ಭಾಗ 366
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೬೬ ಮಹಾಭಾರತ
ಇತ್ತ ಮುಂದುವರಿಯುತ್ತಿದ್ದ ಕೃಷ್ಣಾರ್ಜುನರಿಗೆ ದ್ರೋಣ ವಿರಚಿತ ಪದ್ಮವ್ಯೂಹದ ಇನ್ನೊಂದು ಅತಿಬಲ ಆವರ್ತ ಎದುರಾಯಿತು. ಈಗ ಎದುರಾಗಿರುವುದು ವಿಶೇಷ ವ್ಯೂಹ ಭಾಗ. ಇಲ್ಲಿ ಸ್ಥಿತರಾಗಿರುವವರು ವಿಶಿಷ್ಟರು. ಯವನರು, ಪಾರದರು, ಶಕರು, ಬಾಹ್ಲಿಕರು, ದ್ರಾವಿಡರು, ದಾರ್ವಾತಿಸಾರರು, ಮ್ಲೇಚ್ಛರು, ಪೌಂಡ್ರರೇ ಮೊದಲಾದವರಿಂದ ರಚಿಸಲ್ಪಟ್ಟಿತ್ತು. ಇವರಲ್ಲಿ ಯವನರು ಅಸುರರ ಮಾಯಾವಿದ್ಯೆ ಬಲ್ಲವರಾಗಿ, ಘೋರರೂಪಿಗಳಾಗಿದ್ದರು. ಭೀಕರ ಕಣ್ಣುಗಳನ್ನು ಹೊಂದಿರುವ, ಕಾಗೆಯ ವರ್ಣದ, ಕೆದರಿದ ಕೂದಲಿನ ವಿಕಾರ ರೂಪಿಗಳಾಗಿದ್ದಾರೆ. ಇವರು ದುರಾಚಾರಿಗಳೂ, ಕಲಹಪ್ರಿಯರೂ, ಸ್ತ್ರೀ ಲೋಲರೂ ಆಗಿದ್ದಾರೆ. ಅರ್ಜುನ ಎದುರಾಗುತ್ತಲೆ ಆನೆಗಳ ಹೊಟ್ಟೆಯೊಳಗೆ ಅವಿತು ಮಾಯಾ ಯುದ್ದ ಪ್ರದರ್ಶನವನ್ನು ಆರಂಭಿಸಿದರು.
ಸವ್ಯಸಾಚಿ ಅತ್ಯುಗ್ರನಾಗಿ ಪ್ರಳಯಾಂತಕ ಸ್ವರೂಪಿಯಾಗಿ ಅಕ್ಷಯ ತೂಣಿರದಿಂದ ಸವ್ಯಾಪಸವ್ಯವಾಗಿ ಸುತ್ತಲೂ ಬಾಣ ಪ್ರಯೋಗಿಸುತ್ತಾ, ಗಾಂಡೀವವನ್ನು ಎಡಗೈ ಬಲಗೈಗಳ ಮಧ್ಯೆ ಹಸ್ತಾಂತರಿಸುತ್ತಾ ಎರಡೂ ಕೈಗಳಿಂದ ಬಾಣ ಪ್ರಯೋಗಿಸಿ ಶರವರ್ಷಗೈಯ ತೊಡಗಿದನು. ಆನೆಗಳ ಉದರ ಸೀಳಿ ಮರೆಯಲ್ಲಿದ್ದು ಯುದ್ದ ಮಾಡುತ್ತಿದ್ದವರಿಗೆ ಮರಣ ದೀಕ್ಷೆಯನ್ನೀಯುವ ಮಾರಣ ಯಜ್ಞ ನಿರತನಾದನು. ಯವನರ ಮಾಯಾಯುದ್ಧಕ್ಕೆ ಪ್ರತಿಯಾಗಿ ಮೋಹನಾಸ್ತ್ರವನ್ನು ಪ್ರಯೋಗಿಸಿದನು. ಪರಿಣಾಮ ಎದುರಾಳಿ ಯವನ ಯೋಧರಿಗೆ ಸರ್ವತ್ರವಾಗಿ ತನ್ನ ಬಳಿ ಇರುವಾತ ಅರ್ಜುನನಾಗಿ ಕಾಣಿಸತೊಡಗಿದನು. ಒಟ್ಟಾರೆಯಾಗಿ ರಣಾಂಗಣ ಪಾರ್ಥಮಯವಾಗಿದೆ. ತನ್ನ ಸನಿಹವಿರುವ ಯೋಧನು ಪಾರ್ಥನಾಗಿ ಕಾಣಿಸಿ, ಆತನ ಜೊತೆ ಹೋರಾಡಿ ಕೊಲ್ಲತೊಡಗಿದರು. ಅವನು ಸತ್ತು ಬೀಳುವಾಗ ಯವನ ವೀರ. ತಿರುಗಿ ನೋಡಿದರೆ ಬಳಿಯಲ್ಲಿ ಇರುವಾತ ಪಾರ್ಥ. ಕ್ರೋಧಿತನಾಗಿ ಅವನ ಮೇಲೆರಗಿ ಹೋರಾಡಿ ಪರಸ್ಪರ ಅವನ್ನವರು ಕೊಲ್ಲುತ್ತಾ ನಾಶ ಹೊಂದಿದರು.
