
ಕಾರ್ಕಳ: ಕರ್ನಾಟಕ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ವಿಭಾಗ, ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸರಕಾರಿ
ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು, ಐಕ್ಯೂಎಸಿ ಹಾಗೂ ಎನ್. ಸಿ. ಸಿ, ಎನ್. ಎಸ್. ಎಸ್. ರೆಡ್ ಕ್ರಾಸ್, ರೋವರ್ಸ್ ರೇಂಜರ್ಸ್ ನ ಸಹಯೋಗದೊಂದಿಗೆ, ವಿಶ್ವ ಎಡ್ಸ್ ದಿನಾಚರಣೆ -2025 ಇದರ ಮಾಹಿತಿ ಕಾರ್ಯಕ್ರಮವು ನೆರವೇರಿತು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕಾರ್ಕಳ ಶಾಖೆ ಇದರ ಅಧ್ಯಕ್ಷರಾದ, ಡಾ. ಕೆ. ಆರ್. ಜೋಶಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಏಡ್ಸ್ ಹರಡುವಿಕೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಸಂದೀಪ್ ಕುಡ್ವ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಏಡ್ಸ್ ಕಾಯಿಲೆಯು ಆರಂಭದಲ್ಲಿ ಮಂಗನಿಂದ ಈ ಕಾಯಿಲೆಯು ಆರಂಭವಾಗಿ ಮನುಷ್ಯನಿಗೆ ಈ ವೈರಸ್ ಬಂದಿರುವಂಥದ್ದು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಬರದಂತೆ
ತಡೆಯುವ ಎಚ್ಚರಿಕೆ ಇರಬೇಕು. ಇದು ಅಂಟು ಜಾಡ್ಯವಲ್ಲ. ನಾಲ್ಕು ಅಸುರಕ್ಷತಾ ವಿಧಾನದಿಂದ ಈ ಕಾಯಿಲೆ ಹರಡುತ್ತದೆ. ನಮ್ಮ ನಿರ್ಲಕ್ಷ್ಯವೇ ಈ ಅಪಾಯಕ್ಕೆ ಕಾರಣವಾಗಿರುತ್ತದೆ.
ಸರಕಾರ ಇದಕ್ಕೆ ಸಂಬಂಧಪಟ್ಟಂತೆ ಅನೇಕ ರೀತಿಯ ಮುಂಜಾಗ್ರತಾ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತಿದೆ. ಇತ್ತೀಚೆಗೆ ಸುರಕ್ಷತಾ ವಿಧಾನಗಳಿಂದ ಏಡ್ಸ್ ನಂತಹ ಕಾಯಿಲೆಗಳು ತುಂಬ ಪ್ರಮಾಣದಲ್ಲಿ ಕಡಿಮೆಯಾಗಿದೆ. ಯುವಸಮಾಜ ಜಾಗರೂಕರಾಗಿರುವುದೇ ಇದಕ್ಕೆ ಪರಿಹಾರ ಎಂದರು.
ಉಡುಪಿ ಜಿಲ್ಲೆಯ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಶಿಧರ್ ಹೆಚ್ ಮಾತನಾಡಿ, ಯುವಜನತೆ ಸಮಾಜಕ್ಕೆ ಏನು ಕೊಡಬಹುದು ಎಂದರೆ, ಅಂಗಾಂಗ ದಾನವನ್ನು ಮಾಡುವ ಮೂಲಕ ನಮ್ಮ ಬದುಕನ್ನು ಸಾರ್ಥಕವಾಗಿಸಬಹುದು. ಹಾಗೂ ಏಡ್ಸ್ ಕುರಿತಂತೆ ಜಾಗೃತವಾಗಿರುವುದು ಇಂದಿನ ಯುವ ಸಮಾಜಕ್ಕೆ ಅಗತ್ಯವಾಗಿದೆ ಎಂದರು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಮಾತನಾಡಿ, ರೋಟರಿ ಕ್ಲಬ್ ನಂತಹ ಸಂಸ್ಥೆಗಳು ಸಾಮಾಜಿಕ ಜಾಗೃತಿಯನ್ನು
ಉಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಹೆಚ್ಚಿನ ಪರಿಶ್ರಮ ವಹಿಸುತ್ತಿದೆ. ಅದರಲ್ಲೂ ಯುವಜನಾಂಗ ತಪ್ಪು ದಾರಿಯತ್ತ
ಹೆಜ್ಜೆಯಿಡದಿರಲು ಈ ಕಾರ್ಯಕ್ರಮ ಯಶಸ್ಸನ್ನು ಪಡೆಯಬಲ್ಲುದು ಅನ್ನುವುದು ನಮ್ಮ ಆಶಯವಾಗಿದೆ. ವಿದ್ಯಾರ್ಥಿಗಳು ಇದರ ಹಿಂದಿರುವ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್ ಮಾತನಾಡಿ, ಏಡ್ಸ್ ನಿಂದ ಬದುಕು ದುಸ್ತರವಾಗುತ್ತದೆ. ಅಂತಿಮ ಹಂತವಾಗಿ ಸಾವು ಸಂಭವಿಸುತ್ತದೆ. ಇದರಿಂದ ಪಾರಾಗುವ ಬದಲಿಗೆ ಬರದಂತೆ ತಡೆಗಟ್ಟುವುದೇ ಇದಕ್ಕಿರುವ ದಾರಿ
ಎಂದರು. ಇಂದಿನ ಸಮಾಜ ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳನ್ನು ಪೂರ್ಣವಾಗಿ ನಂಬಲಾಗದು.
ಸಂಸ್ಕಾರವಂತರಾಗಿ ಬಾಳಿದರೆ ಏಡ್ಸ್ ನಿಂದ ಪಾರಾಗಬಹುದು. ಯುವ ಸಮಾಜಕ್ಕೆ ಇದು ತಿಳುವಳಿಕೆಯ ಸಂದೇಶವಾಗಿ ಸಾಗಬೇಕು. ನಾವು ನಿಮಗೆ ಕೊಟ್ಟ ಜಾಗೃತಿಯನ್ನು ನೀವು ಉಳಿದವರಿಗೆ ಹಂಚಿದಾಗ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.





