27.2 C
Udupi
Tuesday, March 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 468

ಭರತೇಶ ಶೆಟ್ಟಿ, ಎಕ್ಕಾರು

ಗಾಂಧಾರಿಯ ದೃಷ್ಟಿಯ ಜ್ವಾಲೆಯ ಪರಿಣಾಮ ಧರ್ಮರಾಯನ ಪಾದದ ಬೆರಳ ಉಗುರುಗಳು ಕರಟಿ ಕಪ್ಪಾದವು. ಅಷ್ಟಕ್ಕೆ ಸುಮ್ಮನಾಗದ ಆಕೆ ತಲೆಯೆತ್ತಿ ಒಮ್ಮೆ ರಣಾಂಗಣದತ್ತ ಮುಖ ತಿರುಗಿಸಿ ಆಲಿಸಿದಳು. ಎಲ್ಲೆಡೆಯಿಂದ ಹಾಹಾಕಾರ, ದುಃಖ, ರೋದನೆ ಕೇಳಿಸುತ್ತಿದೆ. ಸತ್ತು ಹೆಣವಾಗಿ ಬಿದ್ದಿರುವ ತಮ್ಮವರನ್ನು ಕಂಡು ಆರ್ತನಾದಗೈಯುತ್ತಿರುವವರ ವೇದನೆ ರಾಜಮಾತೆ ಗಾಂಧಾರಿಯ ಮನಸ್ಸನ್ನು ಮತ್ತಷ್ಟು ಕಲಕಿತು. ಆಕೆಯ ಮಕ್ಕಳು, ಮಗಳ ಗಂಡ ಈ ಸಮರದಲ್ಲಿ ಮರಣವಪ್ಪಿದ್ದಾರೆ. ಮಗಳು, ಸೊಸೆಯಂದಿರು ವಿಧವೆಯರಾಗಿದ್ದಾರೆ. ಸ್ವಯಂ ತಾನು ಹತಭಾಗಿನಿಯಾಗಿದ್ದಾಳೆ. ಆಗ ಅವಳ ಮನಸ್ಸು ಶ್ರೀಕೃಷ್ಣನತ್ತ ತಿರುಗಿತು ಕಡು ಕೋಪದಿಂದ “ಹೇ ಕೃಷ್ಣಾ! ದೈವಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೂ ನನ್ನ ಮಕ್ಕಳು ಮತ್ತು ಪಾಂಡವರು ಕಾದಾಡುವಂತೆ ಮಾಡಿದೆ. ನೀನು ಜನಿಸಿರುವುದು ಒಂದು ಕುಟುಂಬದಲ್ಲಿ ಎನ್ನುವುದು ಸತ್ಯ. ನಿನಗೂ ಬಂಧು ಬಾಂಧವರು, ಸಂಸಾರವಿದೆ ಎಂಬುವುದನ್ನು ಮರೆಯದಿರು. ಯಾದವ ವಂಶೀಯನಾಗಿ ಜನಿಸಿದ ನೀನು ನಮ್ಮ ಚಂದ್ರವಂಶೀಯರು ಹೊಡೆದಾಡಿ ನಾಶ ಹೊಂದುವಂತೆ ಮಾಡಿದೆ. ಹಾಗೆಯೆ ಯಾದವರಾದ ನೀವು ನೀವೇ ಹೊಡೆದಾಡಿಕೊಂಡು ಸರ್ವನಾಶವಾಗಿ ಹೋಗಿರಿ” ಎಂದು ಕ್ರೋಧಾವೇಶದಿಂದ ಶಾಪ ಕೊಟ್ಟಳು. ಶಾಪ ವಾಕ್ಯ ಆರಂಭಿಸುವಾಗ ಬುಸುಗುಡುವ ಕೋಪ, ನುಡಿಯುತ್ತಾ ನುಡಿಯುತ್ತಾ ಶಾಂತಗೊಳ್ಳುತ್ತಾ ಅಂತ್ಯಕ್ಕೆ ಇಳಿಯುವ ಕಣ್ಣೀರಿನ ಜೊತೆ ಅಳುವಾಗಿ ಪರಿವರ್ತಿತವಾಗಿತ್ತು. ಮನದೊಳಗೆ ಮಡುಗಟ್ಟಿದ್ದ ದುಃಖ, ಕೋಪ, ತಾಪ ಈಗ ಶಾಪವಾಗಿ ಹೊರಬಂದು ರಾಣಿ ಗಾಂಧಾರಿ ನಿರಾಳಲಾದಂತೆ ಕಾಣಿಸುತ್ತಿದೆ.

