26.3 C
Udupi
Monday, April 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 354

ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೫೫ ಮಹಾಭಾರತ

ದ್ರೋಣರು ತಮ್ಮ ಅಭಿಪ್ರಾಯ ಹಾಗು ತಂತ್ರದ ಬಗ್ಗೆ ವಿಸ್ತರಿಸುತ್ತಾ ಹೇಳ ತೊಡಗಿದರು “ಯುದ್ದದಲ್ಲಿ ಅಭಿಮನ್ಯುವಿಗೆ ಸಮದಂಡಿಯಾಗಿ ನಿಂತು ಹೋರಾಡಬಲ್ಲ ಇನ್ನೋರ್ವ ಯೋಧ ನಮ್ಮ ಪಾಳಯದಲ್ಲಿ ಇಲ್ಲ. ಆತನನ್ನು ಹೀಗೆ ಮುಂದುವರಿಯಲು ಬಿಟ್ಟರೆ ನಮ್ಮ ಸೇನೆಯನ್ನು ನಾಶಗೊಳಿಸುತ್ತಾ ಸಾಗಬಲ್ಲ ಸಾಮರ್ಥ್ಯ ಆತನಿಗಿದೆ. ಆಯಸ್ಸು ಮುಗಿದ ಜೀವರುಗಳ ಜೀವವನ್ನು ಯಮರಾಜನು ಅಪಹರಿಸುವಂತೆ ಈ ಬಾಲಕ ಮೃತ್ಯುಸದೃಶನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೋರ್ವ ಬಾಲಕ, ಈ ತನಕ ಸುಖದ ಜೀವನವನ್ನು ನೋಡಿದವನು, ಅವನೇನು ಮಹಾ ಎಂಬಂತೆ ನಮ್ಮವರು ಆತನ ಮೇಲೆ ಮುಗಿ ಬೀಳುತ್ತಿದ್ದಾರೆ. ಬೆಂಕಿಯ ಜ್ವಾಲೆಯಿಂದ ಆಕರ್ಷಿತವಾದ ಪತಂಗದಂತೆ ತಮ್ಮ ಅವಯವಗಳನ್ನು ಕಳಕೊಂಡು, ಪ್ರಾಣಕ್ಕೆ ಸಂಚಕಾರ ಸೆಳೆದುಕೊಂಡು ಪರ್ಯಾಪ್ತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅಭಿಮನ್ಯುವಿನ ಯುದ್ದ ವೈಖರಿಯನ್ನು ಓರ್ವ ಗುರುವಾಗಿ ನೋಡುವಾಗ ನನಗೆ ಯಾವ ರೀತಿಯ ಒಂದು ನ್ಯೂನತೆಯೂ ಕಾಣಲು ಸಿಗುತ್ತಿಲ್ಲ. ನಮ್ಮ ವೈರಿ ಎಂಬ ಏಕೈಕ ಕಾರಣ ಹೊರತು ಪಡಿಸಿದರೆ ದ್ವೇಷಿಸಲು ಕಾರಣವಿಲ್ಲದೆ ಆನಂದ ನನಗಾಗುತ್ತಿದೆ. ಈ ವೀರ ಬಾಲಕನ ಯುದ್ದ ನಿಷ್ಣಾತ ಪ್ರಾವಿಣ್ಯತೆ ಅದ್ಬುತವಾಗಿದೆ. ಎಲ್ಲಾ ದಿಕ್ಕುಗಳಿಂದ ಆತನ ಮೇಲಾಗುತ್ತಿರುವ ಆಕ್ರಮಣವನ್ನು ತಡೆದು ಛೇದಿಸಿ ಕಾದಾಡುವ ಧನುರ್ವಿದ್ಯಾ ಪ್ರದರ್ಶನ ಅತ್ಯುನ್ನತವಾಗಿದೆ. ಕ್ಷಣವೊಂದರಲ್ಲಿ ಆತ ಆವಾಹಿಸಿ ಪ್ರಯೋಗಿಸುವ ಮಂತ್ರಾಸ್ತ್ರಗಳು, ಸಂಧಾನ ಕ್ರಮ ಯಾವುದನ್ನೂ ಗಮನಿಸಿ ಗುರುತಿಸುವ ಅವಕಾಶವನ್ನು ಆತ ನೀಡುತ್ತಿಲ್ಲ. ಈ ಅರ್ಜುನಿಯು ರಣಕ್ಷೇತ್ರದಲ್ಲಿ ರಥಿಕನಾಗಿ ಸಂಚರಿಸುತ್ತಾ, ನಮ್ಮವರ ಗುರಿ ತಪ್ಪಿಸುತ್ತಾ, ಶೀಘ್ರಾತಿ ಶೀಘ್ರವಾಗಿ ಶರ ಪ್ರಯೋಗಗೈದು ತನ್ನ ಸುತ್ತ ರಕ್ಷಾಮಂಡಲ ರಚಿಸಿ, ಅತಿ ಶ್ರೇಷ್ಠವಾದ ಶರ ಕವಚಧಾರಣ ವಿದ್ಯೆಯ ಬಲದಿಂದ ತನ್ನ ಸ್ವರಕ್ಷಣೆ ಮಾಡಿಕೊಳ್ಳುತ್ತಾ, ನಮ್ಮ ಸೇನೆಯ ನಾಶಗೈಯುತ್ತಿರುವ ಆತನ ಧನುರ್ಮಂಡಲವಷ್ಟೆ ನಮಗೆ ಕಾಣಿಸುತ್ತಿದೆ. ಅರ್ಜುನ ನಿಸ್ಸಂಶಯವಾಗಿ ಮಹಾನ್ ಧನುರ್ಧರ. ಆತನಿಗಿಂತಲೂ ಅರೆ ಕ್ಷಣಕ್ಕಾದರೂ ಅಭಿಮನ್ಯುವಿನ ಸಂಧಾನ ವೇಗ ಹೆಚ್ಚು ಇದೆ ಅನಿಸುವಂತೆ ಭಾಸವಾಗುತ್ತಿದೆ. ಇಂತಹ ಅಪ್ರತಿಮ ಸಾಹಸಿಯ ಎದುರು ನಾವು ಒಬ್ಬೊಬ್ಬರು ಸಾಗಿ ಯುದ್ದ ನಿರತರಾದರೆ, ಈ ಹುಡುಗ ಆಟ ಆಡುವಂತೆ ನಿರಾಳನಾಗಿ ಸಂಹಾರಗೈಯದೆ ಬಿಡಲಾರ” ಎಂದು ಗುರು ದ್ರೋಣರು ಸಮಗ್ರವಾಗಿ ವೀರ ಅಭಿಮನ್ಯುವಿನ ಪಾರಮ್ಯವನ್ನು ವಿವರಿಸಿದರು.

ದುರ್ಯೋಧನ ಕರ್ಣರಿಗೆ ದ್ರೋಣರು ಮಾಡುತ್ತಿರುವ ವರ್ಣನೆ, ಹೊಗಳಿಕೆಯಿಂದ ಮನಸದಸು ಉರಿದು ಹೋಯಿತು. ಕರ್ಣನು “ಆಚಾರ್ಯರೆ, ನೀವೀಗ ಕೌರವ ಸೇನಾಪತಿಯೋ? ಅಲ್ಲಾ ಗುರುಕುಲದ ಅಧ್ಯಾಪಕನೋ? ಯುದ್ದ ಕ್ರಮದ ವರ್ಣನೆ ಹೇಳಿಸಿಕೊಂಡು ಕೇಳುವ ಸಮಯ ಇದಲ್ಲ. ಅಭಿಮನ್ಯುವಿನ ಸಂಹಾರ ಆಗಲೇಬೇಕು. ಇಲ್ಲದೆ ಹೋದರೆ ನಮಗೆ ಆಪತ್ತು ಒದಗಲಿದೆ. ಈ ತನಕ ಆತನೊಂದಿಗೆ ಹೋರಾಡಿ ನಾವೆಲ್ಲ ಸಾಕಷ್ಟು ಘಾತಿಸಿಕೊಂಡಿದ್ದೇವೆ. ನನಗೆ ನಿಲ್ಲುವ ಚೈತನ್ಯವೂ ಇಲ್ಲವಾಗಿದೆ. ಹಾಗಿದ್ದೂ ಅಭಿಮನ್ಯುವಿನ ವಧೆಯಾಗದೆ ವಿರಮಿಸಲಾಗದೆಂದು ಕಾದಾಡುತ್ತಿರುವೆ. ಅದಕ್ಕೆ ಬೇಕಾದ ರಣನೀತಿ ಆದಷ್ಟು ಬೇಗ ಸೂಚಿಸಿ” ಎಂದು ತನ್ನ ಆಕ್ರೋಶ ಪ್ರಕಟಿಸಿದನು.

