ಭಾಗ – 435
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೩೫ ಮಹಾಭಾರತ
ಭೀಮಸೇನನು ಮದ್ರರಾಜರನ್ನು ಮನಬಂದಂತೆ ದಂಡಿಸುತ್ತಿರುವಾಗ ಆತನಿಗೆ ಜೊತೆಯಾಗಿ ಉಪಪಾಂಡವರೂ ಬೆಂಗಾವಲಿಗರಾಗಿ ಬಂದರು. ಜೊತೆಗೆ ಸಾತ್ವತ ಸಾತ್ಯಕಿಯೂ ಸೇರಿದಾಗ ಪಾಂಡವ ಸೇನೆಯ ಪ್ರತಿಘಾತವನ್ನು ತಾಳಲಾರದೆ ಬೆಂಕಿಗಾಹುತಿಯಾದ ಹತ್ತಿಯುಂಡೆಯಂತಾಯಿತು ಮಾದ್ರ ದೇಶದ ರಥಿಕರ ಸ್ಥಿತಿ. ಕೌರವರ ಸೇನೆಯನ್ನು ತಡೆಹಿಡಿದಿದ್ದ ದ್ರೌಪದಿಯ ಸುಪುತ್ರರು ಒಳಬರಗೊಡದೆ ಪ್ರತಿಬಂಧಿಸಿದರು. ದುರ್ಯೋಧನ ನೋಡುತ್ತಿದ್ದಂತೆಯೆ ಭೀಮಸೇನ ಮಾದ್ರದೇಶದ ರಥಿಕರ ಶಿರ ಚೆಂಡಾಡುತ್ತಾ ರಾಶಿ ಹಾಕಿದ್ದಾನೆ. ಕುರುಸೇನೆ ಮಿತವಾಗಿತ್ತು. ಈಗ ಹಿಮ್ಮೆಟ್ಟಿಸಲ್ಪಡುತ್ತಾ ಪಾಂಡವರ ವಿಜಯೋತ್ಸವಕ್ಕೆ ಬೆದರಿ ಭ್ರಾಂತಿಗೊಳಗಾಗಿದೆ.
ಇತ್ತ ಗಾಂಧಾರದ ಸೇನೆ ನಕುಲ ಸಹದೇವರ ಕಲಿತನದೆದದುರು ಕದಡಿ ಹೋಗುತ್ತಿದೆ. ಸಹದೇವನಂತೂ ಶಕುನಿಯ ವಂಶಜರನ್ನು ಹುಡುಕಿ ಹುಡುಕಿ ಹತ್ಯೆಗೈಯತೊಡಗಿದ್ದಾನೆ. ಈಗ ಗಾಂಧಾರಾಧಿಪನಿಗೂ ಪ್ರಾಣ ಭಯ ಕಾಡತೊಡಗಿದೆ.
ಮತ್ತೊಂದೆಡೆ ರಥದಿಂದಿಳಿದು ಪದಾತಿಯಾಗಿ ಭೀಮಸೇನ ಕೌರವ ಸೇನೆಯ ಬೆಂಬತ್ತಿ ಓಡುತ್ತಿದ್ದಾನೆ. ರೌದ್ರಾವತಾರ ತಳೆದಂತೆ ಸಿಕ್ಕ ಸಿಕ್ಕವರನ್ನು ಗದಾಪ್ರಹಾರದಿಂದ ಭೀಮ ಧರೆಗುರುಳಿಸುತ್ತಿದ್ದಾನೆ. ಭೀಮನ ರುಧಿರಮುಖಿ ಗದೆಗೆ ರುಧಿರಾಭಿಷೇಕವಾಗುತ್ತಿದೆ. ಭೀಮನಿಗೇಕೊ ಧರ್ಮಯುದ್ದವೆ ಹಿತವೆಣಿಸಿ ಸೇನೆಯೊಡನೆ ಹೋರಾಡುತ್ತಿರುವ ಈ ಸಮಯ ಪದಾತಿಯಾಗಿ ರಥರಹಿತನಾಗಿ ಕಾದಾಡುವ ಮನಸ್ಸಾದಂತಿದೆ. ನೋಡ ನೋಡುತ್ತಿದ್ದಂತೆ ಕುರು ಸೇನೆಯ ಇಪ್ಪತ್ತೊಂದು ಸಾವಿರದಷ್ಟು ಸೈನಿಕರು ಭೀಮನ ಗದಾಪ್ರಹಾರಕ್ಕೆ ಬಲಿಯಾದರು. ದುರ್ಯೋಧನ ಮಾತ್ರ ಈಗ ಅಸಹಾಯಕನಾಗಿದ್ದಾನೆ. ತನ್ನ ಸೇನೆಯ ಮಾರಣ ಹೋಮವಾಗುತ್ತಿದ್ದರೂ, ಕೇವಲ ನೋಡುಗನಾಗಿ ಉಳಿದು ಹೋಗಿದ್ದಾನೆ.
