ಭಾಗ – 439
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೩೯ ಮಹಾಭಾರತ
“ನಾನೀಗ ಯುದ್ದ ಮಾಡಲಾರೆ. ಕಾರಣ ಹೇಗಾದರು ಮಾಡಿ ಬದುಕುಳಿಯಬೇಕಾದ ಅನಿವಾರ್ಯತೆ ನನಗಿದೆ” ಎಂದನು.
ದುರ್ಯೋಧನನ ಮಾತು ಕೇಳಿ ಅಶ್ವತ್ಥಾಮನಿಗೆ ಸಿಟ್ಟು ಬಂತು. ಕಾರಣ ಈ ಯುದ್ದ ನಿರ್ಣಯಕ್ಕೆ ಮೊದಲು ಸಾಕಷ್ಟು ಸಂಧಾನ ಪ್ರಕ್ರಿಯೆಗಳಾಗಿದ್ದವು. “ಹೇ ದುರ್ಯೋಧನಾ! ನೀನು ಛಲಗಾರನೆಂದು ಲೋಕ ಮುಖಕ್ಕೆ ಈ ತನಕ ತೋರಿಸಿ ಕೊಟ್ಟಿರುವೆ. ಹಿರಿಯರಾದ ಭೀಷ್ಮಾಚಾರ್ಯ, ವಿದುರ ಸಹಿತ ನಾರದ, ಕಣ್ವ ಮಹರ್ಷಿಗಳಾದಿಯಾಗಿ ಬಂದು ಹೇಳಿದರೂ ನೀನು ಕೇಳಲಿಲ್ಲ. ನನ್ನ ಪಿತಾಶ್ರೀ ದ್ರೋಣಾಚಾರ್ಯರು ನಿನ್ನ ಗುರುಗಳು, ಅವರ ಮಾತನ್ನೂ ನೀನು ಕೇಳದವನಾಗಿದ್ದೆ. ಮಹಾನ್ ಕ್ಷತ್ರಿಯನಂತೆ ಪಾಂಡವರನ್ನು ಯುದ್ದಕ್ಕೆ ಆಹ್ವಾನಿಸಿದವನು ನೀನು. ಧರ್ಮಮಾರ್ಗದಲ್ಲಿ ಬದುಕುತ್ತಿರುವ ಧರ್ಮರಾಯ ಕೇಳಿದ ಕನಿಷ್ಟ ಐದು ಗ್ರಾಮಗಳನ್ನೂ ನೀನು ನೀಡಲು ಒಪ್ಪಿರಲಿಲ್ಲ. ಬದಲಾಗಿ ಹಠದಿಂದ ಯುದ್ದವನ್ನು ಬಯಸಿ ತೊಡಗಿಕೊಂಡವನು. ಈಗ ಯುದ್ದ ಬೇಡ, ಕಾಲಾವಕಾಶ ಬೇಕು, ಬದುಕಬೇಕು ಎಂದರೆ ಅದರ ಅರ್ಥವೇನು? ನಿನ್ನಿಂದ ಆರಂಭವಾದ ಯುದ್ದವನ್ನು ಕೊನೆಗಾಣಿಸುವ ಬಾಧ್ಯತೆ ನಿನಗಿದೆ. ಎಷ್ಟೋ ಮಂದಿ ನಿನ್ನ ನಿರ್ಧಾರದಿಂದಾಗಿ ಬಲಿಯಾಗಿದ್ದಾರೆ. ಅವರ ಸಾವಿಗೆ ಉತ್ತರವೇನು? ನಿನ್ನಂತಹವರು ಈ ರೀತಿ ಅವಿತು ಕುಳಿತುಕೊಳ್ಳುವುದು ಭೂಷಣವೆ?” ಎಂದು ಪ್ರಶ್ನಿಸಿದನು.
