ಭಾಗ – 426
ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೨೬ ಮಹಾಭಾರತ
ಶಲ್ಯ ಭೂಪತಿಯತ್ತ ತಿರುಗಿ “ಮಾದ್ರಾಧೀಶಾ! ಸಾರಥಿಯಾಗಿ ನಿನಗೆ ಕರ್ತವ್ಯವಾದರೂ, ನಿನ್ನಿಂದ ಈ ಸಮಯ ಮಹದುಪಕಾರವೆಂದು ಬಯಸಿ ಕೇಳಿಕೊಳ್ಳುತ್ತಿದ್ದೇನೆ. ಮಹಾ ಸಾರಥಿಯಾದ ನೀನು ನಮ್ಮ ರಥವನ್ನು ಸುಸ್ಥಿತಿಗೆ ತಂದು ನಿಲ್ಲಿಸಲು ಸಮರ್ಥನೆ ಆಗಿರುವೆ. ಒಂದೊಮ್ಮೆಗೆ ಹಾಗೆ ಮಾಡಿದೆ ಎಂದಾದರೆ ನಾನು ಅರ್ಜುನನ್ನು ಪರಾಜಿತನನ್ನಾಗಿಸುವೆ” ಎಂದು ಬೇಡಿಕೊಂಡನು.
ಆಗ ಮಾದ್ರೇಶ ಶಲ್ಯನು ತಾತ್ಸಾರ ಭಾವ ತಳೆದನು. ಕರ್ಣನ ಅಸಹಾಯಕ ಸ್ಥಿತಿಯಲ್ಲೂ ಈ ರೀತಿ ವ್ಯವಹರಿಸಿದ ಎಂಬಲ್ಲಿ ಆತನ ಮನಸ್ಥಿತಿಯೂ ಕಾರಣ. ಪಾಂಡವ ಪಕ್ಷದ ಓಲೆ ಮನ್ನಿಸಿ ಬಂದಿದ್ದ ಶಲ್ಯ, ಮೋಸದ ಬಲೆಗೆ ಸಿಲುಕಿ ಕೌರವ ಸೇನೆಯ ಭಾಗವಾಗಿದ್ದಾನೆ. ಆ ಬಳಿಕ ಉಪಪ್ಲಾವ್ಯದಲ್ಲಿ ಧರ್ಮರಾಯನಿಗಿತ್ತ ವಚನದಂತೆ ಪಕ್ಷ ಕೌರವನದ್ದಾದರೂ, ಪಾಂಡವ ಪಕ್ಷದ ಶ್ರೇಯೋಭಿಲಾಷಿ ಆಗಿದ್ದಾನೆ ಎನ್ನಬಹುದು. ಇನ್ನೂ ಸೂಕ್ಷ್ಮವಾಗಿ ವಿವೇಚಿಸುವುದಾದರೆ ಶಲ್ಯ ಶ್ರುತಾಯನನ ಮಗ. ಸಂಹ್ರಾದನೆಂಬ ರಾಕ್ಷಸನ ವಂಶಜ. ಸಂಹ್ರಾದ ಹಿರಣ್ಯಕಶ್ಯಪ ಕಯಾದುವಿನ ಮಗ, ಹರಿಭಕ್ತ ಪ್ರಹ್ಲಾದನ ತಮ್ಮ. ಕೃತಿಯೆಂಬವಳನ್ನು ವರಿಸಿ ಪಂಚಜನನೆಂಬ ಪುತ್ರನನ್ನು ಪಡೆದಿದ್ದನು. ಅಲ್ಲಿಂದ ಬೆಳೆದು ಬಂದ ವಂಶಜದವನು ಈ ಶಲ್ಯ. ಹಾಗೆಂದು ಅಸುರ ಕುಲವಾದರೂ ಪ್ರಹ್ಲಾದ, ಬಲಿ ಚಕ್ರವರ್ತಿಯಂತಹ ಸದ್ಗುಣಶೀಲರೂ ಈ ವಂಶದವರಾಗಿದ್ದಾರೆ.
ರಕ್ಕಸನ ಪ್ರಪೋತನಾದ ಶಲ್ಯ ಈ ಹೊತ್ತು ರಾಕ್ಷಸರಂತೆ ಕಟು ಹೃದಯದವನು ಆಗಿದ್ದಾನೆ. ಕರ್ಣ ಹಾಗು ಶಲ್ಯ ಇಬ್ಬರೂ ಅಸುರ ಹಿನ್ನೆಲೆ ಹೊಂದಿದವರು ಆಗಿರುವುದು ಕಾಕತಾಳೀಯ.
