ಭಾಗ – 480
ಭರತೇಶ ಶೆಟ್ಟಿ, ಎಕ್ಕಾರು

ಮರುದಿನ ನಿತ್ಯಕರ್ಮಗಳನ್ನು ಪೂರೈಸಿ ಶ್ರೀಕೃಷ್ಣನ ಜೊತೆ ಧರ್ಮರಾಯ ಕುರುಕ್ಷೇತ್ರದಲ್ಲಿ ಸರಳಮಂಚದಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಬಳಿ ಬಂದರು. ಪಿತಾಮಹರಿಗೆ ವಂದಿಸಿ ಧರ್ಮರಾಯ ನಿಂತನು.
ಆಚಾರ್ಯ ಭೀಷ್ಮರು “ಮಗೂ ನಿನ್ನೆ ಸಾಕಷ್ಟು ವಿಚಾರಗಳ ಬಗ್ಗೆ ನಾವು ತಿಳಿದುಕೊಂಡೆವು. ಇಂದು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯದ ಬಗ್ಗೆ ಹೇಳುತ್ತೇನೆ ಕೇಳು. ನಿರ್ಧಾರದ ಮಹತ್ವವನ್ನು ಒಂದು ಕಿರು ಕಥೆಯ ಮೂಲಕ ತಿಳಿಸುತ್ತೇನೆ. ಒಂದು ಸರೋವರದಲ್ಲಿ ಬಹಳಷ್ಟು ಮೀನುಗಳು ಆಶ್ರಿತವಾಗಿದ್ದವು. ಸೆಖೆಗಾಲದಲ್ಲಿ ನೀರು ಕಡಿಮೆಯಾಗುತ್ತಾ ಬಂದಾಗ ಬೆಸ್ತರು ಈ ಕೆರೆಯಲ್ಲಿ ಬಲೆ ಬೀಸಿ ಮೀನು ಹಿಡಿಯಲು ಮುಂದಾದರು. ಹೆಚ್ಚಾಗಿದ್ದ ನೀರನ್ನು ಕಾಲುವೆ ತೋಡಿ ಹೊರಗೆ ಇನ್ನೊಂದು ಸರೋವರದತ್ತ ಹರಿಯಲು ಬಿಟ್ಟರು. ನೀರು ಕಡಿಮೆಯಾಗುತ್ತಿದ್ದಂತೆ ಒಂದು ಮೀನು ಎದುರಾಗಲಿರುವ ಆಪತ್ತಿನ ಬಗ್ಗೆ ಯೋಚಿಸಿ ಹೊರ ಹರಿಯುತ್ತಿದ್ದ ನೀರಿನ ಜೊತೆ ಈಜಿ ಹೊರ ಹೋಗಿ ದೊಡ್ಡ ಸರೋವರ ಸೇರಿಕೊಂಡಿತು. ಕಡಿಮೆಯಾದ ನೀರಿನಲ್ಲಿ ಇಳಿದು ಬೆಸ್ತರು ಬಲೆ ಬೀಸಿದರು. ಸುಲಭವಾಗಿ ಮೀನುಗಳನ್ನು ಹಿಡಿದು ಬಲೆ ತುಂಬಿಸಿಕೊಳ್ಳುವಾಗ ಎಲ್ಲಾ ಮೀನುಗಳು ವಿಲ ವಿಲ ಒದ್ದಾಡತೊಡಗಿದವು. ಆದರೂ ಒಂದು ಮೀನು ಬಲೆಯಿಂದ ಹೇಗೋ ಜಾರಿ ನೀರಿಗೆ ಬಿದ್ದು ತಳ ಸೇರಿ ಕೆಸರಲ್ಲಿ ಅವಿತು ಕೂತಿತು. ಬೆಸ್ತರು ತಮಗೆ ಸಿಕ್ಕಿದ ಮೀನಿನ ಜೊತೆ ಸಂತೋಷದಿಂದ ಹೋದರು.
