ಭಾಗ 388
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೮೮ ಮಹಾಭಾರತ
ಇತ್ತ ಪಾಂಡವ ಸೇನೆಯೂ ಯುದ್ದ ಉತ್ಸಾಹದಿಂದ ಸಿದ್ದವಾಯಿತು. ಕುರು ಸೇನೆಯೂ ಮಹಾ ಉತ್ಸಾಹದಿಂದ ಸಮರ ಸನ್ನದ್ದವಾಗಿದೆ. ಪ್ರಚಂಡ ಚಂಡ ಮಾರುತದಂತೆ ಅತಿವೇಗದಿಂದ ಆಕ್ರಮಿಸಿದ ಕೌರವ ಸೇನೆಯನ್ನು ಪರ್ವತದಂತೆ ಅಚಲವಾಗಿ ನಿಂತು ಪಾಂಡವ ಪಕ್ಷ ಎದುರಿಸಿ ಸೀಳುತ್ತಿದೆ.
ನೋಡುತ್ತಿದ್ದಂತೆಯೆ ಅಶ್ವತ್ಥಾಮ ದಿವ್ಯ ಧನುಸ್ಸನ್ನೆತ್ತಿ ನಾರಾಯಣಾಸ್ತ್ರವನ್ನು ಹೆದೆಯೇರಿಸಿ ಸಂಧಾನಗೊಳಿಸಿದನು. ಎದುರಾಗಿದ್ದ ಸಮಸ್ತ ಸೇನೆಯೂ ಸರ್ವನಾಶವಾಗುವಂತೆ ಸವರುವ ಸಂಕಲ್ಪ ಸಿದ್ಧನಾಗಿ ಪ್ರಯೋಗಿಸಿ ಬಿಟ್ಟನು. ಕ್ಷಣಾರ್ಧದಲ್ಲಿ ಮಹಾ ವಿನಾಶ ಆಗತೊಡಗಿತು. ಪಾಂಡವ ಪಕ್ಷದ ಕಟ್ಟಾಳುಗಳು, ರಥಿಕರು ಕತ್ತರಿಸಲ್ಪಟ್ಟು ಅವರ ದೇಹಗಳ ಪರ್ವತ ಸೃಷ್ಟಿಯಾಯಿತು. ಆಯುಧ, ಶರಗಳು ಬಿದ್ದು ಶಿಖರದಂತಾದರೆ, ಅದರ ಮೇಲೆ, ಎಡೆ ಸಂಧುಗಳಲ್ಲಿ ರಥಧ್ವಜಗಳು ಸಿಲುಕಿ ರೆಂಬೆ ಕೊಂಬೆಗಳಂತೆ ರಾಶಿ ರಾಶಿಯಾಗಿ ಬಿದ್ದವು. ಸತ್ತು ಬಿದ್ದ ಕುದುರೆ, ಆನೆಗಳು ಪರ್ವತದಲ್ಲಿ ಬಂಡೆಗಳಂತೆ ಕಾಣುತ್ತಿವೆ. ಅಲ್ಲಲ್ಲಿ ಎಸೆಯಲ್ಪಟ್ಟು ಬಿದ್ದಿರುವ ಧನುಸ್ಸುಗಳು ಪರ್ವತದಲ್ಲಿರುವ ಲತೆ, ಬಳ್ಳಿಗಳಂತಾಗಿವೆ. ತುಂಡು ತುಂಡಾಗಿ ಬಿದ್ದಿರುವ ಹತ ಶರೀರಗಳಿಂದ ಜಿನುಗಿ ಧಾರೆಯಾಗಿ ಹರಿದಿಳಿಯಲು ತೊಡಗಿದ ರಕ್ತದಿಂದ ಕೆನ್ನೀರ ತೊರೆಯಂತೆ ಭಾಸವಾಗುತ್ತಿದೆ. ಇಷ್ಟಾಗುತ್ತಲೆ ಮಾಂಸ ಭಕ್ಷಿಗಳಾದ ಪಕ್ಷಿಗಳು ಬಂದು ಹಾರಾಡ ತೊಡಗಿದಾಗ ಭೀಕರವಾಗಿ ಗೋಚರಿಸಿತು.
