24.5 C
Udupi
Monday, February 9, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 430

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೩೦ ಮಹಾಭಾರತ

ಶಿಬಿರದಲ್ಲಿ ಕೌರವ ಪಕ್ಷದ ಅಳಿದುಳಿದ ಪ್ರಮುಖರು ಜೊತೆಯಾಗಿದ್ದಾರೆ. ಕೆಲವೇ ಕೆಲವು ಮಂದಿ ಅಗ್ರಮಾನ್ಯರಷ್ಟೆ ಈಗ ಜೀವಸಹಿತ ಬದುಕಿದ್ದಾರೆ. ದುರ್ಯೋಧನ, ಶಕುನಿ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮಾದಿಗಳು ಜೊತೆಯಾಗಿ ದುರ್ಯೋಧನನನ್ನು ಸಂತೈಸಿ ಸಮಾಧಾನಿಸಿದರು. ಶಾಸ್ತ್ರವೇತ್ತರೂ, ಗುರುಗಳೂ ಆಗಿರುವ ಕೃಪಾಚಾರ್ಯರು ಸಮಗ್ರವಾಗಿ ಅವಲೋಕಿಸಿ “ವತ್ಸಾ ದುರ್ಯೋಧನಾ! ಕೇವಲ ಹದಿನೇಳು ದಿನಗಳ ಅಂತರದಲ್ಲಿ ಹರಿದು ಹೋದ ರಕ್ತ, ಹಾರಿ ಹೋದ ಪ್ರಾಣಪಕ್ಷಿ ಅಗಣಿತ. ಪ್ರಸಕ್ತ ಸ್ಥಿತಿಯಲ್ಲಿ ಒಂದಂತೂ ಸುಸ್ಪಷ್ಟ, ಏನೆಂದರೆ ಈ ತನಕ ಪಾಂಡವರಿಗೆ ಸೋಲಾಗಲಿಲ್ಲ, ನಮ್ಮ ಪಕ್ಷ ಗೆಲುವನ್ನು ಕಂಡಿಲ್ಲ. ಮುಂದೆಯೂ ಅದು ಹಾಗೆಯೆ ಸಾಗಿ ಉಳಿದಿರುವ ನಮ್ಮ ಅತ್ಯಲ್ಪ ಸೇನೆಯೂ ನಾಶಗೊಳ್ಳಲಿದೆ. ಹೀಗಿರಲು ವ್ಯರ್ಥ ಹಠ ಸಾಧನೆ ಮಾಡುವುದನ್ನು ತೊರೆದು ಧರ್ಮಪಾಲಕನಾದ ಧರ್ಮರಾಯನ ಜೊತೆ ಸಂಧಿ ಮಾಡಿಕೊಳ್ಳುವುದು ಉತ್ತಮ. ಈ ವಿಚಾರವನ್ನು ನನ್ನ ಪ್ರಾಣಭಯದಿಂದ ಹೇಳುತ್ತಿಲ್ಲ. ವೃದ್ದ ಮಹಾರಾಜ ಧೃತರಾಷ್ಟ್ರ, ರಾಣಿ ಗಾಂಧಾರಿಯರನ್ನೊಮ್ಮೆ ನೆನೆಸಿಕೋ. ಅಳಿದವರು ಮತ್ತೆ ಬದುಕಲಾರರು ನಿಜ. ಆದರೆ ಹೋರಾಡುತ್ತಾ ಹೇಗೊ ಬದುಕುಳಿದ ಸೇನೆಯ ಸೈನಿಕರಾದರೂ ಸುಖಾ ಸುಮ್ಮನೆ ಸಾಯುವ ಬದಲು, ತಮ್ಮ ನಾಡಿನಲ್ಲಿ ಜೀವಿಸುವಂತಾಗಲಿ. ಕೋಪದ ಕೈಗೆ ಬುದ್ದಿ ಕೊಟ್ಟರೆ ಸರ್ವನಾಶ ಆಗಿ ಹೋದೀತು ಹೊರತು ಅನ್ಯ ಏನನ್ನೂ ಸಾಧಿಸಲಾರೆ. ಯೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದುದು ನಿ‌ನಗೆ ಬಿಟ್ಟ ವಿಚಾರ” ಎಂದರು.

