಷೇಪಗೊಂಡಿರುವ ಆ ನಿಧಿಯನ್ನು ತರಿಸಿಕೊಂಡು ನೀನು ಪುಣ್ಯಪ್ರದವಾದ ಅಶ್ವಮೇಧ ಯಾಗವನ್ನು ಮಾಡಿಸು” ಎಂದು ನಿರ್ದೇಶನ ನೀಡಿದರು.
ಧರ್ಮರಾಜನು ಯೋಚಿಸಿ “ಭಗವಾನ್, ಒಂದು ವಸ್ತುವನ್ನು ಒಬ್ಬರಿಗೆ ದಾನವಾಗಿ ನೀಡಿದ ಮೇಲೆ ಅವರು ಕೊಂಡು ಹೋಗಿರದಿದ್ದರೂ ಅದು ಅವರಿಗೆ ಸೇರಿದ್ದಾಗಿರುತ್ತದೆ. ಹಾಗಿರುವಾಗ ಅನ್ಯರ ಸೊತ್ತನ್ನು ಅಪಹರಿಸಿ ತಂದು ನಾವು ಯಾಗ ಮಾಡಿಸಿದಂತಾಗಿ ದೋಷಿಗಳಾಗುತ್ತೇವೆ. ಹಾಗಾಗಿ ನೀವು ಹೇಳಿದಂತೆ ನಾನು ಮಾಡಿದೆ ಎಂದಾದರೆ ನ್ಯಾಯವಾದೀತೆ?” ಎಂದು ಪ್ರಶ್ನಿಸಿದನು
ಮುಂದುವರಿಯುವುದು…













