
ಕೊಯಮತ್ತೂರು: ಈ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ವಹಿಸಲಾಗಿದ್ದ ಆರು ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಯಿಂದ ಅವರು ಅಚಾನಕ್ ಹಿಂದೆ ಸರಿದಿದ್ದಾರೆ. ಈ ಪಟ್ಟಿಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದ್ದ ಸಿಂಗನಲ್ಲೂರು ಕ್ಷೇತ್ರವೂ ಸೇರಿರುವುದು ವಿಶೇಷವಾಗಿದೆ.
ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅಣ್ಣಾಮಲೈ, ‘ನನ್ನ ತಂದೆಗೆ ಆರೋಗ್ಯ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಅವರನ್ನು ನೋಡಿಕೊಳ್ಳಲು ಕೊಯಮತ್ತೂರಿನಲ್ಲಿಯೇ ಉಳಿಯಬೇಕಾಗಿದೆ. ಕುಟುಂಬದ ಜವಾಬ್ದಾರಿಯೇ ನನ್ನ ಮೊದಲ ಆದ್ಯತೆ. ಈ ಕಾರಣದಿಂದಾಗಿ ಚುನಾವಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅಥವಾ ಹೆಚ್ಚಿನ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ನಾನು ರಾಜ್ಯಾಧ್ಯಕ್ಷ ನೈನಾರ್ ನಾಗೇಂತಿರನ್ ಅವರಿಗೆ ಈಗಾಗಲೇ ತಿಳಿಸಿದ್ದೇನೆ. ಪಕ್ಷವು ಸಂಬಂಧಿಸಿದ ಕ್ಷೇತ್ರಗಳಿಗೆ ಹೊಸ ಉಸ್ತುವಾರಿಗಳನ್ನು ನೇಮಿಸುವ ನಿರ್ಧಾರ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.



