ಆಗ ದುರ್ಯೋಧನ “ಗುರುಗಳೇ, ನೀವು ಹೇಳುವ ವಿಚಾರ ಸತ್ಯ ಆಗಿರಬಹುದು. ಆದರೆ ನನಗದು ಅಪಥ್ಯವಾಗಿದೆ. ಕಾರಣ ಇಲ್ಲಿಯವರೆ ಈ ದುರ್ಯೋಧನನಿಗಾಗಿ ಅದೆಷ್ಟು ವೀರಾಧಿವೀರರು ಪ್ರಾಣ ಸಮರ್ಪಣೆ ಮಾಡಿದ್ದಾರೆ. ಅವರೆಲ್ಲರ ಬಲಿದಾನ ಪಡೆದ ನಾನು ಒಂದೋ ಗೆದ್ದು ಅವರಿಗೆ ಮನಶಾಂತಿ ಒದಗಿಸಬೇಕು. ಇಲ್ಲಾ ಕೊನೆ ಕ್ಷಣದವರೆಗೆ ಹೋರಾಡಿ ನಾನೂ ವೀರಸ್ವರ್ಗವನ್ನೇರಬೇಕು. ಇದೆರಡು ಆಯ್ಕೆಗಳು ನನಗಿವೆ ಹೊರತು ಬೇರ್ಯಾವ ಚಿಂತನೆಯೂ ನನಗಿಲ್ಲ. ಸೇನೆಯ ಸರ್ವನಾಶ ಆಗಲೇನಿದೆ ಇನ್ನು. ಈಗಾಗಲೆ ಸರ್ವತ್ರ ನಾಶ ಆಗಿಯಾಗಿದೆ. ಹಾಗೂ ಯಾರಿಗಾದರೂ ಇನ್ನು ಹೋರಾಡುವುದು ವ್ಯರ್ಥ, ಸುಮ್ಮನೆ ಸಾಯಬೇಕು ಎಂಬಿತ್ಯಾದಿ ಭಾವನೆಗಳಿದ್ದರೆ ಈ ಕೌರವ ನಿಮಗೆ ಮುಕ್ತ ಅವಕಾಶ ನೀಡುತ್ತಿದ್ದಾನೆ. ಯಾರೂ ಅಂಜದೆ ಅಳುಕದೆ ರಣರಂಗ ತೊರೆದು ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿ. ನಾನೊಬ್ಬನೆ ಆ ಪಾಂಡು ಪುತ್ರರ ಜೊತೆ ಕಾದಾಡುವೆ. ಆಗಲಿರುವುದು ಆಗಿ ಹೋಗಲಿ” ಎಂದನು.

ಆಗ ಕೃಪಾಚಾರ್ಯರು “ಹೇ ದುರ್ಯೋಧನಾ! ಇದೇ ನಿನ್ನ ನಿರ್ಧಾರವಾದರೆ ನಮಗೇನೂ ಅಭ್ಯಂತರವಿಲ್ಲ. ಬರಿದೆ ಸಾಯುವುದು, ಸ್ವ ಹತ್ಯೆ ಮಾಡಿಕೊಳ್ಳುವುದು ಎರಡೂ ಸಮಾನ ಆಗಲಿದೆ. ನಿನ್ನ ಆದೇಶ ಯುದ್ದದ ಮುಂದುವರಿಕೆಯನ್ನು ಸೂಚಿಸುವುದಾದರೆ, ನಮ್ಮ ಜೊತೆಯಿರುವ ಮಾದ್ರಾಧೀಶ ಸಮರ್ಥ ಸೇನಾಧ್ಯಕ್ಷ. ಅನುಭವ, ಜ್ಞಾನ, ಕೌಶಲ್ಯ ಇದೆಲ್ಲದರಲ್ಲಿಯೂ ಉನ್ನತ ಆಯ್ಕೆಯಾಗಿದ್ದಾನೆ. ಆತನಿಗೆ ಬೆಂಗಾವಲಿಗರಾಗಿ ನಾವೆಲ್ಲವರೂ ಇರುತ್ತೇವೆ” ಎಂದನು.

