ಭಾಗ 351
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೫೧ ಮಹಾಭಾರತ
“ಕೃಷ್ಣ ಸಾರಥ್ಯದ ಅರ್ಜುನನ ರಥ ಕುರುಕ್ಷೇತ್ರದ ರಣ ಭೂಮಿಯಿಂದ ವಿಮುಖವಾದರೆ, ಆಗ ಪಾಂಡವ ಸೇನೆ ಸೋಲಿಸಲ್ಪಡಬಹುದು. ಅರ್ಜುನನೋರ್ವನಿಲ್ಲದಿದ್ದರೆ ನಮ್ಮ ಗೆಲುವು ಮತ್ತು ಧರ್ಮರಾಯನ ಬಂಧನವನ್ನು ತಡೆಯಲು ಸೇನಾಪತಿ ದೃಷ್ಟದ್ಯುಮ್ನನಿಗಾಗಲಿ, ಭೀಮನಿಗಾಗಲಿ ಸಾಧ್ಯವಿಲ್ಲ. ಬಿರುಗಾಳಿಯನ್ನು ತಡೆದು ತನ್ನ ಹಿಂದಿರುವ ಮರಗಳು ಸೇರಿ ಆಗಿರುವ ಅರಣ್ಯವನ್ನು ರಕ್ಷಿಸುವ ಮಹಾವೃಕ್ಷದಂತೆ ಅರ್ಜುನನಿದ್ದಾನೆ. ರಣಕ್ಷೇತ್ರದಲ್ಲಿ ಆತನಿರುವವರೆಗೆ ನಮ್ಮೆಲ್ಲಾ ಶ್ರಮ ಲೀಲಾಜಾಲವಾಗಿ ಆತನೋರ್ವನಿಂದಲೆ ನಿಗ್ರಹಿಸಲ್ಪಡುತ್ತದೆ. ಪಾಂಡವ ಸೇನೆ ಈಗಾಗಲೆ ಭೀಷ್ಮಾಚಾರ್ಯರಿಂದ ಅರ್ಧಭಾಗದಷ್ಟು ನಾಶವಾಗಿದೆ. ಉಳಿದ ಸೇನೆ ಇಬ್ಭಾಗವಾಗಬೇಕು. ಹಾಗಾಗಲು ಅರ್ಜುನನನ್ನು ಪ್ರತ್ಯೇಕಿಸುವುದು ಅತ್ಯಗತ್ಯ. ಆತನ ಜೊತೆ ಸೇನೆ ವಿಭಜನೆಯಾಗಿ ಎರಡು ಭಾಗವಾದರೆ, ಉಳಿದರ್ಧ ಭಾಗವನ್ನು ಸುಲಭದಲ್ಲಿ ಸೋಲಿಸಬಹುದು” ಎಂದರು ದ್ರೋಣಾಚಾರ್ಯ.
ಆ ಕೂಡಲೆ ಯೋಜನೆಯೊಂದು ರೂಪಿಸಲ್ಪಟ್ಟು ಸಂಶಪ್ತಕ ವಂಶದ ತ್ರಿಗರ್ತ ದೇಶದ ಐವರು ಮಹಾಶೂರರು, ವಿಕ್ರಮಿಗಳು ಆಗಿರುವ ಸತ್ಯರಥ (ಸುಶರ್ಮ) ಸತ್ಯವರ್ಮ, ಸತ್ಯವೃತ, ಸತ್ಯೇಷು ಮತ್ತು ಸತ್ಯಕರ್ಮಾ ರನ್ನು ದಶಸಹಸ್ರ ಮಹಾರಥಿಗಳ ಸಹಿತ ಮಹಾಸೇನೆಯ ಜೊತೆ ಪಾರ್ಥನಿಗೆ ಪ್ರತ್ಯೇಕ ಯುದ್ಧಾಹ್ವಾನ ನೀಡುವ ಚಿಂತನೆ ನಡೆಸಲಾಯಿತು. ಅರ್ಜುನ ಸಹಿತ ಆತನ ಸೇನೆಯನ್ನು ತಡೆಯಲು ಇಷ್ಟು ಸಾಲದೆಂದು ಮಾಲವರು, ತುಂಡಿಕೇರರ ಮೂವತ್ತು ಸಾವಿರ ರಥಿಕರ ಸೇನೆಯನ್ನೂ ಜೊತೆ ಸೇರಿಸಲಾಯಿತು. ಒಂದೆರಡು ದಿನಗಳ ಕಾಲ ಪೂರ್ತಿ ಧನಂಜಯನನ್ನು ವ್ಯಸ್ಥವಾಗಿಸಲು ಇಷ್ಟು ಸಾಲದೆಂದು ದ್ರೋಣರು ಪ್ರಸ್ಥಲಾಧಿಪತಿ ನರವ್ಯಾಘ್ರನೆಂದು ಪ್ರಸಿದ್ದನಾಗಿದ್ದವನು. ಆತನ ಸೈನ್ಯ, ಲಲಿತ್ಥ ದೇಶಾದಿಪ, ಮದ್ರಕ ದೇಶದ ಸೇನೆಯನ್ನೂ ಕೂಡಿಸಿ ಪ್ರತ್ಯೇಕ ಪ್ರಬಲ ತಂಡದ ರಚನೆಯಾಯಿತು. ದ್ರೋಣರು ಮಾತ್ರ ತ್ರಿಗರ್ತಾಧಿಪ ಸುಶರ್ಮನಲ್ಲಿ “ಅಯ್ಯಾ ಇಷ್ಟು ಮಹಾಸಾಗರೋಪಾದಿಯ ಸೇನೆ ನಿನಗೊದಗಿದರೂ ನೀನು ಆತ್ಮಾರ್ಪಣೆಗೆ ಸಿದ್ಧನಾಗಬೇಕು. ಪಾರ್ಥನನ್ನು ಕೆಣಕಿದ ಬಳಿಕ ಉಳಿಯುವ ಸಾಹಸ ಅಸಾಧ್ಯ. ಹಾಗಿದ್ದರೂ ಸಮಗ್ರವಾಗಿ ನಮ್ಮ ಗೆಲುವಿನ ಗುರಿ ಮುಟ್ಟುವಲ್ಲಿ ನಿಮ್ಮಿಂದ ನಾಳೆಯ ಹೋರಾಟ ಮಹತ್ತರದ್ದು ಆಗಲಿದೆ. ಸ್ವಯಂ ಸಮರ್ಪಣೆ ನಿಮ್ಮಿಂದ ಆಗಬೇಕಾಗಿ ಬಂದರೂ ಹಿಂಜರಿಯಬೇಡಿ. ಗೆದ್ದರೆ ಸಾಧನೆ, ಇಲ್ಲವಾದರೆ ವೀರಸ್ವರ್ಗದ ಪ್ರಾಪ್ತಿ” ಎಂಬಂತೆ ವಿವರಿಸಿ ಯೋಜನೆ ವಿವರಿಸಿದರು. ಅವರ ಮಾತಿನ ಅರ್ಥ – ಪರೋಕ್ಷವಾಗಿ ಹೀಗೆ ಅರ್ಥವಿಸಬಹುದು. ನೀವೆಷ್ಟು ಪ್ರಬಲ ಸೇನಾಸಹಿತರಾಗಿ ಪಾರ್ಥನ ಎದುರಾಗಿ ಹೋದರೂ, ಆತನಿಗದು ನಗಣ್ಯವಾಗಿ ನಿರ್ನಾಮ ಮಾಡದೆ ಬಿಡಲಾರನು. ಮನಗುಂದದೆ ಭಯಹೊಂದದೆ ಹೋರಾಡಬೇಕೆನ್ನುವ ಸೂಕ್ಷ್ಮವೂ ಸೂಚ್ಯವೂ ಆದ ನಿರ್ದೇಶನ ಮಾಡಿದರು.
