24.8 C
Udupi
Saturday, November 22, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 357

ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೩೫೭ ಮಹಾಭಾರತ

“ಅರ್ಜುನಾ! ಈಗ ಸಾಗುತ್ತಿರುವುದು ಸಮರ. ಸಮರ ಅಂದರೆ ಮರಣ ಸಹಿತ ಎಂದು ಅರ್ಥ. ಅದು ಯುದ್ದಕ್ಕೆ ಹೋಗುತ್ತಿರುವ ತನ್ನ ಅಥವಾ ತನ್ನವರ ಮರಣವೊ ಇಲ್ಲ ಇದಿರಾಗಿ ಬರುವ ವೈರಿಗಳ ಮರಣವೊ ಎಂಬ ಸತ್ಯ ಅನಾವರಣಗೊಳ್ಳುವುದು ಸಮರ ಸಾಗಿದ ಬಳಿಕ. ಅದಕ್ಕಾಗಿಯೆ ಸಂಗ್ರಾಮಕ್ಕೆ ಹೊರಡುವ ಮುನ್ನ ವಿಧಿ ಪೂರ್ವಕ ದೇವತೆಗಳನ್ನು ಸಂತುಷ್ಟಿಗೊಳಿಸಿ, ಬಹುವಿಧ ದಾನಗಳನ್ನಿತ್ತು ಸತ್ಪಾತ್ರರನ್ನು ಆದರಿಸಿ ಆಶೀರ್ವಾದ ಪಡೆದು, ಬಳಿಕ ಹಿರಿಯ ಪಿತೃಗಳಿಗೆ ತರ್ಪಣ, ಪಿಂಡ ಪ್ರಧಾನಾದಿ ಅಪರಕ್ರಿಯೆಗಳನ್ನು ನಡೆಸಿದ ನಂತರ ಯುದ್ದಕ್ಕೆ ಹೋಗುವ ಕ್ರಮವಿರುವುದು. ಅಂದರೆ ಅದರ ಸಾರಾಂಶ ಇಷ್ಟೆ – ಹೋಗುವುದು ಯುದ್ದಕ್ಕೆ ಅಲ್ಲಿ ಯಾರಿಗೂ ಮರಣ ಬರಬಹುದು. ನೀನು ಮಹಾ ಕ್ಷತ್ರಿಯನು ಹೌದು. ಎಷ್ಟೋ ವೀರಾಧಿ ವೀರ ವಿರೋಧಿ ಕ್ಷತ್ರಿಯರ ಮರಣಕ್ಕೆ ಕಾರಣನಾದವನಾಗಿರುವೆ. ಈಗ ಮನದಲ್ಲೇನೋ ದುಃಖ ಆವರಿಸಿದೆ, ಪ್ರತಿಕೂಲ ಶಕುನ ಗೋಚರಿಸಿದೆ ಎಂಬ ಕಾರಣದಿಂದ ನೊಂದುಕೊಳ್ಳಬಾರದು. ಇಲ್ಲಿ ನಿಂತು ಅದರ ಬಗ್ಗೆ ತರ್ಕಿಸುವುದು ಸರಿಯಲ್ಲ. ಶೀಘ್ರವಾಗಿ ಶಿಬಿರ ಸೇರಿ ಏನಾಗಿದೆ ಎಂಬ ವಿಚಾರ ತಿಳಿದುಕೊಳ್ಳೋಣ” ಎಂದು ವೇಗವಾಗಿ ರಥ ನಡೆಸಿದನು.

