ಚೈತನ್ಯ ಕಲಾವಿದರು ಬೈಲೂರು ಅಭಿನಯಿಸುವ “ರಾಘು ಮಾಷ್ಟ್ರು” 100ನೇ ಪ್ರದರ್ಶನ

ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ತಂಡದ ಈ ವರ್ಷದ ಸೂಪರ್ ಹಿಟ್ ಹಾಸ್ಯಮಯ ತುಳು ಸಾಂಸಾರಿಕ ನಾಟಕ ರಾಘು ಮಾಸ್ಟ್ರು ಇದರ 100ನೇ ಪ್ರದರ್ಶನವು ಇಂದು (ಏ. 15) ಉಡುಪಿ ಲಕ್ಷ್ಮೀ ನಗರದಲ್ಲಿ ನಡೆಯಲಿದೆ.
ತೆಲಿಕೆದ ಅರಸೆ ಹಾಗು ರಂಗರತ್ನ ಬಿರುದಾಂಕಿತ, ತಂಡದ ಸಾರಥಿ ಪ್ರಸನ್ನ ಶೆಟ್ಟಿ ಬೈಲೂರು ಇವರ ಕಥೆ, ಸಂಭಾಷಣೆ, ನಿರ್ದೇಶನದ ನಾಟಕ ಇದಾಗಿದ್ದು ಈ ಸೀಸನ್‌ನಲ್ಲಿ ಅತ್ಯಲ್ಪ ಅವಧಿಯಲ್ಲಿ ನೂರರ ಗಡಿ ದಾಟಿ ಪ್ರದರ್ಶನಗೊಳ್ಳುತ್ತಿದೆ.
ಬಡ ಕಲಾವಿದನೊಬ್ಬನ ಬದುಕಿನ ಚಿತ್ರಣವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹಾಸ್ಯವನ್ನು ಪೊಣಿಸಿಕೊಂಡು ಸುಂದರ ವಾಗಿ ರಚಿಸಿದ ನಾಟಕವೇ ರಾಘ ಮಾಸ್ಟ್ರು. ಪ್ರಾದೇಶಿಕ ಜನರ ಭಾಷೆಗೆ ಅನುಗುಣವಾಗಿ ಕನ್ನಡ ಮತ್ತು ತುಳುವಿನಲ್ಲಿ ಈ ನಾಟಕವು ಪ್ರದರ್ಶನಗೊಳ್ಳುತ್ತಿದೆ. ಪ್ರದರ್ಶನ ಕಂಡ ಕಡೆಯೆಲ್ಲ ಪ್ರೇಕ್ಷಕನ ಮನ ಗೆಲ್ಲುವಲ್ಲಿ ನಾಟಕವು ಸಫಲತೆಯನ್ನು ಕಂಡಿದೆ. ಕುಟುಂಬ ಸಮೇತರಾಗಿ ಕೂತು ವೀಕ್ಷಿಸುವ ನಾಟಕವಾಗಿದ್ದು ಸಂಭಾಷಣೆಯ ಪದ ಬಳಕೆಯಲ್ಲೂ ಎಲ್ಲೇ ಮೀರಿಲ್ಲ. ಆದ್ದರಿಂದ ನಾಟಕವೂ ದಿನದಿಂದ ದಿನಕ್ಕೆ ಹಿಟ್‌ನ ಮೇಲೆ ಹಿಟ್ ಆಗಿ ಪ್ರದರ್ಶನ ಕಾಣುತ್ತಿದೆ.
ನಾಟಕದ ಕಥಾವಸ್ತು ಹಾಗೂ ಹಾಸ್ಯವನ್ನು ಮೆಚ್ಚಿಕೊಂಡಿರುವ ಕಲಾ ಪೇಕ್ಷಕರು ನಾಟಕವನ್ನು ಹಾಡಿ ಹೊಗಳುವಂತೆ ಮಾಡಿದೆ ಅಲ್ಲದೆ ಸುಮಾರು 125 ಪ್ರದರ್ಶನವರೆಗೆ ಈಗಾಗಲೇ ಬುಕ್ಕಿಂಗ್ ಆಗಿರೋದು ನಾಟಕದ ಗಂಭೀರತೆಯನ್ನು ತೋರ್ಪಡಿಸುತ್ತಿದೆ. ಇದರೊಂದಿಗೆ ಪ್ರತಿ ನಾಟಕದಲ್ಲೂ ವಿಭಿನ್ನ ಸೆಟ್ಟಿಂಗ್‌ನ ಮೂಲಕ ಪ್ರೇಕ್ಷಕರಿಗೆ ಹೊಸತನವನ್ನು ನೀಡಿದ ಪ್ರಸನ್ನ ಶೆಟ್ಟಿಯವರು ಈ ನಾಟಕದಲ್ಲೂ ವಿಭಿನ್ನತೆಯ ಸೆಟ್ಟಿಂಗ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ.