ಪ್ರಳಯ ಕಾಲದ ರುದ್ರನಂತೆ ಗುರುಪುತ್ರ ದ್ರೌಣಿ ಮಾರಣ ಹೋಮ ದೀಕ್ಷಿತನಂತೆ ನಿಂತು ಘರ್ಜಿಸತೊಡಗಿದ್ದಾನೆ. “ಮಹಾತ್ಮನೂ, ಪೂಜನೀಯನೂ, ಅಜೇಯನೂ ಆಗಿದ್ದ ನನ್ನ ಪಿತಾಶ್ರೀಯವರು ಶಸ್ತ್ರ ಸಂನ್ಯಾಸ ಮಾಡಲು ಕಾರಣವಾಗುವ ಸುಳ್ಳು ಹೇಳಿದ ಅಸತ್ಯಾತ್ಮ, ಅಧರ್ಮರಾಯ ನಿನ್ನ ರಕ್ಷಣೆ ಮಾಡುತ್ತಿದ್ದ ಧರ್ಮ ನಿನ್ನನ್ನು ತೊರೆದಿದೆ. ನಿರಾಯುಧನಾಗಿದ್ದ ನನ್ನಯ್ಯನ ಶಿರಗಡಿದ ಹೇಡಿ, ದುಷ್ಟ ದೃಷ್ಟದ್ಯುಮ್ನ ನಿನ್ನ ಅದೃಷ್ಟವೂ ಭ್ರಂಶವಾಗಿದೆ. ಇನ್ನು ನಿಮ್ಮೀರ್ವರ ಸಂಹಾರಗೈದು ಶಾಕಿಣಿ ಡಾಕಿಣಿಯಾದಿ ಕ್ಷುದ್ರ ಶಕ್ತಿಗಳಿಗೆ ಉಪಹಾರವಾಗಿಸುತ್ತೇನೆ. ಶೀಘ್ರವಾಗಿ ಮರಣ ದೀಕ್ಷೆಗೆ ಸಿದ್ಧರಾಗಿರಿ. ನಿಮಗೀಗ ಯಾರ – ಯಾವ ರಕ್ಷಣೆಯೂ ಒದಗದು” ಎಂದು ಆರ್ಭಟಿಸಿ ಅಬ್ಬರಿಸಿದನು.
ಪಾಂಡವರ ಪಕ್ಷದ ಯಾರೆಲ್ಲಾ ಸೇನಾಳುಗಳು ಆಯುಧಧಾರಿಗಳಾಗಿ ಯುದ್ಧನಿರತರಾಗಿದ್ದಾರೊ, ಅವರೆಲ್ಲರ ಸಂಹಾರಕ್ಕಾಗಿ ನಾರಾಯಣಾಸ್ತ್ರ ಸಿಡಿದು ಸ್ಪೋಟಗೊಳ್ಳುತ್ತಾ ಒಂದು ಎರಡಾಗಿ, ಎರಡು ನಾಲ್ಕಾಗಿ, ಹತ್ತು ನೂರಾಗಿ, ನೂರು ಸಾವಿರವಾಗಿ ಗುಣಿಸಲ್ಪಟ್ಟಂತೆ ಪ್ರತ್ಯೇಕ ಅಸ್ತ್ರಗಳಾಗಿ ವೃದ್ಧಿಗೊಂಡು ಆಕಾಶವನ್ನು ಚಪ್ಪರದಂತೆ ವ್ಯಾಪಿಸತೊಡಗಿತು.
ಇದನ್ನು ಕಂಡ ಧರ್ಮರಾಯ ಕೃಷ್ಣಾರ್ಜುನರ ರಥದ ಸಮೀಪಕ್ಕೆ ಧಾವಿಸಿ “ಹೇ ಕೃಷ್ಣಾ! ಭೀಷ್ಮ ದ್ರೋಣರೆಂಬ ದಾಟಲು ಅಸಾಧ್ಯವಾಗಿದ್ದ ಮಹಾಸಾಗರಗಳನ್ನು ನೀನು ಅಂಬಿಗನಾಗಿ ಪಾರು ಮಾಡಿಸಿ ಮುನ್ನಡೆಸಿರುವೆ. ಈಗ ಈ ಅಶ್ವತ್ಥಾಮನೆಂಬ ಸರೋವರದಲ್ಲಿ ನಾವು ಮುಳುಗುವಂತಾಯಿತೆ? ಇದಕ್ಕೆ ಪರಿಹಾರ ಹೇಗೆ? ಆಕಾಶವನ್ನು ಚಪ್ಪರದಂತೆ ವ್ಯಾಪಿಸುತ್ತಿರುವ ನಾರಾಯಣಾಸ್ತ್ರದಿಂದ ನಮ್ಮ ರಕ್ಷಣೆ ಹೇಗೆ ಸಾಧ್ಯವಾದೀತು?” ಎಂದು ಬೇಡುತ್ತಾ ಕೇಳಿದನು.
ಆ ಕೂಡಲೆ ಶ್ರೀಕೃಷ್ಣನು ಮಹಾ ಮೇಘ ಸ್ಪೋಟಿಸಿದ ಬರಸಿಡಿಲಿನಂತೆ ಘರ್ಜನೆಯ ಸ್ವರದಿಂದ ಎಲ್ಲರಿಗೂ ಕೇಳಿಸುವಂತೆ ಹೇಳತೊಡಗಿದನು “ವೀರ ಯೋಧರೇ, ನೀವು ಹೋರಾಡಿ ಗೆಲ್ಲಬಹುದಾದ ಶಸ್ತ್ರವಲ್ಲ ಈ ನಾರಾಯಣಾಸ್ತ್ರ. ನೀವೆಲ್ಲರೂ ಆ ದಿವ್ಯಾಸ್ತ್ರಕ್ಕೆ ಶರಣಾಗಿ ನಮಿಸಿ, ನಿಮ್ಮ ಆಯುಧಗಳೆಲ್ಲವನ್ನೂ ಕೆಳಗಿರಿಸಿ. ರಥಿಕರು ರಥದಿಂದಿಳಿದು ನಿರಾಯುಧರಾಗಿ ವಂದಿಸುತ್ತಾ ನಿಲ್ಲಿ” ಎಂದನು.
ಆ ತಕ್ಷಣ, ಸಂಪೂರ್ಣ ಪಾಂಡವ ಸೇನೆ ಕೈ ಮುಗಿದು, ಶಿರಬಾಗಿ ನಾರಾಯಣಾಸ್ತ್ರಕ್ಕೆ ಶರಣಾಗಿ ನಿರಾಯುಧರಾಗಿ ನಿಂತರು. ಆಕಾಶದಲ್ಲಿ ವ್ಯಾಪಿಸಿದ್ದ ಮಳೆಹನಿಗಳು ಒಂದಾಗಿ ನದಿಯಾಗಿ ಹರಿಯುವಂತೆ ನಾರಾಯಣಾಸ್ತ್ರ ಏಕೀಕರಣಗೊಳ್ಳತೊಡಗಿತು.
ಹೀಗಿರಲು ಪರಮ ಕ್ರುದ್ಧನಾದ ಭೀಮಸೇನ “ಹೇ ಅರ್ಜುನಾ! ನೀನು ಅಶ್ವತ್ಥಾಮನಿಗೆ ಹೆದರಬೇಕಾಗಿಲ್ಲ. ಆತನಿಗಿಂತ ನೀನು ಎಷ್ಟೋ ಪಟ್ಟು ಅಧಿಕ ಪರಾಕ್ರಮಿ. ಗಾಂಡೀವವನ್ನು ಕೆಳಗಿರಿಸಿ ಶರಣಾದರೆ ನಿನ್ನ ಮಹತ್ತಾದ ವೀರ ಚಾರಿತ್ರ್ಯಕ್ಕೆ ಅಳಿಯದ ಕಳಂಕವಾಗಿ ಉಳಿದು ಹೋಗುವಂತಾಗುತ್ತದೆ. ದಿವ್ಯ ಧನುಸ್ಸನ್ನೆತ್ತಿ ಯುದ್ದ ಮಾಡು. ನಾನು ಅಶ್ವತ್ಥಾಮನನ್ನು ಬಿಡಲಾರೆ” ಎಂದು ತನ್ನ ರುಧಿರಮುಖಿ ಗದೆಯನ್ನೆತ್ತಿ ಬೀಸತೊಡಗಿದನು.
