
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜಿನ ಮಹಿಳಾ ಸಬಲೀಕರಣ ಮತ್ತು ದೌರ್ಜನ್ಯ ತಡೆ ಘಟಕದಿಂದ ವಿದ್ಯಾರ್ಥಿನಿಯರಿಗೆ ಬಂಜೆತನ ಮತ್ತು ಸಂತಾನೋತ್ಪತ್ತಿ ಕುರಿತ ಅರಿವಿನ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ,ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಇಲ್ಲಿನ ಸಂತಾನೋತ್ಪತ್ತಿ ವೈದ್ಯಕೀಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ. ಅಂಜಲಿ ಮುಂಡ್ಕೂರು ಇವರು ವಿದ್ಯಾರ್ಥಿನಿಯರಿಗೆ ಬಂಜೆತನ ಹಾಗೂ ಸಂತಾನೋತ್ಪತ್ತಿ ಕುರಿತಂತೆ ತಿಳುವಳಿಕೆಯ ಮಾಹಿತಿ ನೀಡಿದರು.
ಸ್ತ್ರೀಯರ ಮುಟ್ಟು ಹಾಗೂ ಆ ದಿನಗಳಲ್ಲಿನ ನೋವು, ಅದರ ಪರಿಣಾಮ ಅದರಿಂದ ಭವಿಷ್ಯದಲ್ಲಿ ಉಂಟಾಗುವ ತೊಂದರೆಗಳನ್ನು ವಿವರಿಸುತ್ತಾ, ಈ
ತಿಳುವಳಿಕೆಯಿಂದ ನಿಮ್ಮನ್ನು ನೀವು ಗೊಂದಲಗಳಿಗೆ ಒಳ ಮಾಡದೆ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವಂತಾಗಬೇಕು ಎಂದು ಪ್ರಾಯೋಗಿಕ
ತರಬೇತಿಯ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿ ಅವರಲ್ಲಿ ಮಾಹಿತಿಯ ಕೊರತೆಯಾಗದಂತೆ ಅರಿವು ಮೂಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ, ಡಾ. ಈಶ್ವರ ಭಟ್ ಮಾತನಾಡುತ್ತಾ, ನಮ್ಮ ವಿದ್ಯಾರ್ಥಿನಿಯರಿಗೆ ಅವರ ಬದುಕಿಗೆ ಅವಶ್ಯಕವಾಗುವ ಇಂತಹ ವಿಚಾರಗಳನ್ನು ವೈದ್ಯಕೀಯ ತಿಳುವಳಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಕೆಲಸವನ್ನು ಮಾಡಿದರೆ ಅವರು ಭವಿಷ್ಯದಲ್ಲಿ ಒದಗುವ ಸಂಕಷ್ಟಗಳಿಗೆ ಮಾನಸಿಕರಾಗಿ ಸಿದ್ಧರಾಗಬಹುದು ಮತ್ತು ಆತ್ಮಸ್ಥೈರ್ಯ ವನ್ನು ಇಂತಹ ಮಾಹಿತಿಗಳಿಂದ ಹೆಚ್ಚಿಸಿಕೊಳ್ಳಬಹುದು ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ., ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಶ್ರೀಮತಿ ಸ್ವಾತಿ. ಕೆ.,
ಮತ್ತೋರ್ವ ಸಂಯೋಜಕಿ ಕು. ಪದ್ಮಶ್ರೀ, ವಿದ್ಯಾರ್ಥಿ ಪ್ರತಿನಿಧಿಯರಾದ ಪೂರ್ವಿ, ಸಂಹಿತಾ, ಪೂಜಾಶ್ರೀ, ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಾಯ್ಸಿಲ್ ಕಾರ್ಯಕ್ರಮ ನಿರೂಪಿಸಿದರು. ಮೆರೀನಾ ಸ್ವಾಗತಿಸಿ, ಕೆ.ಪ್ರಜಕ್ತ ಫಡ್ಕೆ ಧನ್ಯವಾದ ಸಮರ್ಪಿಸಿದರು.