ಆಗ ದುರ್ಯೋಧನ ನೀರೊಳಗಿಂದ “ಗುರುಪುತ್ರಾ! ನಿನ್ನ ಮಾತುಗಳು ಸತ್ಯವೇ ಆಗಿದೆ. ನಾನೇನು ಮಾಡುತ್ತಿದ್ದೇನೆ, ಮತ್ತು ಯಾಕಾಗಿ ಹೀಗೆ ಎಂಬುವುದು ನನಗೆ ತಿಳಿದಿದೆ. ಈ ದಿನ ಪಾಂಡವರು ಗೆಲುವಿನ ಮಹೋಲ್ಲಾಸದಲ್ಲಿದ್ದಾರೆ. ನಾವು ಉಳಿದಿರುವುದು ಕೇವಲ ಬೆರಳೆಣಿಕೆಯ ಮಂದಿ. ಹಾಗೆಂದು ಪಾಂಡವರಲ್ಲೂ ಮಿತ ಸೇನೆಯೇ ಇರುವುದು. ಹಾಗೆಂದು ಈ ಕ್ಷಣ ನಾವು ಯುದ್ದಕ್ಕೆ ಮುಂದಾದರೆ ಅನರ್ಥವಾದೀತು. ನಾಳಿನ ಸೂರ್ಯೋದಯವಾಗಲಿ, ಆಗ ವ್ಯವಸ್ಥೆ ಮಾಡಿಕೊಂಡು ಮತ್ತೆ ಯುದ್ದ ಮಾಡೋಣ.” ಎಂದನು.
ಆಗ ಶಾರದ್ವತ ಗುರು ಕೃಪಾಚಾರ್ಯರು “ವತ್ಸಾ ದುರ್ಯೋಧನಾ! ನೀನೀಗ ಮಾಡುತ್ತಿರುವುದು ಕ್ಷಾತ್ರ ಧರ್ಮವಲ್ಲ. ಹೇಡಿಗಳ ಕರ್ಮ. ಈ ಸ್ವಭಾವ ಶ್ರೇಯಸ್ಕರವಾಗದು. ನೀನು ಕುಲೋತ್ತಮನೂ, ವೀರನೂ, ಛಲ ಮತ್ತು ಬಲಗಳಲ್ಲಿ ಅಪ್ರತಿಮನೂ ಆಗಿರುವೆ. ನೀನು ಗಳಿಸಿರುವ ಪ್ರಸಿದ್ದಿಯನ್ನು ನಿನ್ನ ಈ ಕ್ರಿಯೆ ಹಾಳುಗೆಡವಿ ಬಿಡುತ್ತದೆ. ಯುಕ್ತಾಯುಕ್ತತೆಗಳ ವಿವೇಚನೆ ಮಾಡಿಕೋ. ಏಳು ನಿನ್ನ ರಕ್ಷಣೆಗೆ ನಾವು ಮೂವರಿನ್ನೂ ಬದುಕಿದ್ದೇವೆ. ಬಾ ನೀರಿನಿಂದ ಹೊರ ಬಂದು ಯುದ್ದ ಮುಂದುವರಿಸು” ಎಂದು ಕೇಳಿಕೊಂಡರು.
ಆಗ ದುರ್ಯೋಧನ “ಗುರುಗಳೇ! ಧರ್ಮಾಧರ್ಮಗಳ ಆಲೋಚನೆಗೆ ಇದು ಸಮಯವಲ್ಲ. ಧೃಡ ಸಂಕಲ್ಪದ ಸಾಕ್ಷಾತ್ಕಾರ ಮಾಡಿಕೊಳ್ಳಲು ಕಾಲಾವಕಾಶ ಬೇಕು. ನೀವೇನು ಭಾವಿಸಿದರೂ ನಾನು ನಾಳೆಯ ಸೂರ್ಯೋದಯದ ಬಳಿಕ ಯುದ್ದ ಮುಂದುವರಿಸುವುದು. ಯಾವುದಕ್ಕೂ ಇಂದಿನ ದಿನ ಮುಗಿದು ಯುದ್ದ ವಿರಾಮ ಘೋಷಣೆಯಾಗಲಿ” ಎಂದನು.
