25.8 C
Udupi
Friday, November 28, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 362

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೬೨ ಮಹಾಭಾರತ

ನಾರದರು ಇಷ್ಟೆಲ್ಲಾ ಮಹಾನ್ ಧರ್ಮಿಷ್ಟರ ಕಥೆಗಳನ್ನು ಹೇಳಿ, ಅಂತಹವರಿಗೂ ಮರಣ ಎಂಬುದು ತಪ್ಪದೆ ಆವರಿಸಿದೆ ಎಂಬ ಸತ್ಯ ನೀತಿಯನ್ನು ವಿವರಿಸಿ ಆದ ಬಳಿಕವೂ, ಸೃಂಜಯ ಮೌನವಾಗಿ ಕುಳಿತಿದ್ದುದನ್ನು ಕಂಡು “ಹೇ ಮಹಾರಾಜ! ಇಷ್ಟು ಹೊತ್ತು ನಾನು ವಿವರಿಸಿದ ಕಥೆಗಳು ಬೋರ್ಗಲ್ಲ ಮೇಲೆ ನೀರೆರೆಂದಾಯಿತೋ ಹೇಗೆ?” ಎಂದು ಪ್ರಶ್ನಿಸಿದರು.

ಆಗ ಸೃಂಜಯನು “ಸ್ವಾಮಿ, ಇಷ್ಟು ಅನಂತ ವಿಶೇಷಗಳುಳ್ಳ ಪುಣ್ಯಪ್ರದ ಚರಿತ್ರೆಗಳನ್ನು ಶ್ರವಣ ಮಾಡಿದ ಬಳಿಕ ನನ್ನ ಮನದ ದುಃಖಗಳೆಲ್ಲವೂ ಉಪಶಮನವಾಗಿದೆ. ಈ ತನಕ ನಾನು ತಿಳಿಯದೆ ಮರುಗಿದೆನಲ್ಲಾ ಎಂದು ಯೋಚನಾಮಗ್ನನಾಗಿ ಮೌನಿಯಾಗಿ ಕುಳಿತಿದ್ದೆ. ನಿಮ್ಮಿಂದ ಉಪದಿಷ್ಟವಾದ ಕಥೆಗಳನ್ನು ಕೇಳಿದ ಬಳಿಕ ನನ್ನ ಸಕಲ ಪಾಪಗಳೂ ನಾಶವಾಗಿರಬಹುದು. ಪುತ್ರಶೋಕದಿಂದ ಮುಕ್ತನಾಗಿದ್ದೇನೆ. ಕೃತಾರ್ಥನಾಗಿದ್ದೇನೆ” ಎಂದನು.

ಆಗ ನಾರದರು, “ರಾಜಾ! ಸೃಂಜಯಾ ನಿನ್ನ ಮನಪರಿವರ್ತನೆಯಾದುದು ನನಗೆ ಕಾರ್ಯ ಸಿದ್ದಿಯ ತೃಪ್ತಿಯನ್ನು ನೀಡಿದೆ. ಮಾತ್ರವಲ್ಲ ನಿನ್ನ ಪ್ರಬುದ್ಧತೆಗೆ ಮೆಚ್ಚುಗೆಯೂ ಆಗಿದೆ. ಹಾಗಾಗಿ ವರಪ್ರದನಾಗಿ ನಿನ್ನಲ್ಲಿ ಕೇಳುತ್ತಿದ್ದೇನೆ. ಮನದಾಸೆ ಏನಾದರೂ ಇದ್ದರೆ ಹೇಳು, ನಾನು ಹೊಂದಿರುವ ಪುಣ್ಯ ವಿಶೇಷ ಬಲದಿಂದ ಅನುಗ್ರಹಿಸುತ್ತೇನೆ” ಎಂದರು.

ಆಗ ಸೃಂಜಯನು “ಸ್ವಾಮಿ, ನಿಮ್ಮಂತಹ ಮಹಾತ್ಮರು ನನ್ನಂತಹ ಮೂಢನನ್ನು ತಿದ್ದಿ ಜ್ಞಾನದ ಬೆಳಕನ್ನು ನೀಡಿದ ಗುರುಗಳಾಗಿ ಕಾಣಿಸುತ್ತಿದ್ದೀರಿ. ನನ್ನ ಮನದಲ್ಲೀಗ ಯಾವುದೆ ಸ್ವಾರ್ಥಗಳಿಲ್ಲ. ಆಶೆಗಳೂ ಉಳಿದಿಲ್ಲ. ಹಾಗಾಗಿ ನೀವು ಒಲಿದು ಸಂತುಷ್ಟರಾಗಿರುವುದು ನನಗೆ ಮಹಾಪ್ರಸಾದ. ನಿಮ್ಮ ಕೃಪೆಯಿದ್ದರೆ ಅಷ್ಟು ಸಾಕು ನನಗೆ, ಬೇರೇನೂ ಕೇಳಲಾರೆ” ಎಂದನು.

ಸೃಂಜಯನ ಗುಣ ವಿಶೇಷವನ್ನು ಕಂಡು ನಾರದರಿಗೆ ಬಹಳಷ್ಟು ಮೆಚ್ಚುಗೆಯಾಯಿತು. ನಿರ್ಮಲ ಮನಸ್ಸು, ನಿಸ್ವಾರ್ಥ ನಡೆಯೂ ಬಹಳಷ್ಟು ಪ್ರಭಾವ ಬೀರಿತು. ಕೂಡಲೆ “ದರೋಡೆಕೋರರಿಂದ ಕೊಲ್ಲಲ್ಪಟ್ಟು, ಅಡುಗೆ ಮಾಡಿ ತಿನ್ನಲು ಕೊಚ್ಚಿಟ್ಟ ರೀತಿ ತುಂಡು ತುಂಡಾದ ಮಾಂಸದ ರಾಶಿಯಂತಾಗಿದ್ದ ಸೃಂಜಯನ ಪುತ್ರನನ್ನು ತನ್ನ ಮಂತ್ರಶಕ್ತಿಯಿಂದ ಪುನರಪಿ ಬದುಕಿಸಿದರು. ಸೃಂಜಯನೆದುರು ಆತನ ಮುದ್ದಿನ ಮುಗ್ದ ಮಗು “ಸುವರ್ಣವಿಷ್ಠಿ” ಓಡುತ್ತಾ ಬಂದನು. ಮರಣಹೊಂದಿದ ತನ್ನ ಮಗ ಬಂದು ನಿಂತಾಗ ಸೃಂಜಯನಿಗೆ ಮಹದಾನಂದ ಆಯಿತು. ನಾರದರಿಗೆ ಬಹು ಪ್ರಣಾಮಗಳನ್ನು ಕೃತಜ್ಞತಾಪೂರ್ವಕವಾಗಿ ಸಲ್ಲಿಸಿದನು. ಮುಂದೆ ಸೃಂಜಯ ತನ್ನ ಪುತ್ರ ಸಹಿತನಾಗಿ ಮಹತ್ತರವಾದ ಯಾಗ ಯಜ್ಞಗಳನ್ನು, ಸತ್ಕರ್ಮಗಳನ್ನು, ದೇವತಾರಾಧನೆ, ಪ್ರಜಾ ಪರಿಪಾಲನೆ, ದಾನ – ಧರ್ಮಾದಿಗಳನ್ನು ಮಾಡುತ್ತಾ, ನಿಸ್ವಾರ್ಥಿಯಾಗಿ, ಲೋಕಕಲ್ಯಾಣ ಹಿತೈಷಿಯಾಗಿ ಬದುಕಿದನು.

