ಡಿಎನ್ಎ ಪರೀಕ್ಷೆಯಲ್ಲಿ ತಂದೆ ಎಂದು ಸಾಬೀತಾದರೂ ಮದುವೆಗೆ ನಿರಾಕರಣೆ

ಪುತ್ತೂರಿನಲ್ಲಿ ಬಿಜೆಪಿ ನಾಯಕನ ಪುತ್ರ ಕೃಷ್ಣ ಜೆ ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ ಗರ್ಭವತಿಯನ್ನಾಗಿಸಿ ಆಕೆಗೆ ಮಗು ಜನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ನಡೆಸಲಾದ ಡಿಎನ್ಎ ಪರೀಕ್ಷೆಯಲ್ಲಿ ಕೃಷ್ಣ ಜೆ. ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದರೂ, ಆತ ಯುವತಿಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಸಂತ್ರಸ್ಥ ಮಗುವಿಗೆ ಜನ್ಮ ನೀಡಿದ 6 ತಿಂಗಳಿಗೂ ಹೆಚ್ಚು ಕಾಲವಾಗಿದ್ದು ಇನ್ನೂ ಮಗುವಿಗೆ ನಾಮಕರಣ ಮಾಡಿಲ್ಲ. ಈ ನಡುವೆ ಇವರಿಬ್ಬರ ನಡುವೆ ಸಂಧಾನ ನಡೆಸುವ ಎಲ್ಲಾ ರೀತಿಯ ಪ್ರಯತ್ನಗಳೂ ವಿಫಲವಾಗಿದ್ದು ಇನ್ನೊಂದೆಡೆ ಜಗನ್ನಿವಾಸ್ ರಾವ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಘಟನೆ ಹಿನ್ನೆಲೆ:
ಶಾಲಾ ದಿನಗಳಿಂದಲೂ ಪರಿಚಯವಿದ್ದ ಹಿಂದೂ ಯುವತಿಯ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಕೃಷ್ಣ ಜೆ. ರಾವ್ ಆಕೆ ಗರ್ಭಿಣಿ ಆದ ವಿಚಾರ ಗೊತ್ತಾದ ಬಳಿಕ ಮದುವೆಯಾಗಲು ನಿರಾಕರಿಸಿದ್ದ. ಕೊನೆಗೆ ಎಲ್ಲರ ಒತ್ತಾಯದ ಬಳಿಕ ಮದುವೆ ಆಗುವುದಾಗಿ ಒಪ್ಪಿದ್ದು ಆದರೆ, ಈ ಹಂತದಲ್ಲಿ ಅವನಿಗೆ 21 ವರ್ಷ ಪೂರ್ಣವಾಗಿರಲಿಲ್ಲ. 21 ವರ್ಷ ಆಗುತ್ತಿದ್ದಂತೆ ಮದುವೆ ಮಾಡೋದಾಗಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಭರವಸೆ ನೀಡಿದ್ದರು. ಆದರೆ, ಮಗು ಜನಿಸುತ್ತಿದ್ದಂತೆ ಕೃಷ್ಣ ರಾವ್ ಮದುವೆಗೆ ನಿರಾಕರಿಸಿದಾಗ ಪ್ರಕರಣ ಪೊಲೀಸ್ ಠಾಣೆಗೆ ಮೆಟ್ಟಿಲೇರಿದ್ದು ಈ ಹಂತದಲ್ಲಿ ಬಂಧನಕ್ಕೆ ಒಳಗಾಗಿದ್ದ ಕೃಷ್ಣ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಈ ಹಂತದಲ್ಲಿ ಮಗು ನನ್ನದಲ್ಲ ಎಂದು ನಾಟಕವಾಡಲು ಶುರು ಮಾಡಿದ್ದರಿಂದ ಬಳಿಕ ಕೋರ್ಟ್ ಆದೇಶದಂತೆ ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ವರದಿಯಲ್ಲಿ ಮಗು ಕೃಷ್ಣ ಅವರದ್ದೇ ಎನ್ನುವುದು ಸಾಬೀತಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತೆ ಕುಟುಂಬವು “ನನ್ನ ಮಗುವಿಗೆ ತಂದೆ ಮತ್ತು ನನಗೆ ಪತಿ ಸಿಗಲಿ ಎಂಬ ಆಸೆಯಿಂದ ಸಂಧಾನಕ್ಕೆ ಕಾದಿದ್ದೆ. ಆದರೆ ಈಗ ನ್ಯಾಯಾಲಯ ನೀಡುವ ತೀರ್ಪನ್ನೇ ಎದುರು ನೋಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.