ಈ ಸಿದ್ಧತೆ ಮುಂದುವರಿದು ಸಂಶಪ್ತಕರ ಪರವಾಗಿ ವೈದಿಕ ಶಾಂತಿ, ಪುಣ್ಯಾಹಾದಿಗಳನ್ನು ಕೈಗೊಂಡು ಸುವರ್ಣನಾಣ್ಯ, ಗೋವು, ವಸ್ತ್ರಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸತ್ಪಾತ್ರರಿಗೂ ಬ್ರಾಹ್ಮಣರಿಗೂ ದಾನ ಮಾಡಿದರು. ಯಜ್ಞೇಶ್ವರನನ್ನು ವಿಧಿಪೂರ್ವಕ ಸಂತುಷ್ಟಿಗೊಳಿಸಿ ಹವ್ಯವಾಹನನ ಸಮ್ಮುಖ ಧನಂಜಯನ ವಧೆಗಾಗಿ ತ್ರಿಗರ್ತರು ಪ್ರತಿಜ್ಞಾಬದ್ಧರಾದರು. ಒಂದೋ ಪಾರ್ಥನ ವಧೆ ಅಥವಾ ನಾವು ಪರಾಜಿತರಾದರೆ ನಮ್ಮ ದೇಹಾರ್ಪಣೆ. ಇದರ ಹೊರತು ಹೆದರಿ ಹಿಂದಿರುಗುವ ಪ್ರಮೇಯವೇ ಇಲ್ಲ ಎಂದು ಕಟಿಬದ್ದರಾಗಿ ಪ್ರತಿಜ್ಞೆಗೈದರು. ಒಂದು ವೇಳೆ ಭಯಗೊಂಡು ಓಡಿದೆವು ಎಂದಾದರೆ ಕ್ಷಾತ್ರ ಕುಲಕ್ಕೆ ಮಹಾ ಪಾತಕಗಳಾದ ಬ್ರಾಹ್ಮಣ ಕೊಲೆ, ಗೋ ಹತ್ಯೆ, ದೀನರ ಜೀವನ ಸೌಕರ್ಯ ಹಾಳುಗೈದ, ಗುರುಪತ್ನಿಯನ್ನು ಸಮಾಗಮ ಹೊಂದಿದ, ಮಾತಾಪಿತರಿಗೆ ಹೊಡೆದ, ಹೊಡೆಸಿದ, ಪ್ರಜಾಜನರ ಸ್ವತ್ತನ್ನು ಅಪಹರಿಸಿದ ದೋಷಗಳು, ಇತರರಿಗೆ ಅಪಕಾರವನ್ನು ಮಾಡುತ್ತಾ ಬದುಕಿದ, ಮನಸ್ಸಲ್ಲಿ ಒಂದನ್ನಿಟ್ಟುಕೊಂಡು ತೋರಿಕೆಯಲ್ಲಿ ಮತ್ತೊಂದು ಬಗೆಯಲ್ಲಿ ವ್ಯವಹರಿಸುತ್ತಾ ಆತ್ಮವಂಚನೆಗೈದ, ನಪುಂಸಕನೊಡನೆ ಯುದ್ದ ಮಾಡಿದ, ಇನ್ಯಾವ ಅತಿ ನೀಚ ಕೃತಿಗಳಿವೆಯೊ ಅದೆಲ್ಲವನ್ನೂ ಮಾಡಿದರೆ ಬರುವ ದೋಷಗಳ ಪಾಪ ನಮ್ಮದಾಗಲಿ ಎಂದು ಪ್ರತಿ ಪ್ರತಿಜ್ಞೆಯನ್ನೂ ಮಾಡಿದರು. ನಮ್ಮ ಉದ್ದೇಶ ಕೈಗೂಡಿಸಲಾಗದೆ ಪಾರ್ಥನಿಂದ ನಮ್ಮ ವಧೆ ಆಗಿ ಹೋದರೆ ನಮಗೆ ಪುಣ್ಯಲೋಕ ಪ್ರಾಪ್ತವಾಗಲಿ. ಇದರಲ್ಲಿ ಯಾರಿಗೂ ಸಂಶಯ ಬೇಡ ಎಂದು ಧೃಡಚಿತ್ತದಿಂದ ನುಡಿದರು.
