
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿನ ಬೆಳಗಾಂ ಶುಗರ್ಸ್ ಹತ್ತಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಸಕ್ಕರೆ ಕಾರ್ಖಾನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಕಬ್ಬು ಬೆಳೆಯುವ ಪ್ರದೇಶದಲ್ಲಿನ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ್ದು ಈ ವೇಳೆ ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಬೇಕಾಗಿದೆ. ರಸಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದ ರೈತರು ಹೊರ ಬರಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಕ್ಷೇತ್ರಗಳಿಗೆ ಭೇಟಿ ನೀಡಿ ರೈತರಿಗೆ ಹೊಸ ಹೊಸ ತಂತ್ರಜ್ಞಾನ ಬಳಕೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು. ಕೃಷಿಯನ್ನು ಲಾಭದಾಯಕವ್ನಾಗಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕು. ರಾಜ್ಯ ಸರ್ಕಾರ ರೈತಪರ ಸರ್ಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭೂಮಿ ಜೀವದ ತೊಟ್ಟಿಲು, ಇಂತಹ ಜೀವದ ತೊಟ್ಟಿಲನ್ನು ಬಂಜೆ ಮಾಡಬಾರದು ಎಂದು ತಿಳಿಸಿದ್ದಾರೆ.