“ಧರ್ಮರಾಯಾ! ಈಗ ನಿನ್ನ ಮನದಲ್ಲಿ ಒಂದು ಸಂದೇಹ ಮೂಡಿರಬಹುದು, ಮೃತ್ಯುವಶರಾದವರು ಮತ್ತೆ ಬದುಕಿ ಬರುತ್ತಾರೊ? ಬದುಕಿಸಲು ಸಾಧ್ಯವೊ? ಎಂಬ ಹಾಗೆ. ನಾರದರಿಗೆ ಇದು ಸಾಧ್ಯವಾಯಿತು, ಹೇಗೆಂದರೆ ಮೊದಲಾಗಿ ಸೃಂಜಯನ ಪುತ್ರನಿಗೆ ಆಯಸ್ಸು ಇತ್ತು. ಎರಡನೆಯದಾಗಿ ಹುಟ್ಟಿರುವುದು ವರ ಬಲದಿಂದ – ಅಲ್ಲಿ ಸೃಂಜಯ ಕೇಳಿದ್ದ ಬೆಳೆದು ಯುವಕನಾದಾಗ ಸತ್ಕರ್ಮ ನಿರತನಾಗಿ, ಪುಣ್ಯವಂತನಾಗಿ, ಸುಸಂತಾನ ಪಡೆದು ನೆಮ್ಮದಿಯಿಂದ ಬಾಳಿ ಸತ್ಕೀರ್ತಿ ಪಡೆದು ಬದುಕುವ ಮಗ ಬೇಕೆಂದು ಕೇಳಿದ್ದನು. ಆದರೆ ಸೃಂಜಯನ ಮಗ ಅಂತಹ ಯಾವುದನ್ನೂ ಸಾಧಿಸಿರಲಿಲ್ಲ. ಹಾಗಾಗಿ ವರಬಲ ಹುಸಿಯಾಗಬಾರದು ಎಂಬ ಸತ್ಯವೂ ಇತ್ತು. ಹೀಗಿರುತ್ತಾ ಸಂಚಿತ ಪುಣ್ಯಬಲ ವರರೂಪವಾಗಿ ಅನುಗ್ರಹದಿಂದ ಜನಿಸಿದ್ದ ಮಗುವಿನ ಪ್ರಾಣ ಪಡೆಯುವಲ್ಲಿ ಮಹರ್ಷಿಯ ಪುಣ್ಯ ಬಲ ವಿನಿಯೋಗವಾಗಿ ವಚನರೂಪ ಪಡೆದಿತ್ತು. ಮೃತ ಬಾಲನನ್ನು ಮೃತ್ಯು ವಶಪಡಿಸುವಲ್ಲಿ ಋಷಿವರನ ವಚನ ತೊಡಕಾಗಿ ಬಾಲಕನ ಪ್ರಾಣ ಹಿಂದಿರುಗಿಸಬೇಕಾಯಿತು.” ಎಂದು ವೇದವ್ಯಾಸರು ವಿವರಿಸಿದರು.

