
ಕುಂದಾಪುರ: ಬಿಗ್ ಬಾಸ್ ಸ್ಪರ್ದಿ ಚೈತ್ರ ಕುಂದಾಪುರ ಅವರ ತಂದೆ ಬಾಲಕೃಷ್ಣ ಅವರು ನನ್ನ ಮಗಳು ಚೈತ್ರ ಅವರಿಂದ ಅನ್ಯಾಯ ಆಗುತ್ತಿದೆ. ಆಕೆ ನನಗೆ ಕೊಲೆ ಬೆದರಿಕೆ ಹಾಕಿದ್ದು ದೈಹಿಕ ಮಾನಸಿಕ ಹಿಂಸೆ ನೀಡುತ್ತಿದ್ದರು. ನನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಕೋರಿ ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ ಅನ್ವಯ ಪರಿಹಾರ ಕೋರಿ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದು ಇದೀಗ ಈ ಕುರಿತು ತೀರ್ಪು ಹೊರಡಿಸಿದ ಉಪವಿಭಾಗಿಧಿಕಾರಿಗಳ ನ್ಯಾಯಾಲಯವು ಚೈತ್ರ ಕುಂದಾಪುರ ಅವರು ತನ್ನ ತಂದೆಗೆ ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರ ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕು ಎಂದು ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
ಕೆಲ ಸಮಯದ ಹಿಂದೆ ಚೈತ್ರ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅವರ ತಂದೆ ಬಾಲಕೃಷ್ಣ ನಾಯಕ್ ಮಗಳ ವಿರುದ್ಧವೇ ಸಾಲು ಸಾಲು ಆರೋಪ ಮಾಡಿದ್ದು ‘ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೆವು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಚೈತ್ರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಆಕೆಗೆ ಯಾರು ದೊಡ್ಡ ಸ್ಥಾನಮಾನ ಕೊಡಬೇಡಿ. ಆಕೆ ನನಗೆ ಕೊಲೆ ಬೆದರಿಕೆ ಹಾಕಿದ್ದಳು. ಹೀಗಾಗಿ ನಾನು ಮಂಗಳೂರಿನ ಖಾಸಗಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದೆ. ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು’ ಎಂದು ಆರೋಪಿಸಿದ್ದರು.
ತಂದೆ ಮಾಡಿದ ಆರೋಪಕ್ಕೆ ಚೈತ್ರ ಕುಂದಾಪುರ ಪ್ರತಿಕ್ರಿಯಿಸಿದ್ದು “ಯಾವ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ” ಎಂದು ಬರೆದುಕೊಳ್ಳುವ ಮೂಲಕ ತಿರುಗೇಟು ನೀಡಿದ್ದರು.





