
ನವದೆಹಲಿ: ಏಪ್ರಿಲ್ 1ರಿಂದ ದೇಶಾದ್ಯಂತ ಶೇ.20ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಉತ್ಪಾದನೆ ಮತ್ತು ಮಾರಾಟವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ತೈಲ ಮಾರಾಟ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಫೆ.17ರಂದು ಹೊರಡಿಸಿದ ಅಧಿಸೂಚನೆಯಂತೆ, ಬಿಐಎಸ್ ಮಾನದಂಡದ ಪ್ರಕಾರ ಕನಿಷ್ಠ 95 ಆರ್‌ಓಎನ್ ಹೊಂದಿರುವ ಎಥನಾಲ್ ಅನ್ನು ಪೆಟ್ರೋಲ್‌ಗೆ ಶೇ.20ರಷ್ಟು ಮಿಶ್ರಣ ಮಾಡಬೇಕು ಎಂದು ತಿಳಿಸಲಾಗಿದೆ.
ಎಥನಾಲ್‌ನ್ನು ಕಬ್ಬು, ಮಕ್ಕೆಜೋಳ ಸೇರಿದಂತೆ ಇತರ ಧಾನ್ಯಗಳಿಂದ ತಯಾರಿಸಲಾಗುತ್ತದೆ. ಇದು ಸ್ವಚ್ಛವಾಗಿ ಉರಿಯುವ ಇಂಧನವಾಗಿದ್ದು, ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ. ಜೊತೆಗೆ ಕಚ್ಚಾ ತೈಲ ಆಮದು ಇಳಿಕೆಯಾಗುವ ಮೂಲಕ ದೇಶಕ್ಕೆ ಸುಮಾರು 1.40 ಲಕ್ಷ ಕೋಟಿ ರೂ. ಲಾಭವಾಗಲಿದೆ ಎಂದು ಸರ್ಕಾರ ಹೇಳಿದೆ.
2023–2025ರ ಅವಧಿಯಲ್ಲಿ ತಯಾರಾದ ಹೆಚ್ಚಿನ ವಾಹನಗಳು ಈ ಇಂಧನಕ್ಕೆ ಹೊಂದಿಕೊಳ್ಳುತ್ತವೆ. ಆದರೆ ಕೆಲವು ವಾಹನಗಳಲ್ಲಿ ಮೈಲೇಜ್ ಶೇ.3ರಿಂದ 7ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಯಾಕೆ ಈ ನಿರ್ಧಾರ?
ಇಂಧನ ಹೊರಸೂಸುವಿಕೆ ಕಡಿಮೆ ಮಾಡುವುದು, ವಾಯುಮಾಲಿನ್ಯ ನಿಯಂತ್ರಣ, ಕಚ್ಚಾ ತೈಲ ಆಮದು ಇಳಿಕೆ ಹಾಗೂ ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.