“ಧರ್ಮರಾಯಾ! ನೀನು ಈಗ ಮಾನವ ವ್ಯಾಪ್ತಿ ಮೀರಿದ ಅಗೋಚರ ಸತ್ಯವನ್ನು ಅರಿಯದೆ ಅಭಿಮನ್ಯುವಿನ ದುಃಖಕ್ಕಾಗಿ ಪರಿತಪಿಸುತ್ತಿರುವೆ. ಅಭಿಮನ್ಯು ಜೀವನದಲ್ಲಿ ಸಾಧಕನಾಗಿ ಮೆರೆದು, ರಣದಲ್ಲಿ ಲಕ್ಷೋಪ ಲಕ್ಷ ವೀರರನ್ನು ಸವರಿ ಪರಾಕ್ರಮ ಮೆರೆದು ನಂತರ ವೀರ ಸ್ವರ್ಗ ಪಡೆದಿದ್ದಾನೆ. ಅಷ್ಟೇ ಅಲ್ಲ, ಹುಟ್ಟುವಾಗ ಪಡೆದು ಬಂದ ವಿಧಿಲಿಖಿತ ಆಯಸ್ಸನ್ನೂ ಪೂರ್ಣ ಪ್ರಮಾಣದಲ್ಲಿ ಪೂರೈಸಿ ತನ್ನ ಜೀವನ ಮುಗಿಸಿದ್ದಾನೆ. ಧ್ಯಾನದ ಮೂಲಕ ನಾನು ಹೊಂದಿರುವ ದಿವ್ಯ ಜ್ಞಾನದೃಷ್ಟಿಯಿಂದ ನೋಡಿ ತಿಳಿದು ಅಭಿಮನ್ಯುವಿನ ಕುರಿತಾದ ಸತ್ಯವನ್ನು ಹೇಳುತ್ತೇನೆ ಕೇಳು, “ಅಭಿಮನ್ಯು ಉತ್ತಮಲೋಕವನ್ನು ಏರಿದ್ದಾನೆ. ಕಾರಣ ಜನ್ಮ ಪಡೆದು, ಆತ ಭುವಿಯಲ್ಲಿ ಉದಿಸಿ ಬರುವ ಸಮಯ ಆತನ ಪಿತ ಚಂದ್ರ ತನ್ನ ಮಗನಿಗೆ ಶ್ರೀಮನ್ನಾರಾಯಣನಲ್ಲಿ ಬೇಡಿದ್ದು ಹದಿನಾರು ವರ್ಷ ಆಯಸ್ಸು. ಅಂತೆಯೆ ಅದನ್ನು ಪೂರೈಸಿ, ಮರಳಿ ಈಗ ಚಂದ್ರಲೋಕದಲ್ಲಿ ಚಂದ್ರನಿಂದ ಉತ್ಪನ್ನವಾದ ದ್ವಿಜೋಚಿತವಾದ ಶರೀರದಲ್ಲಿ ಪ್ರತಿಷ್ಟಿತನಾಗಿ, ತನ್ನ ಅಮೃತಮಯವಾದ ಕಿರಣಗಳಿಂದ ಚಂದ್ರನಿಗೆ ಸಮಾನ ಪ್ರಭೆಯುಳ್ಳವನಾಗಿ ಬೆಳಗುತ್ತಿದ್ದಾನೆ. ಈ ರಹಸ್ಯ ಸತ್ಯ ತಿಳಿದ ಬಳಿಕ ನೀನು ಅಭಿಮನ್ಯುವಿನ ಮರಣದ ದುಃಖದಿಂದ ಮುಕ್ತನಾಗಿ ಸಂತೋಷ ಹೊಂದಬೇಕು. ನಿನ್ನಿಂದ ಆಗಬೇಕಾದ ಮಹತ್ಕಾರ್ಯ ಬಾಕಿಯಿದೆ. ಧರ್ಮಸಂಸ್ಥಾಪನೆಯ ಸಂಕಲ್ಪ ಹೊಂದಿರುವ ಭಗವಂತನಿಗೆ ಸಹಕಾರಿಯಾಗಿ ನೀನು ಹೋರಾಡಿ ಅಧರ್ಮಿಗಳ ನಾಶಕ್ಕೆ ಕಾರಣನಾಗಬೇಕು. ಮಾನವ ಜನ್ಮದಲ್ಲಿ ಹುಟ್ಟಿರುವ ನೀನು ಅಥವಾ ಇನ್ಯಾರಾದರೂ ಆಗಿರಲಿ, ಅಂತಹವರು ಜೀವನ ಎಂಬ ರಣರಂಗದಲ್ಲಿ ಹೋರಾಡುತ್ತಿರಬೇಕು. ಬದುಕಿ ಜೊತೆಗಿರುವವರ ಕಷ್ಟಗಳಿಗೆ ಮರುಗಬೇಕು ಹೊರತು, ಜೀವನ ಪೂರೈಸಿ ಮೃತರಾದವರ ಬಗ್ಗೆ ಮರುಗುತ್ತಿರಬಾರದು. ಹಾಗೆ ಕೊರಗುತ್ತಿದ್ದರೆ ಅದು ಕಡು ದುಃಖಕ್ಕೆ ಕಾರಣವಾಗಿ ದುರ್ಬಲಗೊಳಿಸುತ್ತದೆ ಹೊರತು ಇನ್ನೇನೂ ಸಾಧ್ಯವಿಲ್ಲ. ಮರಣ ಹೊಂದಿದವರನ್ನು ಮರೆಯದೆ ಸದ್ಗತಿಗಾಗಿ ತರ್ಪಣ, ಪಿಂಡ ಪ್ರದಾನ ಶ್ರಾದ್ಧಾದಿಗಳನ್ನು ಮಾಡುತ್ತಿರಬೇಕು ಹೊರತು ಕಳಾಹೀನರಾಗಿ ಕೊರಗಬಾರದು. ಈ ಸತ್ಯ ಅರಿತ ಜ್ಞಾನಿಗಳ್ಯಾರೂ ಸತ್ತವರ ಬಗ್ಗೆ ದುಃಖ ಪಡುವುದಿಲ್ಲ. ಇಹಲೋಕದ ಯಾತ್ರೆ ಮುಗಿಸಿದವರು ಕರ್ಮ ಬಂಧನದಿಂದ ಮುಕ್ತರಾಗಿದ್ದಾರೆ ಎಂದು ತಿಳಿದು, ಅವರನ್ನು ಪೂಜ್ಯ ಭಾವದಿಂದ ವಂದಿಸುತ್ತಾರೆ. ನಿನಗೆ ಮೃತ್ಯುವಿನ ಹುಟ್ಟು, ತಪಸ್ಸು, ಮನಸ್ಸಿನ ಬಯಕೆ, ಮತ್ತು ವ್ಯಾಪ್ತಿಯನ್ನು ವಿವರಿಸಿ ಹೇಳಿರುವೆ. ಅಂತಹ ಅತಿ ರಹಸ್ಯವನ್ನು ನಿನಗೆ ಉಪದೇಶ ಮಾಡಿದ್ದೇನೆ. ಅದೆಲ್ಲವನ್ನೂ ತಿಳಿದ ಬಳಿಕ ನೀನು ಪರಿತಪಿಸುವುದರಲ್ಲಿ ಅರ್ಥವಿಲ್ಲ. ನಿಷ್ಪಕ್ಷಪಾತವಾಗಿ ಬಡವ – ಬಲ್ಲಿದ, ಪಂಡಿತ – ಪಾಮರ, ವೀರ – ಹೇಡಿ, ಸಜ್ಜನ – ದುರ್ಜನ ಇತ್ಯಾದಿ ಯಾವ ಭೇದವನ್ನೂ ಕಲ್ಪಿಸದೆ, ಯಾರನ್ನೂ ಬಿಡದೆ ಮೃತ್ಯು ಆವರಿಸುತ್ತದೆ ಎಂಬ ಸತ್ಯವೂ ನಿನಗೆ ತಿಳಿದಿದೆ. ಇದೆಲ್ಲವನ್ನು ಸುಜ್ಞಾನದಿಂದ ಅರ್ಜಿಸಿದ ನಿನ್ನ ದುಃಖ ಶಮನವಾಗಿದೆ ಎಂದು ನಂಬುತ್ತೇನೆ” ಎಂದು ವೇದವ್ಯಾಸರು ಧರ್ಮರಾಯನಿಗೆ ವಿವರಿಸಿ ಹೇಳಿ ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮರಾಯನು “ನಾನೀಗ ನಿರಾಳನಾಗಿದ್ದೇನೆ. ಮನದ ಆತಂಕ ದೂರವಾಗಿದೆ. ಅಜ್ಞಾನದ ಪೊರೆ ಕಳಚಿ ಸುಜ್ಞಾನದ ಬೆಳಕು ಗೋಚರಿಸುತ್ತಿದೆ. ಪೂಜನೀಯರೆ, ನಮ್ಮನ್ನು ಹರಸಿ ಆಶೀರ್ವದಿಸಿ” ಎಂದು ಬೇಡಿದನು.

