25.2 C
Udupi
Tuesday, March 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 450

ಭರತೇಶ ಶೆಟ್ಟಿ, ಎಕ್ಕಾರ್

ಹಿಂದೊಮ್ಮೆ ಸುಂದರವಾದ ಮೋಹಕ ಕಡೆಗಣ್ಣನ್ನು ಹೊಂದಿದ್ದ, ಅಕಳಂಕಳೂ, ದಿಕ್ಕುಗಳನ್ನು ಬಟ್ಟೆಯನ್ನಾಗಿ ಹೊಂದಿದ್ದ ಅಂದರೆ (ದಿಗಂಬರ) ವಿವಸ್ತ್ರಳಾಗಿದ್ದ ಸೌಂದರ್ಯದ ಗಣಿ ಸ್ತ್ರೀಯೊಬ್ಬಳು ಸರಸ್ವತೀ ನದಿಯಲ್ಲಿ ಸ್ವೇಚ್ಚೆಯಿಂದ ಸ್ನಾನ ಮಾಡುತ್ತಿದ್ದಳು. ರಸರಾಗ, ಮನೋವಿಕಾರಗಳನ್ನು ತೊರೆದು ಜೀವನವನ್ನು ಲೋಕಕಲ್ಯಾಣಾರ್ಥವಾಗಿ ನ್ಯಾಸಗೊಳಿಸಿ ಸಂನ್ಯಾಸಿಯಾಗಿದ್ದ, ಮೌನದಿಂದ ಧ್ಯಾನಾಸಕ್ತನಾಗಿ ಮುನಿಯಾಗಿದ್ದು, ತಪಸ್ಸು, ಶಾಸ್ತ್ರ ಅಧ್ಯಯನ, ವೇದ ಪಾರಾಯಣ ಗಳಿಂದ ಸುಜ್ಞಾನ ಪಡೆದು ಋಷಿಯೂ ಆಗಿದ್ದ ಮಂಕಣಕ ಮುನಿ ಆ ಸ್ತ್ರೀಯನ್ನು ನೋಡಿದರು. ಮನೋವಿಕಾರಗಳಿಲ್ಲದ್ದ ಮಹಾತ್ಮನೇ ಆಗಿದ್ದರೂ ಆಕೆಯ ಅದ್ವಿತೀಯ ಸ್ನಿಗ್ಧ ಸೌಂದರ್ಯ ಕಂಡು ಮುನಿಯ ವೀರ್ಯ ಸ್ಖಾಲಿತ್ಯ ಹೊಂದಿ ನೀರಿನಲ್ಲಿ ಬಿದ್ದಿತು. ಮಹಾತಪಸ್ವಿಯು ತನ್ನ ರೇತಸ್ಸು ನಷ್ಟವಾಗಬಾರದೆಂದು ಕಲಶದಲ್ಲಿ ಸಂಗ್ರಹಿಸಿದನು. ಕಲಶದಲ್ಲಿದ್ದ ದಿವ್ಯ ರೇತಸ್ಸು ಏಳು ಭಾಗಗಳಾಗಿ ಒಡೆಯಿತು. ಮಂತ್ರದೀಕ್ಷೆ ಪಡೆದು ಸಂರಕ್ಷಿಸಲ್ಪಟ್ಟು ಅದರಿಂದ ಏಳು ಮಂದಿ ಋಷಿಗಳು ಕುಂಭೋದ್ಭವರಾಗಿ ಹುಟ್ಟಿಬಂದರು. ವಾಯುವೇಗ, ವಾಯುಬಲ, ವಾಯುಹಾ, ವಾಯುಮಂಡಲ, ವಾಯುಜ್ವಾಲ, ವಾಯುರೇತ, ವಾಯುಚಕ್ರ ಎಂದು ಖ್ಯಾತರಾದ ಆ ಏಳು ಋಷಿಗಳಿಂದ ಮಹಿಮಾನ್ವಿತರಾದ ಮರುದ್ಗಣಗಳ ಉತ್ಪತ್ತಿಯಾಯಿತು. ಹೀಗೆ ವಿಶೇಷ ಸೃಷ್ಟಿಗೂ ಮಹಿಮೆಗೂ ಕಾರಣನಾದ ಮಹಾ ತಪಸ್ವಿ ಮಂಕಣಕ ಮಹರ್ಷಿ ಸಿದ್ಧಪುರುಷನಾಗಿ ಲೋಕಲೋಕಗಳಲ್ಲಿಯೂ ಪ್ರಸಿದ್ಧರಾದನು. ಒಮ್ಮೆ ಯಾಗ ಸಮಿತ್ತುಗಳನ್ನು ಸಿದ್ಧಪಡಿಸುವಾಗ ದರ್ಭೆಯ ಅಗ್ರಭಾಗವೊಂದು ಕೈಗೆ ತಾಗಿ ಸೀಳಿ ಗಾಯವಾಯಿತು. ಹಾಗೆ ಆದ ಗಾಯದಿಂದ ರಕ್ತ ಸ್ರವಿಸುವ ಬದಲಾಗಿ ವಿಸ್ಮಯ ಎಂಬಂತೆ ಶಾಕರಸ ಚಿಮ್ಮತೊಡಗಿತು. ಈ ವಿಶೇಷವನ್ನು ಕಂಡು ಹರ್ಷಾವಿಷ್ಟನಾದ ಮಂಕಣಕ ಮಹರ್ಷಿ ಕುಣಿಯತೊಡಗಿದನು. ಹೀಗೆ ಕುಣಿಯುತ್ತಿದ್ದಾಗ ಋಷಿಯ ಸುತ್ತ ಕಾಂತಿಯೂ ಅತಿಶಯವಾದ ತೇಜಸ್ಸೂ ವ್ಯಾಪಿಸತೊಡಗಿತ್ತು. ಅದರಿಂದ ಪ್ರಭಾವಕ್ಕೊಳಗಾದ ಸ್ಥಾವರ ಜಂಗಮರೆಲ್ಲರೂ ಕುಣಿಯತೊಡಗಿದರು. ಪ್ರಭೆ ಪ್ರಬಲಗೊಂಡು ತಪೋಧನರಾದ ಋಷಿಗಳೂ ಸಂಭ್ರಾಂತರಾಗಿ, ಬ್ರಹ್ಮನ ಸಹಿತ ದೇವತೆಗಳೂ ವಿವಶರಾದರು. ಲೋಕವನ್ನು ಸಂರಕ್ಷಿಸುವ ಉಪಾಯ ಹೇಗೆ ಎಂದು ಮಹಾದೇವನನ್ನು ದೇವತೆಗಳು ಪ್ರಾರ್ಥಿಸತೊಡಗಿದರು.

“ಮಹಾದೇವಾ! ಈ ಮಂಕಣಕನ ನೃತ್ಯವನ್ನು ನಿಲ್ಲಿಸಬೇಕು. ಲೋಕವೇ ಆತನ ಪ್ರಭೆಗೊಳಗಾಗಿ ಕುಣಿಯತೊಡಗಿದೆ. ನೀನು ಏನಾದರು ಪರಿಹಾರದ ದಾರಿ ತೋರಬೇಕು” ಎಂದು ಬೇಡಿದರು.

ಪ್ರಾರ್ಥನೆಯಿಂದ ಪ್ರೇರಿತನಾಗಿ ವಟು ರೂಪಧಾರಿಯಾಗಿ ಬಂದ ಪರಮೇಶ್ವರ ಮಂಕಣಕ ಮುನಿಯನ್ನು ಸಂಧಿಸಿ “ಧರ್ಮಾತ್ಮನಾದ ತಪಸ್ವಿಯೇ! ನೀನು ವಿಶೇಷ ಹರ್ಷಗೊಂಡಿರುವುದನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಜೊತೆಗೆ ಕುತೂಹಲವೂ ಮನಮಾಡಿದೆ. ಇಷ್ಟೊಂದು ಅತ್ಯಧಿಕವಾದ ಹರ್ಷ ನಿನಗಾಗಲು ಕಾರಣ ತಿಳಿಯಬಹುದೆ?” ಎಂದು ಕೇಳಿದನು.

