
ತುಳು–ಕನ್ನಡಿಗರ ಸಾಂಸ್ಕೃತಿಕ ನಗರವೆಂದು ಹೆಸರಾದ ಮೀರಾ–ಭಾಯಂದರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಿತ್ಯಾನಂದ ಸೇವಾ ಸಂಸ್ಥೆ (ರಿ.) ತನ್ನ 17ನೇ ವಾರ್ಷಿಕ ದಿನಾಚರಣೆಯನ್ನು ಭಕ್ತಿಪೂರ್ಣವಾಗಿ ಆಚರಿಸಲು ಸಜ್ಜಾಗಿದೆ. ಬೆಳಗಾವಿ ಬೇವಿನಕೊಪ್ಪದ ಶ್ರೀ ವಿಜಯಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸ್ಥಾಪನೆಯಾದ ಈ ಧಾರ್ಮಿಕ ಸಂಸ್ಥೆ, ಭಕ್ತಾದಿಗಳು ಹಾಗೂ ದಾನಿಗಳ ಸಹಕಾರದಿಂದ ಕಳೆದ 16 ವರ್ಷಗಳಿಂದ ನಿರಂತರವಾಗಿ ಶ್ರೀ ಕ್ಷೇತ್ರ ಗಣೇಶಪುರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡು ಬರುತ್ತಿದೆ.
ಈ ಪರಂಪರೆಯ ಮುಂದುವರಿಕೆಯಾಗಿ, 17ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆಬ್ರವರಿ 7, 2026 (ಶನಿವಾರ) ಸಂಜೆ 6.00 ಗಂಟೆಗೆ ಮೀರಾ ರೋಡ್ನ ಶ್ರೀ ಗಣೇಶ್ ಜೈ ಅಂಬೆ ಮಾತಾ ಮಂದಿರ, ಸಿಲ್ವರ್ ಪಾರ್ಕ್ನಲ್ಲಿ ವಿಶೇಷ ಪಾದಯಾತ್ರೆ ಕಾರ್ಯಕ್ರಮ ಆಯೋಜಿಸಲಾಗಿದೆ. ‘ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ’ ಎಂಬ ಶೀರ್ಷಿಕೆಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ–ವಿಧಾನಗಳು, ಭಜನೆ ಹಾಗೂ ಮಂಗಳಾರತಿಯೊಂದಿಗೆ ಭಕ್ತರು ಪಾಲ್ಗೊಳ್ಳಲಿದ್ದಾರೆ.



