ವೇದವ್ಯಾಸರು ಸನ್ಮಂಗಲವಾಗಲಿ – ಧರ್ಮಕ್ಕೆ ಜಯವಾಗಲಿ ಎಂದು ಹರಸಿ ಅಲ್ಲಿಂದ ಹೊರಟು ಹೋದರು.

(ಬ್ರಾಹ್ಮೀ ಮುಹೂರ್ತಕ್ಕೆ ಮೊದಲು ಭಗವಾನ್ ವ್ಯಾಸರು ಈ ಅದ್ವಿತೀಯ ಚರಿತ್ರೆಯ ಉಪದೇಶ ಮಾಡುತ್ತಾರೆ. ಧರ್ಮರಾಯನಿಗೆ ವ್ಯಾಸ ಪ್ರಣೀತವಾಗಿ – ಸೃಂಜಯನ ಕಥೆ ಮತ್ತು ಹದಿನಾರು ಪರಮ ಧರ್ಮಿಷ್ಟರ ಚರಿತ್ರೆಯ ಈ ಭಾಗ ಮಹತ್ತರ ವ್ಯಾಪ್ತಿವುಳ್ಳದ್ದು. ಈ ಭಾಗದಲ್ಲಿ ರಾಮಾಯಣ ಸಹಿತ ಪ್ರಧಾನ ಚರಿತ್ರಾವಂತ ಪುಣ್ಯಾತ್ಮರ ಸಚ್ಚಾರಿತ್ರ್ಯದ ಕಥೆಗಳು ಅಂತರ್ಗತವಾಗಿವೆ. ಅಶೋಕವೂ, ಅಮೂಲ್ಯವೂ, ಪುಣ್ಯಪ್ರದವೂ, ದಿಗ್ದರ್ಶಕವೂ ಆದ ಈ ಭಾಗ ಸುಜ್ಞಾನದ ಭಂಡಾರವಾಗಿದೆ. ಮೊದಲ ಕೆಲವೇ ಕೆಲವು ಕಥೆಗಳನ್ನು ಚುಟುಕಾಗಿ ವಿವರಿಸಿ ಪ್ರಧಾನ ಕಥೆ ಮಹಾಭಾರತ ಯುದ್ಧ ಭಾಗ ಮುಂದುವರಿಸುತ್ತಿದ್ದೇವೆ. ).

ಇತ್ತ ಅರ್ಜುನ ತನ್ನ ಪುತ್ರನ ಮರಣಕ್ಕೆ ಕಾರಣನಾದ ಜಯದ್ರಥನ ವಧೆಯ ಪ್ರತಿಜ್ಞೆಗೈದು ಅತ್ಯುಗ್ರನಾಗಿ ಸೂರ್ಯೋದಯವಾಗಿರುವ ಈ ಹೊತ್ತು ರಣರಂಗಕ್ಕೆ ಹೊರಡಲು ಕಟಿಬದ್ದನಾಗಿ ಸಿದ್ಧನಾಗಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page