ಕೃಷ್ಣನ ಸಾರಥ್ಯದಲ್ಲಿ ರಥ ಓಡಿತು ಎನ್ನುವುದಕ್ಕಿಂತಲೂ ಹಾರಿತು ಎನ್ನಬಹುದು. ಅರೆ ಕ್ಷಣದಲ್ಲಿ ಶಿಬಿರ ತಲುಪಿತು, ನೋಡಿದರೆ ಅಲ್ಲಿ ನಿತ್ಯದಂತೆ ಅರ್ಜುನನಿಗೆ ಸ್ವಾಗತವಿಲ್ಲ, ಇದಿರ್ಗೊಂಡು ಬರ ಮಾಡಿಕೊಳ್ಳುವವರೂ ಯಾರೂ ಇಲ್ಲ. ಎಲ್ಲೆಡೆ ಮೌನ ಆವರಿಸಿದೆ. ಕಾಣ ಸಿಗುವವರ್ಯಾರು ಕಾರಣ ಹೇಳುವ ಬದಲು ಮೂಕ ರೋದನೆಯಲ್ಲಿ ಮುಳುಗಿದ್ದಾರೆ. ಅರ್ಜುನನ ಆತಂಕ ಇನ್ನಷ್ಟು ಹೆಚ್ಚಾಯಿತು. ಸೋದರರೂ ಏಕೆ ಅಂತರದಲ್ಲಿದ್ದಾರೆ? ನನ್ನ ಮಗ ದಿನಂಪ್ರತಿ ನನ್ನ ದಾರಿ ಕಾಯುವವ, ಬಂದಾಕ್ಷಣ ಎದುರು ಬಂದು ಒಂದೇ ಉಸಿರಿನಲ್ಲಿ ದಿನಪೂರ್ತಿಯ ವರದಿ ಒಪ್ಪಿಸುವ ಅಭಿಮನ್ಯು ಕೂಡ ಕಾಣಿಸುತ್ತಿಲ್ಲ. ಏನೋ ಮಹಾ ದುರಂತ ಸಂಭವಿಸಿದೆ ಎಂದು ಕಲ್ಪಿಸಿಕೊಂಡನು. ತನ್ನ ಗಾಂಡೀವ, ತೂಣಿರಗಳನ್ನು ಬಿಚ್ಚಿ, ನಮಿಸಿ ಶಸ್ತ್ರಾಗಾರದಲ್ಲಿ ಸ್ಥಿತ ಸ್ಥಾನದಲ್ಲಿರಿಸಿ, ತ್ವರಿತ ಗತಿಯಲ್ಲಿ ಶಿಬಿರ ಪ್ರವೇಶ ಮಾಡಿದನು. “ಯಾಕೆ ಯಾರೂ ಮಾತಾಡುತ್ತಿಲ್ಲ? ಏನಾಗಿದೆ ಎಂದು ಹೇಳದಿದ್ದರೆ ನನಗಾದರೂ ತಿಳಿಯುವುದು ಹೇಗೆ? ಎಂಬ ಪ್ರಶ್ನೆಯನ್ನು ಏರುಧ್ವನಿಯಲ್ಲಿ ಅಸಹಾಯಕನಾಗಿ ಕೇಳಿದನು. ಕಣ್ಣು ತಿರುಗಿಸಿ ನೋಡಿದರೆ ಎಲ್ಲರೂ ಇದ್ದಾರೆ, ಆದರೆ ಅಭಿಮನ್ಯು ಕಾಣಿಸುತ್ತಿಲ್ಲ. “ಎಲ್ಲಿ ಅಭಿಮನ್ಯು? ಅವನೆಲ್ಲಿ? ಯಾಕೆ ಯಾರೂ ಮಾತಾಡುತ್ತಿಲ್ಲ?” ಎಂದು ಅದುರುವ ತುಟಿಗಳಲ್ಲಿ ಗದರುವ ಸ್ವರದಲ್ಲಿ ಕೇಳಿದನು.

ಯಾರಿಗೂ ಉತ್ತರಿಸುವ ಸ್ಥೈರ್ಯವಿಲ್ಲ. ಆದರೆ ಉತ್ತರೆ ಓಡಿ ಬಂದು “ಅರ್ಜುನನ ಕಾಲಬುಡದಲ್ಲಿ ಬಿದ್ದು ಗೊಳೋ ಎಂದು ಅಳತೊಡಗಿದಳು. ಸುಮಂಗಲೆಯ ಮಂಗಲ ಲಕ್ಷಣಗಳು ಕಳಚಲ್ಪಟ್ಟಿವೆ. ಸುಭದ್ರೆ ಅಳುತ್ತಾ ಬಂದು ಉತ್ತರೆಯನ್ನು ಸಂತೈಸಿ ಎತ್ತಿ ಹಿಡಿಯಲು ಬಂದವಳು ಸ್ವತಃ ತಾನು ಮೂರ್ಛಿತಳಾಗಿ ಬಿದ್ದು ಬಿಟ್ಟಳು. ಹೇಳುವವರು ಯಾರು? ಇನ್ನು ಹೇಳುವ ಅಗತ್ಯವಿದೆಯೆ? ಅರ್ಜುನನಿಗೆ ಹೇಳದೆಯೆ ಎಲ್ಲವೂ ಅರ್ಥವಾಗಿಯಾಗಿದೆ.

ಧರ್ಮರಾಜ ತಲೆ ತಗ್ಗಿಸಿ ಒರಗಿದ್ದವ ಎದ್ದು ನಿಂತು “ತಮ್ಮಾ! ಚಂದ್ರ ವಂಶದ ನಮ್ಮ ಪುತ್ರ ರತ್ನವನ್ನು ಬಲಿ ಕೊಟ್ಟು, ನಾವು ಬದುಕಿದ್ದೂ ಸತ್ತು ಹೋಗಿದ್ದೇವೆ. ನೀನೇನು ಕೇಳಿದರೂ ಸಮರ್ಥಿಸಿ ಹೇಳುವ ಯಾವ ಮುಖವಾಗಲಿ, ನಾಲಗೆಯಾಗಲಿ ನಮಗಿಲ್ಲವಾಗಿದೆ” ಎಂದನು.

ಅಣ್ಣನ ಮಾತು ಕೇಳುವ ಮೊದಲು ಅಲ್ಲಿನ ಸ್ಥಿತಿ ನೋಡಿ ಏನಾಗಿದೆ ಎಂಬುವುದನ್ನು ಮನಗಂಡಿದ್ದ ಪಾರ್ಥನ ಶರೀರ ಕಂಪಿಸತೊಡಗಿತ್ತು. ದೇಹದ ಬಲ ಕುಸಿದಿತ್ತು. ಎದೆ ಭಾರವಾಗಿ ಧಾರಣೆ ಮಾಡುವ ಶಕ್ತಿಯೂ ಇಲ್ಲದೆ ಕುಸಿದು ಕುಳಿತನು. ಶ್ರೀಕೃಷ್ಣ ಅರ್ಜುನನನ್ನು ಸಮಾಧಾನಗೊಳಿಸಲು ಬಳಿ ಬಂದು ಭುಜವನ್ನಾವರಿಸಿ ಎತ್ತಿದನು. ನಿಂತ ಪಾರ್ಥ “ನನಗೆ ಪ್ರಿಯ ಪುತ್ರನೂ, ಮಿತ್ರನೂ, ಶಿಷ್ಯನೂ ಆಗಿ ಸರ್ವ್ಯಾಪ್ತವಾಗಿ ನನ್ನ ಮನಸ್ಸನ್ನು ತುಂಬಿಕೊಂಡಿದ್ದ ವೀರ ಕುವರನಿಗೆ ಈ ಸ್ಥಿತಿ ಯಾರಿಂದಾಗಿ ಒದಗಿತು? ಹೇಳಿ… ಹೇಳಿ… ಬೇಗ ಹೇಳಿ…ಯಾರು ನನ್ನ ಮಗನ ವಧೆಗೆ ಕಾರಣರಾದವರು? ಸಹಿಸಿ ನಿಲ್ಲುವ ತಾಳ್ಮೆ ನನಗಿಲ್ಲ. ಬೇಗ ಹೇಳಿ.” ಎಂದು ಘರ್ಜಿಸಿದನು.

