ಭಾಗ 410
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೧೦ ಮಹಾಭಾರತ
ಇತ್ತ ಪಾಂಡವ ಪಕ್ಷದಲ್ಲೂ ಕೃಷ್ಣನನ್ನು ಕೇಂದ್ರವಾಗಿರಿಸಿ ಧರ್ಮರಾಯ ಮತ್ತು ಅರ್ಜುನ ರಣತಂತ್ರ ಹೆಣೆಯುತ್ತಿದ್ದಾರೆ. ಧರ್ಮರಾಯ ಅರ್ಜುನನನ್ನುದ್ದೇಶಿಸಿ ಹೇಳತೊಡಗಿದ “ಪಾರ್ಥಾ! ನೀನು ಯೋಚಿಸಿ ಯೋಜಿಸಿದ ತಂತ್ರ ಸರಿಯಾಗಿ ಇದೆ. ವ್ಯೂಹದ ಪ್ರಧಾನನನ್ನು ಸಂಹರಿಸುವ ಸಲುವಾಗಿ ನೀನು ಕರ್ಣನನ್ನು ಎದುರಿಸು. ಭೀಮಸೇನ ಸುಯೋಧನನನ್ನೂ, ವೃಷಸೇನನನ್ನು ನಕುಲನೂ, ಶಕುನಿಯನ್ನು ಸಹದೇವನೂ, ದುಶ್ಯಾಸನನನ್ನು ಶತಾನಿಕನೂ, ಕೃತವರ್ಮನನ್ನು ಸಾತ್ಯಕಿಯೂ, ಅಶ್ವತ್ಥಾಮನನ್ನು ದೃಷ್ಟದ್ಯುಮ್ನನೂ, ಹಾಗೆಯೆ ಉಳಿದ ಮೈತ್ರಿ ರಾಜರನ್ನು ಯುಯುತ್ಸು ಎದುರಿಸಲಿ. ನಾನು ಕೃಪಾಚಾರ್ಯರೊಡನೆ ಯುದ್ದ ಮಾಡುತ್ತೇನೆ. ಉಪಪಾಂಡವರೆಂದು ಕರೆಸಲ್ಪಡುವ ದ್ರೌಪದಿ ಪುತ್ರರು ಶಿಖಂಡಿಯ ಜೊತೆ ಸೇರಿ ಉಳಿದ ಕೌರವ ಸೋದರರನ್ನು ಎದುರಿಸಲಿ. ನಮ್ಮ ಚತುರಂಗ ಸೇನೆ ಕುರುಸೇನೆಯನ್ನು ಯೋಜನಾಬದ್ದವಾಗಿ ರಥ, ಗಜ, ಅಶ್ವ, ಪದಾತಿ ಸೈನಿಕರು ವಿಸ್ತೃತವಾಗಿ ರಣಾಂಗಣಾದ್ಯಂತ ಹಂಚಿ ಹರಡಿಕೊಂಡು ಯುದ್ದ ಮಾಡಲಿ. ನಮ್ಮ ಸೈನ್ಯದ ರಕ್ಷಣೆಗೆ ಸಹಾಯವಾಗುವಂತೆ ಮಹಾವೀರರೂ ಶೂರರೂ ಆಗಿರುವ ಪ್ರಮುಖರು ಸೈನ್ಯದ ರಕ್ಷಕರಾಗಿ ಗಮನಿಸುತ್ತಿರೋಣ” ಎಂದು ಸೂಕ್ಷ್ಮವಾಗಿ ಯೋಜನೆ ರೂಪಿಸಿದನು.
ಹೀಗೆ ಪಾಂಡವ ಪಕ್ಷದ ತಂತ್ರ ರೂಪುಗೊಂಡ ಬಳಿಕ ಯೋಜನೆಯಂತೆ ಸೇನೆ ಚದುರಿ ರಣಾಂಗಣದೆಲ್ಲೆಡೆ ಆವರಿಸಿಕೊಳ್ಳತೊಡಗಿತು. ತಾವು ಯಾರನ್ನು ಎದುರಿಸಬೇಕೆಂಬ ರೂಪುರೇಷೆಯಾಗಿತ್ತೊ ಅದರಂತೆ ಪ್ರವೃತ್ತರಾದರು.
