ಡಿಕೆಶಿ ವಿರುದ್ಧ ಕನಕಪುರ ಶ್ರೀನಿವಾಸ್ ಸ್ಫೋಟಕ ಆರೋಪಗಳು

ಬೆಂಗಳೂರು: ಕಾಟನ್‌ಪೇಟೆ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ವಿತರಕ ಕನಕಪುರ ಶ್ರೀನಿವಾಸ್ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಡಿಕೆಶಿ ಅವರ ಹಳೆಯ ದಿನಗಳನ್ನು ಪ್ರಸ್ತಾಪಿಸಿದ ಅವರು, ‘ಒಮ್ಮೆ ಜಾವಾ ಬೈಕಿಗೆ ಪೆಟ್ರೋಲ್ ಹಾಕಿಸಲೂ ಹಣ ಇರಲಿಲ್ಲ, ಆ ಸಂದರ್ಭದಲ್ಲಿ ನಾನೇ ಸಹಾಯ ಮಾಡಿದ್ದೆ’ ಎಂದಿದ್ದಾರೆ.
‘ಕನಕಪುರ ಬಂಡೆ’ ಬಿರುದಿನ ಅಸಲಿ ಹಕ್ಕು ನನಗೇ ಸೇರಿದೆ ಎಂದು ಹೇಳಿಕೊಂಡಿರುವ ಅವರು ‘ನಾನು 55 ವರ್ಷಗಳಿಂದ ಸಾಹುಕಾರನಾಗಿದ್ದೇನೆ. ಕನಕಪುರದಲ್ಲಿ ಮೊದಲ ‘ಬಂಡೆ’ ನಾನೇ. ಡಿ.ಕೆ. ಶಿವಕುಮಾರ್ ಎರಡನೇ ಬಂಡೆ. ನನ್ನ ಹೆಸರು ಪ್ರಚಲಿತವಾದ ನಂತರ, ಅವರಿಗೆ ಹಣ ಮತ್ತು ಅಧಿಕಾರ ಬಂದ ಮೇಲೆ ನನ್ನ ಹೆಸರನ್ನು ಅವರು ಬಳಸಿಕೊಂಡು ಬಂಡೆಯಾಗಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ, ಡಿಕೆಶಿ ಕುಟುಂಬದ ಸಿನಿಮಾ ಹಿನ್ನೆಲೆ ಹಾಗೂ ಅವರ ತಂದೆಯ ಕುರಿತು ವಿವಾದಾತ್ಮಕ ಆರೋಪಗಳನ್ನೂ ಮಾಡಿದ್ದಾರೆ.
ಡಿಸಿಎಂ ಅವರು ಕಲಾವಿದರ ಕುರಿತ ‘ನಟ್ ಬೋಲ್ಟ್ ಟೈಟ್ ಮಾಡುತ್ತೇನೆ’ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶ್ರೀನಿವಾಸ್, ಫಿಲ್ಮ್ ಚೇಂಬರ್ ಮೌನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ, ಡಿಕೆಶಿ ಅವರ ‘ಮೆರವಣಿಗೆ’ ಸಿನಿಮಾ ಸಂಬಂಧಿತ ಸಾಲದ ವಿಚಾರವನ್ನೂ ಪ್ರಸ್ತಾಪಿಸಿ ಲೇವಡಿ ಮಾಡಿದ್ದಾರೆ.



















