
ನವದೆಹಲಿ: ರಸ್ತೆ ಅಪಘಾತಗಳಲ್ಲಿ ಅಂಗವೈಕಲ್ಯಕ್ಕೊಳಗಾದವರಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪರಿಹಾರದಲ್ಲಿ ಕೃತಕ ಅಂಗಾಂಗಗಳ ಖರೀದಿ ಮತ್ತು ನಿರ್ವಹಣಾ ವೆಚ್ಚವನ್ನು ಸೇರಿಸುವುದು ಕಡ್ಡಾಯ ಎಂದು ತಿಳಿಸಿದೆ. ಸಂತ್ರಸ್ತರು ಗೌರವಯುತ ಜೀವನಕ್ಕೆ ಮರಳಲು ಇವು ಅಗತ್ಯವೆಂದು ನ್ಯಾಯಾಲಯ ಹೇಳಿದೆ.
ಜಸ್ಟಿಸ್ ಜೆ.ಬಿ. ಪರ್ದಿವಾಲಾ ಮತ್ತು ಜಸ್ಟಿಸ್ ಕೆ.ವಿ. ವಿಶ್ವನಾಥನ್ ಅವರ ಪೀಠವು 2007ರ ಅಪಘಾತ ಪ್ರಕರಣವನ್ನು ವಿಚಾರಣೆ ನಡೆಸಿ, ಕೃತಕ ಅಂಗಾಂಗವು ಕೇವಲ ವೈದ್ಯಕೀಯ ಸಾಧನವಲ್ಲ, ಅದು ಜೀವನದ ಅವಿಭಾಜ್ಯ ಭಾಗ. ‘ನ್ಯಾಯಯುತ ಪರಿಹಾರ’ ಎಂದರೆ ಅಪಘಾತಕ್ಕೂ ಮುಂಚಿನ ಜೀವನಮಟ್ಟವನ್ನು ಪುನಃ ಪಡೆಯಲು ಬೇಕಾದ ಎಲ್ಲಾ ಸಹಾಯವನ್ನು ಒಳಗೊಂಡಿರಬೇಕು ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಬಲಗಾಲು ಕಳೆದುಕೊಂಡ ವ್ಯಕ್ತಿಗೆ ಕೆಳಗಿನ ನ್ಯಾಯಾಲಯಗಳು ಕೃತಕ ಕಾಲಿನ ವೆಚ್ಚವನ್ನು ಪರಿಗಣಿಸದಿರುವುದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು ಕೃತಕ ಅಂಗಾಂಗಗಳು ಶಾಶ್ವತವಾಗಿರದ ಕಾರಣ ಅವುಗಳನ್ನು ನಿರಂತರವಾಗಿ ಬದಲಾಯಿಸಬೇಕಾಗುತ್ತದೆ. 32 ವರ್ಷದ ಸಂತ್ರಸ್ತನಿಗೆ ಜೀವಿತಾವಧಿಯನ್ನು ಲೆಕ್ಕಿಸಿ, ಸುಮಾರು 7 ಬಾರಿ ಕೃತಕ ಕಾಲು ಬದಲಾವಣೆ ಅಗತ್ಯವಿದೆ ಎಂದು ಹೇಳಿ, ಪ್ರತಿ ಕಾಲಿಗೆ 3 ಲಕ್ಷ ರೂ. ಮತ್ತು ನಿರ್ವಹಣೆಗೆ 5 ಲಕ್ಷ ರೂ. ಸೇರಿಸಿ ಒಟ್ಟು 26 ಲಕ್ಷ ರೂ. ಮಂಜೂರು ಮಾಡಲಾಗಿದೆ.
ವಿಮಾ ಕಂಪನಿಯ ಕಡಿಮೆ ದರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿ, ಸಂತ್ರಸ್ತರು ತಮ್ಮ ಅಗತ್ಯಕ್ಕೆ ತಕ್ಕ ಗುಣಮಟ್ಟದ ಚಿಕಿತ್ಸೆ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
2007ರಲ್ಲಿ ಹರಿಯಾಣ ರೋಡ್‌ವೇಸ್ ಬಸ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ವಿಮಾ ಕಂಪನಿ ಮೊದಲು 8.73 ಲಕ್ಷ ರೂ. ಪರಿಹಾರ ನೀಡಲಾಗಿತ್ತು, ನಂತರ ಹೈಕೋರ್ಟ್ 13.02 ಲಕ್ಷಕ್ಕೆ ಹೆಚ್ಚಿಸಿತ್ತು. ಈಗ ಸುಪ್ರೀಂ ಕೋರ್ಟ್ ಹೆಚ್ಚುವರಿಯಾಗಿ 36.2 ಲಕ್ಷ ರೂ. ನೀಡುವಂತೆ ಆದೇಶಿಸಿದೆ.