“ಕರ್ಣಾ! ನಿನ್ನ ಉದ್ವೇಗ ಸಹಜವಾದದ್ದು ಹೌದು. ಅಭಿಮನ್ಯುವಿನ ಏಕಾಗ್ರತೆ ಉತ್ಕೃಷ್ಟವಾಗಿದೆ. ಹಾಗಾಗಿ ಇನ್ನು ಆತನ ಎದುರು ನಿಂತು ಎಷ್ಟು ಸಹಸ್ರ ಯೋಧರು ಯುದ್ದ ಮಾಡಿದರೂ ಫಲವಿಲ್ಲ. ನಾವು ಆರು ಮಂದಿ ಮಹಾರಥರು ವ್ಯೂಹವಾಗಿ ಅಭಿಮನ್ಯುವಿನ ಸುತ್ತ ಕೋಟೆಯಾಗಿ ಯುದ್ದಗೈಯಬೇಕು. ನೀನು ಆತನ ಬೆಂಗಡೆಯಲ್ಲಿ ಶರ ಪ್ರಯೋಗಿಸಿ ಧನುಸ್ಸನ್ನೂ ಶಿಂಜಿನಿಯನ್ನೂ ಕತ್ತರಿಸಬೇಕು. ಆ ಕೂಡಲೆ ಆತನ ರಥದ ಕುದುರೆಗಳ ಕಡಿವಾಣವನ್ನೂ ಕತ್ತರಿಸಿ, ವಿರಥನನ್ನಾಗಿಸಬೇಕು. ಆ ನಂತರವೂ ಆತ ವೀರಾವೇಶದಿಂದ ಹೋರಾಡಬಲ್ಲ. ಎಲ್ಲಿಯವರೆಗೆ ಆತನ ಬಾಹುಗಳು ಸುಸ್ಥಿತಿಯಲ್ಲಿರುತ್ತದೋ ಆವರೆಗೂ ಆತ ಯುದ್ದ ನಿಲ್ಲಿಸಲಾರ. ಈಗ ಮೊದಲು ಷಡ್ರಥರು ವ್ಯೂಹವಾಗಿ ಸುತ್ತುವರಿಯಬೇಕು, ಅಭಿಮನ್ಯುವಿ‌ನ ಪರಾಜಯಕ್ಕಾಗಿ ಧನುಸ್ಸು ಮತ್ತು ರಥ ಕತ್ತರಿಸಲ್ಪಡಬೇಕು” ಎಂದು ರಣತಂತ್ರ ಸೂಚಿಸಿದರು.

