
ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜ.31ರಂದು ನಡೆದ ಮನರೇಗಾ ಬಚಾವೋ ಸಂಗ್ರಾಮ – ಗಾಂಧಿ ನಡಿಗೆ ಪಾದಯಾತ್ರೆಯಲ್ಲಿ ಮಾತನಾಡಿದ ಗ್ರಾಮೀಣ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಮನರೇಗಾ ಯೋಜನೆ ಸಮಾಜದ ಕಟ್ಟಕಡೆಯ ವರ್ಗದ ಜನರ ಏಳಿಗೆಯ ಉದ್ದೇಶಕ್ಕಾಗಿ ರೂಪಿತವಾಗಿದ್ದು, ಅದರ ಹೆಸರು ಹಾಗೂ ಮೂಲ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಲು ಹೊರಟಿರುವುದು ಖಂಡನೀಯ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಬಡವರಿಗೆ ಅನ್ಯಾಯವಾದಾಗ ಕಾಂಗ್ರೆಸ್ ಮೌನವಾಗಿರುವುದಿಲ್ಲ. ಜನಪರ ಯೋಜನೆಯಾದ ಮನರೇಗಾ ಹೆಸರನ್ನು ರಾಜಕೀಯ ಉದ್ದೇಶಕ್ಕಾಗಿ ಬದಲಾಯಿಸುವುದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶೇಖರ್ ಮಡಿವಾಳ್, ಗಾಂಧಿ ಹೆಸರನ್ನು ಅಳಿಸಿಹಾಕುವ ಪ್ರಯತ್ನ ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಬಡವರ ಏಳಿಗೆಗಾಗಿ ಜಾರಿಗೆ ತಂದ ಯೋಜನೆಯ ಹೆಸರನ್ನು ಬದಲಾಯಿಸಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿದ ಅವರು 2014ರ ನಂತರದ ಕೇಂದ್ರ ಸರ್ಕಾರದ ಆಡಳಿತ ನಿರುದ್ಯೋಗ ಹಾಗೂ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಮನರೇಗಾ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪ ಉಳಿಸಿಕೊಳ್ಳುವುದು ನಮ್ಮ ಹೋರಾಟದ ಉದ್ದೇಶ ಎಂದರು.
ಪಾದಯಾತ್ರೆಯ ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಗಿದ್ದು ಈ ವೇಳೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ವಕ್ತಾರ ಪ್ರದೀಪ ಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.



















