
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ ಎಂದು ಪ್ರಶ್ನಿಸಿದ್ದು ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು ಬಾಂಗ್ಲಾ ವಲಸಿಗರ ಬಗ್ಗೆ ಅತಾರ್ಕಿಕವಾಗಿ ರಾಜ್ಯ ಸರ್ಕಾರವನ್ನು ಟೀಕಿಸುವ ಬಿಜೆಪಿಗರಿಗೆ ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳುವಂತಾಗಿದ್ದು ಹೇಗೆ ಮತ್ತು ಯಾರ ಅಸಾಮರ್ಥ್ಯದಿಂದ ಎಂಬ ಪ್ರಶ್ನೆಗೆ ಉತ್ತರ ಹೇಳುವ ಧೈರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ದಾಳಿ ಆಗುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಾಣಾಕ್ಷತನ ಎಲ್ಲಿ ಅಡಗಿತ್ತು? ವರ್ಷಗಳ ಕಾಲ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದದ್ದನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದನ್ನು ಅಸಾಮರ್ಥ್ಯ ಎನ್ನಬೇಕೊ ಅಥವಾ ಪರಾಕ್ರಮ ಎನ್ನಬೇಕೊ? ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ಇಡೀ ಜಗತ್ತಿನ ಎದುರು ದೇಶದ ಘನತೆ ಮಣ್ಣುಪಾಲಾದಾಗ ಕಣ್ಮುಚ್ಚಿ ಕುಳಿತದ್ದು ಅಸಾಮರ್ಥ್ಯವಲ್ಲದೆ ಇನ್ನೇನು? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.