ಶಾಪ ವಾಕ್ಯ ಆಲಿಸಿಯೂ ಸಚ್ಚಿದಾನಂದ ಸದಾನಂದ ಅಚಿಂತ್ಯ ಶ್ರೀಕೃಷ್ಣ ಮುಗುಳ್ನಗುತ್ತಾ “ದೇವೀ! ನನಗೆ ಒಳ್ಳೆಯ ಮಾತನ್ನು ಹೇಳಿದೆ. ನಿನ್ನ ಶಾಪ ವಾಕ್ಯವನ್ನು ನಾನು ಸ್ವೀಕರಿಸಿದ್ದೇನೆ. ನಿನ್ನ ಮನಸ್ಸು ಈಗ ಸಮಧಾನವನ್ನು ಹೊಂದಿ ಪರಿಶುದ್ಧವಾಗಿದೆ. ಮಹಾರಾಣಿಯಾಗಿ ನಿನಗೆ ನಿನ್ನದ್ದಾದ ಆದ್ಯ ಕರ್ತವ್ಯಗಳಿವೆ. ರಾಜಮಾತೆಯಾದ ನಿನಗೆ ಈ ಪಾಂಡವರು ಹಾಗು ಸಮಸ್ತ ಪ್ರಜಾ ಪರಿವಾರ ನಿನಗೆ ಮಕ್ಕಳಾಗಿದ್ದಾರೆ. ಆ ಜವಾಬ್ದಾರಿ ನಿನ್ನಲ್ಲಿ ಜಾಗೃತವಾಗಲಿ. ಪಾಂಡವರನ್ನು ಪ್ರೀತಿಯಿಂದ ಬರಮಾಡಿಕೊಂಡು ಮುಂದೇನು ಆಗ ಬೇಕೋ ಅದನ್ನು ನಡೆಸಿಕೊಡು” ಎಂದು ರಾಶಿ ರಾಶಿಯಾಗಿ ಹೆಣಗಳು ಬಿದ್ದ ರಣಾಂಗಣದತ್ತ ನೋಡುತ್ತಾ ನುಡಿದನು.

ಶ್ರೀಕೃಷ್ಣನ ಒಂದೊಂದು ಮಾತುಗಳನ್ನು ಕೇಳುವಾಗಲೂ ಗಾಂಧಾರಿಗೆ ತಾನು ಮಹಾಪರಾಧ ಮಾಡಿದೆ ಎಂಬ ಪಶ್ಚಾತ್ತಾಪ ಕಾಡುತ್ತಿತ್ತು. ತನ್ನ ಆತುರದ ಕೋಪದಿಂದ ವಿಶಾಲ ದೃಷ್ಟಿಕೋನವಿಲ್ಲದೆ, ಸಂಕೀರ್ಣತೆಯೊಳಗೆ ಸಿಲುಕಿ ಶಪಿಸಿದೆ. ತನ್ನ ಕೃತ್ಯದಿಂದ ಅಪರಾಧಿ ಭಾವವೂ, ನಾಚಿಗೆಯೂ ಆಕೆಗೆ ಆಗ ತೊಡಗಿತು. ಅವಳ ಕೋಪ ಪರಿಪೂರ್ಣವಾಗಿ ಉಪಶಮನಗೊಂಡು ಶಾಂತಚಿತ್ತಳಾಗಿದ್ದಾಳೆ. ಹೀಗೆ ಪುತ್ರ ವಿಯೋಗದ ಬೆಂಕಿಯಲ್ಲಿ ಬೇಯುತ್ತಿದ್ದ ಧೃತರಾಷ್ಟ್ರ ಗಾಂಧಾರಿಯರು ತಮ್ಮ ಮನದ ಬೇಗುದಿಯನ್ನು ಹೊರಗೆಸೆದು ಕದಡಿದ್ದ ಪ್ರಕ್ಷುಬ್ಧ ಮನಸ್ಸನ್ನು ಪ್ರಶಾಂತಗೊಳಿಸಿದ್ದಾರೆ.