ಅಂತೆಯೆ, ದ್ರೋಣ, ಕರ್ಣ, ಅಶ್ವತ್ಥಾಮ, ಕೃಪಾಚಾರ್ಯ, ದುಶ್ಯಾಸನ ಮತ್ತು ಅವನ ಮಗ ಗಯಾಯುಧ ಆವರಣದಂತೆ ವ್ಯೂಹವಾಗಿ ಯುದ್ದ ಮುಂದುವರಿಸಿದರು. ಮುಂದಿನಿಂದ ಆಚಾರ್ಯ ದ್ರೋಣ – ಅಶ್ವತ್ಥಾಮರು ರಣಭಯಂಕರ ಯುದ್ದ ಮಾಡುತ್ತಿದ್ದಾರೆ. ಈರ್ವರಿಗೂ ಸಮದಂಡಿಯಾಗಿ ಹೋರಾಡುತ್ತಿದ್ದಾನೆ ಅಭಿಮನ್ಯು. ದ್ರೋಣಾಚಾರ್ಯರು ಹಿಂಭಾಗದಲ್ಲಿರುವ ಕರ್ಣನಿಗೆ ಅಭಿಮನ್ಯುವಿನ ಧನುಸ್ಸು, ಹಿಡಿದ ಕೈ, ಕುದುರೆಗಳ ಕಡಿವಾಣ ಕತ್ತರಿಸಲು ಆಜ್ಞೆ ಮಾಡಿದರು. ಆಗ ಕರ್ಣ ಶರ ಪ್ರಯೋಗಿಸಿ ಪಾರ್ಥ ಕುಮಾರನ ಧನುಸ್ಸನ್ನು ಕತ್ತರಿಸಿ ಬಿಟ್ಟನು. ಅರೆ ಕ್ಷಣದಲ್ಲಿ ಕುದುರೆಗಳ ಕಡಿವಾಣನ್ನೂ ಕಡಿದು, ಕುದುರೆಗಳ ಸಹಿತ ಸಾರಥಿಯನ್ನೂ ಸಂಹರಿಸಿದನು. ಕರ್ಣನ ಈ ಕೃತ್ಯದಿಂದ ಕ್ರೋಧಿತನಾದ ಅಭಿಮನ್ಯು “ಛೀ ನಿನ್ನ ಈ ನೀಚ ಕೃತ್ಯ ಕ್ಷಾತ್ರ ಕುಲಕ್ಕೇ ಅಪಮಾನ – ನಾಚಿಕೆಗೇಡು. ಮಹಾ ಅಧರ್ಮವನ್ನು ಎಸಗಿದ ನಿನಗೆ ದುರ್ಗತಿ ಪ್ರಾಪ್ತವಾಗಲಿದೆ” ಎಂದು ಆಕ್ರೋಶಿತನಾಗಿ ನುಡಿದನು.

ಅಷ್ಟರಲ್ಲಾಗಲೆ ಸರಸರನೆ ಶರೀರ ಹೊಕ್ಕ ಶರಗಳಿಂದ ಚಿಮ್ಮಿದ ರಕ್ತದೋಕುಳಿ ಅಭಿಮನ್ಯುವಿನ ವಸ್ತ್ರ ಶರೀರವೆಲ್ಲವನ್ನು ಕೆಂಬಣ್ಣಕ್ಕೆ ತಿರುಗಿಸಿತು. ಮುರಿದು ಬಿದ್ದ ರಥದಿಂದ ಖಡ್ಗ ಗುರಾಣಿ ಹಿಡಿದು ಜಿಗಿದನು. ಕುರುಸೇನೆಯನ್ನು ಸವರುತ್ತಾ ಸೆಣಸಾಡಿದನು. ದ್ರೋಣಾಚಾರ್ಯರು ಸೂಕ್ಷ್ಮವಾಗಿ ಗತಿಯನ್ನು ಗಮನಿಸಿ ಖಡ್ಗದ ಹಿಡಿಯನ್ನು ಗುರಿಯಾಗಿಸಿ ಶರ ಪ್ರಯೋಗಿಸಿ ಕತ್ತರಿಸಿದರು. ನಿರಾಯುಧನಾದ ಸೌಭದ್ರ. ಕ್ರೋಧಿತನಾಗಿ ಮುರಿದುಬಿದ್ದ ರಥದ ಚಕ್ರವನ್ನೆ ಎಳೆದೆತ್ತಿ ತಿರುಗಿಸುತ್ತಾ, ಅಪ್ಪಳಿಸಿ ಹೊಡೆಯುತ್ತಾ ಹೋರಾಡಿದನು. ಎದುರಾದ ಅಶ್ವತ್ಥಾಮನ ರಥರಕ್ಷಕರನ್ನು ಕೊಂದು ಸುದರ್ಶನಧಾರಿ ಕೃಷ್ಣನಂತೆ ಮುನ್ನುಗ್ಗಿದನು. ತುಸುಹೊತ್ತಲ್ಲಿ ರಥದ ಚಕ್ರವೂ ಪುಡಿಯಾಗಿ ಹೋಯಿತು. ಆ ಸಮಯ ಬಿದ್ದಿದ್ದ ಗದೆಯೊಂದನ್ನು ಎತ್ತಿ ಹೋರಾಟ ಮುಂದುವರಿಸಿದನು.