ಅಶ್ವತ್ಥಾಮನಿಗೆ ದುರ್ಯೋಧನನ ಯೋಜನೆ – ಯೋಚನೆ ಅರ್ಥವಾಗಲಿಲ್ಲ. ಅವನು “ಹೇ ಕುರುಪತಿ! ನೀನು ಎದ್ದು ಬಾ, ನಾವಿದ್ದೇವೆ. ಯುದ್ದ ಮಾಡುತ್ತೇವೆ. ನಿನಗಾಗಿ ಸರ್ವ ತ್ಯಾಗಕ್ಕೂ ಸಿದ್ದರಾಗಿ ನಿಂತಿದ್ದೇವೆ. ನೀನೇ ಇಲ್ಲದಿದ್ದರೆ ನಾವು ಯಾರಿಗಾಗಿ ಮತ್ತು ಯಾಕಾಗಿ ಯುದ್ದ ಮಾಡಬೇಕು? ಏಳು ಕೌರವಾ! ಇದೋ ನಿನಗೆ ಧೈರ್ಯ ಮೂಡಲು ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ ಕೇಳು, ಇಂದು ಪಾಂಡವರಿಗೆ ಸಹಾಯಿಗಳಾಗಿ ಉಳಿದಿರುವ ಆ ಸೋಮಕ ವಂಶೀಯರು ಮತ್ತು ಪಾಂಚಾಲರನ್ನು ಸರ್ವನಾಶ ಮಾಡುತ್ತೇನೆ. ಹಾಗೆ ಮಾಡದೆ ನನ್ನ ಕವಚವನ್ನು ಬಿಚ್ಚಲಾರೆ. ಧೈರ್ಯಸ್ಥನಾಗಿ ನೀನು ಹೊರಗೆ ಬಾ” ಎಂದನು.
ಆಗ ದುರ್ಯೋಧನ ” ಅಯ್ಯಾ ನೀವು ಈಗ ಪ್ರತಿಜ್ಞೆ ಮಾಡಿರಬಹುದು. ಈ ತನಕ ಹಲವರು ನನಗಾಗಿ ಪ್ರತಿಜ್ಞಾ ಬದ್ದರಾದುದನ್ನೂ, ಆ ನಂತರ ಘಟಿತ ಪರಿಣಾಮಗಳನ್ನೂ ಅನುಭವಿಸಿದ್ದೇನೆ. ನೀವು ನಿಮ್ಮ ಪ್ರತಿಜ್ಞೆ ಪೂರೈಸುವ ಸಾಮರ್ಥ್ಯ ಹೊಂದಿರಬಹುದು, ಆದರೆ ನನ್ನ ದುರ್ವಿಧಿ ನನ್ನ ಬೆಂಬಿಡುತ್ತಿಲ್ಲ. ಇಂದಿನ ದಿನದವರೆಗೆ ನೀವೆಲ್ಲರೂ ಮಾಡಿದ್ದಾದರೂ ಏನು? ಪಾಂಡವರ ಗುಣಗಾನ ಮಾಡುತ್ತಲೆ ಬದುಕಿದವರು. ಅಜ್ಜ ಭೀಷ್ಮಾಚಾರ್ಯರನ್ನು ಇಂದಿನ ತನಕ ಯಾರಾದರೂ ಸೋಲಿಸಿದ್ದಿದೆಯೆ? ಅದರ ಮೇಲೆ ಇಚ್ಚಾಮರಣಿಯೂ ಆಗಿರುವ ಪಿತಾಮಹನೂ ಅವರ ಮನಸ್ಸಿಗೆ ಸಮಾಧಾನವಾಗುವ ಪ್ರತಿಜ್ಞೆಗೈದಿದ್ದರು. ಸದ್ಯ ಅವರೂ ಧರಾಶಾಯಿಯಾಗಿದ್ದಾರೆ. ಇನ್ನು ಉಭಯಕುಲ ಬಿಲ್ಲೋಜ, ಶಾಪಾದಪಿ – ಶರಾದಪಿ ಗುರುದ್ರೋಣರೇನು ಕಡಿಮೆಯೆ? ಧರ್ಮರಾಯನ ಬಂಧನದ ವಾಗ್ದಾನ ನೀಡಿದರಾದರೂ, ಸ್ವಯಂ ಶಿರಚ್ಚೇದನಕ್ಕೊಳಪಟ್ಟರು. ಇನ್ನು ಮಿತ್ರ ಕರ್ಣ! ಆತನೂ ಅರ್ಜುನನ ವಧೆಯ ಸಂಕಲ್ಪ ಬದ್ದತೆ ಹೊಂದಿದ್ದನಾದರೂ ಕಡೆಗೆ ರಣ ಧಾರುಣಿಯಲ್ಲಿ ಮರಣವನ್ನಪ್ಪಿಕೊಂಡಿದ್ದಾನೆ. ಹಾಗಾಗಿ ಯಾರ ಮಾತನ್ನೂ ನಂಬುವ ಸ್ಥಿತಿಯಲ್ಲಿ ನಾನಿಲ್ಲ. ನಿಮ್ಮ ಮಾತುಗಳೂ ನನಗೆ ವಿಶ್ವಾಸ ಮೂಡಿಸುತ್ತಿಲ್ಲ. ಕಾರಣ ಈ ಹಿಂದೆಯೂ ನೀವು ಮೂವರು ಇದ್ದಿರಾದರೂ ಏನೇನು ಮಾಡಲಾಗದೆ ವೀರರ ಮರಣಕ್ಕೆ ಪ್ರೇಕ್ಷಕರಾಗಿದ್ದೀರಿ ಹೊರತು, ನನ್ನ ನಿರೀಕ್ಷೆಯ ಸಾಧನೆ ಆಗಲಿಲ್ಲ. ಶಲ್ಯ ಭೂಪತಿಯ ಸೇನಾಪತ್ಯದಲ್ಲೂ ನೀವೆಲ್ಲರೂ ಇದ್ದಿರಲ್ಲಾ? ಆ ಸಮಯದಲ್ಲಿ ಅಸಹಾಯಕರಾದ ನಿಮ್ಮನ್ನು ಈಗ ಯಾವ ಆಧಾರದಲ್ಲಿ ನಂಬಿಕೊಳ್ಳಲಿ? ಅದೇನೆ ಇರಲಿ ನೀವು ನನಗಾಗಿ ಬಹಳ ತ್ಯಾಗ ಮಾಡಿದ್ದೀರಿ, ಸಹಾಯವನ್ನೂ ಮಾಡಿದವರಾಗಿರುವಿರಿ. ನಿಮಗೆ ಕೃತಜ್ಞತೆ ಸಲ್ಲಿಸುತ್ತಾ ನಮಿಸುತ್ತಿದ್ದೇನೆ. ಬದುಕುವ ಆಸೆ ನಿಮಗಿದ್ದರೆ ರಣಾಂಗಣ ತೊರೆದು ಹೊರಡಿ. ನಾನು ನಾಳಿನ ದಿನ ಯುದ್ದ ಮಾಡುತ್ತೇನೆ. ನನ್ನ ಹಣೆಬರಹದಲ್ಲಿ ಏನು ಬರೆದಿದೆಯೊ ಅದನ್ನು ಅನುಭವಿಸಲು ಸಿದ್ದನಿದ್ದೇನೆ ” ಎಂದು ಮಾರ್ನುಡಿದನು.
ಆಗ ಅಶ್ವತ್ಥಾಮ ಕೆರಳಿದನು “ಹೇ ಕೌರವಾ! ಏನು ಹೇಳುತ್ತಿರುವೆ. ಪಾಂಡವರ ಬಗ್ಗೆ ಉತ್ತಮ ಮಾತುಗಳನ್ನಾಡುತ್ತಿದ್ದವರು ಪಿತಾಮಹ ಭೀಷ್ಮಾಚಾರ್ಯ ಮತ್ತು ನನ್ನ ಪಿತಾಶ್ರೀ ದ್ರೋಣಾಚಾರ್ಯರು. ಪಾಂಡವರ ಬಗ್ಗೆ ಸದಭಿಪ್ರಾಯ ಪ್ರಕಟಿಸಿದ್ದರೂ, ಹೋರಾಡಿದ್ದು, ಹೋರಾಡಿ ಬಲಿದಾನ ನೀಡಿದ್ದು ನಿನ್ನ ಪಕ್ಷಕ್ಕಾಗಿ ಎಂಬುವುದನ್ನು ಮರೆಯಬೇಡ. ಇದೆಲ್ಲವನ್ನು ತಿಳಿದು ಕೃತಘ್ನನಾಗಿ ನಮ್ಮನ್ನು ಈಗಲೂ ಆಕ್ಷೇಪಿಸುತ್ತಿರುವೆ. ನಿನ್ನ ಭಾವನೆ ಸರಿಯಲ್ಲ, ಮೊದಲು ಅದನ್ನು ತಿಳಿದು ತಿದ್ದಿಕೋ” ಎಂದು ದ್ರೌಣಿ ಉತ್ತರಿಸಿದನು.
ಆಗಲೂ ದುರ್ಯೋಧನ ತನ್ನ ನಿರ್ಧಾರವನ್ನು ಬದಲಿಸದೆ ನೀರೊಳಗೆ ಕುಳಿತಿದ್ದನು.
ಮುಂದುವರಿಯುವುದು…