ಈ ಕಥೆಯಲ್ಲಿ ಮೊದಲು ಆಪತ್ತನ್ನು ಗ್ರಹಿಸಿದ ಮೀನು ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಂಡು ನಿರಾತಂಕವಾಗಿ ಸುರಕ್ಷಿತವಾಯಿತು. ನಂತರದ ಮೀನು ಆಪತ್ತು ಬಂದೊದಗಿದ ಮೇಲೆ ಗೊಂದಲಕ್ಕೊಳಗಾಗದೆ ಹೇಗೋ ಪ್ರಯತ್ನಿಸುವ ನಿರ್ಧಾರದಿಂದ ಬದುಕುಳಿಯಿತು. ಉಳಿದ ಮೀನುಗಳು ಪ್ರಾಣ ಕಳಕೊಂಡವು. ಇದು ಸಾಂಕೇತಿಕ ಕಥೆಯಾದರೂ ಇಲ್ಲಿ ಸ್ಪಷ್ಟ ನೀತಿಯಿದೆ. ಸಕಾಲದ ನಿರ್ಧಾರ ಮತ್ತು ಅದನ್ನು ತಕ್ಷಣವೇ ಕಾರ್ಯಗತಗೊಳಿಸಿದ ಕಾರಣ ಮೊದಲ ಮೀನು ಯಾವ ತೊಂದರೆಯನ್ನೂ ಎದುರಿಸಲಿಲ್ಲ. ಎರಡನೆಯ ಮೀನು ಆಪತ್ತು ಬಂದ ಮೇಲೆ ಹೆದರದೆ ತಪ್ಪಿಸಿಕೊಳ್ಳುವ ನಿರ್ಧಾರ ತಳೆದು ಪ್ರಯತ್ನಿಸಿ ಬದುಕಿಕೊಂಡಿತು. ರಾಜಕೀಯದಲ್ಲೂ ಹೀಗೆಯೆ ಸಾವಿರಾರು ರಾಜರ ಮಧ್ಯೆ ಎಲ್ಲೊ ಒಂದಿಬ್ಬರು ಅರಸರು ಮಾತ್ರ ಸೂಕ್ತ ಮತ್ತು ಸಕಾಲದ ನಿರ್ಧಾರ ಕೈಗೊಂಡು ರಾಜ್ಯವನ್ನೂ ತನ್ನನ್ನೂ ರಕ್ಷಿಸಿಕೊಳ್ಳುತ್ತಾರೆ. ಉಳಿದವರೆಲ್ಲರೂ ಆಪತ್ಕಾಲ ಬಂದಾಗ ಏನೂ ಮಾಡಲಾಗದೆ ಸೋತು ಸಾಯುತ್ತಾರೆ. ಮಗೂ! ಸಂಭವನೀಯ ಆಪತ್ತು, ರಾಜಕೀಯ ಬೆಳವಣಿಗೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಾಜನಾದವ ಸಮಗ್ರ ವಿಷಯ ತಿಳಿದು ಪೂರಕ ಸಿದ್ಧತೆ ಮಾಡುತ್ತಿರಬೇಕು ಎಂಬುವುದು ಈ ಕಥೆಯ ನೀತಿ.
ವತ್ಸಾ! ನಿನಗೆ ಇನ್ನೂ ಒಂದು ಕಥೆಯ ಮೂಲಕ ಆಪತ್ತಿನಿಂದ ಪಾರಾಗಿ ಬದುಕುವ ಸೂತ್ರ ವಿವರಿಸುವೆ. ಒಬ್ಬ ಬೇಟೆಗಾರ ಒಂದು ವಿಶಾಲ ಮರದ ಕೆಳಗೆ ಬಲೆ ಹರಡಿ ಹೋಗಿದ್ದ. ಅದೇ ಮರದ ಬಿಲದಲ್ಲಿದ್ದ ಇಲಿಯೊಂದು ತನ್ನ ಆಹಾರ ಅರಸುತ್ತಾ ಹೊರ ಬಂದಿತ್ತು. ಆ ಸಮಯ ಸೊಕ್ಕಿದ ಕಾಡು ಬೆಕ್ಕೊಂದು ಓಡಿ ಬಂದು ಇಲಿಯ ಮೇಲೆ ಮುಗಿ ಬೀಳುವ ಧಾವಂತದಲ್ಲಿ ಬೇಟೆಗಾರನ ಬಲೆಯೊಳಗೆ ಸಿಕ್ಕಿ ಬಿತ್ತು. ಹೆದರಿದ ಇಲಿ ತನ್ನ ಬಿಲದತ್ತ ಓಡಲು ನೋಡಿದರೆ ಅತ್ತ ಕಡೆಯಿಂದ ಮುಂಗುಸಿಯೊಂದು ಇಲಿಯನ್ನು ಹಿಡಿಯಲು ಹವಣಿಸುತ್ತಿದೆ. ತಿರುಗಿ ಅತ್ತಿತ್ತ ಓಡಲು ನೋಡಿದರೆ, ಮರದ ಬಾಗಿದ ಗೆಲ್ಲಿನಲ್ಲಿ ಗೂಬೆಯೊಂದು ಕುಳಿತು ಇಲಿಯನ್ನು ನೋಡುತ್ತಿರುವುದನ್ನು ಕಂಡು ಹೆದರಿತು.
ಈಗ ಇಲಿಗೆ ಬಹುವಿಧದ ಆಪತ್ತು- ಒಂದೆಡೆ ಮುಂಗುಸಿ, ಮತ್ತೊಂದೆಡೆ ಗೂಬೆ. ತಕ್ಷಣ ಇಲಿ ಬೆಕ್ಕಿನ ಬಳಿ ಬಂದು ಅಯ್ಯಾ! ನೀನು ನನಗೆ ಶತ್ರುವೇ ಆದರೂ, ಬಲೆಯೊಳಗೆ ಸಿಲುಕಿ ಸಂಕಟದಲ್ಲಿರುವ ನಿನ್ನನ್ನು ನೋಡಿ ನನಗೆ ವೇದನೆಯಾಗುತ್ತಿದೆ. ನನ್ನ ಹೊರತು ನಿನಗೆ ಯಾರೂ ಸಹಾಯ ಮಾಡಲಾರರು. ಬಲೆಯನ್ನು ನನ್ನ ಹರಿತ ಹಲ್ಲುಗಳಿಂದ ಕತ್ತರಿಸಿ ನಿನ್ನನ್ನು ಬಿಡಿಸಬಲ್ಲೆ. ಆದರೆ ನಾನು ಹಾಗೆ ಮಾಡಲು ನನಗೂ ಒಂದು ತೊಂದರೆ ಎದುರಾಗಿದೆ. ಅದೋ ಆ ಮುಂಗುಸಿ ಮತ್ತು ಗೂಬೆ ನನ್ನನ್ನು ಕೊಂದು ತಿನ್ನಲು ಕಾದು ಕುಳಿತಿವೆ. ನಿನ್ನ ಸಹಾಯಕ್ಕೆ ನಾನು ಬಂದು ಬಲೆ ಕತ್ತರಿಸುವಾಗ ಅವರಿಬ್ಬರಲ್ಲೊಬ್ಬರು ನನ್ನನ್ನು