
ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಹೆಚ್ಚು ತೀವ್ರವಾಗುವ ಸಾಧ್ಯತೆ ಇದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಷ್ಣಾಂಶವು ಸರಾಸರಿಗಿಂತ 1ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
‘ಲಾ ನೀನಾ’ ಪರಿಣಾಮ ದುರ್ಬಲವಾಗುತ್ತಿರುವುದರಿಂದ ಮಳೆ ಮತ್ತು ತಂಪು ವಾತಾವರಣ ಕಡಿಮೆಯಾಗಿದ್ದು, ಬಿಸಿಲಿನ ಪ್ರಭಾವ ಹೆಚ್ಚಾಗಲಿದೆ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬೇಸಿಗೆಯ ತೀವ್ರತೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಕೇಂದ್ರ ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದೆಲ್ಲೆಡೆ ಒಣ ಹವಾಮಾನ ಮುಂದುವರಿದಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ತಾಪಮಾನ ಸರಾಸರಿಗಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದರೂ, ಬೋರ್ವೆಲ್ ಅವಲಂಬಿತ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳು, ಬೋರ್ವೆಲ್ ನೀರು ಅವಲಂಬಿತ ಪ್ರದೇಶಗಳು ತಾಪಮಾನ ಹೆಚ್ಚಳದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪ್ರದೇಶಗಳಲ್ಲಿನ ನೀರಿನ ಲಭ್ಯತೆ ಕಡಿಮೆಯಾಗಿ ತೊಂದರೆ ಎದುರಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.



















