
ಉಡುಪಿ: ಜ.29ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಸ್ ಮಾಲಕರ ಸಂಘದ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಜಿಲ್ಲೆಯೊಳಗೆ ಸಂಚರಿಸುವ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸುವ ಅವಧಿಯನ್ನು ಜೂನ್ 1ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ ತಿಂಗಳವರೆಗೆ ಶಾಲಾ ಪರೀಕ್ಷೆಗಳು ನಡೆಯುತ್ತಿರುವುದು ಹಾಗೂ ಜಿಲ್ಲೆಯಾದ್ಯಂತ ಸಂಚರಿಸುವ ಎಲ್ಲಾ ಬಸ್‌ಗಳಿಗೆ ಹೊಸದಾಗಿ ಬಾಗಿಲುಗಳನ್ನು ಅಳವಡಿಸಲು ಅಗತ್ಯವಾದ ಗ್ಯಾರೇಜ್ ಸೌಲಭ್ಯಗಳ ಕೊರತೆ ಇರುವುದನ್ನು ಗಮನದಲ್ಲಿಟ್ಟುಕೊಂಡು, ಬಸ್ ಚಾಲಕರು ಮತ್ತು ಮಾಲಕರ ಮನವಿಯ ಮೇರೆಗೆ ಪೊಲೀಸ್ ಇಲಾಖೆ ಈ ಅವಧಿಯನ್ನು ವಿಸ್ತರಿಸಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಇಂದಿನಿಂದಲೇ ಎಲ್ಲಾ ಬಸ್‌ಗಳು ತಮ್ಮ ದೃಢತೆ ಪ್ರಮಾಣಪತ್ರ (ಫಿಟ್‌ನೆಸ್ ಸರ್ಟಿಫಿಕೇಟ್–ಎಫ್‌ಸಿ)ಗಳನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಜೂನ್ 1ರೊಳಗೆ ಬಾಗಿಲು ಅಳವಡಿಸದೇ ಇರುವ ಬಸ್‌ಗಳ ಎಫ್‌ಸಿಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಅಳವಡಿಸದಿದ್ದರೆ ಮುಟ್ಟುಗೋಲು:
ಜೂನ್ 1ರ ಬಳಿಕವೂ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸದೇ ಇರುವ ಬಸ್‌ಗಳನ್ನು ರಸ್ತೆ ಮೇಲೆ ಓಡಲು ಅವಕಾಶ ನೀಡುವುದಿಲ್ಲ. ಇಂತಹ ಬಸ್‌ಗಳ ವಿರುದ್ಧ ಮುಟ್ಟು ಗೋಲು ಕ್ರಮ ಕೈಗೊಳ್ಳಲಾಗುವುದು. ಈ ನಿರ್ಧಾರಕ್ಕೆ ಎಲ್ಲಾ ಖಾಸಗಿ ಬಸ್ ಮಾಲಕರು ಒಪ್ಪಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿಯ ನಿರ್ದೇಶನದಂತೆ ರೂ.100 ದಂಡ ಸೇರಿದಂತೆ ಕಾನೂನು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.



















