
Ayatholla Ali Khamenei ಅವರು ಅಮೆರಿಕ–ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಹೇಳಿಕೆ ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನ ಸುಪ್ರೀಂ ಲೀಡರ್ ಹುತಾತ್ಮರಾಗಿದ್ದಾರೆ ಎಂದು Press TV ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಇರಾನ್ನ ಹಲವಾರು ಮಾಧ್ಯಮಗಳು ಕೂಡ ಖಮೇನಿ ಅವರ ನಿಧನವನ್ನು ದೃಢಪಡಿಸಿರುವುದಾಗಿ ವರದಿಯಾಗಿದೆ. ನಂತರ ಇರಾನ್ ಸರ್ಕಾರವೂ ಅವರ ಸಾವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
1989ರಿಂದ ದೇಶದ ಅತ್ಯುನ್ನತ ನಾಯಕತ್ವ ವಹಿಸಿಕೊಂಡಿದ್ದ ಖಮೇನಿ, ಸೈನ್ಯ, ನ್ಯಾಯಾಂಗ ಮತ್ತು ವಿದೇಶಾಂಗ ನೀತಿಗಳ ಮೇಲಿನ ಅಂತಿಮ ಅಧಿಕಾರವನ್ನು ಹೊಂದಿದ್ದರು. 1939ರಲ್ಲಿ ಮಶಾದ್ನಲ್ಲಿ ಜನಿಸಿದ ಅವರು, Ruhollah Khomeini ಅವರ ನಂತರ ದೇಶದ ಪ್ರಮುಖ ಶಕ್ತಿಕೇಂದ್ರವಾಗಿ ಹೊರಹೊಮ್ಮಿದರು.
1979ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಇರಾನ್ನ ರಾಜಕೀಯ ಹಾಗೂ ಧಾರ್ಮಿಕ ದಿಕ್ಕನ್ನು ನಿರ್ಧರಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು.
ಖಮೇನಿ ಅವರ ಸಾವಿನ ಸುದ್ದಿಯ ನಂತರ ಇರಾನ್ನ ವಿವಿಧ ಭಾಗಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಸ್ಟರ್ಗಳನ್ನು ಹಿಡಿದು ಅವರ ನಿಧನವನ್ನು ಖಂಡಿಸುತ್ತಿರುವ ಜನರು ದೇಶದ ಏಕತೆ ಮತ್ತು ನಾಯಕತ್ವದ ಬೆಂಬಲಕ್ಕಾಗಿ ಒಗ್ಗೂಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.