ಕರ್ಣನ ಅಪೇಕ್ಷೆ ಆಲಿಸಿ “ಹೇ ಮೂರ್ಖ ಕರ್ಣಾ! ಯಾವಾಗ ನೀನು ನನ್ನ ಮಾತು ಮೀರಿ ಸರ್ಪಾಸ್ತ್ರವನ್ನು ನಿನ್ನಿಚ್ಚೆಯಂತೆ ಪ್ರಯೋಗಿಸಿದೆಯೋ, ಆ ಕ್ಷಣದಿಂದ ನಾನು ನಿಷ್ಕ್ರಿಯನಾಗಿ ಕುಳಿತಿದ್ದೇನೆ. ಅಲ್ಲಿಂದ ನಿನ್ನ ರಥದಲ್ಲಿ ನಾನು ಇದ್ದೇನಾದರೂ ನಿನ್ನ ಶ್ರೇಯಸ್ಸನ್ನು ಬಯಸಿ ದುಡಿಯುವ ಸಾರಥಿಯಾಗಿ ನಾನು ಉಳಿದಿಲ್ಲ, ಸಾರಥ್ಯವನ್ನೂ ಮಾಡುತ್ತಿಲ್ಲ. ಹಾಗಾಗಿ ನಿನ್ನ ರಥ ಹೂತು ಹೋಗುವಂತಾಗಿದೆ. ಈಗ ನನಗೆ ನಿನ್ನ ಅಪೇಕ್ಷೆ ಪೂರೈಸಬೇಕಾದ ಬಾಧ್ಯತೆ ಉಳಿದಿಲ್ಲ. ಏನಿದ್ದರೂ ನೀನು ಅರ್ಜುನನ ಕೈಯಲ್ಲಿ ಸಾಯಲಿರುವವ ಎಂಬುವುದು ಶತಸಿದ್ಧ ಸತ್ಯ. ಯಾಕೆಂದರೆ ಕೃಷ್ಣಾರ್ಜುನರನ್ನು ಕೆಣಕಿ ನೀನು ಉಳಿಯಲಾರೆ. ಸಾಯಲಿರುವ ನಿನ್ನನ್ನು ಯಾರ ಸಹಾಯವೂ ಉಳಿಸದು ಎಂಬುವುದು ಅಷ್ಟೇ ಸತ್ಯ.” ಎಂದು ತೀಕ್ಷ್ಣವಾಗಿ ನುಡಿದನು.
ಈ ರೀತಿ ಶಲ್ಯನೂ ಧಿಕ್ಕರಿಸಿದಾಗ ಕರ್ಣ ತನ್ನ ಜೀವನವನ್ನು ಅವಲೋಕಿಸತೊಡಗಿದನು. ಕೃಷ್ಣನು ತನ್ನ ಬಗ್ಗೆ ನುಡಿದ ಮಾತುಗಳನ್ನೂ ಸ್ಮರಿಸಿಕೊಂಡನು. ತನಗೂ ಪಾರ್ಥನಿಗೂ ವ್ಯತ್ಯಾಸವೇನೆಂದು ತರ್ಕಿಸತೊಡಗಿದನು. ಅರ್ಜುನ ಆತನ ಅಣ್ಣ ಧರ್ಮಜನನ್ನು ಅನುಸರಿಸಿ ಯಾವುದು ಧರ್ಮವೋ ಅದು ಎಷ್ಟೇ ಕಷ್ಟಕರವಾಗಿದ್ದರೂ ಅದನ್ನಷ್ಟೆ ಪಾಲಿಸಿ ಬದುಕಿದವನು. ಅಗತ್ಯ ಬಿದ್ದ ಸಮಯ ಪುರುಷನಾದರೂ ಸ್ತ್ರೀಯಂತೆ ವೇಷಭೂಷಣ ಧರಿಸಿ, ಬ್ರಹನ್ನಳೆಯಾಗಿ ಅಜ್ಞಾತವಾಸವನ್ನೂ ಪೂರೈಸಿ ಬಂದವನಾಗಿದ್ದಾನೆ. ಆದರೆ ತಾನು ಹಾಗಲ್ಲ, ಬದುಕಿನಲ್ಲಿ ಆಚರಿಸಿದ ಧರ್ಮ ಕೇವಲ ಸ್ವಾರ್ಥ ಪರವಾಗಿತ್ತು. ತನಗೆ ಆಶ್ರಯ ಸಮ್ಮಾನ ನೀಡಿದ ಎಂಬ ಏಕೈಕ ಋಣವನ್ನು ಪರಮವೆಂದು ಭಾವಿಸಿ, ಕೌರವನಿಗೆ ಯಾವುದು ಹಿತವೋ ಅದನ್ನು ತನ್ನ ಧರ್ಮವಾಗಿ ಆಚರಿಸಿದೆ. ದ್ರೌಪದಿಯ ಸೆರಗಿಗೆ ಕೈಯಿಕ್ಕಿ ಸೆಳೆದಾಗಲೂ ಕೇಕೆ ಹಾಕಿ ನಗುವವರಲ್ಲಿ ಒಬ್ಬನಾಗಿ ನಿಜ ಧರ್ಮ ಯಾವುದೋ ಅದನ್ನು ಮರೆತು ಬಿಟ್ಟಿದ್ದೆ. ಧರ್ಮವನ್ನು ಪಾಲಿಸಿದ ಪಾಂಡವರನ್ನು ಇಂದು ಧರ್ಮವೇ ರಕ್ಷಿಸುತ್ತಿದೆ. ಅಧರ್ಮ ಪಥದಲ್ಲಿ ಕ್ರಮಿಸಿದ ನನ್ನ ಬದುಕು ಹೀನಾಯವಾಗಿ ಹಿಂಸೆಗೊಳಗಾಗುತ್ತಿರುವುದು ಸಹಜವೇ ಆಗಿದೆ. ಧರ್ಮ ಮುನಿದರೆ ಯಾರೂ ಬದುಕುಳಿಯಲಾರರು. ಹಾಗಾಗಿ ಇನ್ನು ಯೋಚಿಸಿ ಫಲವಿಲ್ಲ. ನನ್ನ ಕರ್ಮವೇನಿದೆಯೋ ಅದನ್ನು ಮಾಡಿ ಪೂರೈಸುವೆ. ಏನು ಆಗಬೇಕೋ ಅದು ಆಗಿಯೇ ಆಗುತ್ತದೆ. ನನಗದು ಶಿರೋಧಾರ್ಯ. ಹೀಗೆಂದು ವಿವೇಚಿಸಿ ರಥ ಚಕ್ರವನ್ನೆತ್ತಲು ತಾನೇ ರಥದಿಂದಿಳಿದನು. ತನ್ನ ಶರೀರದ ಪೂರ್ಣ ಬಲ ಪ್ರಯೋಗಿಸಿ ರಥಚಕ್ರವನ್ನು ಮೇಲಕ್ಕೆ ಎತ್ತುವ ಹರಸಾಹಸ ಮಾಡುತ್ತಿದ್ದಾನೆ. ಮೃಗಗಳೇ ಆಗಿದ್ದರೂ ಕುದುರೆಗಳು ಮಾನವನ ಪ್ರಯತ್ನಕ್ಕೆ ಸಹಾಯಿಯಾಗಿ ರಥ ಎಳೆಯುವ ಸಾಹಸ ಮಾಡುತ್ತಿವೆ. ರಥ ಚಕ್ರ ಮಾತ್ರ ರಕ್ತದಿಂದಾದ ಕೆಸರಲ್ಲಿ ಮತ್ತೂ ಹುದುಗುತ್ತಿದೆ ಹೊರತು ಮೇಲೆ ಬರುತ್ತಿಲ್ಲ.
ದ್ವೈರಥ ಯುದ್ದವಾದುದರಿಂದ ಕೌರವ ಸೇನೆಯ ಯಾರೂ ಸಹಾಯಕರಾಗಿ ಬರುವಂತಿಲ್ಲ. ಬದಲಿ ರಥ ಏರುವ ಅವಕಾಶವೂ ಇಲ್ಲ. ಜೀವನದಲ್ಲಿ ನಾವು ತೀರ್ಮಾನಿಸುವ ತೀರ್ಮಾನಗಳು ನಿರ್ಣಾಯಕವಾಗುತ್ತವೆ. ಹಾಕಿಕೊಳ್ಳುವ ನಿರ್ಬಂಧಗಳು ನಮ್ಮನ್ನು ಕಟ್ಟಿ ಹಾಕುತ್ತವೆ. ಹಾಗಾಗಿ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ಬಹಳ ತಾಳ್ಮೆ, ವಿವೇಚನೆ ಬೇಕಾಗುತ್ತದೆ ಎಂಬುವುದಕ್ಕೆ ಕರ್ಣನ ಈ ಸ್ಥಿತಿ ದೃಷ್ಟಾಂತ. ಆತ ದ್ವೈರಥ ಯುದ್ಧದ ನಿರ್ಣಯ, ನಿರ್ಬಂಧ ಕೈಗೊಳ್ಳದೆ ಇರುತ್ತಿದ್ದರೆ ಈಗ ಈ ದುಸ್ಥಿತಿ ಪ್ರಾಪ್ತವಾಗುತ್ತಿರಲಿಲ್ಲ. ಬದಲಿ ರಥವೋ ಇಲ್ಲ ಸಹಾಯಕರೋ ಕರ್ಣನಿಗೆ ಒದಗಿ ಬರುತ್ತಿದ್ದರು.
ಈ ಸಮಯ ಕರ್ಣನ ಶರಾಘಾತದಿಂದ ಮೂರ್ಛಿತನಾಗಿ ರಥಕ್ಕೊರಗಿದ್ದ ಅರ್ಜುನ ಚೈತನ್ಯ ಹೊಂದುತ್ತಾ ಪುನಶ್ಚೇತನಗೊಂಡಿದ್ದಾನೆ. ಎದ್ದು ಕರ್ಣನು ರಥ ಚಕ್ರವನ್ನೆತ್ತಲು ಪ್ರಯಾಸ ಪಡುವುದನ್ನು ನೋಡುತ್ತಿದ್ದಾನೆ. ಕರ್ಣನ ದುಸ್ಥಿತಿ ನೋಡಿ ಕರುಣೆ ಅಂಕುರಿಸಿತು. ತನ್ನ ವೈರಿ ಆಗಿದ್ದರೂ ಕರ್ಣನ ಪ್ರಯತ್ನ ಕಂಡು ಮನ ಕರಗಿತು. ಕೃಷ್ಣನತ್ತ ತಿರುಗಿ ನೋಡಿದರೆ…
ಮುಂದುವರಿಯುವುದು…



