ಧರ್ಮರಾಯ ಕಡು ದುಃಖವನ್ನು ಹಿಡಿದಿಡುತ್ತಾ “ತಮ್ಮಾ! ಗುರು ದ್ರೋಣಾಚಾರ್ಯರು ಇಂದಿನ ದಿನ ಚಕ್ರವ್ಯೂಹ ವಿರಚಿಸಿದರು. ಎಷ್ಟು ಪ್ರಯತ್ನಿಸಿದರೂ ನಾವ್ಯಾರೂ ವ್ಯೂಹ ಭೇದಿಸಲು ಶಕ್ತರಾಗಲಿಲ್ಲ. ಆಗ ವೀರಪುತ್ರ ಅಭಿಮನ್ಯು ನನ್ನ ಅನುಮತಿ ಪಡೆದು ಮುನ್ನುಗ್ಗಿದನು. ಭೀಮನು ಆತನಿಗೆ ರಕ್ಷಕನಾಗಿ ಜೊತೆಗಿದ್ದನು. ನಾವೂ ಜೊತೆಯಲ್ಲಿ ಹಿಂಬಾಲಿಸಿದೆವು. ಪ್ರಜ್ವಲಿಸುವ ಮಿಂಚಿನಂತೆ ಕ್ಷಣಾರ್ಧದಲ್ಲಿ ವ್ಯೂಹ ಭೇದಿಸಿ ಅಭಿಮನ್ಯು ಒಳ ಹೊಕ್ಕನು. ಆದರೆ ವ್ಯೂಹ ದ್ವಾರದಲ್ಲಿದ್ದ ಸೈಂಧವ ಜಯದ್ರಥ ರುದ್ರದೇವನ ವರಬಲದಿಂದ ನಮ್ಮೆಲ್ಲರನ್ನೂ ತಡೆ ಹಿಡಿದನು. ಎಷ್ಟು ಪ್ರಯತ್ನಿಸಿದರೂ ಆತನನ್ನು ಮೀರಿ ಒಳ ಹೋಗಲು ನಮಗ್ಯಾರಿಗೂ ಸಾಧ್ಯವಾಗದೆ ಹೋಯಿತು. ಸಿಂಹದ ಮರಿಯಂತೆ ಒಳ ಹೊಕ್ಕ ಅಭಿಮನ್ಯು….” ಎಂದು ಹೇಳುತ್ತಾ ಧಾರಕಾರವಾಗಿ ಕಣ್ಣೀರ್ಗರೆದನು.

ಅಣ್ಣ ಧರ್ಮಜನಿಂದ ವಿಚಾರ ಕೇಳುತ್ತಿದ್ದಂತೆಯೆ ಅರ್ಜುನ ಅತ್ಯುಗ್ರನಾದನು. “ಹೇ! ವಾಸುದೇವಾ! ನನ್ನ ಮಗನ ಮರಣಕ್ಕೆ ಆ ದುಷ್ಟ ಜಯದ್ರಥ ಸಹಕಾರಿಯಾದನೆ? ನಾಳೆ ಉದಯಿಸಿದ ಸೂರ್ಯ ಅಸ್ತಮಿಸುವ ಮೊದಲು ಆ ದುಷ್ಟನನ್ನು ಸಂಹರಿಸುವೆ. ಒಂದೊಮ್ಮೆಗೆ ಆ ನೀಚ ದುರುಳನ ವಧೆ ಅಸಾಧ್ಯವಾದರೆ ನಾನು ಅಗ್ನಿ ಪ್ರವೇಶಗೈದು ಪ್ರಾಣತ್ಯಾಗ ಮಾಡಿ ಬಿಡುತ್ತೇನೆ. ನನ್ನ ಈ ಶಪಥಕ್ಕೆ ಭಗವಂತನಾದ ಕೃಷ್ಣಾ ನೀನು ಸಾಕ್ಷಿ” ಎಂದು ಉಗ್ರ ಪ್ರತಿಜ್ಞೆಗೈದನು. ಮರುಕ್ಷಣವೆ ತನ್ನ ಪುತ್ರರತ್ನನನ್ನು ನೆನೆ ನೆನೆದು ಪ್ರಲಾಪಿಸಿದನು. ಶ್ರೀಕೃಷ್ಣ ಅರ್ಜುನನ್ನು ಸಂತೈಸಿ ಹೇಗೋ ಸಮಾಧಾನಿಸಿದನು.

ಪಾರ್ಥ ಪ್ರತಿಜ್ಞೆಗೈದುದು ಪಾಂಡವ ಶಿಬಿರದಲ್ಲಿ ಆದರೂ, ಇಕ್ಕೆಲಗಳಲ್ಲೂ ಗುಪ್ತಚರರು ಕಾರ್ಯ ನಿರತರಾಗಿದ್ದಾರೆ. ಆ ಕೂಡಲೆ ಶಪಥಗೈದ ಸುದ್ದಿ ಕೌರವರ ಶಿಬಿರಕ್ಕೆ ಮುಟ್ಟಿತು. ಜಯದ್ರಥ ಹೆದರಿ ನಡುಗ ತೊಡಗಿದನು. “ನಾನು ನಾಳೆಯ ಸೂರ್ಯಾಸ್ತಮಾನ ನೋಡುವ ಸಾಧ್ಯತೆ ಇಲ್ಲವೆ ಇಲ್ಲ. ಯಾಕೆಂದರೆ ಪ್ರತಿಜ್ಞೆಗೈದವ ಪಾರ್ಥ. ನನಗಿನ್ನು ಉಳಿಗಾಲವಿಲ್ಲ. ಈ ಕೂಡಲೆ ನಾನು ಕುರುಕ್ಷೇತ್ರ ತೊರೆದು ಅಜ್ಞಾತನಾಗುವೆ. ನಾಳೆಯ ಒಂದು ದಿನ ಎಲ್ಲಿಯೂ ಕಾಣಿಸಿಕೊಳ್ಳಲಾರೆ” ಹೀಗೆನ್ನುತ್ತಾ ಓಡಿ ಹೋಗಲು ಸಿದ್ಧನಾದನು.

ಆಗ ದುರ್ಯೋಧನನು ತನ್ನ ಪ್ರಿಯ ಸೋದರಿಯ ಪತಿ ಜಯದ್ರಥನಿಗೆ ಧೈರ್ಯ ತುಂಬುತ್ತಾ “ಸಿಂಧೂ ದೇಶಾಧಿಪನೆ ಭಯಪಡಬೇಡ. ನಾಳೆಯ ಒಂದು ದಿನ ನೀನು ಕುರುಕ್ಷೇತ್ರಕ್ಕೆ ಬರುವುದು ಬೇಡ. ಪಾರ್ಥನನ್ನು ರಣರಂಗ ತೊರೆದು ಹೊರ ಹೋಗದಂತೆ ಗುರು ದ್ರೋಣಾಚಾರ್ಯರು, ಅಶ್ವತ್ಥಾಮ, ಕೃತವರ್ಮ, ಕರ್ಣ, ಕೃಪಾದಿಗಳು ತಡೆಯುತ್ತಾರೆ. ಒಮ್ಮೆ ದಿನಾಂತ್ಯವಾಗಿ ಸೂರ್ಯಾಸ್ತಮಾನವಾದರೆ ಕೇವಲ ದಿನಮಣಿ ಸೂರಜ ಮಾತ್ರ ಪಡುಗಡಲಲ್ಲಿ ಮುಳುಗಿ ಕತ್ತಲೆ ಆವರಿಸುವುದಲ್ಲ, ಕಲಿ ಪಾರ್ಥನೆ ಅಸ್ತಂಗತನಾಗುತ್ತಾನೆ. ಅಜೇಯ ಅರ್ಜುನ ತನ್ನ ವಚನಪಾಲನೆಗಾಗಿ ಸ್ವಯಂ ಮರಣ ಸ್ವೀಕರಿಸಲೇಬೇಕು. ನಿನ್ನ ಪ್ರಾಣ ಮಾತ್ರ ಅಲ್ಲ ನನ್ನ ಜಯವೂ ಸ್ಥಿರವಾಗುತ್ತದೆ. ಹಾಗಾಗಿ ಭಯಪಡುವುದಕ್ಕೆ ಕಾರಣವಿಲ್ಲ” ಎಂದು ಸಂಭ್ರಮಿಸಿ ನುಡಿದನು.