ಶಲ್ಯಭೂಪತಿ ಪಾಂಡವ ಸೇನೆಯ ರಣತಂತ್ರ ಗ್ರಹಿಕೆಯಿಂದ ಅರಿತುಕೊಂಡನೊ ಏನೋ! ಕರ್ಣನನ್ನು ಹುಡುಕುತ್ತಾ ಕೃಷ್ಣ ಸಾರಥ್ಯದ ಧನುರ್ಧರ ಧನಂಜಯನ ರಥ ತಮಗೆದುರಾಗಲಿದೆ ಎಂದು ತರ್ಕಿಸಿಕೊಂಡನು. ಹಾಗೆ ವಿವೇಚಿಸಿದ ಕೂಡಲೆ “ಕರ್ಣಾ! ನೀನು ಬಹು ಅಪೇಕ್ಷೆಯಿಂದ ಅರ್ಜುನನೆಲ್ಲಿ? ಯಾರಾದರು ಸೂಚನೆಯಿತ್ತರೆ ಬಹುಮಾನ ನೀಡುವೆ ಎಂದು ಘೋಷಿಸಿದ್ದೆ. ಈಗ ನೀನು ಆ ಪ್ರಯಾಸ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಇಲ್ಲ. ಹುಡುಕುವ ಬಳ್ಳಿ ಕಾಲಿಗೆ ಸುತ್ತಿಕೊಂಡಂತೆ, ರೋಗಿ ಬಯಸಿದ ಕ್ಷೀರವನ್ನು ವೈದ್ಯ ನೀಡಿದಂತೆ ನಿನ್ನ ಹೆಬ್ಬಯಕೆಯಾಗಿ ಅರ್ಜುನನೊಡನೆ ಯುದ್ದವನ್ನು ಬಯಸಿದ್ದೆ. ಅದೋ ಅರ್ಜುನ ನಿನ್ನೆದುರು ಹೆಬ್ಬಾಗಿಲನ್ನು ದಾಟಿ ಬರುವಂತೆ ಬರುತ್ತಿದ್ದಾನೆ. ನೋಡಲ್ಲಿ ದಿವ್ಯರಥದ ಶೋಭೆ! ಸಾರಥ್ಯ ಪೀಠದಲ್ಲಿ ಕುಳಿತಿರುವ ಕೃಷ್ಣ ಕೇವಲ ರಥವನ್ನಷ್ಟೆ ನಡೆಸುತ್ತಿಲ್ಲ. ಅರ್ಜುನನ ಮನಸ್ಸೆಂಬ ಕುದುರೆಗಳ ವಾಘೆಯೂ ಆತನ ಕೈಯಲ್ಲಿ ಇದ್ದಂತಿದೆ. ಆ ಮಹಾತ್ಮನ ಮಂದಸ್ಮಿತ ಮುಖದ ಕೋಮಲತೆ, ವಕ್ಷಸ್ಥಳದಲ್ಲಿ ಓಲಾಡುವ ಕೌಸ್ತುಭ ಮಣಿ ಮಾಲೆಯ ರಮಣೀಯತೆ ಮತ್ತೆ ಮತ್ತೆ ನೋಡ ಬೇಕೆನಿಸುತ್ತಿದೆ. ವಾಯುವೇಗದಲ್ಲಿ ಓಡುತ್ತಿರುವ ಶ್ವೇತಾಶ್ವಗಳಿಂದ ಸೆಳೆಯಲ್ಪಟ್ಟು, ಹಾರಿ ಬರುವ ರಥಾಗ್ರದ ಕಪಿ ಧ್ವಜ, ಮಹಾ ವಿಕ್ರಮಿ ಗಾಂಡೀವಧಾರಿ, ಸವ್ಯಸಾಚಿ ಧನಂಜಯನ ನಿಲುಮೆಯ ಗಾಂಭೀರ್ಯ.. ಇದೆಲ್ಲದರ ದರುಶನ ಮಾತ್ರದಿಂದಲೆ ಎಂತಹ ವೀರನಾದರೂ, ತೋರಿಸಿಕೊಳ್ಳದೆ ಉಳಿದರೂ, ಮನದ ಮೂಲೆಯಲ್ಲಿ ಅಳುಕಿ ಅಂಜಿಕೆ ಆದೀತು ಎಂಬುವುದು ಸತ್ಯ.” ಎಂದು ಶಲ್ಯ ಕೃಷ್ಣಾರ್ಜುನರ ರಥಾಗಮನವನ್ನು ಆಸ್ವಾದಿಸುತ್ತಿರುವವನಂತೆ ವರ್ಣಿಸುತ್ತಾ ವಿವರಿಸಿದನು. ಕರ್ಣನ ಮೇಲೆ ಈ ಪರಿಸ್ಥಿತಿ ಯಾವ ಭಾವ ಮೂಡಿಸಿದೆಯೋ! ಧೃಡಚಿತ್ತನಾಗಿ ತನ್ನ ದಿವ್ಯ ಧನುಸ್ಸನ್ನೆತ್ತಿ ಟೇಂಕಾರಗೈದು ಯುದ್ದಕ್ಕೆ ಸಿದ್ದನಾದನು.
ಗಂಗಾ ಯಮುನಾ ಎರಡು ಪ್ರತ್ಯೇಕ ಮಹಾನದಿಗಳಾಗಿ ಹರಿಯುತ್ತಾ ಬಂದು ಸಂಗಮವಾಗುವ ಕೂಡು ಪ್ರದೇಶದಂತೆ ಪಾಂಡವ ಕೌರವ ಸೇನೆ ಪ್ರವಾಹದಂತೆ ಬೋರ್ಗರೆಯುತ್ತಾ ಬಂದು ವೇಗಪೂರ್ವಕವಾಗಿ ಘರ್ಷಿಸಿಕೊಂಡವು.
ಕರ್ಣಾರ್ಜುನರು ಪರಸ್ಪರ ಎದುರಾಗಿದ್ದಾರೆ.
ಮುಂದುವರಿಯುವುದು…



















