ರಾಜ್ ಠಾಕ್ರೆಗೆ ಸಾಮಾಜಿಕ ಜಾಲತಾಣದಲ್ಲಿ ಟಾಂಗ್

ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರನ್ನು ‘ರಸ್‌ಮಲೈ’ ಎಂದು ವ್ಯಂಗ್ಯವಾಡಿದ್ದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಹೇಳಿಕೆ ಇದೀಗ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದೆ.
ಅಣ್ಣಾಮಲೈ ಇತ್ತೀಚೆಗೆ ಪ್ರಚಾರ ನಡೆಸಿದ್ದ ಮುಂಬೈನ ಮಲಾಡ್ ಪಶ್ಚಿಮ ಕ್ಷೇತ್ರದ ವಾರ್ಡ್ ಸಂಖ್ಯೆ 35 ಹಾಗೂ 47ರಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ರಸ್‌ಮಲೈ ಚಿತ್ರದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಂಡು ರಾಜ್ ಠಾಕ್ರೆಗೆ ಟಾಂಗ್ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಸಂಸದ ಪಿ.ಸಿ. ಮೋಹನ್ ಕೂಡಾ “ನಾನು ಇಂದು ರಸ್‌ಮಲೈ ಆರ್ಡರ್ ಮಾಡಿದ್ದೇನೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂಬೈ ವಿಷಯದಲ್ಲಿ ಮಾತನಾಡಲು ಅಣ್ಣಾಮಲೈ ಯಾರು? ಅವರು ರಸ್‌ಮಲೈ ಎಂದು ರಾಜ್ ಠಾಕ್ರೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



















