
ಬೆಂಗಳೂರು: ರಾಜ್ಯ ಸರ್ಕಾರವು ನೇರ ನೇಮಕಾತಿ ಮೂಲಕ ಸರ್ಕಾರಿ ಸೇವೆಗೆ ಸೇರಿದ ನಂತರವೂ ತಮ್ಮ ವಯಸ್ಸು ಮತ್ತು ಜನ್ಮ ದಿನಾಂಕವನ್ನು ಬದಲಾಯಿಸುತ್ತಿರುವ ಪ್ರಕರಣಗಳಿಗೆ ಪೂರ್ಣವಿರಾಮ ಇಡಲು ಮುಂದಾಗಿದ್ದು ಹೀಗಾಗಿ ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿರ್ಣಯದ 1974ರ ಕಾಯ್ದೆಯನ್ನು ರದ್ದುಗೊಳಿಸಲು ಮುಂದಾಗಿದೆ.
ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ವಿಧೇಯಕ-2026ರ ಕರಡು ಪ್ರತಿಯು The.file.in ಗೆ ಲಭ್ಯವಾಗಿದೆ.
ಸರ್ಕಾರಿ ನೌಕರರು ತಮ್ಮ ವಯಸ್ಸು ಮತ್ತು ಜನ್ಮ ದಿನಾಂಕವನ್ನು ಬದಲಾಯಿಸಲು ನ್ಯಾಯಾಲಯಗಳ ಆದೇಶವನ್ನು ಮುಂದಿರಿಸಿ ಪದೇ ಪದೇ ಕೋರಿಕೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುತ್ತಿದ್ದು ಹೀಗಾಗಿ ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ಕಾಯಿದೆ 1974ನ್ನು ಪರಿಷ್ಕರಿಸುವುದು ಅಗತ್ಯವೆಂದು ಸರಕಾರವು ಪರಿಗಣಿಸಿರುವುದು ಪ್ರತಿಯಿಂದ ತಿಳಿದು ಬಂದಿದೆ.
ಯಾವುದೇ ಸೇವೆ ಅಥವಾ ಹುದ್ದೆಗೆ ನೇರ ನೇಮಕಾತಿಯ ಮೂಲಕ ನೇಮಕಾತಿಗಾಗಿ ಆಯ್ಕೆಯಾದ ಅಭ್ಯರ್ಥಿಯ ವಯಸ್ಸು ಮತ್ತು ಜನ್ಮ ದಿನಾಂಕವನ್ನು ದೃಢೀಕರಿಸುವ ದಾಖಲೆಯು ನೈಜತೆಯಿಂದ ಕೂಡಿದೆ ಮತ್ತು ಮಾನ್ಯವಾಗಿದೆ ಎಂದು ನೇಮಕಾತಿ ಪ್ರಾಧಿಕಾರಕ್ಕೆ ಮನವರಿಕೆಯಾಗದ ಹೊರತು ಅವರನ್ನು ನೇಮಕ ಮಾಡುವುದಿಲ್ಲ ಎಂದು ನಿಯಮ ಮಾಡಲಾಗಿದ್ದು ಜೊತೆಗೆ ಅಭ್ಯರ್ಥಿಯ ನೇಮಕಾತಿ ಆದೇಶವನ್ನು ಹೊರಡಿಸಿ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡರೆ ನೇಮಕಾತಿ ಪ್ರಾಧಿಕಾರವು ಅವರ ಸೇವಾ ನೋಂದಣಿ ಅಥವಾ ಸೇವಾ ಪುಸ್ತಕ ಅಥವಾ ಇತರ ಸೇವಾ ದಾಖಲೆಯಲ್ಲಿ ಹಾಗೆಯೇ ಅಂಗೀಕರಿಸಲ್ಪಟ್ಟ ವಯಸ್ಸು ಮತ್ತು ಜನ್ಮ ದಿನಾಂಕವನ್ನು ದಾಖಲಿಸಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಸರಕಾರಿ ಹುದ್ದೆಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರನ್ನು ಸೇರಿಸಿದ ತಕ್ಷಣ ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ವಯಸ್ಸನ್ನು ಜನ್ಮ ದಿನಾಂಕ ಮತ್ತು ಅಂತಹ ಘೋಷಣೆಗೆ ಆಧಾರದೊಂದಿಗೆ ಘೋಷಿಸಬೇಕು, ಜನನ ನೋಂದಣಿಯಿಂದ ದೃಢೀಕರಿಸಿದ ಅಥವಾ ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿ ಅಥವಾ ಯಾವುದೇ ಇತರ ಸಾಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದನ್ನು ಸಾಬೀತುಪಡಿಸುವ ಪ್ರಮಾಣ ಪತ್ರದಲ್ಲಿ ಜನ್ಮ ದಿನಾಂಕವನ್ನು ಸೂಚಿಸುವ ದಾಖಲೆ ಪುರಾವೆಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ಒದಗಿಸಬೇಕು ಎಂದು ತಿಳಿಸಿದೆ.






