
ಹೊಸದಿಲ್ಲಿ: ಇಂಡಿಗೋ ವಿಮಾನಯಾನ ಸಂಸ್ಥೆಯು ಗುರುವಾರ 550ಕ್ಕೂ ಹೆಚ್ಚು ಮತ್ತು ಶುಕ್ರವಾರ ಸುಮಾರು 400 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದು ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಸರಕಾರದ ಏಕಸ್ವಾಮ್ಯ ಮಾದರಿಯೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಭಾರತಕ್ಕೆ ಪ್ರತಿ ಕ್ಷೇತ್ರದಲ್ಲೂ ನ್ಯಾಯಯುತ ಸ್ಪರ್ಧೆ ಬೇಕು. ಇಂಡಿಗೋ ವಿಮಾನಯಾನ ಸಂಸ್ಥೆಯ ಈ ನಿರ್ಧಾರದಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಇಂಡಿಗೋ ಏರ್ಲೈನ್ಸ್ ನ ಗೊಂದಲವು ಸರಕಾರದ ಏಕಸ್ವಾಮ್ಯ ಮಾದರಿಯ ಪರಿಣಾಮ. ವಿಳಂಬ, ರದ್ಧತಿ ಮತ್ತು ಅಸಹಾಯಕತೆಯ ರೂಪದಲ್ಲಿ ಸಾಮಾನ್ಯ ಭಾರತೀಯರು ಇದಕ್ಕೆ ಬೆಲೆ ತೆರುತ್ತಿದ್ದಾರೆ ಎಂದು ಹೇಳಿದ್ದಾರೆ.



