ಆಗ ದುರ್ಯೋಧನ ಪ್ರಮುಖರ ಅನುಮೋದನೆಗಾಗಿ ಕಣ್ಣು ತಿರುಗಿಸಿದಾಗ, ಎಲ್ಲರೂ ‘ಆಗಬಹುದು’ ಎಂಬಂತೆ ತಲೆ ಆಡಿಸಿದರು.

ಶಲ್ಯನಿಗೂ ಈ ನಿರ್ಧಾರದಿಂದ ಬಹು ತೋಷವೇ ಆಯಿತು. ಕಾರಣ ಯುದ್ದದಲ್ಲಿ ಗೆದ್ದು ಬರುತ್ತೇನೆಂದಲ್ಲ. ಇಷ್ಟು ಸಾಧನೆ ಮಾಡಿ ಬದುಕಿ ಬೆಳೆಸಿದ ಸತ್ಕೀರ್ತಿಗೆ ಸಾರ್ಥಕತೆ ಸಿಗಬೇಕು. ಹಾಗಾಗಿ ಮರ್ಯಾದೆಯಿಂದ ಹೋರಾಡಿ ಮರಣವನ್ನು ಹೊಂದಬೇಕು. ಹೀಗೆ ತನ್ನೊಳಗೆ ತಾನು ತರ್ಕಿಸಿಕೊಂಡನು.

ಬ್ರಾಹ್ಮೀ ಮುಹೂರ್ತದಲ್ಲಿ ಶಲ್ಯನು ಶುಚಿರ್ಭೂತನಾಗಿ, ನೈಮಿತ್ತಿಕ ಕರ್ಮಗಳನ್ನು ಪೂರೈಸಿ ಸಿದ್ಧನಾಗಿದ್ದಾನೆ. ವಿಧಿ ವಿಧಾನಗಳಿಂದ ಶಾಂತಿ, ಪುಣ್ಯಾಹ, ಪುಷ್ಟಿ ತುಷ್ಟಿ ವೃದ್ಧ್ಯರ್ಥ ಯಜ್ಞಾದಿಗಳು ನಡೆದು ದೇವತೆಗಳಿಗೆ ಬಹುಮೂಲ್ಯ ಹವಿಸ್ಸನ್ನು ಸಮರ್ಪಿಸಿ ಶಕ್ತಿ ವರ್ಧನೆಗಾಗಿ, ದೋಷ ನಿವಾರಣೆಗಾಗಿ ಪ್ರಾರ್ಥಿಸಿದರು. ಹೇರಳವಾದ ದಾನ ಧರ್ಮ ದಕ್ಷಿಣೆಗಳನ್ನಿತ್ತು ಆಶೀರ್ವಾದ ಪಡೆದನು. ಆ ಬಳಿಕ ಇಂದಿನ ದಿನದ ಯುದ್ದಕ್ಕೆ ಯಾವ ವ್ಯೂಹ, ಯೋಜನೆ ಇತ್ಯಾದಿ ವಿಚಾರದಲ್ಲಿ ಸಮಾಲೋಚನೆ ನಡೆದು ಸರ್ವತೋಭದ್ರ ವ್ಯೂಹವಾಗಿ ಯುದ್ದ ಆರಂಭಿಸುವ ನಿರ್ಣಯ ಕೈಗೊಳ್ಳಲಾಯಿತು. ಕೃಪಾಚಾರ್ಯರು ವ್ಯೂಹದ ಬಲಭಾಗದಲ್ಲೂ, ಎಡದಲ್ಲಿ ಕೃತವರ್ಮನೂ, ಹಿಂಭಾಗದಲ್ಲಿ ಅಶ್ವತ್ಥಾಮನೂ, ವ್ಯೂಹ ಮಧ್ಯದಲ್ಲಿ ಕೌರವ ಮತ್ತವನ ಕೆಲ ಅಳಿದುಳಿದ ಕೆಲ ಸಹೋದರರು ಸ್ಥಿತರಾಗುವುದೆಂದು ಯುದ್ಧದ ರೂಪರೇಷೆ ಚರ್ಚಿಸಲ್ಪಟ್ಟಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page