
” ಸಂವಿಧಾನ ದಿನದ ಮಹತ್ವವನ್ನು ತಿಳಿದುಕೊಂಡು ಅನುಸರಿಸಿದಾಗ ಪ್ರಜಾಪ್ರಭುತ್ವದ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯ ” ಬಲ್ಲಾಡಿ ಚಂದ್ರಶೇಖರ ಭಟ್
ಹೆಬ್ರಿ :ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ ಶ್ರೇಷ್ಠ ಸಂವಿಧಾನವನ್ನು ಹೊಂದಿದೆ. ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಸಹಿತ ಅನೇಕ ಮಂದಿ ಸಂವಿಧಾನ ರಚನೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ನಮ್ಮ ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಒದಗಿಸಿದ ಸಂವಿಧಾನದ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು. ಸಂವಿಧಾನ ಪೀಠಿಕೆಯಲ್ಲಿರುವ ಅಂಶಗಳನ್ನು ಚೆನ್ನಾಗಿ ತಿಳಿದುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ಸಂವಿಧಾನವನ್ನು ಗೌರವಿಸುವ, ಪಾಲಿಸುವ ಕಾರ್ಯದಲ್ಲಿ ಬದ್ಧತೆಯ ಹೆಜ್ಜೆ ಇಡೋಣ ಎಂದು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ತಮ್ಮ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಸಂವಿಧಾನ ಮಹತ್ವವನ್ನು ತಿಳಿಸಿ ಮಾತನಾಡಿದರು. ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಾದ ಪ್ರತೀಕ್ಷಾ ಕುಲಾಲ್, ಅಂಜಲಿ, ವಂಶಿಕಾ, ತ್ರಿಶಾ, ಸಾನ್ವಿತ್, ಸ್ನೇಹಾ ಇವರಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಕ್ಷಕಿ ಶ್ಯಾಮಲಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ವಿದ್ಯಾರ್ಥಿ ಸುಬ್ರಮಣ್ಯ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ಸಜನ್ ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಮಹೇಶ್ ನಾಯ್ಕ್, ಚಂದ್ರಕಾಂತಿ ಹೆಗ್ಡೆ ಉಪಸ್ಥಿತರಿದ್ದರು.






















