ಸುಲಭವಾಗಿ ಹಿಡಿಯಬಲ್ಲರು. ಈ ಸಮಸ್ಯೆಯಲ್ಲೂ ನಿನಗೆ ಸಹಾಯ ಮಾಡಲೇಬೇಕೆಂಬ ನಿರ್ಧಾರ ನನ್ನದು. ಅದಕ್ಕಾಗಿ ನೀನು ಬಲೆಯ ಸಂಧಿನಲ್ಲಿ ನನಗೊರಗಿ ನಿಲ್ಲು. ನಾನು ನಿನ್ನ ಸಾಮಿಪ್ಯದಲ್ಲಿ ಕುಳಿತು ಬಲೆ ಕತ್ತರಿಸಿ ಹಾಕುವೆ ಎಂದು ಹೇಳಿತು. ಹಾಗೆಯೆ ಮಾಡತೊಡಗಿದಾಗ ನೋಡುತ್ತಿದ್ದ ಗೂಬೆ ಮತ್ತು ಮುಂಗುಸಿಗಳು ಇಲಿಯನ್ನು ಬೆಕ್ಕು ಹಿಡಿಯಿತೆಂದು ತಿಳಿದು ಅಲ್ಲಿಂದ ಬೇರೆಡೆ ಆಹಾರ ಅರಸುತ್ತಾ ಹೊರಟು ಹೋದವು. ಇಲಿ ನಿಧಾನವಾಗಿ ಬಲೆಯನ್ನು ಕತ್ತರಿಸುತ್ತಾ ಇತ್ತು. ಬೆಕ್ಕು ಅವಸರಿಸುತ್ತಾ ಏನಯ್ಯಾ ಇನ್ನೂ ಆಗಲಿಲ್ಲವೆ? ಎಂದು ಕೇಳಿದಾಗ ಇಲಿ ಬಲೆ ಬಹಳ ಗಟ್ಟಿಯಿದೆ, ಆದರೂ ನಾನು ಬಿಡಲಾರೆ ನಿನ್ನನ್ನು ಬಿಡುಗಡೆಗೊಳಿಸಿ ಬದುಕಿಸುವೆ ಎಂದು ಹೇಳುತ್ತಾ ಹಾಗೆಯೆ ಇದ್ದು ನಿಧಾನವಾಗಿ ಕತ್ತರಿಸುತ್ತಿತ್ತು. ಏನಾದರೂ ಇಲಿ ಓಡಿ ಹೋಗಲು ಯತ್ನಿಸುವುದೊ ಎಂದು ಗಮನಿಸುತ್ತಿದ್ದ ಬೆಕ್ಕು ಬಲೆಯೊಳಗೆ ಒದ್ದಾಡಿ ಸುಸ್ತಾಗಿ ಹಸಿದಿತ್ತು. ಒಮ್ಮೆ ಬಲೆಯಿಂದ ಹೊರಬಂದರೆ ಇಲಿಯನ್ನು ಹಿಡಿದು ತಿಂದು ಬಿಡಬೇಕು ಎಂದು ಯೋಚಿಸುತ್ತಿತ್ತು. ಹೀಗೆಯೆ ಬಹಳ ಹೊತ್ತು ಸಾಗಿದ ಬಳಿಕ ಬೇಟೆಗಾರ ಅತ್ತ ಕಡೆಯಿಂದ ಬರುತ್ತಿರುವುದನ್ನು ನೋಡಿದ ಇಲಿ ಅರ್ಧರ್ಧ ಕತ್ತರಿಸಿಟ್ಟಿದ್ದ ಬಲೆಯನ್ನು ಕಚ್ಚಿ ಹರಿದು ಬಿಟ್ಟಿತು. ಬೇಟೆಗಾರ ಬಳಿ ಬರುವುದನ್ನು ಕಂಡು ಹೆದರಿದ ಬೆಕ್ಕು ಹರಿದ ಬಲೆಯೆಡೆಯಿಂದ ನುಸುಳಿ ಹೊರಬಂದು ಓಡಿ ಹೋಯಿತು. ಇಲಿ ಅಷ್ಟರಲ್ಲಿ ಓಡಿ ತನ್ನ ಬಿಲ ಸೇರಿತ್ತು. ಬೇಟೆಗಾರ ನಿರಾಶೆಯಿಂದ ಹರಿದ ಬಲೆಯನ್ನು ಹಿಡಿದುಕೊಂಡು ಹೋಗಬೇಕಾಯ್ತು. ಅಲ್ಲಿಯೆ ಎಲ್ಲೋ ಅವಿತಿದ್ದ ಬೆಕ್ಕು ಇಲಿಯ ಬಿಲದತ್ತ ಬಂದು ಕೃತಜ್ಞತೆ ಸಲ್ಲಿಸುವಂತೆ ನಟಿಸುತ್ತಾ ಇಲಿಯನ್ನು ಕರೆದು ಹೊರ ಬರುವಂತೆ ಕೇಳಿಕೊಂಡಿತು. ಆಗ ಇಲಿ ಅಯ್ಯಾ ಬೆಕ್ಕೇ! ನೀನು ನನ್ನ ಜಾತಿ ವೈರಿ. ಆಗ ನನಗೂ ನಿನ್ನ ಅಗತ್ಯವಿತ್ತು. ಕಾರಣ ಮುಂಗುಸಿ ಮತ್ತು ಗೂಬೆಯಿಂದ ನನಗೆ ಪ್ರಾಣ ಭಯವಿತ್ತು. ಅದು ನಿವಾರಣೆಗೊಂಡ ಬಳಿಕ ನಾನು ನಿನಗೂ ಸಹಾಯ ಮಾಡಿದ್ದೇನೆ. ಈಗ ಅಂತಹ ಯಾವ ಕಾರಣವೂ ಇಲ್ಲ, ನಾನು ಹೊರಬಂದರೆ ನೀನು ನಿನ್ನ ಬುದ್ದಿ ತೋರಿಸಿ ನನ್ನನ್ನು ತಿಂದು ಮುಕ್ಕದೆ ಬಿಡಲಾರೆ. ಹಾಗಾಗಿ ನೀನೆಷ್ಟು ಕರೆದರೂ ನಾನು ಹೊರಬರಲಾರೆ ಎಂದಿತು.
ಮಗೂ ಇದೊಂದು ಬರಿಯ ಕಥೆಯಾದರೂ, ಇಲ್ಲಿ ರಾಜಸೂತ್ರದ ನೀತಿಯಿದೆ. ಇಲಿಯಂತೆ ಆಪತ್ತು ಬಂದಾಗ ನಮ್ಮ ತೀರಾ ಬದ್ದ ವೈರಿಯ ಜೊತೆಗಾದರೂ ಸಂಧಿ ಮಾಡಿಕೊಂಡು ಸಾಮ್ರಾಜ್ಯ ಮತ್ತು ಪ್ರಜೆಗಳ ರಕ್ಷಣೆ ಮಾಡಬೇಕು. ಬಂದ ವಿಪತ್ತನ್ನು ನಿವಾರಿಸಬೇಕು. ಪ್ರತಿಯಾಗಿ ಆತನಿಗೇನಾದರು ಉಪಕಾರ ಅಥವಾ ಉಪಹಾರ ನೀಡಬೇಕು. ನಂತರ ಶತ್ರುವಿನ ಬಗ್ಗೆ ತಿಳಿದಿರುವ ರಾಜನಾದವ ತನ್ನ ರಕ್ಷಣೆಯ ವ್ಯವಸ್ಥೆಯೊಳಗೆ ಸುರಕ್ಷಿತನಾಗಿರಬೇಕು.
ಮಗೂ ಧರ್ಮಜಾ! ರಾಜನೀತಿಯ ಬಗ್ಗೆ ನಿನಗೆ ಇನ್ನೂ ಒಂದು ಕಥೆ ಹೇಳುತ್ತೇನೆ. ಹಿಂದೆ ಕಾಂಪಿಲ್ಯ ರಾಜ್ಯದಲ್ಲಿ ಬ್ರಹ್ಮದತ್ತ ಎಂಬ ರಾಜನಿದ್ದನು.
ಮುಂದುವರಿಯುವುದು….