ಆಗ ಅರ್ಜುನ “ಅಣ್ಣಾ ವೃಕೋದರಾ! ನೀನು ದುಡುಕಿ ಅವಿವೇಕಿಯಾಗದಿರು. ನನಗೂ ಒಂದು ವೃತವಿದೆ – ಪೂಜನೀಯ ಬ್ರಾಹ್ಮಣ, ದೇವರು ಮತ್ತು ಗೋವುಗಳನ್ನು ಘಾತಿಸಲಾರೆ. ಅಂತೆಯೆ ನಾನೀಗ ಪೂಜಿಸಿ ವಂದಿಸಬೇಕಾದ ನಾರಾಯಣಾಸ್ತ್ರಕ್ಕೆ ನಮಿಸಿ ನಿಂತಿದ್ದೇನೆ ಹೊರತು ಅಶ್ವತ್ಥಾಮನಿಗೆ ಹೆದರಿ ಹೀಗೆ ಮಾಡುತ್ತಿರುವುದಲ್ಲ. ನೀನು ಗದೆಯನ್ನು ಕೆಳಗಿರಿಸಿ ದೇವತಾ ಶಕ್ತಿ ಸ್ವರೂಪವಾದ ದಿವ್ಯಾಸ್ತ್ರಕ್ಕೆ ವಂದಿಸು” ಎಂದನು. ಆದರೆ ಭೀಮಸೇನ ಮಾತ್ರ ಉದ್ದಟತನ ತೋರುತ್ತಾ ಗದಾಧಾರಿಯಾಗಿಯೆ ಮುಂದಾದಾಗ ಅರೆಕ್ಷಣಕ್ಕೆ ಗಾಂಡೀವವನ್ನೆತ್ತಿ ನಿಮೇಷ ಮಾತ್ರದಲ್ಲಿ ದಿವ್ಯ ವಾರುಣಾಸ್ತ್ರವನ್ನು ಭೀಮನತ್ತ ಪ್ರಯೋಗಿಸಿ ಆತನನ್ನು ನಿರತ ಜಲಪ್ರೋಕ್ಷಣೆಯಲ್ಲಿರುವಂತೆ ಮಾಡಿ ಆಯುಧ ಕೆಳಗಿರಿಸಿದನು. ಆಯುಧಧಾರಿಯಾದ ಭೀಮನತ್ತ ನಾರಾಯಣಾಸ್ತ್ರ ಪ್ರಳಯಾಗ್ನಿಯಂತೆ ಪ್ರಜ್ವಲಿಸುತ್ತಾ ಬಂದು ಸುಟ್ಟು ಭಸ್ಮಗೊಳಿಸಲು ಮುಂದಾಯಿತು. ಭೀಮಸೇನನ ರಥವನ್ನೂ ಅಗ್ನಿಗಾಹುತಿಯಾಗಿಸಿ ಬಿಟ್ಟಿತು. ಆದರೂ ಭೀಮಸೇನ ತಾನು ಸತ್ತರೂ ಸರಿ, ಸಾಯುವವರೆಗೆ ಹೋರಾಡುವೆ ಎಂಬಂತೆ ಕಾದಾಡುತ್ತಿದ್ದನು. ಅರ್ಜುನನಿಂದ ಪ್ರಯೋಗಿಸಲ್ಪಟ್ಟಿದ್ದ ವರುಣಾಸ್ತ್ರ ತಕ್ಕಮಟ್ಟಿಗೆ ಭೀಮ ಅಗ್ನಿಗಾಹುತಿಯಾಗಂತೆ ತಡೆದರೂ, ನಾರಾಯಣಾಸ್ತ್ರದ ಮುಂದೆ ವರುಣ ಆವಿಯಾಗಲು ಹೆಚ್ಚು ಹೊತ್ತು ಬೇಕಾದೀತೆ? ಇದನ್ನರಿತು ಜಿಗಿದು ಹಾರಿದ ಕೃಷ್ಣಾರ್ಜುನರು ನರನಾರಾಯಣರಂತೆ ಮಹಾ ನಾರಾಯಣಾಸ್ತ್ರದ ಜ್ವಾಲಾಗ್ನಿಯನ್ನು ಹೊಕ್ಕು, ನುಸುಳಿ ಭೀಮನನ್ನು ಎಳೆದು, ಆಯುಧಗಳನ್ನು ಸೆಳೆದೆಸೆದರು. ಶ್ರೀಕೃಷ್ಣನು “ಭೀಮಸೇನಾ! ಮೊದಲು ನಾರಾಯಣಾಸ್ತ್ರ ಉಪಶಮನವಾಗಲಿ, ನಂತರ ಬದುಕುಳಿದರೆ ಕೌರವರ ವಧೆಗೈಯುವ ನಿನ್ನ ಪ್ರತಿಜ್ಞೆ ಪೂರೈಸಬಹುದು. ಈ ರೀತಿ ಔದತ್ಯ ತೋರಿದರೆ ನೀನು ಭಸ್ಮೀಭೂತನಾಗಿ ಹೋಗುವೆ” ಎಂದು ಎಚ್ಚರಿಸಿದನು.
