
ತಿರುವನಂತಪುರ: ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ ಮಾಡಲು ಅವಕಾಶ ಮಾಡಿಕೊಡುವ ಮಲಯಾಳಂ ಭಾಷಾ ವಿಧೇಯಕ-2025 ವಿರೋಧಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‘ಕನ್ನಡಿಗರು ಸೇರಿದಂತೆ ರಾಜ್ಯದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವುದಿಲ್ಲ. ಪ್ರತಿಯೊಬ್ಬ ಪ್ರಜೆಯ ಭಾಷಾ ಸ್ವಾತಂತ್ರ್ಯ ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಹಳೆಯ ಮಸೂದೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ ಎಂದು ಕೇರಳದ ಕಾನೂನು ಸಚಿವ ಪಿ.ರಾಜೀವ್ ಆರೋಪಿಸಿದ್ದು, ರಾಜ್ಯದ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಐಚ್ಛಿಕವಾಗಿದೆ ಎಂದಿದ್ದಾರೆ.
ಒಂದು ವೇಳೆ ಈ ವಿಧೇಯಕವನ್ನು ಅಂಗೀಕರಿಸಿದರೆ ಭಾಷಾ ಅಲ್ಪಸಂಖ್ಯಾತರು ಹಾಗೂ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ಕರ್ನಾಟಕವು ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಬಳಸಿಕೊಂಡು ವಿರೋಧ ವ್ಯಕ್ತಪಡಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದು ಜತೆಗೆ, ಈ ವಿಧೇಯಕ ಭಾಷಾ ಸ್ವಾತಂತ್ರ್ಯ ಮತ್ತು ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲೆ ನಡೆಸಿದ ಪ್ರಹಾರ ಎಂದೂ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪಿಣರಾಯಿ ವಿಜಯನ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಪಿಣರಾಯಿ ಹೇಳಿದ್ದೇನು?:
ಬಹುತ್ವ ಮತ್ತು ಜಾತ್ಯತೀತತೆಯ ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯಲು ಕೇರಳ ಸರ್ಕಾರ ಬದ್ಧವಾಗಿದೆ. ಭಾಷಾ ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ತಮಿಳು ಭಾಷಿಕರ ಹಕ್ಕುಗಳನ್ನು ರಕ್ಷಿಸಲು ಈ ವಿಧೇಯಕ ವಿಶೇಷ ಪ್ರಾಧಾನ್ಯತೆ ಹೊಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಭಾಷೆ ಹೇರಿಕೆಯನ್ನು ತಡೆಯುವ ಮತ್ತು ಭಾಷಾ ಸ್ವಾತಂತ್ರ್ಯ ಸಂಪೂರ್ಣವಾಗಿ ರಕ್ಷಣೆಯಾಗುವಂಥ ನಿಬಂಧನೆಗಳು ವಿಧೇಯಕದಲ್ಲಿವೆ. ಗಡಿನಾಡಲ್ಲಿ ಕನ್ನಡ ಮತ್ತು ತಮಿಳು ಭಾಷಿಕರು ತಮ್ಮ ಮಾತೃಭಾಷೆಯನ್ನು ಅಧಿಕೃತ ಸರ್ಕಾರಿ ಇಲಾಖೆಗಳು, ಇಲಾಖೆ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳ ಜತೆಗಿನ ವ್ಯವಹಾರಕ್ಕೆ ಬಳಸಬಹುದಾಗಿದೆ. ಅದೇ ಭಾಷೆಯಲ್ಲೇ ಅವರಿಗೆ ಉತ್ತರ ನೀಡಲಾಗುವುದು ಎಂದು ಅದರಲ್ಲಿ ವಿವರಿಸಿದ್ದಾರೆ.
ಇನ್ನು ಯಾವ ವಿದ್ಯಾರ್ಥಿಗಳ ಮಾತೃ ಭಾಷೆ ಮಲಯಾಳಂ ಅಲ್ಲವೋ ಆ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಯಲ್ಲಿ ಲಭ್ಯವಿರುವ ಭಾಷೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೊರ ರಾಜ್ಯಗಳು ಅಥವಾ ವಿದೇಶಿ ವಿದ್ಯಾರ್ಥಿಗಳು 9, 10ನೇ ತರಗತಿ ಅಥವಾ ಹೈಯರ್ ಸೆಕೆಂಡರಿ ಹಂತದಲ್ಲಿ ಮಲಯಾಳಂ ಪರೀಕ್ಷೆ ಎದುರಿಸುವುದು ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.



