ಪಾಂಡವರು ಶ್ರೀಕೃಷ್ಣನನ್ನು ಮುಂದಿರಿಸಿಕೊಂಡು ಮಾತೆ ಕುಂತಿಯ ಬಳಿಗೆ ಬಂದರು. ದ್ರೌಪದಿ ಸಹಿತರಾಗಿ ಪುತ್ರರು ನಮಸ್ಕರಿಸಿ ನಿಂತರು. ತಾಯಿ ಮಕ್ಕಳ ಭೇಟಿ ಎಷ್ಟು ಸುದೀರ್ಘ ಕಾಲದ ಬಳಿಕ! ರಾಜಸೂಯಾಧ್ವರ ಗೈದು ಅವಭೃತ ಕಲಶಾಭಿಷಿಕ್ತ ಚಕ್ರವರ್ತಿಯಾಗಿದ್ದ ಧರ್ಮರಾಯ ಹಸ್ತಿನಾಪುರದ ಭವನದಲ್ಲಿ ಸಾಗಿದ ಮಹಾದುರಂತ ಹೇತುವಾದ ದ್ಯೂತ ಆಡಿದ್ದನು. ಸರ್ವಸ್ವವನ್ನು ಕಳಕೊಂಡು ದೇಶಾಂತರ ಹೊರಟು ವನವಾಸಿಯಾಗುವಷ್ಟು ಅಂದಿನ ಸ್ಥಿತಿ ಬದಲಾಗಿ ಬಿಟ್ಟಿತ್ತು. ಕಾಲ ಎಷ್ಟು ಬೇಗ ಚಕ್ರವರ್ತಿಯಾಗಿದ್ದವನನ್ನು ನಾರುಬಟ್ಟೆಯಲ್ಲಿ ನಿಲ್ಲಿಸಿ ಬಿಟ್ಟಿತ್ತು. ದ್ರೌಪದಿಯ ವಸ್ತ್ರಾಪಹಾರ ಯತ್ನ, ಪಾಂಡುಪುತ್ರರ ಮಹೋಘ್ರ ಶಪಥಗಳಿಂದ ದ್ವಾಪರಯುಗದ ಮಹಾಕ್ರೌರ್ಯಕ್ಕೆ ನಾಂದಿಯಾಗಿದ್ದ ಆ ಕ್ಷಣದಿಂದ ಪಾಂಡವರು ಹನ್ನೆರಡು ವರ್ಷ ವನವಾಸ ಒಂದು ವರ್ಷದ ಅಜ್ಞಾತವಾಸಕ್ಕೆ ಹೊರಡುವಂತಾಗಿತ್ತು. ಆ ಸಮಯದಲ್ಲಿ ತನ್ನ ಮಕ್ಕಳನ್ನು ನೋಡಿದ್ದ ಕುಂತಿ ಸರಿ ಸುಮಾರು ಹದಿನಾಲ್ಕು ವರ್ಷಗಳ ಬಳಿಕ ಈಗ ನೋಡುತ್ತಿದ್ದಾಳೆ. ಈ ಮಧ್ಯೆ ಮೊಮ್ಮಗ ಅಭಿಮನ್ಯುವಿಗೆ ಮದುವೆಯಾಗಿ, ಉತ್ತರೆ ಗರ್ಭಿಣಿಯಾಗಿ, ಆತ ರಣಾಂಗಣದಲ್ಲಿ ಶವವಾಗಿ ಮಲಗಿಯಾಗಿ ಹೋಗಿದೆ. ತೆರೆದ ಕಣ್ಣಲ್ಲಿ ಸರೋವರದಂತೆ ನೀರು ತುಂಬಿಕೊಂಡು ಮೌನ ಸಂಭಾಷಣೆಯಲ್ಲಿ ಹಲವು ವಿಚಾರಗಳು ಪ್ರವಹಿಸಿ ಹೋದವು. ಕಣ್ಣುಜ್ಜಿಕೊಂಡು ದೃಷ್ಟಿಯನ್ನು ತಿಳಿಗೊಳಿಸಿ ಮಕ್ಕಳನ್ನೊಮ್ಮೆ ನೋಡಿದರೆ ಮೈ ಮೇಲೆಲ್ಲಾ ಗಾಯಗಳು, ಹೆಪ್ಪುಗಟ್ಟಿದ ರಕ್ತದ ಕಲೆಗಳು – ನೋಡಿ ಮನಸ್ಸಿಗೆ ಯಾತನೆಯಾದರೂ ಮೌನದಲ್ಲಿದ್ದುಕೊಂಡು ಹರಸಿ ಆಶೀರ್ವದಿಸಿದಳು ಮಾತೆ ಕುಂತೀದೇವಿ.

ಶ್ರೀಕೃಷ್ಣ – ಧರ್ಮರಾಯ ಧೃತರಾಷ್ಟ್ರರನ್ನು ಮುಂದಿರಿಸಿಕೊಂಡು ಮಹಾಭಾರತ ಧರ್ಮಯುದ್ಧದಲ್ಲಿ ಮಡಿದ ವೀರರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಸಲು ಸೂಚಿಸಿದನು. ಅಂತೆಯೆ ಪಾಂಡವರು ಪ್ರಜಾ ಪರಿವಾರ ಸಹಿತರಾಗಿ ಪೂರ್ಣ ಸಿದ್ಧತೆಗಳನ್ನು ಮಾಡಿ ಸಾಮೂಹಿಕ ಅಗ್ನಿ ಸಂಸ್ಕಾರಕ್ಕೆ ಬೇಕು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿದರು. ಕುರುಜಾಂಗಣ ನಿನ್ನೆಯವರೆಗೆ ರಣಕ್ಷೇತ್ರವಾಗಿದ್ದರೆ, ಇಂದು ಜಗತ್ತಿನ ಬಹು ದೊಡ್ಡ ಸ್ಮಶಾನವಾಗಿದೆ. ಚರಿತ್ರೆಯಲ್ಲಿ ಇಷ್ಟು ಬೃಹತ್ ಪ್ರಮಾಣದ ಅಂತ್ಯಸಂಸ್ಕಾರ ಏಕತಾಣದಲ್ಲಿ ಏಕಕಾಲದಲ್ಲಿ ಆಗಿರಲಿಕ್ಕಿಲ್ಲ.

ಪಾಂಡವರು ಮಹಾರಾಜ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು, ಪ್ರಜಾಪರಿವಾರ ಸಮೇತರಾಗಿ ಗಂಗಾ ತೀರಕ್ಕೆ ಬಂದರು. ಪಾವನವಾಹಿನಿಯಲ್ಲಿ ಪ್ರಜಾಪರಿವಾರ ಮಕ್ಕಳು, ಸ್ತ್ರೀಯರು, ವೃದ್ಧರು ಹೀಗೆ ನೆರೆದವರೆಲ್ಲರೂ ಮಿಂದು ಶುಚಿರ್ಭೂತರಾದರು. ಸತ್ತವರ ಬಂಧುಗಳು ಅವರವರಿಗೆ ಬೇಕಾದವರ ಹೆಸರು ಹೇಳಿ ಜಲತರ್ಪಣ ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ. ಆಗ ಶ್ರೀ ಕೃಷ್ಣನು ಧರ್ಮರಾಯನನ್ನು ಕರೆದು “ಧರ್ಮರಾಯಾ! ನೀನು ಮೊದಲಾಗಿ ಕರ್ಣನಿಗೆ ನಿನ್ನ ಕೈಯಾರೆ ತರ್ಪಣ ಕೊಡು” ಎಂದನು.

ಧರ್ಮಜನಿಗೆ ಪರಮಾಶ್ಚರ್ಯ, ಕರ್ಣನಿಗೋ? ಯಾಕೆ ಎಂಬಂತೆ ಪ್ರಶ್ನೆಗಳ ಸುರಿಮಳೆ ಮನಸ್ಸನ್ನು ಅಪ್ಪಳಿಸುತ್ತಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page