“ಹೇ ಬ್ರಾಹ್ಮಣನೇ! ನೋಡು ನನ್ನ ಕೈಗೆ ಗಾಯವಾಗಿದೆ. ಸೃಷ್ಟಿಯ ಜೀವರುಗಳಾದರೆ ರಕ್ತ ಹೊರಬರಬೇಕಾಗಿತ್ತು. ಆದರೆ ಹಾಗಾಗದೆ ನನ್ನ ಕೈಗಾದ ಗಾಯದಿಂದ ಶಾಕರಸ ಚಿಮ್ಮುತ್ತಿದೆ. ಇಂತಹ ವಿಶೇಷ ನನ್ನೊಳಗಿದೆ ಎಂದು ತಿಳಿದು ಹರ್ಷಗೊಂಡು ಕುಣಿಯತೊಡಗಿದ್ದೇನೆ. ನನಗೆ ದಣಿವಾಗುತ್ತಲೂ ಇಲ್ಲ” ಎಂದು ಹೇಳಿದನು ಮಂಕಣಕ ಮಹರ್ಷಿ.

ಆಗ ಬ್ರಾಹ್ಮಣ ರೂಪಿ ಪರಮೇಶ್ವರ “ಅರೆ ಅದೇನು ಮಹಾ! ನನಗೆ ಏನೂ ಆಶ್ಚರ್ಯ ಎಣಿಸುತ್ತಿಲ್ಲ. ಇದೋ ನನ್ನ ಕೈಯನ್ನು ನೋಡು. ಬಲಗೈಯ ಹೆಬ್ಬೆರಳಿಗೆ ಗಾಯಮಾಡುತ್ತೇನೆ” ಎಂದು ಹೇಳಿ ಈಶನು ಎಡಗೈಯ ನಖದಿಂದ ಸೀಳಿ ಗಾಯಗೊಳಿಸಿದನು. ಹಿಮಾಲಯದ ಹಿಮವೇ ಹರಿದು ಬಂದಷ್ಟು ಶೀತಲವಾದ ಭಸ್ಮ ಬುಸ್ಸನೆ ಚಿಮ್ಮಿ ಬರತೊಡಗಿತು. ಪರಮಶ್ರೇಷ್ಟವಾದ ವಿಭೂತಿ ಭಸ್ಮ ಓರ್ವ ಬ್ರಾಹ್ಮಣನ ಬೆರಳಿನಿಂದ ಬರಲು ಹೇಗೆ ಸಾಧ್ಯ? ಈ ಮಹಾತ್ಮ ಯಾರು? ಎಂಬಂತೆ ಮಂಕಣಕ ವಿವೇಚಿಸ ತೊಡಗಿದನು. ಅಯ್ಯೋ ಈತ ಮಹಾದೇವನೇ ಇರಬೇಕು. ಅನ್ಯರಾರಿಂದಲೂ ಈ ತೆರನಾಗಿ ಭಸ್ಮ ಸೂಸಲು ಸಾಧ್ಯವಿಲ್ಲ ಎಂದು ಅರಿತುಕೊಂಡನು. “ಪರಮಶ್ರೇಷ್ಠನೇ, ಭಕ್ತವತ್ಸಲನೇ! ನಾನು ಮಹಿಮಾನ್ವಿತನೇ! ಎಂಬ ಭ್ರಮೆಗೊಳಗಾಗಿದ್ದೆ. ಆ ಭ್ರಮಾಲೋಕದಲ್ಲಿ ಮೈ ಮರೆತು ಕುಣಿಯುತ್ತಿದ್ದೆ. ಆದರೆ ನೀನು ನನಗಿಂತಲೂ ಅಧಿಕ, ದೇವಾಸುರರಿಂದಲೂ ವ್ಯಾಪ್ತವಾಗಿರುವ ಸರ್ವಶಕ್ತ ಎಂಬ ಸತ್ಯವನ್ನು ಮರೆತು ಬಿಟ್ಟಿದ್ದೆ. ದೇವಾನು ದೇವತೆಗಳಿಗೂ ನಿನ್ನ ನಿಜ ಸ್ವರೂಪವನ್ನು ಅರಿಯಲು ಅಸಾಧ್ಯವಾಗಿದೆ. ಆದರೆ ನನ್ನಂತಹ ಅಲ್ಪಪ್ರಜ್ಞನನ್ನು ಉದ್ಧರಿಸಲು ನೀನೇ ಬಂದು ಕೃಪೆದೋರಿದೆಯಾ? ಸಹಸ್ರ ವರ್ಷ ಕಾಲ ಕಠಿಣ ತಪಸ್ಸನ್ನಾಚರಿಸಿದರೂ ದರ್ಶನ ಕಷ್ಟ ಸಾಧ್ಯವಿರುವ ನಿನ್ನನ್ನು ನನ್ನ ಅಹಂಭಾವದಿಂದ ಕಾಣುವಂತಾಯಿತೆ? ಹೇಗೆ ಯಾವ ಕಾರಣದಿಂದಾದರೂ ಸರಿ, ನಾನು ಧನ್ಯನಾದೆ ದೇವಾ! ಶರಣಾಗತನಾಗಿರುವೆ. ನೀನು ಅನುಗ್ರಹಿಸಿ ಸಂರಕ್ಷಿಸಬೇಕು. ಯಾವ ಯಾವ ಪದಾರ್ಥಗಳು ಲೋಕದಲ್ಲಿವೆಯೋ ಅದೆಲ್ಲವನ್ನೂ ನಿನ್ನ ದಿವ್ಯ ಶರೀರದಲ್ಲಿ ಕಾಣುತ್ತಿದ್ದೇನೆ. ದೇವಾ ನನಗೆ ನಿನ್ನ ನಿಜ ಸ್ವರೂಪವನ್ನು ತಿಳಿಯುವ ಹೆಬ್ಬಯಕೆ ಮನಮಾಡಿದೆ. ಭಕ್ತವತ್ಸಲನಾದ ನೀನು ಕೃಪೆತೋರುವೆಯಾ ದೇವಾ! ಕೇವಲ ಶಾಕರಸ ಚಿಮ್ಮಿತೆಂದು ಚಾಪಲ್ಯಕ್ಕೊಳಗಾಗಿ ಸಂಭ್ರಮಿಸಿ ಮತಿಹೀನನಾಗಿ ಕುಣಿದಾಡಿ ಲೋಕವನ್ನು ಭ್ರಮೆಗೊಳಪಡಿಸಿದೆ. ನನ್ನನ್ನು ಕ್ಷಮಿಸಿ ಪ್ರಸನ್ನನಾಗುವೆಯಾ ದೇವಾ…. ನನ್ನ ಈ ಚೆಲ್ಲಾಟದ ಬುದ್ಧಿಯಿಂದ ಎಲ್ಲಿ ನನ್ನ ತಪಸ್ಸು ನಷ್ಟಗೊಂಡೀತೊ ಎಂಬ ಭಯ ನನ್ನನ್ನಾವರಿಸಿದೆ. ಕರಣಾಳು ದೇವನೇ, ನನ್ನನ್ನು ಮನ್ನಿಸಿ ಅನುಗ್ರಹಿಸಬೇಕು” ಎಂದು ಬೇಡುತ್ತಾ ಮಹಾದೇವನನ್ನು ನಿರಂತರ ಸ್ತೋತ್ರ ಮಾಡುತ್ತಾ ಸ್ತುತಿಸ ತೊಡಗಿದನು.

