ಆರೋಪ ಮಾಡಿದ ಆಪ್ತ ಸ್ನೇಹಿತ ಚಕ್ರವರ್ತಿ ಚಂದ್ರಚೂಡ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಯ್ ಅವರ ಆಪ್ತ ಸ್ನೇಹಿತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಗಂಭೀರ ಮತ್ತು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಇದು ಆತ್ಮಹತ್ಯೆಯಲ್ಲ, ಇದರ ಹಿಂದೆ ರಾಜಕೀಯ ಶಕ್ತಿಗಳ ಬೃಹತ್ ಜಾಲ ಹಾಗೂ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಅವರು ಆರೋಪಿಸಿದ್ದಾರೆ.
ಚಂದ್ರಚೂಡ್ ಅವರ ಹೇಳಿಕೆಯಂತೆ, ಸಿ.ಜೆ. ರಾಯ್ ರಾಜಕೀಯ ನಾಯಕರಿಗೆ ಮಹತ್ತರ ಪ್ರಮಾಣದಲ್ಲಿ ಹಣಕಾಸು ನೆರವು ನೀಡುತ್ತಿದ್ದರು. ಹ್ಯಾರಿಸ್, ನಲಪಾಡ್ ಮತ್ತು ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಪ್ರಭಾವಿ ನಾಯಕರೊಂದಿಗೆ ಅವರು ವ್ಯಾಪಾರಿಕ ಸಂಬಂಧ ಹೊಂದಿದ್ದರು. ಹಣಕಾಸಿನ ಸಮಸ್ಯೆಗಳಿಂದ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ರಾಯ್ ಅಲ್ಲ; ಯಾರೋ ಒತ್ತಡಕ್ಕೆ ಅವರು ಬಲಿಯಾಗಿದ್ದಾರೆ ಎಂದು ಶಂಕಿಸಿದ್ದಾರೆ. ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ಗೆ ಅವರು ಹಣಕಾಸು ನೆರವು ನೀಡುತ್ತಿದ್ದುದೇ ಗುರಿಯಾಗಲು ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಇನ್ನೂ, 2016ರಲ್ಲಿ ದೊಡ್ಡಬಳ್ಳಾಪುರದ ರೆಸಾರ್ಟ್ನಲ್ಲಿ ತೆಲುಗಿನ ಮೂವರು ಖ್ಯಾತ ನಟಿಯರ ಮೂಲಕ ರಾಯ್ ಅವರನ್ನು ಹನಿಟ್ರ್ಯಾಪ್ ಮಾಡಲು ಯತ್ನ ನಡೆದಿತ್ತು. ಈ ಘಟನೆ ಸುದ್ದಿಯಾಗಿದ್ದರೂ, ರಾಯ್ ಈ ಕುರಿತು ಯಾವುದೇ ದೂರು ನೀಡಿರಲಿಲ್ಲ ಎಂದು ಚಂದ್ರಚೂಡ್ ತಿಳಿಸಿದ್ದಾರೆ.
ಐಟಿ ಅಧಿಕಾರಿಗಳ ನಿರಂತರ ಒತ್ತಡದಿಂದ ಬೇಸತ್ತು ರಾಯ್ ದೇಶ ತೊರೆಯುವ ಹಾಗೂ ವಿದೇಶಿ ಪೌರತ್ವ ಪಡೆಯುವ ಚಿಂತನೆಯಲ್ಲಿದ್ದರು ಎಂದು ಹೇಳಿದ ಅವರು, ಕಾಂಗ್ರೆಸ್ಗೆ ಹಣಕಾಸು ನೆರವು ನೀಡುವವರನ್ನು ಗುರಿಯಾಗಿಸಿ ದಾಳಿ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು.
ತನಿಖೆಯ ಕುರಿತು ಮಾತನಾಡಿದ ಚಂದ್ರಚೂಡ್, ಸಿಐಡಿ ತನಿಖೆಯಿಂದ ಸೀಮಿತ ಮಾಹಿತಿ ಮಾತ್ರ ಸಿಗಬಹುದು. ಸಿಬಿಐ ತನಿಖೆಯಲ್ಲಿಯೂ ಪ್ರಭಾವಿಗಳ ಹಿಡಿತವಿದ್ದು, ಇದು ಕೇಂದ್ರ ಸರ್ಕಾರದ ವ್ಯವಸ್ಥಿತ ಯತ್ನ ಎಂದು ಕಿಡಿಕಾರಿದ್ದಾರೆ.



