ಹನ್ನೆರಡನೆಯ ದಿನ ಯುದ್ದಾರಂಭವಾದಾಗ ಸಂಶಪ್ತಕರು ಅರ್ಜುನನಿಗೆ ಸಮರಾಹ್ವಾನ ನೀಡಿ ಕುರುಕ್ಷೇತ್ರದ ದಕ್ಷಿಣದಿಕ್ಕಿನಲ್ಲಿ ವ್ಯೂಹ ರಚಿಸಿ ಸ್ಥಿತರಾದರು.
ಕೃಷ್ಣಾರ್ಜುನರು ಸಮಾಲೋಚಿಸಿ ನಾವಿಬ್ಬರು ಮಾತ್ರ ಅತ್ತ ಸಾಗಿ ತ್ರಿಗರ್ತರನ್ನು ಎದುರಿಸುತ್ತೇವೆ. ನಮ್ಮ ಸಕಲ ಸೇನೆ, ಭೀಮ, ದೃಷ್ಟದ್ಯುಮ್ನ, ದ್ರುಪದ, ಸಾತ್ಯಕಿ, ಅಭಿಮನ್ಯು, ಯುಧಿಷ್ಠಿರ, ನಕುಲ ಸಹದೇವಾದಿಗಳೆಲ್ಲ ಸೇರಿ ಕುರು ಸೇನೆಯನ್ನು ಎದುರಿಸಲಿ. ಸಂಶಪ್ತಕರ ಸೇನಾ ನಾಶಗೈದು ವಧಿಸಿ ನಾವು ಶೀಘ್ರವಾಗಿ ಹಿಂದಿರುಗುತ್ತೇವೆ. ಅಲ್ಲಿಯವರೆಗೆ ಗುರು ದ್ರೋಣರ ಸೇನಾಧಿಪತ್ಯದ ಕೌರವರನ್ನು ಜಾಗ್ರತೆಯಿಂದ ಎದುರಿಸಿ. ನಮ್ಮಣ್ಣ ಧರ್ಮರಾಯನನ್ನು ಸರ್ವ ರಕ್ಷಣೆಗಳನ್ನಿತ್ತು ಕಾಪಾಡುವ ವ್ಯವಸ್ಥೆಯೂ ಆಗಬೇಕು. ಇಂದಿನ ದಿನದ ಧರ್ಮ ಸಂಗ್ರಾಮ ವಿಭಿನ್ನ ಯೋಜನೆಯನ್ನು ಹೊಂದಿರುವಂತೆ ಭಾಸವಾಗುತ್ತಿದೆ. ತ್ರಿಗರ್ತರ ಆಹ್ವಾನವೂ ಈ ಯೋಜನೆಯ ಭಾಗವಾಗಿರಬಹುದು” ಎಂದು ಅರ್ಜುನ ವಿವರಿಸಿ ಸಂಶಪ್ತಕರನ್ನು ಎದುರಿಸಲು ಸನ್ನದ್ಧನಾಗಿ ಕುರುಕ್ಷೇತ್ರದ ದಕ್ಷಿಣ ಭಾಗದತ್ತ ಹೊರಡಲು ಸಿದ್ಧನಾದನು.
ಇತ್ತ ಗುರು ದ್ರೋಣಾಚಾರ್ಯರ ತಂತ್ರದ ಮೊದಲ ಭಾಗ ಯಶಸ್ವಿಯಾಗಿದೆ. ಸಮಷ್ಟಿಯಾಗಿ ವೈರಿಯನ್ನು ಗೆಲ್ಲಲಾಗದಿದ್ದರೆ ವಿಭಾಜಿಸಿ ಪ್ರಧಾನವೂ, ಸಮರ್ಥನೂ ಆಗಿರುವ ವೈರಿಯನ್ನು ಪ್ರತ್ಯೇಕಿಸಿ ಉಳಿದವರನ್ನು ದಮನಿಸುವ ರಣತಂತ್ರ ಹೆಣೆದಿದ್ದಾರೆ.
ಮುಂದುವರಿಯುವುದು…