ನಾಟಕಕ್ಕೆ ಕಿರಣ್ ಗರಡಿಮಜಲು ಸಂಗೀತ ನೀಡಿದ್ದು, ಧ್ವನಿಯಲ್ಲಿ ರಂಗನಪಲ್ಕೆ ನಿಧೀಶ್ ಸೌಂಡ್ಸ್‌ನ ಯೋಗೀಶ್ ಪೂಜಾರಿ, ಮಧುಕರ ಪೂಜಾರಿ, ಲೈಟಿಂಗ್ಸ್‌ನಲ್ಲಿ ನಿಧೀಶ್, ಸುಕೇಶ್, ರೋಹಿತ್ ಸಹಕರಿಸುತ್ತಿದ್ದಾರೆ. ರಂಗವಿನ್ಯಾಸದಲ್ಲಿ ಉಮೆಶ್ ಶೆಟ್ಟಿ, ಕಿರಣ್, ಪ್ರಜ್ವಲ್ ಶೆಟ್ಟಿ, ಪ್ರತಿಕ್ ಕೌಡೂರು ಹಾಗೂ ಕಲಾವಿದರಾಗಿ ಹರೀಶ್ ಜೋಡುರಸ್ತೆ, ಸಂತೋಷ್ ಅಯ್ಯಪ್ಪನಗರ, ದಯಾನಂದ ಕರ್ಕೇರ ರಂಗನಪಲ್ಕೆ, ವಿಕ್ರಂ ಮಾಡ ಎಕ್ಕಾರು, ಪ್ರಜ್ವಲ್ ಭಂಡಾರಿ ಕೌಡೂರು, ರಂಜಿತ್ ಸಾಂತೂರು, ಹರೀಶ್ ಕೊಕ್ರಾಡಿ, ನಿಮಿತ್ ಜೈನ್ ಕೊಕ್ರಾಡಿ, ಸಚಿನ್ ಆಚಾರ್ಯ ನಿಂಜೂರು, ಪ್ರಥ್ವಿರಾಜ್ ಕಾರ್ಕಳ, ಸುಜಿತ್ ನೆಲ್ಲಿಕಾರು, ಸುಕೇಶ್ ವೇಣೂರು, ಸುರಭಿ ಶೆಟ್ಟಿ ಕೊಕ್ರಾಡಿ, ನಾಟಕದ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕಲಾವಿದರಾಗಿರುವ ಪ್ರಸನ್ನ ಶೆಟ್ಟಿಯವರು ಒಂದಿಷ್ಟು ಕಲಾವಿದರನ್ನು ಹುಟ್ಟು ಹಾಕಬೇಕು ಎನ್ನುವ ಉದ್ದೇಶದಿಂದ ಚೈತನ್ಯ ಕಲಾವಿದರು ಬೈಲೂರು ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಆ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.
ತಂಡ ಆರಂಭಗೊಂಡು 11ವರ್ಷ ಕಳೆದಿದ್ದು ಬಲೇ ತೆಲಿಪಾಲೆ, ಮೇ 22, ಸ್ಟಾರ್, ತೂಯಿನಾಯೇ ಪೋಯೆ, ಬುದ್ಧಿ ಚಪಟ್, ಜುಟ್ಟು ಮೀಸೆ, ಪಿರ ಪೋಂಡುಗೆ, ವಾರ್ಡ್ ನಂ.2, ಅಷ್ಟೆಮಿ ಹೀಗೆ ವಿಭಿನ್ನ ನಾಟಕಗಳು ಈ ತಂಡದ ಮೂಲಕ ಪ್ರದರ್ಶನಗೊಂಡಿತ್ತು.
ಅಷ್ಟೆಮಿ ನಾಟಕವು 145 ಪ್ರದರ್ಶನಗೊಂಡಿದೆ. ಅಂತರ್ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಇವರ ನಾಟಕವು ಪ್ರಥಮ ಸ್ಥಾನವನ್ನು ಗಳಿಸಿತ್ತು.
ನಾಟಕದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸಂಘ ಸಂಸ್ಥೆಗಳಿಗೆ ಪ್ರಸನ್ನ ಶೆಟ್ಟಿಯವರು ಕೃತಜ್ಙತೆಯನ್ನು ಅರ್ಪಿಸಿದ್ದಾರೆ.