ಆಗ ಒತ್ತಾಯಪೂರ್ವಕವಾಗಿ ಭೀಮ ಶಸ್ತ್ರ ತ್ಯಾಗ ಗೈದು ಮಹಾಸ್ತ್ರಕ್ಕೆ ನಮಿಸಿ ಶರಣಾದನು. ಪ್ರಳಯಸದೃಶವಾಗಿದ್ದ ನಾರಾಯಣಾಸ್ತ್ರಕ್ಕೆ ಪ್ರತಿಸ್ಪರ್ಧಿಗಳಿಲ್ಲದೆ ಅದೂ ಪ್ರಶಾಂತವಾಗತೊಡಗಿತು.
ತಲೆಯೆತ್ತಿ, ಎದ್ದು ನಿಂತಿರುವ ಕೃಷ್ಣನತ್ತ ಜ್ವಾಜಾಲ್ಯಮಾನವಾಗಿ, ದೇದಿಪ್ಯಮಾನವಾಗಿ ಬಂದು ಪರಮಾತ್ಮ ಕೃಷ್ಣಾವತಾರಿಯಾದ ನಾರಾಯಣನಲ್ಲಿ ಐಕ್ಯವಾಯಿತೊ ಏನೋ! ಯಾರಿಗೂ ಈ ವಿದ್ಯಮಾನ ಗೋಚರವಾಗಲಿಲ್ಲ. ಅಂತೂ ನಾರಾಯಣಾಸ್ತ್ರ ಉಪಶಮನಗೊಂಡು ಪ್ರಕರಣ ತಿಳಿಯಾಯಿತು.
ಅಶ್ವತ್ಥಾಮ ಹಲ್ಲುಕಿತ್ತ ಹಾವಿನಂತೆ ಬುಸುಗುಡಲಾರಂಭಿಸಿದ. ಮತ್ತೆ ಆಯುಧಧಾರಣೆ ಮಾಡಿದ ಪಾಂಡವ ಪಕ್ಷದ ಮೇಲೆ ನಾರಾಯಣಾಸ್ತ್ರವನ್ನು ಆವಾಹಿಸಿ ಪ್ರಯೋಗಿಸುವುದೋ? ಅದು ಸಾಧ್ಯವಿಲ್ಲ. ಕಾರಣ ಪ್ರಯೋಗಿಸಿದ ಪ್ರಯೋಕ್ತೃವಿನ ಬಳಿ ಮಹಾಸ್ತ್ರ ಹಿಂದಿರುಗಿ ಬಂದಿಲ್ಲ. ಮತ್ತೆ ಅಭಿಮಂತ್ರಿಸಿದರೆ ಅನಾಹುತ ಸಂಭವಿಸುತ್ತದೆ. ಅದು ಪ್ರಯೋಕ್ತೃ ಅಶ್ವತ್ಥಾಮನನನ್ನು ನಾಶಗೊಳಿಸೀತು. ಕೌರವನೂ ಚಿಂತೆಗೊಳಗಾಗಿ ಮ್ಲಾನವದನನಾದಾಗ ಗುರುಪುತ್ರ ದ್ರೌಣಿ “ದುರ್ಯೋಧನಾ! ಇದೆಲ್ಲಾ ಆ ಕೃಷ್ಣನ ತಂತ್ರ. ಅವನೇನಾದರೂ ಸೇನೆಯನ್ನು ಶರಣಾಗತಗೊಳಿಸದೆ ಹೋಗಿದ್ದರೆ, ಈ ಹೊತ್ತು ನಿಷ್ಪಾಂಡವ ಪೃಥ್ವಿ ಸಾಕ್ಷಾತ್ಕಾರಗೊಂಡಾಗಿರುತ್ತಿತ್ತು. ಇರಲಿ, ಇಷ್ಟಕ್ಕೇ ದ್ರೋಣಪುತ್ರನಾದ ನಾನು ವಿರಮಿಸಲಾರೆ. ನೋಡು ನನ್ನ ಮುಂದಿನ ಉಗ್ರ ಹೋರಾಟ” ಎಂದನು.
ಮುಂದುವರಿಯುವುದು…





