ಭಾಗ 356
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೫೬ ಮಹಾಭಾರತ
ಕೇಶವನ ಅಳಿಯನಾಗಿ ಹುಟ್ಟು ಪಡೆದಿದ್ದ ಅಭಿಮನ್ಯು ಶವವಾಗಿ ಅಳಿದು ಬಿದ್ದಾಗ ಎಲ್ಲೆಡೆ ನೀರವ ಮೌನ ಆವರಿಸಿದೆ. ದುರ್ಯೋಧನ ದುಷ್ಟನಾಗಿದ್ದರೂ, ಏಕಾಂಗಿಯಾಗಿ ಸಾಗರೋಪಾದಿಯಲ್ಲಿ ಸಮಾಹಿತವಾಗಿದ್ದ ಸೇನೆಯೊಡನೆ ಹೋರಾಡಿದ ಅಭಿಮನ್ಯುವಿನ ಧೈರ್ಯ, ಸ್ಥೈರ್ಯ, ಶೌರ್ಯ, ಪರಾಕ್ರಮ, ಸಾಹಸ, ಯುದ್ದ ಜ್ಞಾನ ಕಂಡು ಬೆಕ್ಕಸ ಬೆರಗಾಗಿದ್ದಾನೆ. ಅಬ್ಬಾ! ಈ ಬಾಲಕನ ಪ್ರಬುದ್ಧತೆಯೆ? ಇವನು ಬದುಕುಳಿದಿರುತ್ತಿದ್ದರೆ ಚಂದ್ರವಂಶವನ್ನು ಬೆಳಗಬಲ್ಲ ತಾರಾನಾಥ ಚಂದ್ರನಾಗಿ ಶೋಭಿಸುತ್ತಿದ್ದ ಎಂಬ ಭಾವೋತ್ಪತ್ತಿಯಾಗಿತ್ತು ಅವನ ಮನದಲ್ಲಿ. ಆದರೆ ಈಗ ಬಾಲಚಂದ್ರ ಅಮವಾಸ್ಯೆ ತಿಥಿಯ ದಿನದಂತೆ ಕಣ್ಮರೆಯಾಗಿ ಹೋಗಿದ್ದಾನೆ. ಚಂದ್ರವಂಶದ ವೀರ ಬಾಲಕ, ಪಾರ್ಥ ನಂದನ – ಸೌಭದ್ರನಿಗೆ ಪೂರ್ವ ಜನ್ಮದ ಕಥೆಯೊಂದಿದೆ.
ಕಾಲಚಕ್ರದ ಚಲನೆ ಆಗಲೇ ಬೇಕಾದದ್ದು. ಅಧರ್ಮ ಅತಿಕ್ರಮಿಸಿದಾಗ ಧರ್ಮ ಸಂಸ್ಥಾಪನೆಯಾಗಬೇಕು. ಯುಗಧರ್ಮ ಪಾಲನೆಯೂ ಆಗಬೇಕು. ಇವೆಲ್ಲವನ್ನೂ ಪಾಲಿಸ ಬೇಕಾದದ್ದು ಲೋಕಪಾಲಕ ನಾರಾಯಣನ ಕರ್ತವ್ಯ. ಲಯಾಧಿಕಾರಿ ಮಹಾದೇವ ಶಿವನೂ ಇದಕ್ಕೆ ಜವಾಬ್ದಾರನು ಹೌದು. ಹೀಗಿರಲು ಯುಗಚಕ್ರ ತಿರುಗಬೇಕು. ದ್ವಾಪರಾ ಯುಗ ಕಳೆದು ಕಲಿಯುಗಕ್ಕೆ ಜಾರಬೇಕು. ಆ ಮಹತ್ಕಾರ್ಯ ಬದಲಾವಣೆಯ ಸಮಯವೂ ನಿಕಟವಾಗಿದೆ. ಆದರೆ ಆ ಚಲನೆಗೆ ಬಾಧಕರಾಗಿ ಇರುವವರನ್ನು ತೆರವುಗೊಳಿಸಬೇಕಾದ ಅನಿವಾರ್ಯತೆಯೂ ಬಂದೊದಗಿದೆ. ಹೀಗೆ ಅಧರ್ಮಿಗಳ ನಿಗ್ರಹ, ಲೋಕಪಾಲನೆಯ ವ್ಯವಸ್ಥೆ ಹಂತ ಹಂತವಾಗಿ ಸಾಗುತ್ತಿದೆ. ಕಾಲ ಕೂಡಿ ಬಂದಾಗ ದ್ವಾಪರ ಪುರುಷ ಯುಗಾಧಿಪತ್ಯವನ್ನು ಕಲಿಪುರುಷನಿಗೆ ಒಪ್ಪಿಸುವಂತೆ ನಿಭಾಯಿಸಬೇಕಾದ ಹೊಣೆಗಾರಿಕೆಯೂ ನಾರಾಯಣನದ್ದು. ತನ್ನ ಕಾರ್ಯವನ್ನು ಮಾಡಲೋಸುಗ ದುರುಳರ ನಿಗ್ರಹವಾಗಿ ಭೂಭಾರ ಹರಣವಾಗಬೇಕು. ಹಾಗಾಗಿ ಯುಗ ಯುಗದಲ್ಲೂ ಧರ್ಮಗ್ಲಾನಿಯಾದಾಗ ಮರು ಸ್ಥಾಪನೆಗೆ ತಾನು ಅವತರಿಸುವ ಸಂಕಲ್ಪ ಭಗವಂತನದ್ದು. ಅಂತೆಯೆ ಸ್ವಯಂ ನಾರಾಯಣನು ಕೃಷ್ಣಾವತಾರಿಯಾಗಿ ಇಳಿಯುವ ನಿರ್ಣಯ ಕೈಗೊಂಡಿದ್ದನು. ಆತನಿಗೆ ಸಹಾಯಕರಾಗಿ ದಿಕ್ಪಾಲಕರೂ ಸಹಕರಿಸಲು ಮುಂದಾದರು. ಯಮಧರ್ಮನ ಅಂಶ ಸಂಭೂತನಾಗಿ ಧರ್ಮರಾಯ, ಮಾರುತನಿಂದ ಭೀಮ, ಇಂದ್ರನಿಂದ ಅರ್ಜುನ, ಅಶ್ವಿನಿ ದೇವತೆಗಳಿಂದ ನಕುಲ ಸಹದೇವರು ಗಳನ್ನಾಗಿ ಸೃಷ್ಟಿಸುವ ನಿರ್ಣಯವಾಯಿತು.
ಹೀಗಿರಲು ಚಂದ್ರ ಮತ್ತು ರೋಹಿಣಿಯರ ಮಗ ತಾನೂ ಭಗವಂತ ನಾರಾಯಣನು ತೊಡಗುತ್ತಿರುವ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಸಹಕಾರಿಯಾಗಿ ಹೋಗುತ್ತೇನೆ. ಅವರ ಜೊತೆ ಅವತಾರವೆತ್ತಿ ಭೂ ಲೋಕದಲ್ಲಿ ಜನಿಸಿ ಧರ್ಮಸಂಸ್ಥಾಪನೆಗೆ ಪೂರಕನಾಗಲು ಅನುಮತಿ ನೀಡಬೇಕೆಂದು ತಂದೆ ಚಂದ್ರನಲ್ಲಿ ಕೇಳಿಕೊಂಡನು. ಚಂದ್ರನ ಇಪ್ಪತ್ತೇಳು ಪತ್ನಿಯರಲ್ಲಿ ಪ್ರಿಯಳಾದವಳು ರೋಹಿಣಿ. ಆಕೆಯಲ್ಲಿ ಹುಟ್ಟಿದ ಬಹುಪ್ರೀತ ಪುತ್ರನನ್ನು ಬಿಟ್ಟಿರಲು ಆಗದೆ ಸಮ್ಮತಿ ನೀಡಲಿಲ್ಲ. ಆದರೆ ಮಗ ಹಠ ಹಿಡಿದು ಒತ್ತಾಯಿಸಿದಾಗ ಚಂದ್ರ ವಿವಶನಾದನು. ಭಗವಾನ್ ನಾರಾಯಣನ ಬಳಿ ಬಂದು ಮಗನ ಅಪೇಕ್ಷೆ, ಹಾಗೂ ತನಗೆ ಮಗನ ಮೇಲಿನ ಪ್ರೀತಿ ಹಾಗು ಮಗನ ಇಚ್ಚೆಯ ಬಗ್ಗೆ ಆಕ್ಷೇಪದ ವಿಚಾರ ಹೇಳಿಕೊಂಡನು. ಶ್ರೀಹರಿ ಚಂದ್ರನನ್ನು ಸಂತೈಸಿ, “ನಿನ್ನ ಮಗನು ಮನ ಮಾಡಿರುವ ಕಾರ್ಯ ಸದುದ್ದೇಶದ್ದು ಆಗಿದೆ. ಹಾಗಿರಲು ನಿರಾಕರಿಸಬೇಡ.” ಎಂದನು. ಆಗ ಚಂದ್ರನು “ಭಗವಂತಾ ನೀನು ಆತನ ಅಪೇಕ್ಷೆಯನ್ನು ಅಂಗೀಕರಿಸುವೆಯಾದರೆ, ನನ್ನದೊಂದು ಬೇಡಿಕೆಯಿದೆ. ಆದಷ್ಟು ಶೀಘ್ರವಾಗಿ ನನ್ನ ಮಗ ಮರಳಿ ನನ್ನನ್ನು ಸೇರಿಕೊಳ್ಳುವಂತೆ ಮಾಡಬೇಕು”. ಆಗ ಭಗವಂತನು “ತಂದೆಯಾಗಿ ನಿನ್ನ ಮನದಿಂಗಿತವೂ ನನಗರ್ಥವಾಗುತ್ತದೆ. ನಿನ್ನ ಮಗ ಆದಷ್ಟು ಬೇಗನೆ ಭೂಲೋಕದಲ್ಲಿ ತನ್ನ ಕೆಲಸ ಮುಗಿಸಿ ಹಿಂತಿರುಗಿ ಬರುತ್ತಾನೆ. ತಿಥಿಗಳು ಉರುಳಿದಾಗ ವೃದ್ಧಿಸುತ್ತಾ ಪ್ರತಿಪೂರ್ಣನಾಗಿ ಹದಿನಾರು ಕಳೆಗಳಿಂದ ಬೆಳಗುವ ನಿನ್ನ ಪೂರ್ಣ ತೇಜಸ್ಸಿನ ಸ್ವರೂಪದಂತೆ, ನಿನ್ನ ಮಗನೂ ಹದಿನಾರು ವರ್ಷ ಕಾಲ ಭೂಲೋಕದಲ್ಲಿ ಬದುಕಿ ಷೋಡಷ ಪ್ರಾಯದಲ್ಲಿ ಕಳೆದುಂಬಿ ಮೆರೆದು, ಅವತಾರ ಕಾರ್ಯ ಪೂರೈಸಿ ನಿನ್ನ ಬಳಿ ಮರಳಿ ಬರುವಂತೆ ನಾನು ನೋಡಿಕೊಳ್ಳುವೆ. ಮಗನ ಸದಾಶಯಕ್ಕೆ ಸಮ್ಮತಿ ನೀಡಿ ಅನುಗ್ರಹಿಸುವ ಮನ ಮಾಡು. ಸತ್ಕೀರ್ತಿ ಸಂಪನ್ನನಾಗಿ ನಿನ್ನ ಮಗ ಕಿರಿದಾದ ಸಮಯದ ಬಾಳ್ವೆಯಲ್ಲಿ ಹಿರಿದಾದ ಸಾಧನೆಗೈದು ಹಿಂದಿರುಗಿ ಬರುತ್ತಾನೆ” ಎಂದು ಅಭಯವಿತ್ತನು. “ಹಾಗೆಯೆ ಆಗಲಿ” ಎಂದು ಶಶಾಂಕ ಒಪ್ಪಿಗೆಯಿತ್ತನು. ಚಂದ್ರನ ಮಗ ಕಾಲ ಕೂಡಿ ಬಂದಾಗ ಅರ್ಜುನ ಸುಭದ್ರೆಯರ ಮಗನಾಗಿ ಅಭಿಮನ್ಯು ನಾಮಕನಾಗಿ ಜನಿಸಿದನು. ಅವನ ಅವತಾರಕ್ಕೆ ಪೂರ್ವ ನಿರ್ಧಾರಿತ ಕಾಲಮಿತಿಯಿದ್ದು, ಕೇವಲ ಹದಿನಾರು ವರ್ಷಗಳ ಅವಕಾಶ ಹೊಂದಿ ಬಂದವನು. ವರ್ಷದಿಂದ ವರ್ಷ ಸೇರುತ್ತಿದ್ದಂತೆ ಪ್ರಭೆ ವೃದ್ಧಿಸುತ್ತಾ ಕಳಾಪೂರ್ಣತೆಯಿಂದ ತುಂಬಿ ತುಳುಕುವ ತೇಜೋವಂತನಾಗಿ ಬೆಳಗಿದ್ದಾನೆ. ಎಲ್ಲರನ್ನೂ ಆಕರ್ಷಿಸುತ್ತಾ ಬಹುಪ್ರೀತನಾಗಿ ಬೆಳೆಯುತ್ತಿದ್ದ. ಪೂರ್ಣ ಓಜಸ್ಸಿನಿಂದ ಕುರುಕ್ಷೇತ್ರದಲ್ಲಿ ವಿಜೃಂಭಿಸಿ ತನ್ನ ಅವತರಣದ ಕಾರ್ಯ ಪೂರೈಸಿಕೊಂಡಿದ್ದಾನೆ. ತನ್ನ ಕಾರ್ಯ ಕಾರಣದ ಜನುಮದ ಅವಧಿ ಮುಗಿಸಿ ಚಂದ್ರಲೋಕಕ್ಕೆ ಮರಳಿದ್ದಾನೆ. ಶಶಿ ವಂಶದ ಕುಡಿಯಾಗಿ ಹುಟ್ಟಿ, ರಣಧಾರುಣಿಯಲ್ಲಿ ಕಿಡಿಯಾಗಿ ಹತ್ತಿ ಉರಿದು ಮಾರಣಹೋಮವನ್ನು ವಿರಚಿಸಿ ಕೃತಕೃತ್ಯನಾಗಿ ವಿರಮಿಸಿದ್ದಾನೆ. ಕಾರ್ಯ ಕಾರಣದಿಂದ ಬಂದವನು ಸಾಧಿಸಿ ಸಾರ್ಥಕ್ಯ ಭಾವವನ್ನು ಹೊಂದಿ ಹಿಂದಿರುಗಿದ್ದಾನೆ.
ಮರ್ತ್ಯಲೋಕ ಭುವಿಯಲ್ಲಿ ಸಕಲವೂ ಮೃತ್ಯುವಿನಲ್ಲಿ ಪರ್ಯಾವಸಾನಗೊಳ್ಳುವುದು ನಿಯಮ. ಯಮರಾಜ ಆ ಕಾರ್ಯಪಾಲನೆಗೆ ಅಧಿಪತಿ. ಅಭಿಮನ್ಯುವಿನ ಮರಣವಾರ್ತೆ ವ್ಯೂಹದ ಪ್ರವೇಶದ್ವಾರದಲ್ಲಿ ಹರಸಾಹಸ ಪಡುತ್ತಾ ಚಕ್ರವ್ಯೂಹ ಪ್ರವೇಶಿಸುವ ಪ್ರಯತ್ನನಿರತರಾಗಿದ್ದ ಪಾಂಡವರಿಗೆ ತಲುಪಿತು. ಅಭಿಮನ್ಯು ಮಡಿದ ಸುದ್ದಿ ಕೇಳಿದಾಕ್ಷಣ ಸ್ಥಿತಪ್ರಜ್ಞನೆಂದು ಕರೆಯಲ್ಪಡುವ ಧರ್ಮರಾಯ ಪ್ರಜ್ಞೆ ತಪ್ಪಿ ಮೂರ್ಛಿತನಾಗಿ ಬಿದ್ದು ಬಿಟ್ಟನು. ಸಮಸ್ತ ಪಾಂಡವ ಸೇನೆ ಶೋಕ ಸಾಗರದಲ್ಲಿ ಮುಳುಗಿತು. ಭೀಮಸೇನ ಮೊದಲೆ ಸ್ವಭಾವತಃ ಭಾವಜೀವಿ. ಕೋಪ, ತಾಪ, ಪಶ್ಚಾತ್ತಾಪ, ದುಃಖ, ಸಂತೋಷ ಹೀಗೆ ಏನು ಆದರೂ ಅತೀ ಹೆಚ್ಚು ಅನುಭವಿಸುವವನು ಧರ್ಮಾನುಜ ಭೀಮ. ಈಗಲೂ ಅಭಿಮನ್ಯುವಿನ ವೀರಮರಣದ ಸತ್ಯವಿಚಾರ, ಸಕಲವನ್ನೂ ಜೀರ್ಣಿಸಬಲ್ಲ ವೃಕೋದರನಿಗೆ ಅರಗಿಸಲಾಗಲಿಲ್ಲ. ಬಿದ್ದು ಎದ್ದು ಬೊಬ್ಬಿರುದು ಅತ್ತನು. ನಕುಲ ಸಹದೇವಾದಿಗಳೂ ಬಹುಪ್ರೀತ ಪುತ್ರನ ವಿಯೋಗದ ದುಃಖಕ್ಕೆ ಔಷಧೋಪಚಾರ ಅರಿಯದೆ ಮರುಗಿ ಕೊರಗತೊಡಗಿದರು. ಈ ಸಮಯಕ್ಕೆ ದಿನಕರನೂ ತನ್ನ ನೈಮಿತ್ತಿಕ ಚಲನೆಯನ್ನು ಪೂರೈಸುತ್ತಾ ಪಡುವಣಾಂಬುಧಿಯತ್ತ ಗಮಿಸಿದ ಕಾರಣ ಶಂಖನಾದದೊಂದಿಗೆ ಯುದ್ದ ವಿರಾಮ ಘೋಷಿಸಲ್ಪಟ್ಟಿತು.
ಇತ್ತ ಮಾತೆಯರಾದ ಸುಭದ್ರೆ, ದ್ರೌಪದಿ, ಗರ್ಭಿಣಿ ಪತ್ನಿ ಉತ್ತರೆ, ಅಜ್ಜಿ ಕುಂತಿಯ ರೋದನೆ ಹೇಳತೀರದು. ಯಾರನ್ನೂ ಸಮಾಧಾನಿಸುವವರು ಇಲ್ಲ, ಎಲ್ಲರೂ ಅಳುವವರೇ!.
ಅತ್ತ ದಕ್ಷಿಣ ಭಾಗದ ಯುದ್ಧ ಜಯಿಸಿ, ತ್ರೈಗರ್ತ್ಯ ಸಂಶಪ್ತಕರನ್ನು ಸಮಸ್ತ ಸೇನಾ ಸಹಿತ ಇನ್ನಿಲ್ಲದಂತೆ ಸವರಿ ಸರ್ವನಾಶಗೈದು ಬರುತ್ತಿದ್ದಾರೆ ಕೃಷ್ಣಾರ್ಜುನರು. ವಿಜಯಲಕ್ಷ್ಮಿಯನ್ನು ಒಲಿಸಿಕೊಂಡು ಹರುಷದಿಂದ ಶಿಬಿರಾಭಿಮುಖವಾಗಿ ಹೊರಟ ಪಾರ್ಥನಿಗೆ ಅಡಿಗಡಿಗೆ ಅಶುಭ ಸೂಚಕ ಶಕುನಗಳು ಗೋಚರಿಸಿದವು. ಆತಂಕಕ್ಕೊಳಗಾಗಿ ಶ್ರೀಕೃಷ್ಣನನ್ನು ಕರೆದು, “ದೇವಾ! ಇದೇನು ವಿಪರ್ಯಾಸ? ಪರಮಾತ್ಮನಾದ ನಿನ್ನ ಸಖನಾಗಿ ನಾನಿರುವುದು. ಹಾಗಿದ್ದೂ ನನಗೇಕೆ ದುರ್ನಿಮಿತ್ತಕಾರಿ ವಿಷಯಗಳು ಕಾಣಿಸುತ್ತಿವೆ. ನನ್ನ ಮನವೇಕೊ ಗೊಂದಲಕ್ಕೊಳಗಾಗಿದೆ. ಮಾಧವಾ, ತಡಮಾಡದೆ, ಈ ಅಪಶಕುನಗಳ ಗುಟ್ಟೇನೆಂದು ತಿಳಿಸು. ಸೈರಿಸುವ ತಾಳ್ಮೆ ಕಳಕೊಂಡಿದ್ದೇನೆ” ಎಂದು ಕೈ ಮುಗಿದು ಬೇಡಿ ಕೊಳ್ಳತೊಡಗಿದನು.
ಮುಂದುವರಿಯುವುದು…