ಧನಂಜಯ ಮ್ಲೇಚ್ಚರತ್ತ ತಿರುಗಿ ಅಗಣಿತವಾಗಿ ಸಂಕಲ್ಪ ಶರಗಳನ್ನು ಪ್ರಯೋಗಿಸುತ್ತಾ ಮಹಾಸ್ತ್ರಗಳಿಂದ ಪೂರ್ಣ ಕೇಶ (ಕೂದಲು) ಉಳ್ಳವರ ಮುಂಡನ, ಅರ್ಧ ಮುಂಡಿತ ( ಅರೆ ಬರೆ – ಓರೆ ಕೋರೆ) ಕೇಶವುಳ್ಳವರನ್ನು, ಜಟಾಧಾರಿಗಳನ್ನು, ಗಡ್ಡ ಬಿಟ್ಟು ತಲೆ ಬೋಳಿಸಿದವರು ಹೀಗೆ ವಿಕೃತಿ ವಿನ್ಯಾಸದ ವಿಲಾಸಿಗಳ ಅರ್ಧ ಮುಂಡನಗೈದು ಮಾನಹರಣಮಾಡಿ, ತದ ನಂತರ ಸವರಿ ಸಮಾಪ್ತಿಗೊಳಿಸಿದನು. ಕಾಗೆ, ರಣಹದ್ದು, ಬಕ ಪಕ್ಷಿಗಳಿಗೆ, ಶಾಕಿಣಿ ಡಾಕಿಣಿ, ಮೃತ್ಯುದೇವತೆಗಳ ಗಣಗಳಿಗೆ ಆಹಾರ ಬಲಿತರ್ಪಣ ನೀಡಿ ಮುನ್ನಡೆದನು. ದುರುಳರ ರಕ್ತ ಕೆನ್ನೀರ ಧಾರೆಯಾಗಿ, ಮಾಂಸ ಮಜ್ಜೆಗಳಿಂದ ತುಂಬಿ ಹೊಳೆಯಾಗಿ ತುಂಬಿ ಹರಿದು ರಕ್ತ ಸರೋವರ ಆಗಿಹೋಯಿತು. ಮುಂಡನಗೊಳಿಸಿದ ಕೂದಲು ತೇಲುತ್ತಾ, ರುಂಡಗಳೂ ಸೇರಿ ಕೆಂಪು ಕೆರೆಯಲ್ಲಿ ಪಾಚಿಯಂತೆ ಕಾಣತೊಡಗಿತು. ಸತ್ತು ಬಿದ್ದ ಆನೆಗಳು ಕೆರೆಯಲ್ಲಿನ ಬಂಡೆಗಳಂತಾಗಿ ಹೋಗಿವೆ.
ಹೀಗೆ ರುದ್ರ ಭಯಂಕರನಾಗಿ ಬವರವೀಯುತ್ತಾ ಸಾಗಿದ ನರನಾರಾಯಣರು ಅರಣ್ಯದ ಒಣಗಿದ ಮರ, ಹುಲ್ಲು, ಕಟ್ಟಿಗೆಗಳಿಗೆ ವಾಯುವಿನ ಸಹಾಯದಿಂದ ಅಗ್ನಿ ಸ್ಪರ್ಶವಾಗುತ್ತಾ ಹೇಗೆ ಭುಗಿಲೆದ್ದು ಹತ್ತಿ ಉರಿದು ಭಸ್ಮಗೊಳಿಸುತ್ತದೋ! ಆ ತೆರನಾಗಿ ಅಗ್ನಿ ರೂಪನಾದ ಅರ್ಜುನನು ಮಾರುತ ಸ್ವರೂಪನಾದ ಕೃಷ್ಣನ ಸಹಕಾರದಿಂದ, ಬಾಣರೂಪದ ಜ್ವಾಲೆಗಳಿಂದ ಕುರು ಸೇನೆಯೆಂಬ ಅರಣ್ಯವನ್ನು ಪರಮಕ್ರುದ್ಧನಾಗಿ ಸುಡು ಸುಕಾರಿಗೈದು, ಸರ್ವನಾಶಗೈದನು. ಮತ್ತೊಂದು ಸುತ್ತು ಭೇದಿಸಿ, ಪದ್ಮವ್ಯೂಹದೊಳ ಹೊಕ್ಕನು.
