ಮುನಿಯಾಲು – ಪಡುಕುಡೂರು ಖಜಾನೆ ರಸ್ತೆ ಕಾಮಗಾರಿ ವಿಚಾರ
ಮುನಿಯಾಲು ಉದಯ ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ, ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಆಗ್ರಹ

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸರ್ಕಾರಿ ಕಾಮಗಾರಿಗಳಲ್ಲಿ ಏಕಸ್ವಾಮ್ಯತೆ ಸಾಧಿಸಲು ಗುತ್ತಿಗೆದಾರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಒತ್ತಾಯಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಮೂಲಕ ಮುನಿಯಾಲು- ಪಡುಕೂಡುರು ಖಜಾನೆ ರಸ್ತೆ ನಿರ್ಮಾಣದ 2.50 ಕೋಟಿ ಕಾಮಗಾರಿ ಪ್ರಶಾಂತ್ ಶೆಟ್ಟಿ ಮಳವಳ್ಳಿ ಎಂಬವರಿಗೆ ಟೆಂಡರ್ ಆಗಿತ್ತು. ಈ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿತ್ತು. ಆದರೆ ಎಲ್ಲ ಸರ್ಕಾರಿ ಕಾಮಗಾರಿಗಳನ್ನು ತಾನೇ ಮಾಡಬೇಕೆಂಬ ಹಪಹಪಿಗೆ ಬಿದ್ದಿರುವ ಉದಯಕುಮಾರ್ ಶೆಟ್ಟಿ ಅಕ್ರಮವಾಗಿ ಸದರಿ ರಸ್ತೆಯನ್ನು ಅಗೆದು ಕಾಮಗಾರಿ ಪ್ರಾರಂಭ ಮಾಡಿರುತ್ತಾರೆ. ಈ ವಿಷಯ ತಿಳಿದು ಸರ್ಕಾರಿ ಎಂಜಿನಿಯರ್ ಗುತ್ತಿಗೆದಾರ ಪ್ರಶಾಂತ ಶೆಟ್ಟಿ ಮಳವಳ್ಳಿಯವರಿಗೆ ನೋಟಿಸ್ ನೀಡಿದ್ದಾರೆ. ಆದರೆ ಈ ಕೃತ್ಯಕ್ಕೆ ಮೂಲ ಕಾರಣೀಕರ್ತ ಮುನಿಯಾಲು ಉದಯ ಕುಮಾರ್ ಶೆಟ್ಟಯಾಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕಾಮಗಾರಿಯ ಟೆಂಡರ್ ಆದದ್ದು ಒಬ್ಬರಿಗೆ ಆದರೆ ಉದಯಕುಮಾರ್ ಶೆಟ್ಟಿಯವರು ಹೇಗೆ ಕಾಮಗಾರಿ ಆರಂಭಿಸಿದ್ದಾರೆ ? ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಇಂಥ ಕಾನೂನು ಬಾಹಿರ ಹಾಗೂ ದಬ್ಬಾಳಿಕೆ ನೀತಿಯು ಕಾರ್ಕಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಬೇರೆ ಗುತ್ತಿಗೆದಾರರು ತಲೆ ಎತ್ತಬಾರದು ಎಂಬಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಸ್ವತ್ತನ್ನು ಹಾನಿ ಮಾಡಿದ ಅವರ ವಿರುದ್ಧ ಮೊದಲು ಕ್ರಮವಾಗಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಎರಡುವರೆ ವರ್ಷದಿಂದ ಉದಯಕುಮಾರ್ ಶೆಟ್ಟಿ ಜಿಲ್ಲಾಡಳಿತ ವನ್ನು ದುರ್ಬಳಕೆ ಮಾಡಿಕೊಂಡು ಜಲ್ಲಿ, ಮರಳು, ಕೆಂಪುಗಲ್ಲು ವ್ಯಾಪಾರಸ್ಥರಿಗೆ ಕೇಸುಗಳನ್ನು ಹಾಕಿಸುತ್ತಾ ನಿರಂತರವಾಗಿ ಕಿರುಕುಳವನ್ನು ನೀಡುತ್ತಿದ್ದವರು ಈಗ ತನ್ನ ಕ್ಷೇತ್ರದಲ್ಲಿ ನನ್ನನ್ನು ಬಿಟ್ಟು ಬೇರೆ ಯಾರೂ ಗುತ್ತಿಗೆ ಕಾಮಗಾರಿ ಮಾಡಬಾರದು ಎಂಬ ಕಾರಣಕ್ಕಾಗಿ ಇತರ ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಮಾಡುತ್ತಾ ಸರ್ಕಾರಿ ಗುತ್ತಿಗೆ ಯಲ್ಲಿ ಏಕಸ್ವಾಮ್ಯತೆ ಸಾಧಿಸಲು ಪ್ರಯತ್ನಿಸುತ್ತಾ ಸರ್ಕಾರಿ ಕಾಮಗಾರಿಗಳೆಲ್ಲವೂ ತಮ್ಮ ಭ್ರಷ್ಟಾಚಾರದ ಆಹಾರ ಎಂದು ಪರಿಭಾವಿಸಿ ಉಳಿದ ಗುತ್ತಿಗೆದಾರರನ್ನು ತುಳಿಯುತ್ತಿದ್ದಾರೆ.
ಇವರ ಈ ಸರ್ವಾಧಿಕಾರಿ ಧೋರಣೆಯನ್ನು ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನೆ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಲೋಕೋಪಯೋಗಿ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಸರ್ಕಾರದ ಆಸ್ತಿಗೆ ಹಾನಿ ಮಾಡಿದ ಮುನಿಯಾಲು ಉದಯಕುಮಾರ್ ಶೆಟ್ಟಿ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.






















