ಮಂಕಣಕ ಮಹರ್ಷಿಯ ಭಕ್ತಿಯ ಉತ್ಕರ್ಷೆಯಿಂದ ಸಂಪ್ರೀತನಾದ ಮಹಾದೇವ ಋಷಿಯನ್ನು ಕರೆದು “ಹೇ ತಪೋ ನಿಧಿಯೇ! ಜೀವನ ಪರ್ಯಂತ ಸತ್ಕರ್ಮ ಅನುಷ್ಠಾನ ನಿರತನಾಗಿ ಲೋಕಕ್ಕೆ ಕ್ಷೇಮವನ್ನು ಬಯಸಿದ ಸದ್ಗುಣಿಯಾಗಿರುವೆ. ಮಹತ್ತರವಾದ ತಪಃಶಕ್ತಿಯನ್ನು ಹೊಂದಿರುವೆ. ಒಂದೊಮ್ಮೆಗೆ ಭ್ರಮೆಗೊಳಗಾದರೂ ವಾಸ್ತವ ಅರಿತು ದೈನ್ಯತೆಯಿಂದ ಶರಣಾಗಿರುವೆ. ಶರಣರ ಪಾಲನೆ ನನಗೂ ಕರ್ತವ್ಯ. ನನ್ನ ಅನುಗ್ರಹದಿಂದ ನಿನ್ನ ತಪಸ್ಸು ಸಾವಿರಪಟ್ಟು ವರ್ಧಿಸಲಿ. ನಿನ್ನೊಡನೆ ಈ ಆಶ್ರಮದಲ್ಲಿ ನಾನೂ ಸ್ಥಿತನಾಗುವೆ. ಮಂಕಣಕಾ! ಯಾರು ಸಪ್ತಸಾರಸ್ವತ ತೀರ್ಥಕ್ಷೇತ್ರದಲ್ಲಿ ಸ್ನಾನಗೈದು ಅನನ್ಯ ಭಕ್ತಿಯಿಂದ ಅರ್ಚಿಸುತ್ತಾನೋ ಅವನಿಗೆ ಈ ಲೋಕದಲ್ಲಿ ಆಗಲಿ, ಪರಲೋಕದಲ್ಲಾಗಲಿ ದುರ್ಲಭವಾಗುವುದು ಯಾವುದೂ ಇರದು. ಸರ್ವ ಸಂಪದವನ್ನೂ, ಮನೋಗತ ಇಷ್ಟಾರ್ಥಗಳನ್ನು ಹೊಂದಿ ಇಹಯಾತ್ರೆ ಮುಗಿಸಿ ಪರಮೋಚ್ಚವಾದ ಸಾರಸ್ವತ ಲೋಕವನ್ನು ಹೊಂದುವಂತಾಗಲಿ. ಈ ವಿಷಯದಲ್ಲಿ ಸಂಶಯ ಬೇಡ” ಎಂದು ಮಹಾದೇವ ಅನುಗ್ರಹಿಸಿದನು. ಸುಕನ್ಯೆಯಲ್ಲಿ ಔರಸ ಪುತ್ರನಾಗಿ ವಾಯುವಿನಿಂದ ಜನಿಸಿದ ಬ್ರಹ್ಮಚಾರಿ ಮಂಕಣಕ ಮಹರ್ಷಿ ಸಪ್ತ ಸಾರಸ್ವತ ತೀರ್ಥ ಕ್ಷೇತ್ರದ ಪಾವಿತ್ರ್ಯತೆ ಮತ್ತು ಕ್ಷೇತ್ರಬಲಕ್ಕೆ ಮಹತ್ತರವಾದುದನ್ನು ಸಾಧಿಸಿಕೊಟ್ಟ ಸಾಧಕನಾದನು.

ಬಲರಾಮನು ಸಪ್ತ ಸಾರಸ್ವತ ತೀರ್ಥಕ್ಷೇತ್ರದಲ್ಲಿ ಸ್ನಾನಾಚಮನಗೈದು ಶಿವ ಧ್ಯಾನ ನಿರತನಾಗಿದ್ದು ಅಭಿಷೇಕ ಅರ್ಚನಾದಿಗಳನ್ನು ಪೂರೈಸಿ ಧನ್ಯತೆಯಿಂದ ಕಪಾಲಮೋಚನ ತೀರ್ಥಕ್ಷೇತ್ರ ದತ್ತ ಮುಂದುವರಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page