ಹೀಗೆ ಪಾರ್ಥ ವ್ಯೂಹ ಭೇದಿಸುತ್ತಾ ಜಯದ್ರಥನತ್ತ ಸಾಗುತ್ತಿರುವಾಗ ದುರ್ಯೋಧನನ ಕ್ರೋಧ ಸೇನಾಪತಿ ದ್ರೋಣರತ್ತ ತಿರುಗಿತು. ಆಚಾರ್ಯ ದ್ರೋಣರನ್ನು ಕಂಡು, “ಏನು ಮಾಡುತ್ತಿದ್ದೀರಿ ನೀವು? ಒಂದೆಡೆ ಪಾರ್ಥ ವ್ಯೂಹದ ಒಳನುಗ್ಗಿ ಮನಬಂದಂತೆ ನಮ್ಮ ಸೇನಾನಾಶ ನಿರತನಾಗಿದ್ದಾನೆ. ಸಾಯುತ್ತಿರುವ ಯೋಧರ ಪ್ರಾಣ ನಿಮಗೆ ಆಟಿಕೆಯಂತಾಗಿ ಮೋದ ನೀಡುತ್ತಿದೆಯೆ? ನಿಮ್ಮ ಮಾತನ್ನು ನಂಬಿದ ನನ್ನಂತಹ ಮೂರ್ಖ ಇನ್ನೊಬ್ಬನಿರಲು ಸಾಧ್ಯವೆ? ತನ್ನ ದೇಶಕ್ಕೆ ಹೋಗಿ ಹೇಗಾದರು ಬದುಕಿಕೊಳ್ಳುವೆ ಎಂದಿದ್ದ ಜಯದ್ರಥನಿಗೆ ನಿಮ್ಮ ಮಾತಿನ ಮೇಲೆ ವಿಶ್ವಾಸವಿಟ್ಟು ರಕ್ಷಣೆಯ ಭರವಸೆ ನೀಡಿದ್ದೆ. ಅದರೀಗ ಅದು ಬರೇ ಬಾಯಿಮಾತಾಗಿ ಹೋಯಿತು. ನಿಮ್ಮಂತಹವರಿಂದ ಏನೂ ಸಾಧ್ಯವಾಗದು ಎಂಬ ಸತ್ಯ ನನಗರಿವಾಗುವಾಗ ಕಾಲ ಮಿಂಚಿ ಹೋಗುತ್ತಿದೆ. ನಿಮಗಾಗದ ಸಾಹಸದ ವಿಚಾರದಲ್ಲಿ ಯಾಕಾಗಿ ಭರವಸೆ ನೀಡಿದಿರಿ? ಅಸಮರ್ಥನಾಗಿ ಈಗ ನೊಡಲು ನಾಚಿಕೆಯಾಗದೆ ನಿಮಗೆ?” ಎಂದು ಹೀನಾಯವಾಗಿ ಮನಬಂದಂತೆ ಗುರು ದ್ರೋಣರನ್ನು ತೆಗಳಿ ನಿಂದಿಸತೊಡಗಿದನು. ಬಳಿಕ ತನ್ನನ್ನು ತಾನು ಸಮಾಧಾನಿಸುತ್ತಾ, ಅಸಹಾಯಕನಾಗಿ, “ಗುರುಗಳೇ, ಇದು ಆರೋಪ ಪ್ರತ್ಯಾರೋಪಗಳಿಗೆ ಸಮಯವಲ್ಲ. ಹಾಗಾಗಿ ನನ್ನ ಕಡುನುಡಿಗಳಿಂದ ನೊಂದುಕೊಳ್ಳಬೇಡಿ. ನಾವೇನು ಮಾಡಿದರೆ ನಮ್ಮ ಕಾರ್ಯಸಾಧನೆ, ಜಯದ್ರಥನ ರಕ್ಷಣೆ ಸಾಧ್ಯ? ಅದಕ್ಕೆ ಪೂರಕವಾದ ಕ್ಷಿಪ್ರ ಯೋಜನೆ ರೂಪಿಸಿ ನಿರ್ದೇಶನ ನೀಡಬೇಕು. ನನ್ನಿಂದ ಆಡಲ್ಪಟ್ಟ ನಿಂದನೆಯ ಮಾತುಗಳಿಗೆ ಕ್ಷಮಾಪ್ರಾರ್ಥಿಯಾಗಿದ್ದೇನೆ” ಎಂದು ಪ್ರಾರ್ಥಿಸುತ್ತಾ ಬೇಡಿದನು.
ಆಗ ದ್ರೋಣಾಚಾರ್ಯರು ಮಹತ್ತರವಾದ ಯೋಚನೆಯಿಂದ ಅದ್ಬುತವಾದ ಯೋಜನೆಯನ್ನು ರೂಪಿಸಿದರು. “ಮಗನೇ ನಾನು ಸೇನಾಧ್ಯಕ್ಷನಾಗುವ ಸಮಯ ಧರ್ಮರಾಯನ ಬಂಧನದ ಬೇಡಿಕೆಯ ವರ ಕೇಳಿದ್ದೆ. ಅದನ್ನೂ ಪೂರೈಸುವ ಮತ್ತು ಅರ್ಜುನನ್ನು ತಡೆಹಿಡಿಯುವ ಉಪಾಯ ತಿಳಿಸುವೆ” ಎಂದರು.
ಮುಂದುವರಿಯುವುದು…





