ಭಾಗ – 448
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೪೮ ಮಹಾಭಾರತ
ಕೃತಯುಗದಲ್ಲಿ ನಡೆದ ಕಥೆಯಿದು. ದ್ವಾದಶ ವಾರ್ಷಿಕ ಪರ್ಯಂತರ ಸಾಗಬೇಕಾದ ಮಹಾಸತ್ರ ಯಾಗದ ಅನುಷ್ಠಾನ ಸರಸ್ವತೀ ತೀರ್ಥ ಸ್ಥಾನದಲ್ಲಿ ಆರಂಭವಾಗಿತ್ತು. ಈ ಮಹಾಯಜ್ಞದಲ್ಲಿ ನೈಮಿಷಾರಣ್ಯ ವಾಸಿಗಳಾದ ತಪಸ್ವಿಗಳು, ಋಷಿಗಳೆಲ್ಲರೂ ಭಾಗಿಗಳಾಗಿದ್ದರು. ಹನ್ನೆರಡು ವರ್ಷಗಳ ಕಾಲ ಸಾಗಿದ ಸುದೀರ್ಘ ಯಜ್ಞ ಮುಗಿದು, ನಂತರ ಮಹರ್ಷಿಗಳೆಲ್ಲರೂ ತೀರ್ಥಸ್ನಾನ ಮಾಡಲು ಸರಸ್ವತೀ ನದಿಯ ದಕ್ಷಿಣ ತೀರಕ್ಕೆ ಬಂದರು. ಈ ಸಮಯ ಅಲ್ಲಿ ಸೇರಿದ ಲಕ್ಷೋಪ ಲಕ್ಷ ಋಷಿವರೇಣ್ಯರ ಸಮೂಹದಿಂದ ಸರಸ್ವತೀ ನದಿಯ ತೀರದಲ್ಲಿದ್ದ ಪವಿತ್ರ ತೀರ್ಥಕ್ಷೇತ್ರಗಳೆಲ್ಲವೂ ತುಂಬಿ ತುಳುಕಾಡಿ ಮಹಾ ನಗರದಂತೆ ಕಾಣಿಸುತ್ತಿತ್ತು. ಸರಸ್ವತೀ ನದಿಯ ದಕ್ಷಿಣ ತೀರದ ತೀರ್ಥಕ್ಷೇತ್ರದಿಂದ ಪ್ರಾರಂಭಗೊಂಡು ಸಮಂತ ಪಂಚಕ ತೀರ್ಥದವರೆಗೂ ಋಷಿಸ್ತೋಮ ವ್ಯಾಪಿಸಿತ್ತು. ಸರ್ವ ನದಿಗಳಲ್ಲೂ ಶ್ರೇಷ್ಠವೆಂದು ಪರಿಗಣಿತವಾಗಿದ್ದ ಸರಸ್ವತೀ ನದೀ ತೀರದಲ್ಲಿ ವಾಲಖಿಲ್ಯರು (ಪ್ರಜಾಪತಿಯ ವಂಶಸ್ಥರಾದ ಸಣ್ಣ ಶರೀರದ ಋಷಿಗಳು – ಯಾಗದ ಸಮಿತ್ತುಗಳನ್ನು ತರುವಲ್ಲಿ ತೊಡಗಿಕೊಂಡಿರುವವರು) ಆಶ್ಮಕುಟ್ಟರು ( ಕಲ್ಲಿನಲ್ಲಿ ಕುಟ್ಟಿ ಧಾನ್ಯದ ಹೊಟ್ಟನ್ನು ಪ್ರತ್ಯೇಕಿಸುವವರು) ದಂತೋಲುಖಲಿಗಳು (ವಾನಪ್ರಸ್ಥಾಶ್ರಮದಲ್ಲಿರುವ ಋಷಿಗಳು. ತಮ್ಮ ಆಹಾರವಾಗಿ ಧಾನ್ಯಗಳ ಹೊಟ್ಟನ್ನು ತಮ್ಮ ಹಲ್ಲುಗಳಿಂದಲೇ ಸೀಳಿ ತೆಗೆದು ಭುಂಜಿಸುವ ವ್ರತನಿಷ್ಠರು), ಪ್ರಸಂಖ್ಯಾನರು (ಆತ್ಮಜ್ಞಾನ ಮತ್ತು ಮೋಕ್ಷಕ್ಕಾಗಿ ಸಾಧನಾ ನಿರತರಾಗಿರುವವರು), ವಾಯುಭಕ್ಷಕರು (ನಿರಾಹಾರಿಗಳಾಗಿ ಕೇವಲ ವಾಯು ಸೇವನಾ ನಿರತರಾಗಿರುವ ಹಠಯೋಗಿಗಳು) ಅಬ್ಭಕ್ಷಕರು (ಪವಿತ್ರ ವೃಕ್ಷದ ತರಗೆಲೆಗಳನ್ನಷ್ಟೇ ತಿಂದು ವ್ರತ ಪಾಲಿಸುವವರು, ಫಲಾಹಾರಿಗಳು, ಜಲಾಹಾರಿಗಳು ( ಸಮಯದ ಅಂತರದಲ್ಲಿ ಕೇವಲ ಫಲ ಅಥವ ಜಲವನ್ನಷ್ಟೇ ಸ್ವೀಕರಿಸಿ ತೊಡಗಿದ ಧರ್ಮಯಜ್ಞ ಪೂರೈಕೆಯವರೆಗೆ ವೃತ ನಿರತರಾಗಿರುವವರು), ಪರ್ಣಭಕ್ಷರು ( ಎಲೆಗಳನ್ನಷ್ಟೇ ಭಕ್ಷಿಸಿ ವ್ರತನಿಷ್ಠರಾಗಿರುವವರು) ನೆಲದ ಮೇಲೆಯೇ ಮಲಗುವವರು ಹೀಗೆ ನಾನಾವಿಧವಾದ ನಿಯಮಾನುಷ್ಠಾನಗಳನ್ನು ಮಾಡುತ್ತಾ ಸಾಧನಾ ನಿರತರಾಗಿದ್ದ ಮಹರ್ಷಿಗಳಿಂದ ತುಂಬಿ ಹೋಗಿದೆ. ಹೀಗೆ ಕರ್ಮಾನುಷ್ಠಾನ ನಿರತರಾಗಿದ್ದ ಋಷಿ ವರೇಣ್ಯರು ನಿರಂತರ ಸಾಧನೆ ಮಾಡಿ ಅಗ್ನಿ ಹೋತ್ರ ನಡೆಸಿ ಆಹುತಿಗಳನ್ನು ಹವ್ಯವಾಹನ ಯಜ್ಞೇಶ್ವರನಿಗೆ ಸಮರ್ಪಿಸಿದರೂ ಋಷಿಗಳು ಸಂತೃಪ್ತರಾಗಿರಲಿಲ್ಲ. ಆಗ ಸರಸ್ವತೀ ನದಿ ಸ್ವಯಂ ಮೈದಳೆದು ಅವರೆಲ್ಲರಿಗೂ ದರುಶನವಿತ್ತು ಅಭೀಷ್ಟ ಸಿದ್ಧಿಗಾಗಿ ಅನುಗ್ರಹಿಸಿದಳು. ಋಷಿಗಳ ಮೇಲಿನ ಕಾರುಣ್ಯದಿಂದ ಅವರಿಗೆ ಬೇಕಾಗುವ ಅನೇಕಾನೇಕ ಬಳ್ಳಿ, ಪೊದರು, ತರುಲತೆ, ವೃಕ್ಷಗಳನ್ನು ತನ್ನ ತೀರದಲ್ಲಿ ಕಲ್ಪಿಸಿ, ಋಷಿ ವರೇಣ್ಯರಿಗೆ ಸಹಕಾರಿಯಾದಳು. ಲತಾಗೃಹಗಳಲ್ಲಿ ವಿಶ್ರಾಂತರಾದ ಮಹರ್ಷಿಗಳಿಗೆ ಕಾರುಣ್ಯದೋರಿ ಅವರಿಗಾಗಿ ನೈಮಿಷಾರಣ್ಯದಲ್ಲಿ ಸುಂದರವಾದ ಕುಂಜಗಳನ್ನು ( ನಿಸರ್ಗ ಮನೆ) ಒದಗಿಸಿದಳು. ಇವುಗಳು ನೈಮಿಷೀಯ ಕುಂಜಗಳೆಂದು ಪ್ರಸಿದ್ಧವಾದವು. ಹೀಗೆ ಋಷಿಗಳಿಗೆ ವಿಹಾರ ತಾಣ ಆಶ್ರಮ ಒದಗಿಸಿ ಪುಣ್ಯ ಕ್ಷೇತ್ರ ನಿರ್ಮಿಸಿದ ಸರಸ್ವತಿ ಅಲ್ಲಿಂದ ಮತ್ತೆ ಮುಂದೊತ್ತಿ ತನ್ನ ಪಥದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಬದಲು, ಮಹತ್ತರವಾದ ನಿರ್ಣಯವನ್ನು ಕೈಗೊಂಡು ತಿರುಗಿ ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಹಿಂದಿರುಗಿದಳು. ಮಹರ್ಷಿಗಳ ಸುದೀರ್ಘ ಸಾಧನೆಯ ಫಲ ಸ್ಮಾರಕವೋ ಎಂಬಂತೆ ಈ ರೀತಿ ತಿರುಗಿ ಮತ್ತೆ ಹರಿಯತೊಡಗುತ್ತಾಳೆ. ಈ ಕ್ಷೇತ್ರದಲ್ಲಿ ಬದರ, ಇಂಗುದ, ಕಾಶ್ಮರ್ಯ, ಪ್ಲಕ್ಷ, ಅಶ್ವತ್ಥ, ವಿಭೀತಕ, ಬಿಲ್ವ, ಕಂಕೋಲ, ಪಲಾಶ, ಕರೀರ, ಪೀಲು, ಕರೂಷ, ಆಮ್ರ, ಅತಿಮುಕ್ತ, ಪಾರಿಜಾತ, ನೆಲ್ಲಿ, ಅರಿಷ್ಠ, ಬೇವು, ಶಾಲ್ಮಲಿ, ಮಾವು, ಲೋಧ್ರ, ಖದಿರ, ಆಮಲಕ, ಕದಂಬ, ಆದುಂಬರ, ಆಲ, ಪ್ರಿಯಾಲ, ಖರ್ಜೂರ, ನೇರಳೆ, ಕಿಂಶುಕ, ಶಿಂಶುಕ, ಸರಲ, ಶಮೀ ಹೀಗೆ ಫಲ, ಪುಷ್ಪ, ಔಷಧಿ, ಸಮಿಧೆಯ ತರು ಲತೆ ಬಳ್ಳಿ ಮರಗಳೆಲ್ಲ ಬೆಳೆದು ಸುಗಂಧ ಭರಿತ, ಪ್ರಶಾಂತವೂ ಸಮೃದ್ಧವೂ ಆದ ಕ್ಷೇತ್ರವಾಗಿದೆ. ಸರಸ್ವತಿ ತಿರುಗದೆ ಇಲ್ಲೇ ಮುಂದೊತ್ತಿ ಹರಿಯುತ್ತಿದ್ದರೆ ವರ್ಷಾಕಾಲದಲ್ಲಿ ಈ ಕ್ಷೇತ್ರ ನೆರೆಪೀಡಿತವೂ ಆಗುತ್ತಿತ್ತು. ಮತ್ತು ಮುಂದೆ ಸಾಗಿ ಸಮುದ್ರವನ್ನೂ ಸೇರುತ್ತಿದ್ದಳು. ತನ್ನ ತಟವನ್ನು ಪರಮ ಪವಿತ್ರ ಕ್ಷೇತ್ರವಾಗಿಸಿದ ಸ್ಮರಣೆಗಾಗಿಯೋ, ಅದರ ರಕ್ಷಣೆಗಾಗಿಯೋ ಸರಸ್ವತಿ ಇಲ್ಲಿಂದ ತದ್ವಿರುದ್ಧ ದಿಕ್ಕಿಗೆ ತಿರುಗಿ ಹರಿಯತೊಡಗಿದ್ದಾಳೆ. ಈ ಕ್ಷೇತ್ರವು ಬಹಳ ಪುಣ್ಯ ಪ್ರದವೂ, ಪಾಪ ನಾಶಿನಿಯೂ, ಮನೋ ವಾಂಛಿತ ಸಿದ್ಧ ಕ್ಷೇತ್ರವೂ ಆಗಿ ಪ್ರಖ್ಯಾತವಾಗಿದೆ. ಬಲರಾಮನು ಈ ತೀರ್ಥ ಕ್ಷೇತ್ರದಲ್ಲಿ ತೀರ್ಥ ಸ್ನಾನಾದಿಗಳನ್ನು ಪೂರೈಸಿ ದಾನ ಧರ್ಮಾದಿ ಪುಣ್ಯ ಕಾರ್ಯಗಳನ್ನು ಗೈದು ಮುನ್ನಡೆದನು.
ಬಲರಾಮನು ಸಾಗುತ್ತಾ ಶ್ರೇಷ್ಠವಾದ ತೀರ್ಥ ಕ್ಷೇತ್ರ ಸಪ್ತ ಸಾರಸ್ವತ ತೀರ್ಥದೆಡೆ ಸಾಗಿದನು. ಅದ್ಬುತ ಮಹಿಮಾನ್ವಿತ ಚರಿತ್ರೆ ಹೊಂದಿರುವ ಕ್ಷೇತ್ರವದು.
ಮುಂದುವರಿಯುವುದು…






















