ಗದಾಧಾರಿಯಾಗಿ ತನ್ನತ್ತ ಬರುತ್ತಿದ್ದ ಶರಗಳನ್ನು ಖಂಡಿಸುತ್ತಾ, ತನ್ನ ಮೇಲೆರಗುತ್ತಿದ್ದ ಸೇನೆ, ಪದಾತಿಗಳನ್ನು ಹೊಡೆದಪ್ಪಳಿಸಿದನು. ಕಾಡಿನಲ್ಲಿ ಒಂಟಿ ಸಿಂಹ ಗುಂಪಾದ ತೋಳಗಳೊಂದಿಗೆ ಹೋರಾಡುವಂತೆ ಕಾಣುತ್ತಿದೆ. ಆಗ ಕರ್ಣನ ತೀಕ್ಷ್ಣ ಶರವೊಂದು ಎಡಗೈಯ ಛಾಪವನ್ನೇ ಕತ್ತರಿಸುವಂತೆ ಆಳಕ್ಕೆ ಹೊಕ್ಕಿತು. ಒಂಟಿ ಬಲಗೈಯಲ್ಲಿ ಹೋರಾಡುತ್ತಿರುವಾಗ ದುಶ್ಯಾಸನನ ಮಗ ಗಯಾಯುಧ ಗದಾಧಾರಿಯಾಗಿ ಎದುರಾದನು. ಅಭಿಮನ್ಯು ಆ ಕ್ಷಣದಲ್ಲಿ ದೇಹಾದ್ಯಂತ ಚುಚ್ಚಿಸಿಕೊಂಡ ಶರಗಳಿಂದ – ಮೈ ಕೊಡವಿ ನಿಂತ ಮುಳ್ಳು ಹಂದಿಯ ಶರೀರದಂತೆ ಕಾಣಿಸುತ್ತಿದ್ದಾನೆ. ಅಂತಹ ವೇದನಾಮಯ ಸ್ಥಿತಿಯಲ್ಲೂ ಎದೆಗುಂದದೆ ನಿರ್ಭಯನಾಗಿ ದುಶ್ಯಾಸನ ಪುತ್ರ ಗಯಾಯುಧನನ್ನು ಸೋಲಿಸಿ ಸಂಹರಿಸಿದನು. ಮಗನ ಮರಣದ ದೃಶ್ಯ ಕಾಣುತ್ತಿದ್ದಂತೆ ಆಕ್ರೋಶಿತನಾಗಿ ದುಶ್ಯಾಸನ ರಥದಿಂದ ಗದಾಧಾರಿಯಾಗಿ ಹಾರಿ ಅಭಿಮನ್ಯುವಿನ ಜೊತೆ ಯುದ್ದ ನಿರತನಾದನು. ಶರೀರದಿಂದ ರಕ್ತ ಬಸಿದು ಹೋಗುತ್ತಿದೆ, ಅಭಿಮನ್ಯು ನಿತ್ರಾಣನಾಗುತ್ತಿದ್ದರೂ ದುಶ್ಯಾಸನನೆದುರು ಹೋರಾಡಿ ಘಾತಿಸಿದನು. ಕೊನೆ ಕ್ಷಣದವರೆಗೂ ಕಾದಾಡಿ ನಿಸ್ತೇಜನಾಗಿ ಬೀಳುವ ಹೊತ್ತಿಗೆ ದುಶ್ಯಾಸನ ಬಲಯುತವಾಗಿ ಗದೆಯಿಂದ ಅಭಿಮನ್ಯುವಿನ ಶಿರಕ್ಕೆ ಅಪ್ಪಳಿಸಿದನು. ಚಂದ್ರವಂಶದ ರತ್ನವಾಗಿ ಬೆಳೆದು ಬೆಳಗಬೇಕಾಗಿದ್ದ ಅನರ್ಘ್ಯ ರತ್ನ ವೀರ ಕುರುಕ್ಷೇತ್ರದ ಪುಣ್ಯ ಭೂಮಿಯನ್ನಪ್ಪಿ ಮಲಗಿದವ ಏಳಲಿಲ್ಲ. ವೀರನಿಗೆ ವೀರ ಸ್ವರ್ಗಕ್ಕೆ ದಾರಿಯಾಗುವ ವೀರ ಮರಣ ಪ್ರಾಪ್ತವಾಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page