ಅಂದಿನ ರಾತ್ರಿ ಪಾಂಡವ ಶಿಬಿರ ಶೋಕಸಾಗರದಲ್ಲಿ ತಪ್ತವಾಗಿದ್ದರೆ, ಕೌರವರ ಬಿಡಾರವೂ ಅತಿಶೋಕದಿಂದ ತತ್ತರಿಸಿ ಹೋಗಿತ್ತು. ವೈರಿಯೆ ಆಗಿದ್ದರೂ ಅಭಿಮನ್ಯು ಕೌರವರ ಸಹಿತ ಗುರು ದ್ರೋಣ, ಮೈತ್ರಿ ರಾಜರಿಗೂ ಪ್ರಿಯನಾಗಿದ್ದ. ಆತನ ಬಗೆಗಿದ್ದ ಪ್ರೇಮ, ಮಮಕಾರ, ಗೌರವ ಎಲ್ಲರನ್ನೂ ಬಿಡದೆ ಕಾಡುತ್ತಿತ್ತು. ಗಾಯದ ಮೇಲೆ ಬರೆ ಎಂಬಂತೆ ಪಾರ್ಥನ ಉಗ್ರ ಶಪಥ ವಾಕ್ಯ- ಜಯದ್ರಥನ ವಧೆಯ ಬಗ್ಗೆ ನೆನೆದಾಗ ಎಲ್ಲರೂ ಭಯಗೊಂಡು ನಡುಗಿ ನಲುಗುತ್ತಿದ್ದಾರೆ. ಸ್ವಯಂ ಗುರು ದ್ರೋಣರೂ ತರ್ಕಿಸಿ ಮನದಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ – ಕೃಷ್ಣಾರ್ಜುನರು ಕಟಿಬದ್ದರಾಗಿ ನಿಂತರೆ ಜಯದ್ರಥ ಮರಳಿ ಮಾತೆಯ ಗರ್ಭ ಹೊಕ್ಕರೂ, ಬಿಡದೆ ಬೆಂಬತ್ತಿ ಪಾತ ಮಾಡದೆ ಬಿಡಲಾರರು. ಒಂದೊಮ್ಮೆಗೆ ಸೈಂಧವ ಭಯಗ್ರಸ್ಥನಾಗಿ ಸತ್ತರೂ ಬದುಕಿಸಿ ಅರ್ಜುನ ಕೊಲ್ಲುತ್ತಾನೆ. ಹೀಗೆ ವಿಧ ವಿಧವಾಗಿ ಯೋಚಿಸುತ್ತಾ ಯಾರೊಬ್ಬರಿಗೂ ನಿದ್ದೆ ಬರಲಿಲ್ಲ.

ಸೂರ್ಯೋದಯವಾಗಿದೆ- ಅರ್ಜುನ ರೌದ್ರಾವತಾರಿಯಾಗಿದ್ದಾನೆ. ಜಯದ್ರಥ ಧೃತಿ ಕಳಕೊಂಡವನಂತಾಗಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page