
ಮಂಗಳೂರು: ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿ, ಕಂಪನಿ, ಕಚೇರಿ, ಹೋಟೆಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಹೆಸರುಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸಬೇಕು ಎಂದು ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ನೀಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಷರತ್ತು ವಿಧಿಸಬೇಕು ಎಂದು ಹೇಳಿದ ಅವರು ಈ ನಿಯಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಯಮಿತ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸೂಚನಾ ಫಲಕಗಳಲ್ಲಿ ಕನ್ನಡದಲ್ಲಿಯೂ ಮಾಹಿತಿ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗುವುದು. ಬ್ಯಾಂಕುಗಳಲ್ಲಿ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿಯೂ ಒದಗಿಸುವ ಕುರಿತು ಬ್ಯಾಂಕುಗಳ ಸಮಿತಿ ಸಭೆಯಲ್ಲಿ ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆಂಗ್ಲ ಮಾಧ್ಯಮ ಶಾಲೆಗಳು ಮತ್ತು ಕಾಲೇಜುಗಳ ನಾಮಫಲಕಗಳಲ್ಲಿ ಕನ್ನಡದಲ್ಲಿಯೂ ಹೆಸರು ಇರಬೇಕು. ಖಾಸಗಿ ಬಸ್ಗಳ ಬೋರ್ಡುಗಳಲ್ಲಿ ಕನ್ನಡದಲ್ಲಿ ಊರಿನ ಹೆಸರು ಬರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಗರದ ಮಾಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿ ಮಹಾನಗರಪಾಲಿಕೆಗೆ ಅಗತ್ಯ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.



