ನಕುಲ ಮಾತ್ರ ಶಕುನಿಯ ಬೆಂಬಿಡದೆ ಘಾತಿಸುತ್ತಾ, ಆತನ ಒಂದೊಂದು ಅಪರಾಧಗಳಿಗೂ ಘೋರ ಶಿಕ್ಷೆ ನೀಡುತ್ತಿದ್ದಾನೆ. ಕೊಲ್ಲಬಹುದಾಗಿದ್ದರೂ ಸುಲಭದ ಸಾವು ಶಕುನಿಗೊದಗಬಾರದು ಎಂಬಂತೆ ಆತನನ್ನು ಪೀಡಿಸತೊಡಗಿದ್ದಾನೆ. ಅಂಗಾಂಗಗಳೆಲ್ಲಾ ಗಾಯಗಳಾಗಿ ರಕ್ತ ಸುರಿಸುತ್ತಿದ್ದರೂ ಬಿಡದೆ ಹಿಂಸಿಸುತ್ತಿದ್ದಾನೆ. ಮತ್ತೊಂದೆಡೆ ಅಶ್ವತ್ಥಾಮ – ಅರ್ಜುನರಿಗೆ ಕೈಹತ್ತಿಕೊಂಡಿದೆ. ಗುರುಪುತ್ರ ಏನೆಲ್ಲಾ ಸಾಹಸ ಸಾಧ್ಯವೊ ಅದನ್ನೆಲ್ಲಾ ತೋರಿದರೂ ಪಾರ್ಥ ಮಾತ್ರ ನಿಶ್ಚಲನಾಗಿದ್ದಾನೆ. ಬಸವಳಿದ ದ್ರೌಣಿಗೆ ಪ್ರಾಣ ಉಳಿಸಿಕೊಳ್ಳುವ ಯೋಚನೆ ಮೂಡತೊಡಗಿದೆ. ಆ ಸಮಯ ಹೇಗೋ ಹರ ಸಾಹಸದಿಂದ ಅರ್ಜುನನಿಂದ ಅಶ್ವತ್ಥಾಮ ವಿಮುಖನಾಗಲು ಸಫಲನಾದನು. ತನ್ನೆದುರಿನಿಂದ ಮುಕ್ತನಾದ ದ್ರೋಣಪುತ್ರನನ್ನು ಬಿಟ್ಟು ಅರ್ಜುನ ಉಳಿದ ಪಾಂಡವ ಸೇನೆಯ ವೀರರಾದ ಸಾತ್ಯಕಿ, ದ್ರೌಪದಿ ಪುತ್ರರೊಂದಿಗೆ ಸೇರಿ ವ್ಯೂಹವಾಗಿದ್ದಾರೆ. ಶಕುನಿ ತಪ್ಪಿಸಿ ಓಡಲು ಯತ್ನಿಸಿದರೂ ಈಗ ಮಾರ್ಗವಿಲ್ಲ.
ಮುಂದುವರಿಯುವುದು..



















